Mysore Muda Scam: ಮುಡಾ ನಿವೇಶನ ಹಗರಣ, ರಾಜ್ಯಪಾಲರು ಸಿಎಂ ನಡುವಿನ ಕಾನೂನು ಸಂಘರ್ಷ ಶುರು, ಏನಾಗಬಹುದು ಪ್ರಕರಣ
Court News ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ಬದಲಿ ನಿವೇಶನ ಪಡೆದ ವಿಚಾರದಲ್ಲಿ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ಇಂದೇ ಇಲ್ಲವೇ ನಾಳೆ ವಿಚಾರಣೆ ಹೈಕೋರ್ಟ್‌ನಲ್ಲೊ ನಡೆಯಬಹುದು.(ವರದಿ: ಎಚ್.ಮಾರುತಿ,ಬೆಂಗಳೂರು)
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿರುವ ಅನುಮತಿಯನ್ನು ಪ್ರಶ್ನಿಸಿ ಸಿದ್ದರಾಮಯ್ಯ ಅವರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಕಾನೂನು ಸಂಘರ್ಷ ಯಾವ ಹಂತಕ್ಕೆ ಹೋಗಬಹುದು ಎನ್ನುವ ಕುತೂಹಲ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಕಾಂಗ್ರೆಸ್ ಹೈ ಕಮಾಂಡ್ ನಿಂತಿರುವುದರಿಂದ ರಾಜೀನಾಮೆ ನೀಡುವ ಸ್ಥಿತಿ ಸದ್ಯಕ್ಕೆ ಇಲ್ಲ. ಅವರ ಪರವಾಗಿ ಕಾನೂನು ಮಾರ್ಗದರ್ಶನ ನೀಡಲು ಘಟಾನುಘಟಿ ನ್ಯಾಯವಾದಿಗಳು ಮುಂದಾಗಿದ್ದಾರೆ. ಇದರಿಂದಲೇ ಕಾನೂನು ಸಂಘರ್ಷದ ಸ್ವರೂಪ ದೇಶ ವ್ಯಾಪ್ತಿಗೆ ಹಬ್ಬಬಹುದು ಎಂದೇ ವ್ಯಾಖ್ಯಾನಿಸಲಾಗುತ್ತಿದೆ.ಈ ಮೂಲಕ ಕರ್ನಾಟಕದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವೆ ಕಾನೂನು ಸಮರ ಆರಂಭವಾಗಿದೆ.
ಈಗಷ್ಟೇ ಕಾನೂನು ಹಂತದ ಹೋರಾಟ ಶುರುವಾಗಿರುವುದರಿಂದ ಇದು ಇನ್ನೂ ಸಮಯವನ್ನು ತೆಗೆದುಕೊಳ್ಳಬಹುದು. ಸಿದ್ದರಾಮಯ್ಯ ಅವರ ಪರವಾಗಿ ಆದೇಶ ಬಾರದೇ ಪ್ರಾಸಿಕ್ಯೂಷನ್ ಅನುಮತಿ ಎತ್ತಿ ಹಿಡಿದರೆ ಅವರಿಗೆ ಸಂಕಷ್ಟ ಎದುರಾಗಬಹುದು. ಅನುಮತಿ ರದ್ದುಪಡಿಸಿದರೆ ಮಾತ್ರ ನಿರಾಳರಾಗಬಹುದು. ಆಗ ಸುಪ್ರೀಂಕೋರ್ಟ್ ಮೊರೆ ಹೋಗಬೇಕಾಗುತ್ತದೆ. ಅಲ್ಲಿನ ತೀರ್ಪು ಅಂತಿಮವಾಗಿರುವುದರಿಂದ ಸಂಘರ್ಷದ ಈ ಹಾದಿ ಕುತೂಹಲ ಘಟ್ಟಗಳಿಗೂ ದಾರಿ ಮಾಡಿಕೊಡಬಹುದು.
ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ವಕೀಲರಾದ ಶತಭೀಷ ಶಿವಣ್ಣ ಮತ್ತು ಪ್ರೊ. ರವಿವರ್ಮ ಕುಮಾರ್ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಇಂದು ಮಧ್ಯಾಹ್ನವೇ ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ. ಅರ್ಜಿಸಲ್ಲಿಸಿದ ರವಿವರ್ಮ ಕುಮಾರ್, ತುರ್ತು ವಿಚಾರಣೆ ನಡೆಸುವಂತೆ ಕೋರಿದ್ದಾರೆ. ನ್ಯಾಯಮೂರ್ತಿ ಹೇಮಂತ್ ಚಂಧನ್ ಗೌಡರ್ ಅವರು ಇಂದು ಮಧ್ಯಾಹ್ನ 2.30 ಕ್ಕೆ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳಬಹುದು. ಇಲ್ಲದೇ ಇದ್ದರೆ ನಾಳೆ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಅರ್ಜಿಯಲ್ಲಿ ರಾಜ್ಯಪಾಲರ ಕ್ರಮದಿಂದ ಅರ್ಜಿದಾರರಿಗೆ ಭರಿಸಲಾಗದ ನಷ್ಟ ಉಂಟಾಗುತ್ತದೆ. ಸ್ವಾಭಾವಿಕ ನ್ಯಾಯಕ್ಕೆ ಅನ್ಯಾಯವಾಗುತ್ತದೆ. ಅವರು ಅನುಮತಿ ನೀಡಿರುವುದೇ ಕಾನೂನು ಬಾಹಿರ ಎಂದು ತಿಳಿಸಿದ್ದಾರೆ. ಮುಡಾ ಪ್ರಕರಣದ ಪೂರ್ವಭಾವಿ ಪರಿಶೀಲನೆ ನಡೆಸಿಲ್ಲ. ದಾಖಲೆಗಳನ್ನು ಪರಿಶೀಲನೆ ಮಾಡಿಲ್ಲ. ಆದ್ದರಿಂದ ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದುಪಡಿಸುವಂತೆ ಕೋರಿದ್ದಾರೆ.
ಈ ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಹಾಗೂ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದ ಟಿ.ಜೆ.ಅಬ್ರಹಾಂ, ಸ್ನೇಹಮಯಿ ಕೃಷ್ಣ ಮತ್ತು ಪ್ರದೀಪ್ ಕುಮಾರ್ ಅವರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಷಿಕ್ಯೂಷನ್ ಗೆ ಅನುಮತಿ ನೀಡಿದ್ದರು. ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿದ್ದ ಮೂವರು ಅರ್ಜಿದಾರರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಮುಡಾದಲ್ಲಿ ಅಕ್ರಮವಾಗಿ ತಮ್ಮ ಪತ್ನಿಯ ಹೆಸರಿನಲ್ಲಿ ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದರು.
ಈ ಪ್ರಕರಣದಲ್ಲಿ ವಾದಿಸಲು ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಕಪಿಲ್ ಸಿಬಲ್, ಅಭಿಷೇಕ್ ಮನುಸಿಂಘ್ವಿ ಮತ್ತು ಪ್ರಶಾಂತ್ ಭೂಷಣ್ ಬೆಂಗಳೂರಿಗೆ ಆಗಮಿಸಿದ್ದಾರೆ.
ಮಧ್ಯಾಹ್ನದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳು ಸಲ್ಲಿಸುವ ಅರ್ಜಿಗೆ ಸಂಬಂಧಪಟ್ಟಂತೆ ತಮ್ಮ ಅಭಿಪ್ರಾಯಗಳವನ್ನು ಆಲಿಸಲು ನಿರ್ಣಯ ಕೈಗೊಳ್ಳಬಾರದು ಎಂದು ಪ್ರದೀಪ್ ಕುಮಾರ್ ಶನಿವಾರವೇ ಕೇವಿಯೆಟ್ ಸಲ್ಲಿಸಿದ್ದರು. ಹಾಗಾಗಿ ಅವರಿಗೂ ಪ್ರಕರಣದ ಮಾಹಿತಿ ನೀಡಲಾಗಿದೆ.ಈ ಮಧ್ಯೆ ಸ್ನೇಹಮಯಿ ಕೃಷ್ಣ ಅವರು ಸುಪ್ರೀಖಂ ಕೋರ್ಟ್ ನಲ್ಲಿ ಕೇವಿಯೆಟ್ ಸಲ್ಲಿಸಲು ನಿರ್ಧರಿಸಿದ್ದು, ಅವರೂ ಕೂಡ ಕಾನೂನು ಹೋರಾಟಕ್ಕೆ ಅಣಿಯಾಗಿದ್ದಾರೆ.
ಮತ್ತೊಂದು ಕಡೆ ಪ್ರತಿಪಕ್ಷ ಬಿಜೆಪಿ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸುತ್ತಿದ್ದರೆ ಕಾಂಗ್ರೆಸ್ ಸಹ ರಾಜ್ಯಾದ್ಯಂತ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ. ವಿಧಾನಸೌಧದ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ ಫ್ರೀಡಂ ಪಾರ್ಕ್ ನಲ್ಲಿ ಕಾಂಗ್ರಸ್ ಪ್ರತಿಭಟನೆ ನಡೆಸುತ್ತಿದೆ.
(ವರದಿ: ಎಚ್.ಮಾರುತಿ,ಬೆಂಗಳೂರು)