ಫ್ರೆಂಚ್‌ ಫ್ರೈಸ್‌ ತಿನ್ನೋಕೆ ಬಿಡ್ತಾ ಇಲ್ಲ; ಅಮೆರಿಕಕ್ಕೆ ಹೊರಟ ಪತಿಯ ವಿರುದ್ಧ ಪತ್ನಿ ಕೇಸ್‌, ಲುಕ್‌ಔಟ್‌ ನೋಟಿಸ್ ಬಗ್ಗೆ ಕೋರ್ಟ್ ಅಚ್ಚರಿ
ಕನ್ನಡ ಸುದ್ದಿ  /  ಕರ್ನಾಟಕ  /  ಫ್ರೆಂಚ್‌ ಫ್ರೈಸ್‌ ತಿನ್ನೋಕೆ ಬಿಡ್ತಾ ಇಲ್ಲ; ಅಮೆರಿಕಕ್ಕೆ ಹೊರಟ ಪತಿಯ ವಿರುದ್ಧ ಪತ್ನಿ ಕೇಸ್‌, ಲುಕ್‌ಔಟ್‌ ನೋಟಿಸ್ ಬಗ್ಗೆ ಕೋರ್ಟ್ ಅಚ್ಚರಿ

ಫ್ರೆಂಚ್‌ ಫ್ರೈಸ್‌ ತಿನ್ನೋಕೆ ಬಿಡ್ತಾ ಇಲ್ಲ; ಅಮೆರಿಕಕ್ಕೆ ಹೊರಟ ಪತಿಯ ವಿರುದ್ಧ ಪತ್ನಿ ಕೇಸ್‌, ಲುಕ್‌ಔಟ್‌ ನೋಟಿಸ್ ಬಗ್ಗೆ ಕೋರ್ಟ್ ಅಚ್ಚರಿ

Karnataka High Court; ಅಮೆರಿಕಕ್ಕೆ ಹೊರಟ ಪತಿಯ ವಿರುದ್ಧ ಪತ್ನಿ ಕ್ರೌರ್ಯ, ವರದಕ್ಷಿಣೆಯ ಕೇಸ್ ದಾಖಲಿಸಿದರು. ಫ್ರೆಂಚ್‌ ಫ್ರೈಸ್‌ ತಿನ್ನೋಕೆ ಬಿಡ್ತಾ ಇಲ್ಲ ಎಂದು ಆರೋಪಿಸಿದರು. ಬೆಂಗಳೂರು ಪೊಲೀಸರು ಪತಿಯ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದರು. ಮೊಕ್ಕದ್ದಮೆ ಕುರಿತು ಅಚ್ಚರಿ ವ್ಯಕ್ತಪಡಿಸಿದ ನ್ಯಾಯಪೀಠ, ಕೇಸ್‌ನ ವಿಚಾರಣೆಯನ್ನು ಮುಂದೂಡಿದೆ.

ಕರ್ನಾಟಕ ಹೈಕೋರ್ಟ್‌ (ಸಾಂಕೇತಿಕ ಚಿತ್ರ)
ಕರ್ನಾಟಕ ಹೈಕೋರ್ಟ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ಅಮೆರಿಕದಲ್ಲಿ ಮಗುವಿನ ಪ್ರಸವದ ಬಳಿಕ ಫ್ರೆಂಚ್‌ ಫ್ರೈಸ್, ಅನ್ನ ಮತ್ತು ಮಾಂಸಾಹಾರ ಸೇವಿಸಲು ಪತಿ ಬಿಡ್ತಾ ಇಲ್ಲ. ಮಾನಸಿಕವಾಗಿ ಮತ್ತು ಶಾರೀರಿಕವಾಗಿ ಕ್ರೌರ್ಯ ತೋರುತ್ತಿದ್ದಾರೆ ಎಂದು ಪತ್ನಿಯೊಬ್ಬರು ಕೇಸ್ ವಿಚಾರಣೆ ವೇಳೆ ಪತಿಯ ವಿರುದ್ಧ ಆರೋಪ ಹೊರಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅಮೆರಿಕದಲ್ಲಿ ಉದ್ಯೋಗಕ್ಕಾಗಿ ನೆಲೆಸಿದ ಪತಿಯ ವಿರುದ್ಧ ಪತ್ನಿ ಹೂಡಿದ್ದ ಕ್ರೌರ್ಯದ ಮೊಕದ್ದಮೆ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುತ್ತಿದ್ದು, ಈಗ ಪತಿಯ ವಿರುದ್ಧದ ಕ್ರಿಮಿನಲ್ ಪ್ರಕರಣದ ತನಿಖೆಗೆ ತಡೆಯಾಜ್ಞೆ ಸಿಕ್ಕಿದೆ.

ಅಲ್ಲದೆ, ಬೆಂಗಳೂರು ನಗರ ಪೊಲೀಸರು ಹೊರಡಿಸಿದ ಲುಕ್‌ಔಟ್ ಸುತ್ತೋಲೆ (ಎಲ್‌ಒಸಿ) ಕಾರಣ ಭಾರತವನ್ನು ತೊರೆಯಲು ಅವಕಾಶವಿಲ್ಲದೆ ಅಮೆರಿಕದ ಉದ್ಯೋಗ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ವ್ಯಕ್ತಿಗೆ ಮತ್ತೆ ಕೆಲಸಕ್ಕೆ ಸೇರುವುದಕ್ಕಾಗಿ ಯುಎಸ್‌ಗೆ ಪ್ರಯಾಣಿಸಲು ಅನುಮತಿ ನೀಡಿತು. ಮಹಿಳೆ ತನ್ನ ಪತಿಯ ಮತ್ತು ಅವರ ಪಾಲಕರು, ಸಹೋದರ ವಿರುದ್ಧ ದೂರು ನೀಡಿದ್ದರು. ಇದರಂತೆ ವಿಚಾರಣೆಗೆ ಭಾರತಕ್ಕೆ ಬಂದ ಅವರಿಗೆ ವಾಪಸ್ ಅಮೆರಿಕಕ್ಕೆ ಹೋಗುವುದು ಸಾಧ್ಯವಾಗಿರಲಿಲ್ಲ.

ಕರ್ನಾಟಕ ಹೈಕೋರ್ಟ್‌ ವಿಚಾರಣೆಯ ವಿವರ

ಪತಿ ಮತ್ತು ಅವರ ಪಾಲಕರು, ಸಹೋದರನ ವಿರುದ್ಧ ಮಹಿಳೆ ದಾಖಲಿಸಿದ ಕೇಸ್‌ನ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು, ಸೆಪ್ಟೆಂಬರ್ 21ಕ್ಕೆ ಮುಂದೂಡಿದರಲ್ಲದೆ, ಲುಕ್‌ಔಟ್ ನೋಟಿಸ್‌ಗೆ ತಡೆಯಾಜ್ಞೆ ನೀಡಿದರು. ಅವರ ಅಫಿಡವಿಟ್ ಅನ್ನು ದಾಖಲಿಸಿದ ನಂತರ ಪತಿಗೆ ಯುಎಸ್‌ಗೆ ಪ್ರಯಾಣಿಸಲು ಅವಕಾಶ ಮಾಡಿಕೊಟ್ಟರು. ಅದರಲ್ಲಿ ಅವರು ವಿಚಾರಣೆಗೆ ಲಭ್ಯ ಇರಬೇಕು ಎಂಬ ಷರತ್ತು ಸೇರಿಸಲಾಗಿದೆ.

ಪತ್ನಿಯ ವಾದ: ಹೆರಿಗೆಯಾದ ನಂತರ ತನಗೆ ಅಧಿಕ ರಕ್ತದೊತ್ತಡವಿದ್ದು, ತೂಕ ಹೆಚ್ಚುತ್ತದೆ ಎಂಬ ಭಯದಿಂದ ಪತಿ ಫ್ರೆಂಚ್ ಫ್ರೈ, ಅನ್ನ ಮತ್ತು ಮಾಂಸ ತಿನ್ನಲು ಬಿಡಲಿಲ್ಲ. ಪ್ರಸವದ ಬಳಿಕ ಬಟ್ಟೆ ತಂದುಕೊಡಲಿಲ್ಲ. ತವರು ಮನೆಯವರಿಂದಲೇ ಉಡುಪು ತರಿಸಿಕೊಳ್ಳಬೇಕಾಯಿತು ಎಂಬುದು ಪತ್ನಿಯ ವಾದವಾಗಿತ್ತು.

ಪತಿಯ ವಾದ: ಅಮೆರಿಕದಲ್ಲಿರುವಾಗ ಮನೆಯ ಎಲ್ಲ ಕೆಲಸಗಳನ್ನು ತಾನೇ ಮಾಡುತ್ತಿದ್ದೆ. ಪತ್ನಿ ಟಿವಿ ನೋಡುತ್ತ, ಕುಟುಂಬ ಸದಸ್ಯರೊಂದಿಗೆ ಫೋನ್ ಮಾಡಿ ಹರಟೆ ಹೊಡೆಯುತ್ತಿದ್ದಳು. ನಿತ್ಯವೂ ಕೆಲಸಕ್ಕೆ ಹೋಗುವ ಮುನ್ನ ಮನೆ ಸ್ವಚ್ಚಗೊಳಿಸಿ, ಪಾತ್ರೆ ತೊಳೆದಿಟ್ಟು ಕೆಲಸಕ್ಕೆ ಹೋಗುತ್ತಿದ್ದೆ ಎಂದು ಪತಿ ವಾದಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅವರು, ''ಪತಿ ವಿರುದ್ಧ ಯಾವುದೇ ತನಿಖೆಗೆ ಅನುಮತಿ ನೀಡುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಾಗುತ್ತದೆ. ಫ್ರೆಂಚ್ ಫ್ರೈ ಇತ್ಯಾದಿ ತಿನ್ನಲು ಬಿಟ್ಟಿಲ್ಲ ಎಂಬೆಲ್ಲ ಆರೋಪಗಳನ್ನು ಪರಿಗಣಿಸುವುದು ಕೂಡ ಕಷ್ಟವಾಗುತ್ತದೆ ..." ಎನ್ನುತ್ತ ಪತಿ- ಪತ್ನಿ ಸಂಬಂಧದಲ್ಲಿ ಕೆಲವು ಸಣ್ಣಪುಟ್ಟ ಜಗಳ, ಭಿನ್ನಾಭಿಪ್ರಾಯ ಇದ್ದೇ ಇರುತ್ತದೆ. ಅವನ್ನೆಲ್ಲ ಈ ಮಟ್ಟಕ್ಕೆ ತಗೊಂಡು ಹೋಗಬಾರದು ಎಂದರು.

“ಮೇಲೆ ಹೇಳಿದ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಯಾವ ಕಾನೂನು ಅಂಶ ಬಳಸಿಕೊಂಡರು ಎಂಬುದು ಅರ್ಥವಾಗಿಲ್ಲ. ಅದುವೇ ಆಶ್ಚರ್ಯಕರವಾಗಿದೆ. ಇದು ಪೊಲೀಸರು ಅಧಿಕಾರವನ್ನು ಬಳಸಿರುವುದಲ್ಲ. ಬದಲು ದೂರುದಾರರ ಆಜ್ಞೆಯ ಮೇರೆಗೆ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು. ಈ ಆರೋಪದಲ್ಲಿ ಹುರುಳಿಲ್ಲ. ದೂರುದಾರರು ತಮ್ಮ ಪತಿಯನ್ನು ಅಮೆರಿಕದ ಉದ್ಯೋಗಕ್ಕೆ ಹೋಗದಂತೆ ತಡೆಯುವ ಏಕೈಕ ಉದ್ದೇಶ ಹೊಂದಿರುವಂತೆ ತೋರುತ್ತಿದೆ” ಎಂದು ನ್ಯಾಯಪೀಠ ಹೇಳಿತು.

ಏನಿದು ಪ್ರಕರಣ

ಅಮೆರಿಕದಲ್ಲಿ ಪ್ರಸವದ ಬಳಿಕ ಭಾರತಕ್ಕೆ ಬಂದಿದ್ದ ಮಹಿಳೆ, ತನ್ನ ಪತಿಯ ವಿರುದ್ಧ ಐಪಿಸಿಯ ಸೆಕ್ಷನ್‌ 498A ಮತ್ತು 504ರ ಅನ್ವಯ ಮತ್ತು ವರದಕ್ಷಿಣೆ ನಿಷೇಧ ಕಾಯಿದೆಯ ಪ್ರಕಾರ ಮಹಿಳೆ ದೂರು ದಾಖಲಿಸಿದ್ದರು. ಇದಾದ ಬಳಿಕ ಬೆಂಗಳೂರು ಪೊಲೀಸರು ವ್ಯಕ್ತಿಯ ವಿರುದ್ಧ ಲುಕ್‌ಔಟ್ ಸುತ್ತೋಲೆ (LOC) ಹೊರಡಿಸಿದರು. ಈ ಲುಕ್‌ಔಟ್‌ ನೋಟಿಸ್‌ ವ್ಯಕ್ತಿಯನ್ನು ಅಮೆರಿಕಕ್ಕೆ ಹಿಂದಿರುಗದಂತೆ ಮಾಡಿತು.

Whats_app_banner