ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ; 2 ವಾರದ ಗಡುವು
ಚಿತ್ರದುರ್ಗ ಮುರುಘಾ ಮಠದ ವ್ಯವಹಾರ ಮೇಲ್ವಿಚಾರಣೆ ಸಮಿತಿ ರಚಿಸಲು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ಸೂಚನೆ ನೀಡಿದೆ. ಕ್ಷಿಪ್ರವಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿ 2 ವಾರದ ಗಡುವು ಕೂಡ ಕೊಟ್ಟಿದೆ. ಏನಿದು ವಿದ್ಯಮಾನ.

ನವದೆಹಲಿ: ಕರ್ನಾಟಕದ ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ (ಎಸ್‌ಜೆಎಂ) ಮಠದ ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಬೆಳವಣಿಗೆಯಲ್ಲಿ, ಮಠದ ವ್ಯವಹಾರಗಳ ಮೇಲ್ವಿಚಾರಣೆಗಾಗಿ ಸಮಿತಿಯನ್ನು ರಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಮುರುಘಾ ಮಠದ ವ್ಯವಹಾರಗಳ ಮೇಲ್ವಿಚಾರಣೆಗೆ ಸಮಿತಿಯನ್ನು ನೇಮಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ (ಫೆ.27) ಕರ್ನಾಟಕ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠವು ಕೊಟ್ಟ ನಿರ್ದೇಶನದಲ್ಲಿ, ಯಾವುದೇ ಆರೋಪಿ ವ್ಯಕ್ತಿ ಸಮಿತಿಯ ಭಾಗವಾಗಬಾರದು ಎಂದು ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಎರಡು ವಾರದಲ್ಲಿ ತ್ವರಿತ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ
ಅದೇ ರೀತಿ, ಎರಡು ವಾರಗಳಲ್ಲಿ ಸರ್ಕಾರದಿಂದ ತ್ವರಿತ ಪ್ರತಿಕ್ರಿಯೆ ನೀಡಬೇಕಾದ ಮಹತ್ವವನ್ನು ಕೂಡ ನ್ಯಾಯಾಲಯ ಒತ್ತಿಹೇಳಿದೆ. ಇದಲ್ಲದೆ, ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಆರೋಪಿ ಶಿವಮೂರ್ತಿ ಮುರುಘಾ ಶರಣರು ಮುರುಘಾ ಮಠ ಮತ್ತು ಎಸ್‌ಜೆಎಂ ವಿದ್ಯಾಪೀಠದ ಮುಖ್ಯಸ್ಥರಾಗುವುದನ್ನು ನ್ಯಾಯಾಲಯ ಕಟ್ಟುನಿಟ್ಟಾಗಿ ನಿಷೇಧಿಸಿದೆ.
ಮಾಜಿ ಸಚಿವ ಮತ್ತು ಮಠದ ಭಕ್ತ ಜಿ.ಏಕಾಂತಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮುರುಘಾ ಶರಣರು ಮಠದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ನಿರ್ಬಂಧ ಹೇರಿದೆ ಮತ್ತು ಮುಂದಿನ ಮೂರು ದಿನಗಳಲ್ಲಿ ಸಮಿತಿಯನ್ನು ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ ಎಂದು ಅರ್ಜಿದಾರರ ಪರ ವಕೀಲೆ ಅಪರ್ಣಾ ಭಟ್ ಹೇಳಿದರು. ಧಾರ್ಮಿಕ ಸಂಸ್ಥೆಗಳ (ದುರುಪಯೋಗ ತಡೆಗಟ್ಟುವಿಕೆ) ಕಾಯ್ದೆ, 1988 ರ ಪ್ರಕಾರ, ಸುಪ್ರೀಂ ಕೋರ್ಟ್ ಆದೇಶವನ್ನು ಅಂಗೀಕರಿಸಿತು. ಮುಂದಿನ 15 ದಿನಗಳಲ್ಲಿ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತು ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆ
ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ ಶಿವಮೂರ್ತಿ ಮುರುಘಾ ಶರಣರು ಪ್ರಸ್ತುತ ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದಾರೆ. ದಾವಣಗೆರೆಯಲ್ಲಿದ್ದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಇಬ್ಬರು ಪ್ರೌಢಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಎರಡು ಪ್ರಕರಣಗಳಲ್ಲಿ ಹೈಕೋರ್ಟ್ ಕಳೆದ ನವೆಂಬರ್ 8 ರಂದು ಶ್ರೀಗಳಿಗೆ ಜಾಮೀನು ನೀಡಿತ್ತು. ಅವರನ್ನು 2022ರ ಸೆಪ್ಟೆಂಬರ್ 1 ರಂದು ಬಂಧಿಸಲಾಯಿತು.
ಮೈಸೂರಿನ ನಜರ್ ಬಾದ್ ಪೊಲೀಸ್ ಠಾಣೆಯಲ್ಲಿ ಶರಣರ ವಿರುದ್ಧ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯರು ಇಬ್ಬರೂ ಅಪ್ರಾಪ್ತ ವಯಸ್ಕರಾಗಿದ್ದು, ಎಸ್‌ಜೆಎಂ ವಿದ್ಯಾಪೀಠ ನಡೆಸುತ್ತಿರುವ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿದ್ದರು. ಶರಣರು ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಮಾಡಿದ್ದರು ಎಂದು ಸಂತ್ರಸ್ತೆಯರು ಆರೋಪ ಮಾಡಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರ, ಶರಣರು ಮಠದ ದಾವಣಗೆರೆ ಶಾಖೆಯಲ್ಲಿ ಉಳಿದುಕೊಂಡಿದ್ದು, ಅಲ್ಲಿಂದಲೇ ಮಠದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು ಮಠದ ವ್ಯವಹಾರಗಳ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.
ಈ ನಡುವೆ, 2022ರ ಡಿಸೆಂಬರ್ 13ರಂದು ರಾಜ್ಯ ಸರ್ಕಾರವು ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ಅವರನ್ನು ಮಠದ ಆಡಳಿತಾಧಿಕಾರಿಯಾಗಿ ನೇಮಿಸಿತು. ಆದರೆ, ಈ ನೇಮಕಾತಿಯನ್ನು ಮಠವು ಪ್ರಶ್ನಿಸಿತು. ಹೈಕೋರ್ಟ್ ಅದನ್ನು ರದ್ದುಮಾಡಿತು. ತಾತ್ಕಾಲಿಕ ವ್ಯವಸ್ಥೆಯಾಗಿ ಹೈಕೋರ್ಟ್ 2023ರ ಜುಲೈ 4 ರಂದು, ಚಿತ್ರದುರ್ಗ ಸೆಷನ್ಸ್ ನ್ಯಾಯಾಧೀಶರನ್ನು ಮಠದ ವ್ಯವಹಾರಗಳ ಮೇಲ್ವಿಚಾರಣೆಗೆ ನೇಮಿಸಿತು. ಶರಣರು ಬಿಡುಗಡೆಯಾದ ನಂತರ, ಅವರು ಮಠದ ವ್ಯವಹಾರಗಳನ್ನು ನಿರ್ವಹಿಸುವ ಉದ್ದೇಶವನ್ನು ವ್ಯಕ್ತಪಡಿಸಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರು. ತರುವಾಯ, ನ್ಯಾಯಾಲಯವು ಅವರ ಮನವಿಯನ್ನು ಅಂಗೀಕರಿಸಿತು ಮತ್ತು ಸೆಷನ್ಸ್ ನ್ಯಾಯಾಧೀಶರ ಆಡಳಿತವನ್ನು ಮಠದಿಂದ ಹಿಂತೆಗೆದುಕೊಂಡಿತು.
(This copy first appeared in Hindustan Times Kannada website. To read more like this please logon to kannada.hindustantimes.com)
