ವಂಟಮೂರಿ ಕೇಸ್; ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ವಿಚಾರಣೆಗೆ 1 ವರ್ಷದ ಕಾಲಮಿತಿ, ವಿಚಾರಣಾ ಕೋರ್ಟ್‌ಗೆ ಹೈಕೋರ್ಟ್‌ ಆದೇಶ-court news vantamuri case woman stripping incident karnataka hc directs to complete trial within year belagavi news uks ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ವಂಟಮೂರಿ ಕೇಸ್; ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ವಿಚಾರಣೆಗೆ 1 ವರ್ಷದ ಕಾಲಮಿತಿ, ವಿಚಾರಣಾ ಕೋರ್ಟ್‌ಗೆ ಹೈಕೋರ್ಟ್‌ ಆದೇಶ

ವಂಟಮೂರಿ ಕೇಸ್; ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣದ ವಿಚಾರಣೆಗೆ 1 ವರ್ಷದ ಕಾಲಮಿತಿ, ವಿಚಾರಣಾ ಕೋರ್ಟ್‌ಗೆ ಹೈಕೋರ್ಟ್‌ ಆದೇಶ

ಕರ್ನಾಟಕದಲ್ಲಿ ಸಂಚಲನ ಮೂಡಿಸಿ, ದೇಶದ ಗಮನಸೆಳೆದಿದ್ದ ವಂಟಮೂರಿ ಕೇಸ್‌ನಲ್ಲಿ 4 ತಿಂಗಳ ಬಳಿಕ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಈ ನಡುವೆ, ಈ ಕೇಸ್‌ನ ವಿಚಾರಣೆಯನ್ನು 1 ವರ್ಷದೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಆದೇಶ ನೀಡಿದೆ. ಈ ವಿದ್ಯಮಾನದ ವಿವರ ಇಲ್ಲಿದೆ.

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌

ಬೆಂಗಳೂರು: ಬೆಳಗಾವಿ ಜಿಲ್ಲೆಯ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ (ಏಪ್ರಿಲ್ 23) ನಿರ್ದೇಶನ ನೀಡಿದೆ.

ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠವು, “ಆರೋಪಿಗಳ ವಿರುದ್ಧದ ವಿಚಾರಣೆಯನ್ನು ನಡೆಸುತ್ತಿರುವ ಸಕ್ಷಮ ನ್ಯಾಯಾಲಯವು ಒಂದು ವರ್ಷದ ಕಾಲಮಿತಿಯೊಳಗೆ ತ್ವರಿತವಾಗಿ ಪೂರ್ಣಗೊಳಿಸಬೇಕು" ಎಂದು ಸೂಚಿಸಿದೆ. ಈ ಆದೇಶವನ್ನು ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರು ವಿಚಾರಣಾ ನ್ಯಾಯಾಲಯಕ್ಕೆ ತಲುಪಿಸಬೇಕು ಎಂದು ಸೂಚಿಸಿದೆ.

ವಂಟಮೂರಿ ಕೇಸ್‌; ಸ್ವಯಂ ಪ್ರೇರಿತ ಅರ್ಜಿವಿಲೇವಾರಿ ಮಾಡಿದ ಕೋರ್ಟ್‌

ನ್ಯಾಯಪೀಠವು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಸರ್ಕಾರದ ಪರ ವಕೀಲರು, ಸಂತ್ರಸ್ತೆಗೆ 5 ಲಕ್ಷ ರೂಪಾಯಿ ಪರಿಹಾರ, ಎರಡು ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿದ್ದ ಆರೋಪಿಗಳನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಂತ್ರಸ್ತೆ ಮತ್ತು ಇತರೆ 23 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ ಎಂದು ತಿಳಿಸಿದರು. ಇದಾದ ಬಳಿಕ, ಈ ಸ್ವಯಂ ಪ್ರೇರಿತ ದಾವೆಯ ಉದ್ದೇಶ ಈಡೇರಿದ್ದು, ವಿಲೇವಾರಿ ಮಾಡಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿತು. ಇದೇ ಸಂದರ್ಭದಲ್ಲಿ ವಿಚಾರಣಾ ನ್ಯಾಯಾಲಯವು ಈ ಪ್ರಕರಣದ ವಿಚಾರಣೆಯನ್ನು ಒಂದು ವರ್ಷದ ಕಾಲಮಿತಿಯಲ್ಲಿ ಮುಗಿಸಬೇಕು ಎಂದು ಆದೇಶ ನೀಡಿತು ಎಂದು ಲೈವ್ ಲಾ ವರದಿ ಹೇಳಿದೆ.

ಸಂತ್ರಸ್ತೆಯ ಯೋಗಕ್ಷೇಮ ವಿಚಾರಿಸುವುದಕ್ಕೆ ಏನು ವ್ಯವಸ್ಥೆ ಮಾಡಲಾಗಿದೆ ಎಂದು ನ್ಯಾಯಪೀಠ ಕೇಳಿದ್ದು, ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಪ್ರತಿ ಎರಡು ತಿಂಗಳಿಗೊಮ್ಮೆ ಸಂತ್ರಸ್ತೆಯನ್ನು ಭೇಟಿ ಮಾಡುತ್ತಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದ್ದಾರೆ.

ಇದಲ್ಲದೆ, ಕಲ್ಯಾಣ ಅಧಿಕಾರಿಯು ಸಂತ್ರಸ್ತೆ ಮತ್ತು ಆಕೆಯ ಕುಟುಂಬ ಸದಸ್ಯರು ಅಗತ್ಯ, ಮೂಲ ಜೀವನ ಸೌಕರ್ಯಗಳ ಹೊಂದಿರಬೇಕು. ಜೀವನ ನಡೆಸುವುದಕ್ಕೆ ಅವಶ್ಯ, ತೃಪ್ತಿಕರ ಸೌಕರ್ಯ ಹೊಂದಿರುವುದನ್ನು ಖಾತರಿಪಡಿಸಬೇಕು. ಕಲ್ಯಾಣ ಅಧಿಕಾರಿಯು ಪ್ರತಿ ಭೇಟಿಯ ನಂತರ ಈ ಕುರಿತ ವರದಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಬೇಕು. ಅವರು ಮೇಲ್ವಿಚಾರಣೆ ಮಾಡಬೇಕು ಎಂದು ಕೋರ್ಟ್‌ ಹೇಳಿರುವುದಾಗಿ ವರದಿ ಹೇಳಿದೆ.

ವಂಟಮೂರಿ ಕೇಸ್ ಆರೋಪಿಗಳಿಗೆ ಜಾಮೀನು; ಹಾರ ಹಾಕಿ ಅದ್ದೂರಿ ಸ್ವಾಗತ

ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ, ಹಲ್ಲೆ ಮಾಡಿದ್ದ ಆರೋಪಿಗಳಿಗೆ ನಾಲ್ಕು ತಿಂಗಳ ಬಳಿಕ ಜಾಮೀನು ಸಿಕ್ಕಿ ನಿನ್ನೆ (ಏಪ್ರಿಲ್ 22) ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ ಆರೋಪಿಗಳನ್ನು ಹೂ ಹಾರ ಹಾಕಿ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ ಕೋರಿದ ವಿಪರೀತ ಘಟನೆ ವರದಿಯಾಗಿದೆ.

ಹಿಂಡಲಗಾ ಜೈಲಿನಿಂದ ಹೊರಬಂದ ಆರೋಪಿಗಳನ್ನು ಅವರ ಆಪ್ತರು ಈ ರೀತಿ ಸ್ವಾಗತಕೋರಿದ್ದರು. ಇದು ಈಗ ವ್ಯಾಪಕ ಟೀಕೆಗೆ ಒಳಗಾಗಿದೆ. ಪ್ರಕರಣದ ಪ್ರಮುಖ ಆರೋಪಿ ಬಸಪ್ಪ ನಾಯಕ್ ಅವರನ್ನು ಹೂವಿನ ಹಾರ ಹಾಕಿ ಸ್ವಾಗತ ಮಾಡಲಾಗಿತ್ತು. ವಂಟಮೂರಿ ಗ್ರಾಮದಲ್ಲಿ 2023ರ ಡಿಸೆಂಬರ್ 12 ರ ರಾತ್ರಿ ಈ ಅಮಾನವೀಯ ಘಟನೆ ನಡೆದಿತ್ತು. ಇದರಲ್ಲಿ 13 ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು.

ವಂಟಮೂರಿ ಕೇಸ್‌; ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದೇಕೆ?

ಬೆಳಗಾವಿಯ ವಂಟಮೂರಿ ಗ್ರಾಮದಲ್ಲಿ ಒಂದೇ ಸಮುದಾಯಕ್ಕೆ ಸೇರಿದ ಯುವಕ ಮತ್ತು ಯುವತಿಯ ಪ್ರೇಮ ಪ್ರಕರಣಕ್ಕೆ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಈ ವಿರೋಧದ ನಡುವೆ, ಯುವಜೋಡಿ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದರು. ಇದರಂತೆ, 2023ರ ಡಿಸೆಂಬರ್ 12 ರಂದು ರಾತ್ರಿ ಓಡಿ ಹೋಗಿದ್ದರು.

ಯುವತಿ ಓಡಿ ಹೋಗಿರುವುದು ಆಕೆಯ ಮನೆಯವರಿಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಿತರಾದ ಅವರು ಯುವಕನ ಮನೆಗೆ ದೌಡಾಯಿಸಿದರು. ಮಧ್ಯರಾತ್ರಿ ಬಂದು ಯುವಕನ ಮನೆ ಬಾಗಿಲು ಬಡಿದು, ವಾಕ್ಸಮರ ಶುರುಮಾಡಿದ್ದರು. ಬಳಿಕ ಯುವಕನ ತಾಯಿಯ ಮೇಲೆ ಹಲ್ಲೆ ನಡೆಸಿ ವಿವಸ್ತ್ರಗೊಳಿಸಿ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದರು. ಇದು ಮಾರನೇ ದಿನ ರಾಜ್ಯದ ಗಮನಸೆಳೆದಿದ್ದು, ಕೂಡಲೇ ಸ್ಥಳಕ್ಕೆ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಎಲ್ಲರೂ ಸ್ಥಳಕ್ಕೆ ಹೋಗಿದ್ದರು. ಈ ಕೇಸ್‌ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಕರ್ತವ್ಯ ಲೋಪದ ಮೇರೆಗೆ ಅಮಾನತುಗೊಳಿಸಲಾಗಿತ್ತು.

mysore-dasara_Entry_Point