ಉಗ್ರ ಕೌಸರ್‌ಗೆ 7 ವರ್ಷ ಕಠಿಣ ಸಜೆ ವಿಧಿಸಿದ ಎನ್ ಐಎ ನ್ಯಾಯಾಲಯ; ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಆರೋಪಿಗಳಿಗೆ ಜೀವಾವಧಿ
Court Verdict: ಎನ್‌ಐಎ ನ್ಯಾಯಾಲಯವು ರಾಮನಗರದಲ್ಲಿ ಬಂಧಿತನಾಗಿದ್ದ ಉಗ್ರ ಕೌಸರ್‌ಗೆ 7 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಬಾಂಗ್ಲಾದೇಶದ ಜಮಾತ್–ಉಲ್–ಮುಜಾಹಿದ್ದೀನ್ (ಜೆಎಂಬಿ) ಉಗ್ರ ಸಂಘಟನೆಯ ಕಾರ್ಯಕರ್ತನಾಗಿದ್ದ ಉಗ್ರ ಜೈದುಲ್ಲಾ ಇಸ್ಲಾಂ ಅಲಿಯಾಸ್ ಕೌಸರ್‌ಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರಕರಣಗಳ ವಿಶೇಷ ನ್ಯಾಯಾಲಯ 7 ವರ್ಷ ಕಠಿಣ ಶಿಕ್ಷೆ ಹಾಗೂ 57 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದೆ.ಈತ ಅಕ್ರಮವಾಗಿ ರಾಜ್ಯದಲ್ಲಿ ವಾಸವಿದ್ದುಕೊಂಡು ಸಂಘಟನೆಗೆ ಹಣ ಕಳುಹಿಸಲು ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಡಕಾಯಿತಿ ನಡೆಸುತ್ತಿದ್ದ. ಡಕಾಯಿತಿಗೆ ಸಂಚು ರೂಪಿಸುತ್ತಿದ್ದ ಸಂದರ್ಭದಲ್ಲಿ ರಾಮನಗರದಲ್ಲಿ ಈತನನ್ನು ಬಂಧಿಸಲಾಗಿತ್ತು. ನಂತರ ತನಿಖೆ ನಡೆಸಿದ್ದ ಎನ್ಐಎ ಅಧಿಕಾರಿಗಳು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಉಗ್ರ ಕೌಸರ್ ವಿರುದ್ಧ ನಾಲ್ಕು ಪ್ರಕರಣ
2005ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದಲ್ಲೂ ಕೌಸರ್‌ನನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಬಿಡುಗಡೆಯಾದ ನಂತರ ಕೌಸರ್, 2014 ರಲ್ಲಿ ಸಂಘಟನೆಯ ಮುಖ್ಯಸ್ಥ ಸಲಾವುದ್ದೀನ್ ಸಲೇಹಿನ್ ಜತೆ ಅಕ್ರಮವಾಗಿ ಭಾರತ ಪ್ರವೇಶಿಸಿದ್ದ. ನಂತರ ಸಂಘಟನೆಯ ತಂಡಗಳನ್ನು ದೇಶದ ವಿವಿಧ ಭಾಗಗಳಿಗೆ ನಿಯೋಜಿಸಿದಾಗ ಕೌಸರ್ ದಕ್ಷಿಣ ಭಾರತಕ್ಕೆ ಆಗಮಿಸಿ ಇಲ್ಲಿ ಸಂಘಟನೆಯನ್ನು ವಿಸ್ತರಿಸುವ ಜವಬ್ಧಾರಿ ಹೊತ್ತಿದ್ದ. ಕೌಸರ್ ತನ್ನ ಸಹಚರರ ಜತೆ ಸೇರಿಕೊಂಡು ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಡಕಾಯಿತಿ ಮತ್ತು ದರೋಡೆ ನಡೆಸುತ್ತಿದ್ದ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಿವಿಧ ಖಾತೆಗಳ ಮೂಲಕ ಸಂಘಟನೆಯ ಖಾತೆಗೆ ವರ್ಗಾವಣೆ ಮಾಡುತ್ತಿದ್ದ. ಅಕ್ರಮವಾಗಿ ಸಂಪಾದಿಸಿದ ಹಣದ ಸಂಬಂಧ ಉಗ್ರ ಕೌಸರ್ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದವು.
ಸಂಘಟನೆಯನ್ನು ಬಲಪಡಿಸುವುದರ ಜತೆಗೆ ಶಸ್ತ್ರಾಸ್ತ್ರಗಳ ಸಂಗ್ರಹ, ಸಂಘಟನೆಗೆ ಸೇರಿದ ಯುವಕರಿಗೆ ತರಬೇತಿ, ತರಬೇತಿಗೆ ಹಣ ಹೊಂದಿಸುವ ಕೆಲಸವನ್ನೂ ಮಾಡುತ್ತಿದ್ದ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪಾಲಿಕೆ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಛಲವಾದಿಪಾಳ್ಯ ವಾರ್ಡ್‌ನ ಮಾಜಿ ಸದಸ್ಯೆ ರೇಖಾ ಕದಿರೇಶ್ ಕೊಲೆ ಪ್ರಕರಣದ ಏಳು ಅಪರಾಧಿಗಳಿಗೆ ಬೆಂಗಳೂರಿನ 72ನೇ ಸಿಸಿಎಚ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶ ಹೊರಡಿಸಿದೆ. ಆಂಜಿನಪ್ಪ ಗಾರ್ಡನ್ ನಲ್ಲಿ ವಾಸವಾಗಿದ್ದ ರೇಖಾ ಅವರನ್ನು 2021ರ ಜೂನ್ ತಿಂಗಳಲ್ಲಿ ಅವರ ಕಚೇರಿ ಎದುರೇ ಹತ್ಯೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಪೀಟರ್, ಸೂರ್ಯ ಅಲಿಯಾಸ್ ಸೂರಜ್, ಸ್ಟೀಫನ್, ಪುರುಷೋತ್ತಮ, ಅಜಯ್, ಅರುಣ್‌ಕುಮಾರ್ ಹಾಗೂ ಸೆಲ್ವರಾಜ್ ಅಲಿಯಾಸ್ ಕ್ಯಾಪ್ಟನ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಅಪರಾಧಿ 63 ವರ್ಷದ ಮಾಲಾ ವಿಚಾರಣೆ ವೇಳೆ ಮೃತಪಟ್ಟಿದ್ದರು.
ಪ್ರಕರಣಗಳಲ್ಲಿ ಬಾಗಿಯಾಗಿದ್ದ ಎಲ್ಲ ಆರೋಪಿಗಳನ್ನು ಬಂಧಿಸಿದ್ದ ಕಾಟನ್‌ಪೇಟೆ ಪೊಲೀಸರು 2021ರ ಸೆಪ್ಟೆಂಬರ್‌ನಲ್ಲಿ ನಗರದ 31ನೇ ಎಸಿಎಂಎಂ ನ್ಯಾಯಾಲಯಕ್ಕೆ 780 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯ ಆರೋಪಿಗಳು ಕೃತ್ಯ ಎಸಗಿರುವುದು ಸಾಬೀತಾಗಿದೆ ಎಂದು ಶಿಕ್ಷೆಯ ಪ್ರಮಾಣ ಪ್ರಕಟಿಸಿದೆ.
ಕೊಲೆಗೆ ಕಾರಣಗಳೇನು?
ರೇಖಾ ಅವರ ಪತಿ ಕದಿರೇಶ್ ಅವರನ್ನು 2018ರಲ್ಲಿ ಕೊಲೆ ಮಾಡಲಾಗಿತ್ತು. ನಂತರ ರೇಖಾ ಪ್ರತ್ಯೇಕವಾಗಿ ವಾಸವಾಗಿದ್ದರು. ರೇಖಾ ಪತಿ ಕದಿರೇಶ್ ಕುಟುಂಬವನ್ನು ರಾಜಕೀಯವಾಗಿ ಬೆಳೆಸುತ್ತಿಲ್ಲ ಎಂದು ಕದಿರೇಶ್ ಅಕ್ಕ ಮಾಲಾ ಹಾಗೂ ಸಂಬಂಧಿಕರ ಕೋಪಕ್ಕೆ ಕಾರಣವಾಗಿತ್ತು.
ಕದಿರೇಶ್‌ಗೆ ಪೀಟರ್ ಹತ್ತಿರವಾಗಿದ್ದ. ಕದಿರೇಶ್ ಕೊಲೆಯಾದ ನಂತರ ಪೀಟರ್, ರೇಖಾ ಅವರಿಗೆ ಅಂಗರಕ್ಷಕನಂತೆ ಸಂಚರಿಸುತ್ತಿದ್ದ. ಆದರೆ ರೇಖಾ ಆತನನ್ನು ದೂರವಿಡಲು ಪ್ರಯತ್ನಿಸುತ್ತಿದ್ದರು. ಇದರಿಂದ ಸಿಟ್ಟಾಗಿದ್ದ ಪೀಟರ್ ಮಾಲಾ ಹಾಗೂ ಅವರ ಮಗ ಅರುಣ್‌ಕುಮಾರ್ ಅವರನ್ನು ಸಂಪರ್ಕಿಸಿದ್ದ. ಎಲ್ಲರೂ ಸೇರಿಕೊಂಡು ರೇಖಾ ಹತ್ಯೆಗೆ ಸಂಚು ರೂಪಿಸಿದ್ದರು. ನನ್ನ ಸಹೋದರನ ನಂತರ ನಾನೇ ಪಾಲಿಕೆ ಸದಸ್ಯೆಯಾಗಬೇಕು ಎನ್ನುವುದು ಮಾಲಾ ಅವರ ಇರಾದೆಯಾಗಿತ್ತು. ಹಾಗಾಗಿ ರೇಖಾ ಅವರನ್ನು ಮುಗಿಸುವ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)