Covid in Karnataka: ಕರ್ನಾಟಕದಲ್ಲಿ ಮತ್ತೆ ಕಾಣಿಸಿಕೊಂಡ ಕೊರೊನಾ, ನಾಳೆಯಿಂದಲೇ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ಆರಂಭ
ಕರ್ನಾಟಕದ ಬೆಂಗಳೂರು ಸೇರಿದಂತೆ ಕೆಲ ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವುದರಿಂದ ಆರೋಗ್ಯ ಇಲಾಖೆಯು ಕೊರೊನಾ ಪರೀಕ್ಷೆಯನ್ನು ಆರಂಭಿಸುವಂತೆ ಸೂಚನೆ ನೀಡಿದೆ.

ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಜತೆಗೆ ಚಳಿಯ ವಾತಾವರಣವೂ ಅಧಿಕವಾಗುತ್ತಿರುವ ನಡುವೆ ಕೊರೊನಾ ಪ್ರಕರಣಗಳು ಹೆಚ್ಚುತ್ತಿದ್ದು ಬೆಂಗಳೂರು ಸಹಿತ ನಾನಾ ಭಾಗಗಳಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿವೆ. ಇದರಿಂದ ಎಚ್ಚೆತ್ತಿರುವ ಕರ್ನಾಟಕ ಆರೋಗ್ಯ ಇಲಾಖೆಯ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಿದೆ. ಕರ್ನಾಟಕ ಎಂಟು ವೈದ್ಯಕೀಯ ಕಾಲೇಜುಗಳಲ್ಲಿ ಮೇ 25ರ ಭಾನುವಾರದಿಂದಲೇ ಪರೀಕ್ಷೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್ ಅವರು ಉಸಿರಾಟ ಸಮಸ್ಯೆಯಿಂದ ಬಳುತ್ತಿರುವವರು ಆಸ್ಪತ್ರೆಗೆ ಬಂದಾಗ ಅವರಿಗೆ ಕೋವಿಡ್‌ತಪಾಸಣೆ ಮಾಡಬೇಕು ಎಂದು ತಿಳಿಸಿದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ.
ಕಳೆದ ಒಂದು ವಾರದಿಂದ ಬೆಂಗಳೂರು,ಬೆಳಗಾವಿ ಸಹಿತ ಕೆಲವು ಕಡೆಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.ಆರೋಗ್ಯ ಇಲಾಖೆಯಲ್ಲಿ ಲಭ್ಯ ಇರುವ ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ 35 ಸಕ್ರಿಯ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಬೆಂಗಳೂರು ನಗರದಲ್ಲಿಯೇ 32 ಪ್ರಕರಣಗಳು ಕಂಡು ಬಂದಿವೆ. ಶುಕ್ರವಾರವೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಎಳೆ ಮಗುವಿಗೆ ಕೋವಿಡ್ ಇರುವುದು ದೃಢಪಟ್ಟಿತ್ತು.ಬೆಳಗಾವಿಯಲ್ಲೂ ಇಂತಹದೇ ಪ್ರಕರಣ ಕಂಡು ಬಂದಿದೆ. ಈ ಕಾರಣದಿಂದಲೇ ಮುನ್ನೆಚ್ಚರಿಕೆ ಕ್ರಮವಾಗಿ ಉಸಿರಾಟ ಮತ್ತು ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಕಡ್ಡಾಯ ಕೋವಿಡ್ ಪರೀಕ್ಷೆ ಮಾಡಿಸಬೇಕು. ಇದಕ್ಕಾಗಿ ರಾಜ್ಯದ 8 ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ ಟೆಸ್ಟ್ ಮತ್ತೆ ಆರಂಭಿಸಬೇಕು. ಒಂದು ತಿಂಗಳಿಗಾಗುವಷ್ಟು ಕೋವಿಡ್ ಪರೀಕ್ಷಾ ಕಿಟ್ ಖರೀದಿಸಿ ಮೀಸಲಿಡುವಂಎಯೂ ಎಲ್ಲ ಆಸ್ಪತ್ರೆಗಳಿಗೆ ಸೂಚನೆ ಕೂಡ ನೀಡಿದ್ದಾರೆ.
ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಕಾರಣದಿಂದ ತಾಂತ್ರಿಕ ಸಲಹಾ ಸಮಿತಿ ಸಭೆಯನ್ನು ತುರ್ತಾಗಿ ಕರೆಯಲಾಗಿತ್ತು. ಸಭೆಯಲ್ಲಿ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್ ಅವರು ಈ ಕುರಿತು ಚರ್ಚೆ ನಡೆಸಿ ತಾಂತ್ರಿಕ ಸಲಹಾ ಸಮಿತಿ ಪ್ರಮುಖರ ಸಲಹೆಗಳನ್ನು ಕೇಳಿದ್ದರು. ಮಳೆಗಾಲ, ಚಳಿ ವಾತಾವರಣದ ಕಾರಣಕ್ಕೆ ಹೃದಯ ಸಂಬಂಧಿ ಹಾಗೂ ಉಸಿರಾಟದ ಪ್ರಕರಣ ಹೆಚ್ಚುವುದರಿಂದ ಕೋವಿಡ್ ಕಾಣಿಸಿಕೊಳ್ಳಬಹುದು. ಅದೂ ಮಕ್ಕಳು ಹಾಗೂ ಹಿರಿಯರಲ್ಲಿ ಇದು ಹೆಚ್ಚು.ಈಗಿನಿಂದಲೇ ಪರೀಕ್ಷೆಯನ್ನು ಆರಂಭಿಸುವುದು ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತವಾಗಿತ್ತು. ಈ ಕಾರಣದಿಂದಲೇ ಭಾನುವಾರದಿಂದಲೇ ಕೋವಿಡ್ ಪರೀಕ್ಷೆ ಶುರುವಾಗಲಿದೆ.
ಸಚಿವರ ಸೂಚನೆ ಏನು
ಕಳೆದ ಒಂದು ವಾರದಲ್ಲಿ ವಿಶೇಷವಾಗಿ ಬೆಂಗಳೂರಿನಲ್ಲಿ ಕೋವಿಡ್ ಪಾಸಿಟಿವ್ ಸೋಂಕಿತರಲ್ಲಿ ಕೊಂಚ ಏರಿಕೆಯಾಗಿದೆ. ಮುಂಜಾಗ್ರತ ಕ್ರಮಗಳನ್ನ ಸರ್ಕಾರ ತೆಗೆದುಕೊಳ್ಳುತ್ತಿದೆ. ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ.
ಉಸಿರಾಟದ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗಳಲ್ಲಿ ಅಡ್ಮಿಟ್ ಆದವರನ್ನ ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಗೆ ಒಳಪಡಿಸಲು ಸೂಚಿಸಲಾಗಿದೆ. ಅಗತ್ಯ ಟೆಸ್ಟಿಂಗ್ ಕಿಟ್ ಗಳನ್ನ ತೆಗೆದಿರಿಸಿಕೊಳ್ಳಲು ಅಧಿಕಾರಿಗಳಿಗೆ ನಾನು ಸೂಚಿನೆ ನೀಡಿದ್ದೇನೆ. ಒಂದು ತಿಂಗಳಿಗೆ ಬೇಕಾಗುವ 5 ಸಾವಿರ RTPCR ಹಾಗೂ 5 ಸಾವಿರ VDRL ಟೆಸ್ಟಿಂಗ್ ಕಿಟ್ ಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಾಣಂತಿಯರು, ಗರ್ಭೀಣಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಹೊಂದಿದ 35 ಜನರಲ್ಲಿ ಕೋವಿಡ್ ಗಂಭೀರವಾಗಿಲ್ಲ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕರು ಕೋವಿಡ್ ಬಂತು ಎಂದು ಆತಂಕಗೊಳ್ಳದೇ ತಮ್ಮ ಸಹಜ ಜೀವನ ನಡೆಸಬಹುದು ಎನ್ನುವುದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನೀಡಿರುವ ವಿವರಣೆ.