ಕನ್ನಡ ಸುದ್ದಿ  /  Karnataka  /  Covid Cases Rising In India Health Ministry Alert

Covid Cases In India: ದೇಶದಲ್ಲಿ ಮತ್ತೆ ಏರಿಕೆಯಾಗುತ್ತಿರುವ ಕೋವಿಡ್ ಕೇಸ್; ಆರೋಗ್ಯ ಸಚಿವಾಲಯ ಎಚ್ಚರಿಕೆ

ಎರಡು ವರ್ಷ ಬಾರಿ ಹೊಡೆತದ ಬಳಿಕ ಸಹಜ ಜೀವನದತ್ತ ಸಾಗುತ್ತಿರುವ ಜನ ಸಾಮಾನ್ಯರ ಬದುಕಿನ ಮೇಲೆ ಮತ್ತೆ ಮಹಾಮಾರಿ ಕೋವಿಡ್ ವಕ್ರದೃಷ್ಟಿ ನೆಟ್ಟಿದಂತಿದೆ. ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸ್ವಲ್ಪ ಎಚ್ಚರ ತಪ್ಪಿದರೂ ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಎಚ್ಚರಿಕೆ ನೀಡಿದೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ (ಫೋಟೋ-ಫೈಲ್)
ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ (ಫೋಟೋ-ಫೈಲ್)

ನವದೆಹಲಿ: ಕೋವಿಡ್… ಈ ಹೆಸರು ಕೇಳಿದರೆ ಸಾಕು ಇಂದಿಗೂ ಜನ ಬೆಚ್ಚಿಬೀಳುತ್ತಾರೆ. ಅಷ್ಟರ ಮಟ್ಟಿಗೆ ಕಣ್ಣಿಗೆ ಕಾಣದ ಈ ವೈರಸ್ ಇಡೀ ಜಗತ್ತನ್ನು ಶೇಕ್ ಮಾಡಿತ್ತು. ಇದೀಗ ಮತ್ತೆ ಈ ವೈರಸ್ ನ ಭೀತಿ ಶುರವಾಗಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಕಾರಣತ್ತೆ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವುದು.

ದೇಶದಲ್ಲಿ ನಿನ್ನೆ ( ಮಾರ್ಚ್ 17, ಶುಕ್ರವಾರ) ಕಳೆದ 126 ದಿನಗಳಿಗಿಂತ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ. ಭಾರತದಲ್ಲಿ ಶುಕ್ರವಾರ ವರದಿಯಾದ ದೈನಂದಿನ ಕೋವಿಡ್ ಪ್ರಕರಣಗಳ ಸಂಖ್ಯೆ 800 ದಾಟಿದೆ. ಇದರೊಂದಿಗೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಈಗ 5,389 ಕ್ಕೆ ತಲುಪಿದೆ.

ಶುಕ್ರವಾರವಷ್ಟೇ 843 ಹೊಸ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಇದುವರೆಗೆ ಒಟ್ಟು ಸೋಂಕಿತರ ಸಂಖ್ಯೆ 4,46,94,349 ಆಗಿದೆ. ನಿನ್ನೆ ಒಂದೇ ದಿನ ನಾಲ್ವರು ವೈರಸ್ ತಗುಲಿ ಸಾವನ್ನಪ್ಪಿದ್ದಾರೆ. ಇವರನ್ನು ಒಳಗೊಂಡಂತೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಸಂಖ್ಯೆ 5,30,799 ಕ್ಕೆ ತಲುಪಿದೆ.

ನಿನ್ನೆ ಬೆಂಗಳೂರಿನಲ್ಲಿ 77 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಒಬ್ಬರು, ಜಾರ್ಖಂಡ್‌ನಲ್ಲಿ ಒಬ್ಬರು ಮತ್ತು ಕೇರಳದಲ್ಲಿ ಇಬ್ಬರು ಕೋವಿಡ್ -19 ನಿಂದ ಸಾವನ್ನಪ್ಪಿದ್ದಾರೆ. ಪ್ರಸ್ತುತ, ಭಾರತದಲ್ಲಿ ಕೋವಿಡ್ 19 ನಿಂದ ಚೇತರಿಕೆಯ ಪ್ರಮಾಣ ಶೇ.98.90 ರಷ್ಟು ಇದೆ.

ಅಲ್ಲದೆ, ಒಟ್ಟು ಪ್ರಕರಣಗಳ ಸಂಖ್ಯೆಗೆ ಹೋಲಿಸಿದರೆ, ಪ್ರಸ್ತುತ ಸಕ್ರಿಯ ಪ್ರಕರಣಗಳು ಶೇ.0.01 ರಷ್ಟು ಇದೆ. ಭಾರತದಲ್ಲಿ ಇದುವರೆಗೆ 4,41,58,161 ಜನರು ಕೋವಿಡ್ -19 ನಿಂದ ಚೇತರಿಸಿಕೊಂಡಿದ್ದಾರೆ. ಇದುವರೆಗೆ, ರಾಷ್ಟ್ರವ್ಯಾಪಿ ಕೋವಿಡ್ ಲಸಿಕಾ ಅಭಿಯಾನದ ಭಾಗವಾಗಿ ಒಟ್ಟು 220.64 ಕೋಟಿ ಕೊರೊನಾ ಲಸಿಕೆಗಳನ್ನು ನೀಡಲಾಗಿದೆ.

ಆರೋಗ್ಯ ಇಲಾಖೆ ಎಚ್ಚರಿಕೆ

ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

ಕೇಂದ್ರ ಆರೋಗ್ಯ ಸಚಿವಾಲಯ ನಿರಂತರ ಮೇಲ್ವಿಚಾರಣೆ ಮತ್ತು ಸೋಂಕು ತಡೆಗಟ್ಟುವ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದೆ. ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾತನಾಡಿ, ಕಳೆದ ವಾರದಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿನ ಪ್ರಕರಣಗಳು 355 ರಿಂದ 668 ಕ್ಕೆ ಏರಿದೆ ಎಂದು ಹೇಳಿದ್ದಾರೆ.

ಗುಜರಾತ್‌ನಲ್ಲಿ, ಕೋವಿಡ್ -19 ಪ್ರಕರಣಗಳು ಕಳೆದ ಗುರುವಾರ (ಮಾರ್ಚ್ 16) 105 ರಿಂದ 279 ಕ್ಕೆ, ತೆಲಂಗಾಣದಲ್ಲಿ 132 ರಿಂದ 267 ಕ್ಕೆ, ತಮಿಳುನಾಡಿನಲ್ಲಿ 170 ರಿಂದ 258 ಕ್ಕೆ ಮತ್ತು ಕೇರಳದಲ್ಲಿ 434 ರಿಂದ 579 ಕ್ಕೆ ಏರಿದೆ.

ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ 493ರಿಂದ 604ಕ್ಕೆ ಏರಿಕೆಯಾಗಿದೆ. ಆಯಾ ರಾಜ್ಯ ಸರ್ಕಾರಗಳು ಕೋವಿಡ್‌ಗೆ ಪರೀಕ್ಷೆ, ಚಿಕಿತ್ಸೆ, ಟ್ರ್ಯಾಕ್ ಮತ್ತು ಲಸಿಕೆ ನೀಡಿಕೆಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು ಎಂದು ಭೂಷಣ್ ಸಲಹೆ ನೀಡಿದ್ದಾರೆ.

ದೇಶದ ಎಲ್ಲಾ ರಾಜ್ಯಗಳಿಗಿಂತ ಮಹಾರಾಷ್ಟ್ರದಲ್ಲಿ ಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿವೆ. ವಿದೇಶದಿಂದ ಬರುವ ಬಹುತೇಕ ವಿಮಾನಗಳು ಮಹಾರಾಷ್ಟ್ರದಲ್ಲಿಯೇ ಲ್ಯಾಂಡ್ ಆಗುತ್ತಿರುವುದು ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಿದೆ.

ಅದೇ ರೀತಿ, ಮಹಾರಾಷ್ಟ್ರ ಮತ್ತು ದೆಹಲಿಯಂತಹ ರಾಜ್ಯಗಳು ಕೊರೊನಾ ಹೊಸ ರೂಪವನ್ನು ಹರಡುವಲ್ಲಿ ಮುಂಚೂಣಿಯಲ್ಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಪತ್ರ ಬರೆದಿದೆ.

ವೈರಸ್ ತಡೆಗಟ್ಟಲು ಅಪಾಯದ ಮೌಲ್ಯಮಾಪನ ಆಧಾರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಕೋವಿಡ್-19 ಮತ್ತು ಇನ್‌ಫ್ಲುಯೆಂಜಾ ಮುಂತಾದ ಕಾಯಿಲೆಗಳ ಪ್ರಕರಣಗಳ ಬಗ್ಗೆ ನಿಗಾ ಇರಿಸಲು ಆರೋಗ್ಯ ಕೇಂದ್ರಗಳಿಗೆ ಆದೇಶಿಸಲಾಗಿದೆ.

IPL_Entry_Point