ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು

ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು

ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ. (ವರದಿ- ಎಚ್.‌ ಮಾರುತಿ, ಬೆಂಗಳೂರು)

ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ.
ಬಿಜೆಪಿ ಅವಧಿಯ ಕೋವಿಡ್‌ ಭ್ರಷ್ಟಾಚಾರ; ಬಿಬಿಎಂಪಿ, ಮೂರು ಜಿಲ್ಲೆಗಳ ಡಿಸಿಗಳ ವಿರುದ್ಧ ಕ್ರಮಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ.

ಬೆಂಗಳೂರು: ಕೋವಿಡ್‌ ಹಗರಣದಲ್ಲಿ ಭಾಗಿಯಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಉನ್ನತ ಮಟ್ಟದ ಅಧಿಕಾರಿಗಳು, ಬೆಂಗಳೂರು ಗ್ರಾಮೀಣ, ಗದಗ ಮತ್ತು ಕೊಪ್ಪಳ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕುರಿತು ತನಿಖೆ ನಡೆಸುತ್ತಿರುವ ನ್ಯಾಯಮೂರ್ತಿ ಮೈಖೇಲ್‌ ಡಿ ಕುನ್ಹಾ ಸಮಿತಿ ಶಿಫಾರಸ್ಸು ಮಾಡಿದೆ. ಬಿಬಿಎಂಪಿಯ ನಾಲ್ಕು ವಿಭಾಗಗಳು ಮತ್ತು ಮೂರು ಜಿಲ್ಲೆಗಳಲ್ಲಿ ಶೇ. 54 ರಷ್ಟು ಅಂದರೆ 157.55 ಕೋಟಿ ರೂ ಅವ್ಯವಹಾರ ನಡೆದಿದೆ ಎಂದು ಸಮಿತಿ ಪತ್ತೆ ಹಚ್ಚಿದೆ.

ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ಸಲ್ಲಿಸಿದ್ದ 2ನೇ ವರದಿಯ ಅಂಶಗಳಿವು

ಇತ್ತೀಚೆಗಷ್ಟೇ ಸಚಿವ ಸಂಪುಟಕ್ಕೆ ನ್ಯಾಯಮೂರ್ತಿ ಡಿ ಕುನ್ಹಾ ಸಮಿತಿ ತನ್ನ ಎರಡನೇ ವರದಿ ಸಲ್ಲಿಸಿದ್ದು ವರದಿಯ ಅಂಶಗಳು ಬಹಿರಂಗವಾಗಿವೆ. ನ್ಯಾಯಮೂರ್ತಿ ಕುನ್ಹಾ ಅವರು, ಬೊಮ್ಮನಹಳ್ಳಿ, ಬೆಂಗಳೂರು ದಕ್ಷಿಣ, ಬೆಂಗಳೂರು ಪಶ್ಚಿಮ ಮತ್ತು ಯಲಹಂಕ ವಲಯಗಳಲ್ಲಿ ಮಾರ್ಚ್‌ 2020 ರಿಂದ ಡಿಸೆಂಬರ್‌ 2022 ರಿಂದ ಅವ್ಯವಹಾರ ನಡೆಸಿರುವ ಜಂಟಿ ಆಯುಕ್ತರು, ಆರೋಗ್ಯ ವಿಭಾಗದ ಅಧಿಕಾರಿಗಳು ಮತ್ತಿತರರ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದೆ.

ಈ ನಾಲ್ಕೂ ವಲಯಗಳಲ್ಲಿ 184.62 ಕೋಟಿ ರೂ. ಮೌಲ್ಯದ ಉಪಕರಣಗಳು ಮತ್ತು ಔಷಧಿಗಳನ್ನು ಖರೀದಿಸಲಾಗಿದ್ದು, 113.09 ಕೋಟಿ ರೂ. ಅಕ್ರಮ ನಡೆದಿರುವುದನ್ನು ಪತ್ತೆ ಹಚ್ಚಿದೆ. ಮೂರನೇ ಎರಡರಷ್ಟು ಅಂದರೆ ಶೇ.61.31 ರಷ್ಟು ಅವ್ಯವಹಾರ ನಡೆದಿದೆ. ಲೋಕಾಯುಕ್ತ ಅಥವಾ ಸೂಕ್ತ ಏಜೆನ್ಸಿಯಿಂದ ತನಿಖೆ ನಡೆಸಬೇಕು. ಉಂಟಾಗಿರುವ ನಷ್ಟವನ್ನು ಈ ಉಪಕರಣ ಮತ್ತು ಔಷಧಿಗಳನ್ನು ಪೂರೈಕೆ ಮಾಡಿರುವ ಕಂಪನಿಗಳಿಂದ ವಸೂಲಿ ಮಾಡಬೇಕು ಎಂದೂ ಶಿಫಾರಸ್ಸು ಮಾಡಿದೆ.

ಇದೇ ರೀತಿಯ ಶಿಕ್ಷೆಯನ್ನು ಮೂರು ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯ ಅಧಿಕಾರಿಗಳು ಮತು ಇತರ ಅಧಿಕಾರಿಗಳಿಗೆ ವಿಧಿಸಬೇಕು ಎಂದೂ ತಿಳಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 45.55 ಕೋಟಿ ಖರೀದಿಯಲ್ಲಿ 27.83 ಕೋಟಿ ರೂ ಅವ್ಯವಹಾರ ನಡೆದಿದೆ. ಕೊಪ್ಪಳ ಜಿಲ್ಲೆಯಲ್ಲಿ 23.71 ಕೋಟಿ ರೂ ಖರೀದಿಯಲ್ಲಿ 5.04 ಕೋಟಿ ರೂ ಮತ್ತು ಗದಗ ಜಿಲ್ಲೆಯಲ್ಲಿ 35.13 ಕೋಟಿ ರೂ. ಖರೀದಿಯಲ್ಲಿ 23.71 ಕೋಟಿ ರೂ. ಅವ್ಯವಹಾರ ನಡೆದಿರುವುದನ್ನು ಪತ್ತೆ ಮಾಡಿದೆ.

ಕೆಟಿಟಿಪಿ ಕಾಯಿದೆಯ ನಿಯಮ ಉಲ್ಲಂಘನೆ

ಕೆಟಿಟಿಪಿ ಕಾಯಿದೆಯ ನಿಯಮಗಳನ್ನು ಉಲ್ಲಂಘಿಸಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಈ ಅಧಿಕಾರಿಗಳು ಖರೀದಿಯಲ್ಲಿ ಭ್ರಷಾಚಾರ ನಡೆಸಿದ್ದಾರೆ. ಸೂಕ್ತ ರೀತಿಯಲ್ಲಿ ಖರೀದಿ ಪ್ರಕ್ರಿಯೆಗಳನ್ನು ನಡೆಸಿಲ್ಲ. ವೈದ್ಯಕೀಯ ಉಪಕರಣಗಳನ್ನು ಖರೀದಿಸುವಾಗ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆ ಪಾವತಿಸಲಾಗಿದೆ. ಅನೇಕ ಖರೀದಿಗಳಿಗೆ ಸಂಬಂಧಪಟ್ಟಂತೆ ಕಡತಗಳೇ ಹೊಂದಾಣಿಕ ಆಗುತ್ತಿಲ್ಲ. ಕಡತಗಳನ್ನು ಅಡಗಿಸಿಡಲಾಗಿದೆ ಅಥವಾ ಖರೀದಿ ವೆಚ್ಚಗಳನ್ನು ಬದಲಾಯಿಸುತ್ತಾ ಬರಲಾಗಿದೆ ಎನ್ನುವುದನ್ನೂ ಗುರುತಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ನ್ಯಾಯಮೂರ್ತಿ ಕುನ್ಹಾ ಸಮಿತಿಯನ್ನು ಆಗಸ್ಟ್‌ 2023 ರಲ್ಲಿ ರಚಿಸಿತ್ತು. ಆಗಸ್ಟ್‌ 2024ರಲ್ಲಿ ಮೊದಲ ವರದಿಯನ್ನು ಸಲ್ಲಿಸಿತ್ತು. ಸಮಿತಿಯ ಅವಧಿಯನ್ನು 2025 ರ ಅಂತ್ಯದವರೆಗೂ ವಿಸ್ತರಿಸಲಾಗಿತ್ತು. ಮೊದಲ ವರದಿಯಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ವಿರುದ್ಧ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಾಡಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ (2020-2021ರಲ್ಲಿ) ವೆಂಟಿಲೇಟರ್ಸ್‌, ಪಿಪಿಇ ಕಿಟ್‌, ಔಷಧಿಗಳ ಖರೀದಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಸಮಿತಿ ಪತ್ತೆ ಹಚ್ಚಿತ್ತು.

(ವರದಿ- ಎಚ್.‌ ಮಾರುತಿ, ಬೆಂಗಳೂರು)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.