ಕನ್ನಡ ಸುದ್ದಿ  /  Karnataka  /  Cow Slaughter Anti Cow Slaughter Act Karnataka Cm Siddaramaiah Minister K Venkatesh Chakravarthy Sulibele Bommai Uks

Cow Slaughter: ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ಮುಖ್ಯಮಂತ್ರಿ, ಸಚಿವರ ಹೇಳಿಕೆ ಏನು; ಮತ್ತಿನ್ಯಾರು ಏನೇನು ಹೇಳಿದ್ರು

cow slaughter: ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. ಹಿಂದಿನ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯಲ್ಲಿ ಮಾಡಿರುವ ಪರಿಷ್ಕರಣೆ ರದ್ದುಗೊಳಿಸುವ ವಿಚಾರ ಇದಕ್ಕೆ ಕಾರಣ. ಈ ವಿದ್ಯಮಾನಕ್ಕೆ ಸಂಬಂಧಿಸಿ ಯಾರು ಏನು ಹೇಳಿದರು ಎಂಬ ವಿವರ ಇಲ್ಲಿದೆ.

ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ)
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ವಿಚಾರ ತೀವ್ರ ಚರ್ಚೆಗೆ ಒಳಗಾಗಿದೆ. (ಸಾಂಕೇತಿಕ ಚಿತ್ರ) (AP Photo/Rajesh Kumar Singh)

ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಹೇಳಿಕೆ ಇದಕ್ಕೆ ಕಾರಣ.

ಬಿಜೆಪಿ ಸರ್ಕಾರ ಜಾರಿಗೆ ತಂದ ಪರಿಷ್ಕೃತ ಗೋಹತ್ಯೆ ನಿಷೇಧ ಕಾಯ್ದೆಯನ್ನು ರದ್ದುಗೊಳಿಸಿ, ಹಿಂದಿನ ಕಾಯ್ದೆಯನ್ನೇ ಊರ್ಜಿತಗೊಳಿಸುವ ಭರವಸೆಯನ್ನು ಕಾಂಗ್ರೆಸ್‌ ಪಕ್ಷ ಚುನಾವಣೆಗೆ ಮುನ್ನ ನೀಡಿತ್ತು. ಕಾಂಗ್ರೆಸ್‌ ಸರ್ಕಾರ ರಚಿಸಿರುವ ಕಾರಣ, ಗೋಹತ್ಯೆ ನಿಷೇಧದ ಪರಿಷ್ಕೃತ ಭಾಗವನ್ನು ರದ್ದುಗೊಳಿಸಿ ಹಳೆಯ ಕಾನೂನು ಜಾರುಗೊಳಿಸುವ ವಿಚಾರ ಮುನ್ನೆಲೆಗೆ ಬಂದಿದೆ.

ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ತೀರ್ಮಾನ ಎಂದ ಸಿಎಂ ಸಿದ್ದರಾಮಯ್ಯ

ದಾವಣೆಗೆರೆಯ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರು ಕೇಳಿದ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 1964 ರಲ್ಲಿಯೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆ ಪ್ರಕಾರ 12 ವರ್ಷ ತುಂಬಿದ ರಾಸುಗಳು ಮತ್ತು ವ್ಯವಸಾಯಕ್ಕೆ ಅನುಕೂಲಕ್ಕೆ ಬಾರದ ರಾಸು ಮುಕ್ತಗೊಳಿಸಲಾಗಿತ್ತು. ಬಿಜೆಪಿ ಸರ್ಕಾರ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತಂದಿತ್ತು. ಈಗ ಕ್ಯಾಬಿನೆಟ್ ನಲ್ಲಿ ನಾವು ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

ಬೇಷರತ್ತಾಗಿ 200 ಯೂನಿಟ್‌ ಕರೆಂಟ್‌ ಫ್ರೀ ಕೊಡಿ ಎಂದ ಚಕ್ರವರ್ತಿ ಸೂಲಿಬೆಲೆ

ಪಶುಸಂಗೋಪನಾ ಸಚಿವರು ಅಂದ್ರೆ ಪಶುಗಳನ್ನು, ಪಶು ಸಂಪತ್ತನ್ನು ಕಾಪಾಡುವವರು ಅಂತ ಪರಿಗಣಿಸಲಾಗುತ್ತದೆ. ಆದರೆ, ದುರದೃಷ್ಟಕರ ಸಂಗತಿ ಎಂದರೆ ಕರ್ನಾಟಕದಲ್ಲಿ ಪಶುಸಂಗೋಪನಾ ಸಚಿವರೇ ಪಶುಗಳನ್ನ ಕಡಿಯಬೇಕು ಎಂದು ಹೇಳುತ್ತಿದ್ದಾರೆ. ಸಚಿವರು ಹಸು ಕಡಿಯಬೇಕು ಎಂದು ಪ್ರತಿಪಾದಿಸಲು ಬೇರೆ ಬೇರೆ ಕಾರಣ ನೀಡುತ್ತಿದ್ದಾರೆ. ಇಂತಹ ಹೇಳಿಕೆ ನೀಡುತ್ತ ಸರ್ಕಾರ, ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಚುನಾವಣಾ ಭರವಸೆ ಪ್ರಕಾರ ಬೇಷರತ್ತಾಗಿ 200 ಯೂನಿಟ್‌ ಕರೆಂಟನ್ನು ಎಲ್ಲರಿಗೂ ಕೊಡಲಿ ಎಂದು ಸಾಮಾಜಿಕ ಕಾರ್ಯಕರ್ತ ಚಕ್ರವರ್ತಿ ಸೂಲಿಬೆಲೆ ಟೀಕಿಸಿದ್ದಾರೆ.

ಎಮ್ಮೆ, ಕೋಣ ಕಡಿಯಬಹುದಾದರೆ ಹಸುವನ್ನೇಕೆ ಕಡಿಯಬಾರದು ಎಂದ ಸಚಿವ

ಎಮ್ಮೆ, ಕೋಣಗಳನ್ನು ಕಡಿಯಬಹುದಾದರೆ, ಹಸುವನ್ನು ಯಾಕೆ ಕಡಿಯಬಾರದು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್‌ ಶನಿವಾರ ಮೈಸೂರಿನಲ್ಲಿ ಪ್ರಶ್ನಿಸಿದ್ದರು.

ಗೋಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸುವ ಬಗ್ಗೆ ಚರ್ಚೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ರೈತರಿಗೆ ಅನುಕೂಲ ಆಗುವ ರೀತಿಯಲ್ಲಿ ಸೂಕ್ತ ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದ್ದರು.

ಇನ್ನೊಂದೆಡೆ, ರಾಜ್ಯದಲ್ಲಿರುವ ಗೋಶಾಲೆಗಳನ್ನು ನಿರ್ವಹಿಸುವುದಕ್ಕೆ ರಾಜ್ಯದ ಬೊಕ್ಕಸದಲ್ಲಿ ಹಣದ ಕೊರತೆ ಇಲ್ಲ ಎಂದು ಇದೇ ವೇಳೆ ಸಚಿವರು ಸ್ಪಷ್ಟಪಡಿಸಿದ್ದರು.

ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆ ಈ ಹೇಳಿಕೆ; ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ

ಗೋವುಗಳನ್ನು ಏಕೆ ಕಡಿಯಬಾರದು ಎಂದು ಪ್ರಶ್ನಿಸಿರುವ ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್ ಅವರ ಹೇಳಿಕೆ ಆಶ್ಚರ್ಯ ತಂದಿದ್ದು, ಆ ಹೇಳಿಕೆ ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಸಚಿವ ಕೆ. ವೆಂಕಟೇಶ್ ಅವರು ಯಾರ ಓಲೈಕೆಗಾಗಿ ಈ ರೀತಿಯ ಹೇಳಿಕೆ ನೀಡಿದ್ದಾರೆ, ತಮಗೆ ನೀಡಿರುವ ಖಾತೆಯನ್ನು ಬದಲಾಯಿಸಲಿ ಎಂದೊ, ಹೈ ಕಮಾಂಡ್ ಮೆಚ್ಚಿಸಲೊ ಎಂದು ಪ್ರಶ್ನಿಸಿದ್ದಾರೆ.

ಗೋಹತ್ಯೆ ನಿಷೇಧವನ್ನು ಪ್ರಥಮವಾಗಿ ಪ್ರತಿಪಾದಿಸಿದ್ದು ಮಹಾತ್ಮ ಗಾಂಧಿಯವರು. 1960 ರ ದಶಕದಲ್ಲಿ ಹಲವಾರು ರಾಜ್ಯಗಳಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಸಚಿವರ ಹೇಳಿಕೆಯಿಂದ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋವುಗಳ ಕಳ್ಳ ಸಾಗಾಣಿಕೆ, ಸಾಮೂಹಿಕ ಗೋ ಹತ್ಯೆ ಮಾಡುವ ಕಾನೂನು ಬಾಹಿರ ಕಾರ್ಖಾನೆಗಳು ತಲೆ ಎತ್ತಲಿವೆ ಎಂದು ಅವರು ಎಚ್ಚರಿಸಿದರು.

ನಮ್ಮ ಸರ್ಕಾರದ ಅವಧಿಯಲ್ಲಿ ಕಾನೂನು ಬಾಹಿರ ಕಸಾಯಿ ಖಾನೆಗಳನ್ನು ತಡೆಗಟ್ಟಲು ಕಾನೂನು ತರಲಾಗಿದೆ. ಕರ್ನಾಟಕದಲ್ಲಿ ಹೊಸ ಕಾಯಿದೆ ತಂದಿಲ್ಲ. ಇರುವ ಕಾನೂನಿಗೆ ಬಲ ತುಂಬಿದ್ದೇವೆ‌ ಎಂದು ಅವರು ಹೇಳಿದರು.

ಸರ್ಕಾರದ ತೀರ್ಮಾನ ಕಾದು ನೋಡೋಣ ಎಂದ ಸಂಸದ ಡಿಕೆ ಸುರೇಶ್‌

ಗೋ ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ನನಗೆ ಮಾಹಿತಿ ಇಲ್ಲ. ಸರ್ಕಾರ ಏನು ತೀರ್ಮಾನ ಮಾಡುತ್ತದೆ ಎಂದು ಕಾದು ನೋಡೋಣ. ರೈತರಿಗೆ ಅನುಪಯುಕ್ತವಾದ ಜಾನುವಾರುಗಳನ್ನು ಹಿಂದಿನಿಂದಲೂ ಬೇರೆ ಬೇರೆ ಕೆಲಸಕ್ಕೆ ಬಳಸುತ್ತಿದ್ದಾರೆ. ಈ ಬಗ್ಗೆ ವ್ಯಾಪಕ ಚರ್ಚೆ ಆಗಬೇಕು. ರೈತರ ದೃಷ್ಟಿಯಿಂದ ಮತ್ತು ಸಂಸ್ಕೃತಿ‌ ದೃಷ್ಟಿಯಿಂದ ಏನು ಮಾಡಬೇಕು ಎಂದು ಚರ್ಚೆ ಮಾಡಬೇಕಾಗುತ್ತದೆ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ.