ಸಿಪಿ ಯೋಗೇಶ್ವರ್ ಒಬ್ಬ ಫ್ರಾಡ್, ನಾನು ಝಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ; ಎಚ್ ವಿಶ್ವನಾಥ್ ವಾಗ್ದಾಳಿ
H Vishwanath: ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವ ಸಿಪಿ ಯೋಗೇಶ್ವರ್ ಅವರನ್ನು ಒಬ್ಬ ಫ್ರಾಡ್ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಕರೆದಿದ್ದಾರೆ.
ಮೈಸೂರು: ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಅವರು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದ ಬಹುತೇಕ ಕಡೆ ಧಾರಾಕಾರ ಮಳೆಯಿಂದ ಜನರು ಮನೆಯಿಂದ ಹೊರಬರಲಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ರಾಜ್ಯದಲ್ಲಿ ಬಂದೊದಗಿರುವ ಎದುರಾದ ವಿಪತ್ತು ನಿವಾರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಸಿಎಂ ಮಾತ್ರವಲ್ಲ, ಯಾವುದೇ ಸಚಿವರು ಜನರ ಸಮಸ್ಯೆಗಳತ್ತ ಗಮನ ಹರಿಸಿಲ್ಲ ಎಂದು ಆರೋಪ ಮಾಡಿದ್ದಾರೆ.
ಸಿಪಿ ಯೋಗೇಶ್ವರ್ ಒಬ್ಬ ಫ್ರಾಡ್
ಇದೇ ವೇಳೆ ಸಿಪಿ ಯೋಗೇಶ್ವರ್ ಕುರಿತು ಮಾತನಾಡಿದ ವಿಶ್ವನಾಥ್, ಯೋಗೇಶ್ವರ್ ಅವರನ್ನು ಸೈನಿಕ ಎನ್ನಬಾರದು. ಸೈನಿಕ ಎನ್ನುವ ಮೂಲಕ ಸೈನಿಕರಿಗೆ ಅಪಮಾನ ಮಾಡಬಾರದು. ಈಗಾಗಲೇ ಮುಡಾ, ವಾಲ್ಮೀಕಿ ಫ್ರಾಡ್ ಜೊತೆಗೆ ಯೋಗೇಶ್ವರ್ ಎಂಬ ಮೂರನೇ ಫ್ರಾಡ್ ಸೇರಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ. 3 ಕ್ಷೇತ್ರಗಳ ಉಪಚುನಾವಣೆಯಿಂದ ಯಾವುದೇ ರಾಜಕೀಯ ಬದಲಾವಣೆ ಆಗುವುದಿಲ್ಲ ಎಂದು ಸಿಪಿವೈ ವಿರುದ್ಧ ವಾಗ್ದಾಳಿ ನಡೆಸಿ ಉಪಚುನಾವಣೆಗಳ ಕುರಿತು ಭವಿಷ್ಯ ನುಡಿದಿದ್ದಾರೆ.
ವರುಣದಲ್ಲಿ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರ ಕುರಿತು ಮಾತನಾಡಿದ ಅವರು, ನಿನ್ನೆ (ಅ.22) ನಡೆಸಿದ್ದು ಸ್ಪಷ್ಟೀಕರಣ ಸಭೆಯಾಗಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಮಾರಂಭದಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟೀಕರಣ ನೀಡಿದ್ದೀರಾ? ಈಗ ಏನೇ ಹೇಳಿದರೂ ರಾಜ್ಯದ ಜನರು ನಂಬುವುದಿಲ್ಲ. ಬೈರತಿ ಸುರೇಶ್ನಂತಹ ಅಯೋಗ್ಯನನ್ನು ಮಂತ್ರಿ ಮಾಡಿಕೊಂಡು ರಾಜ್ಯಕ್ಕೆ ಮಸಿ ಬಳಿದಿದ್ದೀರಿ. ಕರ್ನಾಟಕ ಅಂದರೇ ಫ್ರಾಡ್ಗಳ ಸಂತೆ ಆಗಿ ಹೋಗಿದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ನೇರ ಕಾರಣ ಎಂದಿದ್ದಾರೆ.
ಝಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ ಎಂದ ವಿಶ್ವನಾಥ್
ಜೈಲಿಗೆ ಹೋಗಿ ಬಂದ ಒಬ್ಬ ಮಂತ್ರಿಗೆ ಮೈಸೂರು ಪೇಟ, ಹಾರ ಹಾಕಿ ಸ್ವಾಗತ ಮಾಡಿದ್ದೀರಿ. ನಿಮ್ಮನ್ನು ವಾಲ್ಮೀಕಿ ಸಮುದಾಯದ ಜನರು ನಂಬುವುದಿಲ್ಲ. ಗ್ಯಾರಂಟಿ ಯೋಜನೆಗಳು ಜನರನ್ನು ತಲುಪುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ. ನಾನು ಕೂಡ 3 ಪಾರ್ಟಿಗಳಲ್ಲಿ ಗುರ್ತಿಸಿಕೊಂಡಿದ್ದೇನೆ. ಆದರೆ ನನ್ನ ತತ್ವ ಸಿದ್ದಾಂತ ಬಿಟ್ಟಿಲ್ಲ. ಝಂಡಾ ಬಿಟ್ಟರೂ ಅಜೆಂಡಾ ಬಿಟ್ಟಿಲ್ಲ. ಇತ್ತೀಚೆಗೆ ಪಕ್ಷ ರಾಜಕಾರಣದ ಬದಲು ವ್ಯಕ್ತಿ ರಾಜಕಾರಣ ಮುನ್ನೆಲೆಗೆ ಬಂದಿದೆ. ಸಿದ್ದರಾಮಯ್ಯ ಕಾಂಗ್ರೆಸ್ ಅನ್ನು ಹಾಳು ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯ ಏನು ಮಾಡುತ್ತಿದ್ದಾರೋ ಎನ್ನುವುದೇ ನನಗೆ ಅರ್ಥ ಆಗುತ್ತಿಲ್ಲ. ನಿನ್ನೆ (ಅ.22) ನಡೆದಿದ್ದು 500 ಕೋಟಿ ಶಿಲನ್ಯಾಸ ಕಾರ್ಯಕ್ರಮನಾ ಅಥವಾ ಸ್ಪಷ್ಟೀಕರಣ ಕೊಡುವ ಕಾರ್ಯಕ್ರಮನಾ? ನಾನು ಸತ್ಯವಂತ, ಸತ್ಯವಂತ ಎಂದು ಹೇಳಲು ಮುಂದಾಗ್ತಿದ್ದಾರೆ. ನೀವು ಎಷ್ಟೇ ಹೇಳಿದರೂ ಸಿದ್ದರಾಮಯ್ಯ ಭ್ರಷ್ಟ ಎಂದು ಜನ ತೀರ್ಮಾನಿಸಿದ್ದಾರೆ. ಮನೆ ಇಲ್ಲ, ಮರಿಸ್ವಾಮಿ ಮನೇಲಿ ಮಲಗಿಕೊಳ್ತೀನಿ ಎನ್ನುತ್ತೀರಿ. ಇದೆಲ್ಲ ಹೇಳುವ ಮಾತುಗಳಾ ನೀವು ಭ್ರಷ್ಟ ಎಂದು ಜನ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮಗ ಸೊಸೆ ಹೆಸರಿನಲ್ಲಿ ಪಬ್ ಮಾಡಿದ್ದಾರೆ. ಅದು 350 ಕೋಟಿ ಬೆಲೆ ಬಾಳುತ್ತದೆ. ಅದಕ್ಕೆ ಬೈರತಿ ಸುರೇಶ್ ಮಾಸ್ಟರ್ ಮೈಂಡ್. ಅವನ ಕ್ಷೇತ್ರದಲ್ಲೇ ಆ ಪಬ್ ಇದೆ. ಸಿದ್ದರಾಮಯ್ಯ ನಾನು ಒಳ್ಳೆಯವನು ಎಂದು ಡಂಗೂರ ಹೊಡೆಯುತ್ತಿದ್ದಾರೆ. ಆದರೆ ಅವರ ಸಾಚಾತನ ಜನಕ್ಕೆ ಗೊತ್ತಾಗಿದೆ. ಬೈರತಿ ಸುರೇಶ್ ಒಳಗೆ ಹಾಕಿದರೆ ಎಲ್ಲಾ ವಿಚಾರ ಹೊರಗೆ ಬರುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.