ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್

ಬೆಂಗಳೂರಿನಲ್ಲಿ ಲಘು ಅಪಘಾತದ ಬಳಿಕ ರಾಹುಲ್‌ ದ್ರಾವಿಡ್‌ ತಮ್ಮ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ನಡುವೆ ದ್ರಾವಿಡ್‌ ಮತ್ತು ಆಟೊ ಚಾಲಕನ ನಡುವೆ ಸಣ್ಣ ವಾಗ್ವಾದವೂ ನಡೆದಿದೆ. ಇಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ.

ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್
ಬೆಂಗಳೂರು ರಸ್ತೆಯಲ್ಲಿ ರಾಹುಲ್ ದ್ರಾವಿಡ್ ಕಾರಿಗೆ ಗೂಡ್ಸ್ ಆಟೊ ಡಿಕ್ಕಿ; ವಿಡಿಯೋ ವೈರಲ್ (X)

ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ಮಾಜಿ ಮುಖ್ಯ ಕೋಚ್‌ ರಾಹುಲ್‌ ದ್ರಾವಿಡ್ ಅವರ ಕಾರಿಗೆ ಸರಕು ಸಾಗಣೆ ಆಟೊ ಡಿಕ್ಕಿಯಾಗಿರುವ ಘಟನೆ ನಡೆದಿದೆ. ಬೆಂಗಳೂರಿನ ಹೈಗ್ರೌಂಡ್ಸ್‌ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಲಘು ಅವಘಡ ಸಂಭವಿಸಿರುವ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ವೈರಲ್‌ ಆಗಿದೆ. ಕನ್ನಿಂಗ್‌ಹ್ಯಾಮ್‌ ರಸ್ತೆಯಲ್ಲಿ ಘಟನೆ ನಡೆದಿದ್ದು, ಒಂದಕ್ಕೊಂದು ವಾಹನಗಳು ಟಚ್‌ ಆಗಿವೆ. ಯಾರಿಗೂ ಯಾವುದೇ ಅಪಾಯಗಳಾಗಿಲ್ಲ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗುತ್ತಿದೆ.

ಲಘು ಅಪಘಾತದ ಬಳಿಕ ರಾಹುಲ್‌ ದ್ರಾವಿಡ್‌ ತಮ್ಮ ಕಾರಿನಿಂದ ಇಳಿದು ಕಾರನ್ನು ಪರಿಶೀಲಿಸಿದ್ದಾರೆ. ಈ ನಡುವೆ ದ್ರಾವಿಡ್‌ ಮತ್ತು ಗೂಡ್ಸ್ ಆಟೊ ಚಾಲಕನ ನಡುವೆ ವಾಗ್ವಾದವೂ ನಡೆದಿದೆ. ಇಬ್ಬರೂ ಕನ್ನಡ ಭಾಷೆಯಲ್ಲೇ ಮಾತನಾಡಿದ್ದಾರೆ. ಶಾಂತ ಹಾಗೂ ತಾಳ್ಮೆಯ ಸ್ವಭಾವಕ್ಕೆ ಹೆಸರಾಗಿರುವ ದ್ರಾವಿಡ್, ತಮ್ಮ ಕಾರಿಗೆ ಸ್ವಲ್ಪ ಹಾನಿಯಾಗಿದ್ದನ್ನು ಸಹಿಸಿಕೊಂಡಿಲ್ಲ. ಹೀಗಾಗಿ ಸರಕು ಸಾಗಣೆ ಆಟೊ ಚಾಲಕನ ತಪ್ಪು ಇರುವ ಬಗ್ಗೆ ವಾದ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಆಟೊ ಚಾಲಕ ಕೂಡಾ ಸಣ್ಣ ಪ್ರಮಾಣದಲ್ಲಿ ಜಗಳವಾಡಿದ್ದಾನೆ. ಈ ದೃಶ್ಯವನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಎಕ್ಸ್‌ನಲ್ಲಿ ವಿಡಿಯೋ ಹಾಕಲಾಗಿದ್ದು, ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ. ಬೆಂಗಳೂರಿನ ರಸ್ತೆಯಲ್ಲಿ ದ್ರಾವಿಡ್ ಕೂಡಾ ಜಗಳಕ್ಕಿಳಿಯುವಂತಾಯ್ತು ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, ಆಟೋ ಡ್ರೈವರ್‌ ದಿಗ್ಗಜನನ್ನು ಕೂಡಾ ಬಿಡದೆ ವಾದ ಮಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ದ್ರಾವಿಡ್‌ ಕ್ರಿಕೆಟ್‌ ವೃತ್ತಿ ಬದುಕು 

ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿದ್ದ ರಾಹುಲ್‌ ದ್ರಾವಿಡ್‌ ಅವರ ಅವಧಿಯು, 2024ರ ಟಿ20 ವಿಶ್ವಕಪ್‌ ಗೆಲುವಿನೊಂದಿಗೆ ಅಂತ್ಯವಾಯ್ತು. ಸದ್ಯ ಅವರು ಐಪಿಎಲ್‌ ತಂಡ ರಾಜಸ್ಥಾನ್‌ ರಾಯಲ್ಸ್‌ ತಂಡದ ಕೋಚ್‌ ಆಗಿದ್ದಾರೆ. ದ್ರಾವಿಡ್‌ ಅವಧಿಯ ನಂತರ ಭಾರತ ತಂಡದ ಹೆಡ್‌ ಕೋಚ್‌ ಆಗಿ ಗೌತಮ್‌ ಗಂಭೀರ್‌ ನೇಮಕಗೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಗೋಡೆ ಎಂದೇ ಕರೆಯಲ್ಪಡುವ ರಾಹುಲ್ ದ್ರಾವಿಡ್, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24,177 ರನ್ ಗಳಿಸಿದ್ದಾರೆ. ಕ್ರಿಕೆಟ್ ಕಂಡ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ದ್ರಾವಿಡ್‌ ಕೋಚಿಂಗ್‌ನಲ್ಲಿ ಭಾರತ ತಂಡವು ಏಕದಿನ ವಿಶ್ವ‌ಕಪ್‌ ಫೈನಲ್‌ ಪ್ರವೇಶಿಸಿತ್ತು. ಆ ಬಳಿಕ ಟಿ20 ವಿಶ್ವಕಪ್‌ ಗೆದ್ದು ಸಂಭ್ರಮಿಸಿತು.

Whats_app_banner