ಬೆಂಗಳೂರಿನಲ್ಲಿ ಡಿಕೆ ಸುರೇಶ್ ತಂಗಿ ಹೆಸರಿನಲ್ಲಿ 14 ಕೆಜಿ ಚಿನ್ನಾಭರಣ ವಂಚನೆ ಪ್ರಕರಣ; ಐಶ್ವರ್ಯಾ ಗೌಡ ದಂಪತಿ ಬಂಧನ, ನಟ ಧರ್ಮೇಂದ್ರ ಪರಾರಿ
ಮಾಜಿ ಸಂಸದ ಡಿಕೆ ಸುರೇಶ್ ಅವರ ತಂಗಿ ಎಂದು ಹೇಳಿ ಬರೋಬ್ಬರಿ 14.6 ಕೆಜಿ ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದಲ್ಲಿ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿಯನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ರೌಡಿಶೀಟರ್ ಕುಣಿಗಲ್ ಸೂರಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು: ಮಾಜಿ ಲೋಕಸಭಾ ಸದಸ್ಯ ಡಿ.ಕೆ ಸುರೇಶ್ ಅವರ ತಂಗಿ ಎಂದು ನಂಬಿಸಿ 14 ಕೆಜಿ 600 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದ ಪ್ರಕರಣದ ಆರೋಪಿಗಳಾದ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಕೆ.ಎನ್ ಹರೀಶ್ ಬಂಧವಾಗಿದ್ದು, ಚಂದ್ರಾ ಲೇಔಟ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳನ್ನು ಬಂಧಿಸಿದ ಬಳಿಕ ಕೋರಮಂಗಲದ ರಾಷ್ಟ್ರೀಯ ಕ್ರೀಡಾ ಗ್ರಾಮದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಇಬ್ಬರೂ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಡಿ.ಕೆ.ಸುರೇಶ್ ಅವರ ಧ್ವನಿಯಲ್ಲಿ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಮಾಲೀಕರಾದ ವನಿತಾ ಎಸ್. ಐತಾಳ್ ಅವರಿಗೆ ಕರೆ ಮಾಡಿ ಮಾತನಾಡಿದ ಆರೋಪ ಎದುರಿಸುತ್ತಿರುವ ನಟ ಧರ್ಮೇಂದ್ರ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಬಂಧನದ ಭೀತಿಯಿಂದ ಧರ್ಮೇಂದ್ರ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದ ವನಿತಾ ಎಸ್. ಐತಾಳ್ ಅವರು ಸಹ ನಿನ್ನೆ (ಡಿಸೆಂಬರ್ 28, ಶನಿವಾರ) ವಿಚಾರಣೆಗೆ ಹಾಜರಾಗಿದ್ದರು. ನಂತರ ಮಾತನಾಡಿರುವ ಅವರು ಚಿನ್ನಾಭರಣ ಖರೀದಿಗೆ ಸಂಬಂಧಿಸಿದಂತೆ ದಾಖಲೆಗಳು ಮತ್ತು ಧರ್ಮೇಂದ್ರ ಅವರು ಸುರೇಶ್ ಧ್ವನಿಯಲ್ಲಿ ಮಾತನಾಡಿರುವ ಆಡಿಯೊ ಕ್ಲಿಪಿಂಗ್‌ಗಳನ್ನು ಪೊಲೀಸರಿಗೆ ನೀಡಿರುವುದಾಗಿ ತಿಳಿಸಿದ್ದಾರೆ.
ಡಿ.ಕೆ ಸುರೇಶ್ ಅವರ ಸೋದರಿ ಎಂದು ನಂಬಿಸಿ ಖರೀದಿ ನೆಪದಲ್ಲಿ 9.82 ಕೋಟಿ ರೂಪಾಯಿ ಮೌಲ್ಯದ 14 ಕೆಜಿ 660 ಗ್ರಾಂ ಚಿನ್ನದ ಆಭರಣಗಳನ್ನು ಖರೀದಿಸಿ ವಂಚಿಸಿದ್ದಾರೆ ಎಂದು ವನಿತಾ ನೀಡಿದ್ದ ದೂರು ಆಧರಿಸಿ ಐಶ್ವರ್ಯಾ ಗೌಡ ದಂಪತಿ ಮತ್ತು ಧರ್ಮೇಂದ್ರ ವಿರುದ್ಧ ಚಂದ್ರಾ ಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆಗೆ ಮುಂದಾದ ಪೊಲೀಸರು ಐಶ್ವರ್ಯಾ ದಂಪತಿಯನ್ನು ಬಂಧಿಸಿದ್ದಾರೆ.
ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ರೌಡಿಶೀಟರ್ ಕುಣಿಗಲ್ ಸೂರಿ ವಿರುದ್ಧ ಎಫ್‌ಐಆರ್
ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಹಣ ಮತ್ತು ಚಿನ್ನ ಸುಲಿಗೆ ಮಾಡಿ ಆಕೆಯ ಜತೆಗಿನ ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಸಿದ ಆರೋಪದ ಮೇಲೆ ರೌಡಿಶೀಟರ್ ಸುರೇಶ್ ಆಲಿಯಾಸ್ ಕುಣಿಗಲ್ ಸೂರಿ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಮಹಿಳೆ ನೀಡಿರುವ ದೂರಿನ ಆಧಾರದಲ್ಲಿ ಈಗಾಗಲೇ ಜೈಲಿನಲ್ಲಿರುವ ರೌಡಿಶೀಟರ್ ಕುಣಿಗಲ್ ಸೂರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಡಿ ವಾರಂಟ್ ಪಡೆದು ಆರೋಪಿಯನ್ನು ಶೀಘ್ರದಲ್ಲೇ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಬ್ ಚಾಲಕ ಎಂದು ಸುಳ್ಳು ಹೇಳಿಕೊಂಡು ಸಂತ್ರಸ್ತೆಗೆ ಸೇರಿದ ಮನೆಯನ್ನು ಭೋಗ್ಯಕ್ಕೆ ಪಡೆದು ಹಲವು ವರ್ಷಗಳಿಂದ ಆರೋಪಿ ವಾಸಿಸುತ್ತಿದ್ದ. 35 ವರ್ಷದ ಮಹಿಳೆಯೊಂದಿಗೆ ಸ್ನೇಹ ಮಾಡಿ ಆಕೆಯೊಂದಿಗೆ ಸಲುಗೆಯಿಂದಿದ್ದ. ಆ ಮಹಿಳೆ ವಿರೋಧಿಸಿದರೂ ಖಾಸಗಿ ಕ್ಷಣಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸಿಕೊಂಡಿದ್ದ. ಇತರ ಮಹಿಳೆಯರ ಖಾಸಗಿ ವಿಡಿಯೊ, ಫೋಟೊಗಳನ್ನೂ ಸುರೇಶ್ ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದ. ಇದನ್ನು ಗಮನಿಸಿದ ಸಂತ್ರಸ್ತ ಮಹಿಳೆ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದರು. ಇದರಿಂದ ರೊಚ್ಚಿಗೆದ್ದ ಆರೋಪಿ, ಮಹಿಳೆಯ ಖಾಸಗಿ ಫೋಟೊ ಮತ್ತು ವಿಡಿಯೊಗಳನ್ನು ಆಕೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿ ಸಮಸ್ಯೆಗಳನ್ನು ತಂದಿಟ್ಟಿದ್ದ.
ಇತ್ತೀಚೆಗೆ ವಾಲ್ಮೀಕಿ ಸರ್ಕಲ್ ಬಳಿ ಸುರೇಶ್ ಸಂತ್ರಸ್ತ ಮಹಿಳೆಯನ್ನು ಅಡ್ಡಗಟ್ಟಿ ಬೆದರಿಸಿ ಮೊಬೈಲ್, ಕಾರು ಹಾಗೂ 18 ಗ್ರಾಂ ಚಿನ್ನದ ಓಲೆಯನ್ನು ಕಿತ್ತುಕೊಂಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಆರೋಪಿ ರೌಡಿಶೀಟರ್ ಸುರೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ ಆತ ತುಮಕೂರಿನಲ್ಲಿ ತನ್ನ ಸಹೋದರನಿಗೆ ಚಾಕು ಇರಿದ ಪ್ರಕರಣದಲ್ಲಿ ಜೈಲುಪಾಲಾಗಿರುವುದು ತಿಳಿದು ಬಂದಿದೆ ಎಂದು ಪೊಲೀಸರು ವಿವರಿಸಿದ್ದಾರೆ.