ಫುಡ್ ಕಿಟ್‌ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  ಫುಡ್ ಕಿಟ್‌ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಬಂಧನ

ಫುಡ್ ಕಿಟ್‌ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಬಂಧನ

ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಯುವತಿ ಬಳಿ ಇದ್ದ ಮಕ್ಕಳ ಆಹಾರದ ಕಿಟ್‌ ಬ್ಯಾಗ್‌ ನಲ್ಲಿ ಡ್ರಗ್ಸ್‌ ಅಡಗಿಸಿಟ್ಟುಕೊಂಡಿದ್ದಳು. ಈಕೆಯನ್ನು ಎಲೆಕ್ಟ್ರಾನಿಕ್ಸ್‌ ಸಿಟಿ ಸಮೀಪದ ಅರಣ್ಯ ಪ್ರದೇಶದ ಬಳಿ ಬಂಧಿಸಲಾಗಿದೆ. ಮೆಜೆಸ್ಟಿಕ್‌ ನಲ್ಲಿ ಮೂರು ಪ್ರಕರಣ. ಮೂರು ಲ್ಯಾಪ್‌ ಟಾಪ್‌ ಕಳ್ಳತನ, ಒಬ್ಬನ ಕೈವಾಡದ ಶಂಕೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಫುಡ್ ಕಿಟ್‌ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಬಂಧನ
ಫುಡ್ ಕಿಟ್‌ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ ಮೌಲ್ಯದ ಡ್ರಗ್ಸ್ ಜಪ್ತಿ: ವಿದೇಶಿ ಮಹಿಳೆ ಬಂಧನ

ಬೆಂಗಳೂರು: ಫುಡ್ ಕಿಟ್‌ ನಲ್ಲಿಟ್ಟು ಸಾಗಿಸುತ್ತಿದ್ದ 8.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಕಂದಾಯ ಗುಪ್ತಚರ ಇಲಾಖೆ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 8.5 ಕೋಟಿ ರೂ. ಮೌಲ್ಯದ 4.5 ಕೆಜಿ ಮೆಥಂಫೈಟಮೈನ್‌ ಎಂಬ ಡ್ರಗ್ಸ್‌ ಅನ್ನು ಜಪ್ತಿ ಮಾಡಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ಬಂದಿದ್ದ ನೈಜೀರಿಯಾ ಯುವತಿ ಬಳಿ ಇದ್ದ ಮಕ್ಕಳ ಆಹಾರದ ಕಿಟ್‌ ಬ್ಯಾಗ್‌ ನಲ್ಲಿ ಡ್ರಗ್ಸ್ಅಡಗಿಸಿಟ್ಟುಕೊಂಡಿದ್ದಳು. ಈಕೆಯನ್ನು ಎಲೆಕ್ಟ್ರಾನಿಕ್ಸ್‌ ಸಿಟಿ ಸಮೀಪದ ಅರಣ್ಯ ಪ್ರದೇಶದ ಬಳಿ ಬಂಧಿಸಲಾಗಿದೆ. ಈಕೆಯ ಬಳಿ ಇದ್ದ ಕಾರ್ನ್‌ ಫ್ಲೇಕ್ಸ್‌ ಪಾಕೆಟ್‌ ನಲ್ಲಿ ಬಿಳಿ ಬಣ್ಣದ ಮೆಥಂಫೈಟಮೈನ್‌ ಪತ್ತೆಯಾಗಿತ್ತು. ನಂತರ ಪರೀಕ್ಷೆಗೊಳಪಡಿಸಿದಾಗ ಇದು ಡ್ರಗ್ಸ್‌ ಎನ್ನುವುದು ಖಚಿತವಾಗಿತ್ತು. ಈಕೆಯನ್ನು ಎನ್‌ ಡಿಪಿಎಸ್‌ ಕಾಯಿದೆ-1985 ಅಡಿಯಲ್ಲಿ ಈಕೆಯನ್ನು ಬಂಧಿಸಲಾಗಿದೆ. ಈಕೆ ಅಕ್ರಮವಾಗಿ ದೇಶದಲ್ಲಿ ನೆಲಸಿರುವುದು ಪತ್ತೆಯಾಗಿದೆ.

ಮೆಜೆಸ್ಟಿಕ್‌ ನಲ್ಲಿ ಮೂರು ಪ್ರಕರಣ; ಮೂರು ಲ್ಯಾಪ್‌ ಟಾಪ್‌ ಕಳ್ಳತನ; ಒಬ್ಬನ ಕೈವಾಡದ ಶಂಕೆ

ಮೆಜೆಸ್ಟಿಕ್ ನಲ್ಲಿ ಕಳ್ಳತನವಾಗುವುದು ಹೊಸದೇನಲ್ಲ. ಪ್ರತಿದಿನ ಅಲ್ಲಿ ಹಣ, ವಡವೆ, ಪರ್ಸ್‌, ಲಗೇಜ್‌ ಕಳೆದುಕೊಳ್ಳುತ್ತಲೇ ಇರುತ್ತಾರೆ. ಹಗಲಿನಲ್ಲಿ ಅರೆಕ್ಷಣ ಮೈಮರೆತರೂ ದುಡ್ಡು, ಬ್ಯಾಗ್‌, ಮೊಬೈಲ್‌, ಲ್ಯಾಪ್‌ ಟಾಪ್‌, ಲಗೇಜ್‌ ಬ್ಯಾಗ್‌ ಗಳು ಮಾಯವಾಗಿ ಹೋಗುತ್ತವೆ. ಇನ್ನು ತಡರಾತ್ರಿ ಸಂಚರಿಸುವಾಗ ಮೈಯೆಲ್ಲಾ ಕಣ್ಣಾಗಿರಲೇಬೇಕು. ಈ ತಿಂಗಳ 12, 16 ಮತ್ತು 18 ರಂದು ಕ್ರಮವಾಗಿ ಟರ್ಮಿನಲ್ 1, 2, ಮತ್ತು 3 ರಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಕಳ್ಳರು ಮೂವರು ಪ್ರಯಾಣಿಕರ ಮೂರು ಲ್ಯಾಪ್ ಟಾಪ್ ಗಳನ್ನು ಕಳ್ಳತನ ಮಾಡಿದ್ದಾರ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೆಪಿ ನಗರದಲ್ಲಿ ವಾಸವಿರುವ ಬಿ.ಟೆಕ್ ವಿದ್ಯಾರ್ಥಿ ಅಜನ್ ಏಪ್ರಿಲ್ 12 ರಂದು ಆಂಧ್ರಪ್ರದೇಶಕ್ಕೆ ಪ್ರಯಾಣಿಸುತ್ತಿದ್ದರು. ನೀರು ಖರೀದಿಸಲು ಟರ್ಮಿನಲ್ -3 ರಲ್ಲಿ ಬಸ್ ಇಳಿದ ನಂತರ 60,000 ರೂ. ಮೌಲ್ಯದ ಅವರ ಲ್ಯಾಪ್‌ ಟಾಪ್ ಕಳ್ಳತನವಾಗಿತ್ತು. ಅಜನ್ ತಮ್ಮ ಲ್ಯಾಪ್‌ ಟಾಪ್ ಅನ್ನು ಲಗೇಜ್ ಇಡುವ ಕಡೆ ಇರಿಸಿದ್ದರು. ಮೊದಲ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರು ಲ್ಯಾಪ್‌ ಟಾಪ್ ತೆಗೆದುಕೊಂಡು ಪರಾರಿಯಾಗಿದ್ದಾರೆ ಎಂದು ಸಹ ಪ್ರಯಾಣಿಕರು ತಿಳಿಸಿದ್ದಾರೆ. ಆರೋಪಿ ಬಸ್ ಹತ್ತಿದ್ದನ್ನು ನಾನು ಗಮನಿಸಿದ್ದೆ. ಆತ ಆಫೀಸರ್‌ ರೀತಿ ಬಟ್ಟೆ ಧರಿಸಿದ್ದ. 20 ರ ಆಸುಪಾಸಿನ ಈ ಯುವಕ ಖಾಸಗಿ ಸಂಸ್ಥೆಯ ಉದ್ಯೋಗಿ ರೀತಿ ಕಾಣಿಸುತ್ತಿದ್ದ. ಕಳ್ಳ ಎಂಬ ಅನುಮಾನವೇ ಬರಲಿಲ್ಲ ಎಂದು ಅಜನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಗರದಿಂದ ಚಿಕ್ಕಮಗಳೂರಿಗೆ ಪ್ರಯಾಣಿಸುತ್ತಿದ್ದ 26 ವರ್ಷದ ವೈದ್ಯಕೀಯ ಪ್ರತಿನಿಧಿ ಅನುಷಾ ಎಂಬುವವರ ಲ್ಯಾಪ್ ಟಾಪ್ ಕಳ್ಳತವಾಗಿದೆ. ರಾತ್ರಿ 10 ರಿಂದ 10.30 ರ ನಡುವೆ ಕಳ್ಳತನ ನಡೆದಿದೆ. ಟರ್ಮಿನಲ್ 2 ರಲ್ಲಿ ಲಗೇಜ್ ಅನ್ನು ಹೊರತೆಗೆಯುವಾಗ 50 ಸಾವಿರ ರೂ. ಮೌಲ್ಯದ ಲ್ಯಾಪ್‌ ಟಾಪ್ ಕಳ್ಳತನವಾಗಿದೆ. ಇದರ ಜೊತೆಗೆ ಬ್ಯಾಗ್ ನಲ್ಲಿದ್ದ ಪ್ಯಾನ್ ಕಾರ್ಡ್ ಹಾಗೂ ಎಲೆಕ್ಷನ್ ಐಡಿ ಹಾಗೂ ಇತರೆ ದಾಖಲೆಗಳೂ ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮೂರನೇ ಪ್ರಕರಣದಲ್ಲಿ ದಾವಣಗೆರೆಯ ವೈದ್ಯಕೀಯ ಪ್ರತಿನಿಧಿ ಮಂಜುನಾಥ್ ಅವರು ರಾತ್ರಿ 11.30 ರಿಂದ 11.40 ರ ನಡುವೆ ಟರ್ಮಿನಲ್ 1 ರಲ್ಲಿ ಸ್ನೇಹಿತನೊಂದಿಗೆ ಬಸ್‌ಗಾಗಿ ಕಾಯುತ್ತಿದ್ದಾಗ ಅವರ 25,000 ರೂ. ಮೌಲ್ಯದ ಲ್ಯಾಪ್‌ ಟಾಪ್ ಅನ್ನು ಕಳೆದುಕೊಂಡಿದ್ದಾರೆ. ಅವರೂ ಸಹ ದೂರು ನೀಡಿದ್ದಾರೆ. ಮೂರು ಪ್ರಕರಣಗಳು ನಮ್ಮ ಗಮನಕ್ಕೆ ಬಂದಿವೆ. ಆರೋಪಿ ಪತ್ತೆಗೆ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿ ವೃತ್ತಿಪರ ಕಳ್ಳನಂತೆ ಕಾಣಿಸುತ್ತಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವರದಿ: ಎಚ್. ಮಾರುತಿ, ಬೆಂಗಳೂರು

HT Kannada Desk