ಕನ್ನಡ ಸುದ್ದಿ  /  Karnataka  /  Crime News 7 Drowned In 2 Separate Tragedies Mandya And Mysore Cases Details Here Rmy

Crime News: 2 ಪ್ರತ್ಯೇಕ ಪ್ರಕರಣಗಳಲ್ಲಿ 7 ಮಂದಿ ನೀರಿನಲ್ಲಿ ಮುಳುಗಿ ಸಾವು; ಮಂಡ್ಯ, ಮೈಸೂರಿನಲ್ಲಿ ದುರಂತ

ಮಂಡ್ಯ ಮತ್ತು ಮೈಸೂರಿನಲ್ಲಿ ಸಂಭವಿಸಿರುವ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು 7 ಮಂದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆಗಳು ನಡೆದಿವೆ. ಈಜಲು ಹೋಗಿದ್ದಾಗ ಈ ದುರಂತಗಳು ಸಂಭವಿಸಿವೆ.

ಕಾವೇರಿ ನದಿಯಲ್ಲಿ ಈಜಲು ಹೋಗಿ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ. ಇಬ್ಬರು ಮೃತ ದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಗಳಿಗಾಗಿ ಹುಡುಕಾಟ ಶುರುವಾಗಿದೆ.
ಕಾವೇರಿ ನದಿಯಲ್ಲಿ ಈಜಲು ಹೋಗಿ ನಾಲ್ವರು ಮೃತ ಪಟ್ಟಿರುವ ಘಟನೆ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲೂಕಿನ ಮುತ್ತತ್ತಿ ಬಳಿ ನಡೆದಿದೆ. ಇಬ್ಬರು ಮೃತ ದೇಹಗಳು ಪತ್ತೆಯಾಗಿದ್ದು, ಇನ್ನಿಬ್ಬರ ಮೃತ ದೇಹಗಳಿಗಾಗಿ ಹುಡುಕಾಟ ಶುರುವಾಗಿದೆ.

ಮೈಸೂರು: ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ಇವತ್ತು (ಮಾರ್ಚ್ 26, ಮಂಗಳವಾರ) ಕರಾಳ ಮಂಗಳವಾರವಾಗಿದೆ. ಯಾಕೆಂದರೆ ಒಂದೇ ದಿನ ಈ ಎರಡು ಜಿಲ್ಲೆಗಳಲ್ಲಿನ ಪ್ರತ್ಯೇಕ ಘಟನೆಗಳಲ್ಲಿ ಈಜಾಡಲು ಹೋಗಿದ್ದ 7 ಮಂದಿ ಮೃತಪಟ್ಟಿದ್ದಾರೆ. ಕಾವೇರಿ ಮತ್ತು ಕಪಿಲಾ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆಗಳು ನಡೆದಿವೆ. ಕಪಿಲಾ ನದಿಯಲ್ಲಿ ಈಜಲು ಹೋದ ಮೂವರು ಯುವಕರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಬಳಿ ನಡೆದಿದೆ. ನಂಜನಗೂಡು ತಾಲ್ಲೂಕಿನ ಗೊದ್ದನಪುರ ಗ್ರಾಮದ ಬಳಿ ಕಪಿಲಾ ನದಿಯಲ್ಲಿ ಈ ದುರಂತ ಸಂಭವಿಸಿದೆ. ಬಿಹಾರ ಮೂಲದ ಮಿಲನ್ (22), ಮೋಹನ್ (25), ತರುಣ್ (19) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.

ಗುತ್ತಿಗೆ ಆಧಾರದ ಮೇಲೆ ನೆಸ್ಲೆ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು ಯುವಕರು ಇವತ್ತು (ಮಾರ್ಚ್ 26, ಮಂಗಳವಾರ) ಬಿಸಿಲ ಬೇಗೆ ತಾಳಲಾರದೇ ಈಜಲು ಹೋಗಿದ್ದರು. ಈ ವೇಳೆ ಮೂವರೂ ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ದುರಂತ ಸಂಭವಿಸುತ್ತಿದ್ದಂತೆ ಸ್ಥಳೀಯರು ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದು ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಪಿಲಾ ನದಿಯಲ್ಲಿ ಶವಗಳಿಗಾಗಿ ಶೋಧ ಕಾರ್ಯನಡೆಸಿ, ಮೂವರ ಶವಗಳನ್ನು ನೀರಿನಿಂದ ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ನೀರಿನಲ್ಲಿ ಮುಳುಗುತ್ತಿದ್ದವನನ್ನು ರಕ್ಷಿಸಲು ಹೋಗಿ ನಾಲ್ವರು ಸಾವು

ಕಾವೇರಿ ನದಿಯಲ್ಲಿ ಈಜಲು‌ ಹೋದ ನಾಲ್ವರು ಸಾವನ್ನಪ್ಪಿರುವ ದುರಂತ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಹಲಗೂರು ಸಮೀಪದ ಮುತ್ತತ್ತಿ ಬಳಿ ನಡೆದಿದೆ. ಈ ದುರಂತ ಘಟನೆಯಲ್ಲಿ ಮೈಸೂರು ನಗರದ ನಾಲ್ವರು ಸಾವನ್ನಪ್ಪಿದ್ದಾರೆ. ನಾಗೇಶ್ (40), ಭರತ್(17), ಗುರು (32), ಮಹದೇವ್ (16) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಮೈಸೂರಿನಿಂದ ಮುತ್ತತ್ತಿಗೆ ಬಂದಿದ್ದ ಈ‌ ನಾಲ್ವರು ನತದೃಷ್ಟರು ಕಾವೇರಿ ನದಿಯಲ್ಲಿ ಈಜಾಡುವ ವೇಳೆ ಓರ್ವ ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡು, ರಕ್ಷಣೆಗೆ ಹೋದ ಇತರ ಮೂವರು ಸೇರಿದಂತೆ ನಾಲ್ವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮವರನ್ನು ಕಳೆದುಕೊಂಡ ಕುಟುಂಬದವರು, ಸಂಬಂಧಿಕರ ಆಕ್ರಂದನ ಹೇಳತೀರದಾಗಿದೆ.