ಬೆಂಗಳೂರಿನಲ್ಲಿ ಮತ್ತೆ ಹುಸಿ ಬಾಂಬ್ ಬೆದರಿಕೆ ಕಾಟ; ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಶಾಲೆಯಲ್ಲಿ ಭಯದ ವಾತಾವರಣ
ಬೆಂಗಳೂರಿನ ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಇಂಡಿಯನ್ ಪಬ್ಲಿಕ್ ಶಾಲೆಗೆ ಗುರುವಾರ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಹೀಗಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಪೊಲೀಸರು ಪರಿಶೀಲನೆ ನಡೆಸಿದ ಮೇಲೆ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ಸ್ಪಷ್ಟವಾಗಿದೆ. (ವರದಿ: ಎಚ್.ಮಾರುತಿ)
ಬೆಂಗಳೂರಿನ ಶಾಲೆಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆಗಳ ಕಾಟ ಆರಂಭವಾದಂತಿದೆ. ಆಗಸ್ಟ್ 29ರ ಗುರುವಾರ ನಾಗವಾರದ ಮಾನ್ಯತಾ ಟೆಕ್‌ಪಾರ್ಕ್ ಹತ್ತಿರ ಇರುವ ಇಂಡಿಯನ್ ಪಬ್ಲಿಕ್ ಶಾಲೆಗೆ ಬೆಳಗ್ಗೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿದ್ದು, ಕೆಲ ಸಮಯ ಆತಂಕ ಉಂಟಾಗಿತ್ತು. ಅದರಲ್ಲೂ ಮಕ್ಕಳಲ್ಲಿ ಭಯ ಮೂಡಿಸಿತ್ತು. ತ್ವರಿತವಾಗಿ ಪೊಲೀಸರು ಪರಿಶೀಲನೆ ನಡೆಸಿದ ಮೇಲೆ ಇದೊಂದು ಹುಸಿ ಬಾಂಬ್ ಬೆದರಿಕೆಯ ಇ-ಮೇಲ್ ಎನ್ನುವುದನ್ನು ತಿಳಿದ ನಂತರ ಭಯದ ವಾತಾವರಣ ತಿಳಿಯಾಯಿತು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟರು.
ಶಾಲಾ ಆಡಳಿತಾಧಿಕಾರಿ ಪದ್ಮನಿ ರಾಘವೇಂದ್ರ ಅವರು ಎಂದಿನಂತೆ ಗುರುವಾರ ಬೆಳಗ್ಗೆ ಶಾಲೆಗೆ ಬಂದಿದ್ದರು. ಇ-ಮೇಲ್ ಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಫಾದರ್ ಕೊಡಾಚಿ ಹೆಸರಿನ coldghost456@gmail.com ಐಡಿಯಿಂದ ಬಾಂಬ್ ಬೆದರಿಕೆ ಇ-ಮೇಲ್ ಬಂದಿತ್ತು. ಶಾಲೆಯ ಸುತ್ತಲೂ ಐದು ಬಾಂಬ್‌ಗಳನ್ನು ಇರಿಸಲಾಗಿದೆ. ಮಧ್ಯಾಹ್ನ 1.30ರ ವೇಳೆಗೆ ಎಲ್ಲ ಬಾಂಬ್‌ಗಳು ಸ್ಫೋಟವಾಗಲಿವೆ ಎಂದು ತಿಳಿಸಲಾಗಿತ್ತು. ಇದನ್ನು ಓದಿದ ನಂತರ ಗಾಬರಿಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಪೊಲೀಸರು ಬಾಂಬ್ ಪತ್ತೆದಳ, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳದೊಂದಿಗೆ ತಕ್ಷಣವೇ ಶಾಲಾ ಆವರಣಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಆದರೆ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಇದೊಂದು ಹುಸಿ ಸಂದೇಶವೆಂದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ವಿಚಕ್ರ ವಾಹನ ಕಳ್ಳತನ; ಆರೋಪಿ ಬಂಧನ
ರಾತ್ರಿ ವೇಳೆ ರಸ್ತೆ ಬದಿ ಹಾಗೂ ಮನೆಯ ಎದುರು ನಿಲ್ಲಿಸುತ್ತಿದ್ದ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ವರ್ತೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೋರಹುಣಸೆಯ 20 ವರ್ಷದ ಕಿರಣ್ ಬಂಧಿತ ಆರೋಪಿ. ಈತನಿಂದ 9 ಲಕ್ಷ ರೂಪಾಯಿ ಮೌಲ್ಯದ 12 ದ್ವಿಚಕ್ರ ವಾಹನಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮಾ ಲೇಔಟ್‌ನ ನಿವಾಸಿಯೊಬ್ಬರು ತಮ್ಮ ದ್ವಿಚಕ್ರ ವಾಹನ ಕಳ್ಳತನವಾಗಿದೆ ಎಂದು ದೂರು ನೀಡಿದ್ದರು. ಈ ದೂರು ಆಧರಿಸಿ ಕಾರ್ಯಾಚರಣೆದ ನಡೆಸಿ ಪೊಲೀಸರು ವರ್ತೂರಿನ ಮತ್ಸಂದ್ರ ರಸ್ತೆಯಲ್ಲಿ ಆರೋಪಿಯನ್ನು ಬಂಧಿಸಿ ಆತನಿಂದ ಹಲವು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಈತ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಮಾಡಿದ್ದ ದ್ವಿಚಕ್ರ ವಾಹನಗಳನ್ನು ವರ್ತೂರಿನ ಸೋರಹುಣಸೆಯ ನೀಲಗಿರಿ ತೋಪಿನಲ್ಲಿ ನಿಲ್ಲಿಸಿದ್ದ. ಅಲ್ಲಿಂದ ಎಲ್ಲ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈತನ ಬಂಧನದಿಂದ ಬೈಯಪ್ಪನಹಳ್ಳಿ, ತಿಲಕ್ ನಗರ, ಮಡಿವಾಳ, ಎಚ್‌ಎಸ್ಆರ್ ಲೇಔಟ್, ಪರಪ್ಪನ ಅಗ್ರಹಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರ ಮತ್ತು ಕೊಳ್ಳೆಗಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.