Bidar News:ಬೀದರ್‌ ಜಿಲ್ಲೆಯಲ್ಲಿ ಮಗಳ ಮೇಲೆ ಅತ್ಯಾಚಾರ, ಅಜ್ಜಿ ಕೈಗೆ ಸಿಕ್ಕಿ ಬಿದ್ದ ತಂದೆ
ಕನ್ನಡ ಸುದ್ದಿ  /  ಕರ್ನಾಟಕ  /  Bidar News:ಬೀದರ್‌ ಜಿಲ್ಲೆಯಲ್ಲಿ ಮಗಳ ಮೇಲೆ ಅತ್ಯಾಚಾರ, ಅಜ್ಜಿ ಕೈಗೆ ಸಿಕ್ಕಿ ಬಿದ್ದ ತಂದೆ

Bidar News:ಬೀದರ್‌ ಜಿಲ್ಲೆಯಲ್ಲಿ ಮಗಳ ಮೇಲೆ ಅತ್ಯಾಚಾರ, ಅಜ್ಜಿ ಕೈಗೆ ಸಿಕ್ಕಿ ಬಿದ್ದ ತಂದೆ

Bidar Crime News ಬೀದರ್‌ ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಡೆಯುತ್ತಿದ್ದು ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆ ಬಂಧಿಸಲಾಗಿದೆ. ಕಾಲೇಜು ವಿದ್ಯಾರ್ಥಿಗಳು ಶ್ರೀಗಂಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂದಿದೆ. ಬೀದರ್‌ ಜಿಲ್ಲೆಯಲ್ಲಿ ನಡೆದಿರುವ ಅಪರಾಧ ಪ್ರಕರಣಗಳ ವಿವರ ಇಲ್ಲಿದೆ.

ಬೀದರ್‌ನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಅಪರಾಧಿಗಳನ್ನು ಬಂಧಿಸಿ ವಾಹನ, ಶ್ರೀಗಂಧವನ್ನು ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.
ಬೀದರ್‌ನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಅಪರಾಧಿಗಳನ್ನು ಬಂಧಿಸಿ ವಾಹನ, ಶ್ರೀಗಂಧವನ್ನು ಪೊಲೀಸ್‌ ಹಾಗೂ ಅರಣ್ಯ ಇಲಾಖೆಯವರು ವಶಪಡಿಸಿಕೊಂಡಿದ್ದಾರೆ.

ಬೀದರ್: ತಂದೆ ಮತ್ತು ಮಗಳ ಸಂಬಂಧ ಪವಿತ್ರವಾಗಿದ್ದು, ಅವರ ವಿಶೇಷ ಬಾಂಧವ್ಯಕ್ಕೆ ಯಾವುದೇ ಸರಿಸಾಟಿಯಾಗುವುದಿಲ್ಲ.ಆದರೆ, ಇಲ್ಲೊಬ್ಬ ತಂದೆ ಸ್ವಂತ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿರುವ ಪೈಶಾಚಿಕ ಕೃತ್ಯ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಸಮಾಜ ತಲೆತಗ್ಗಿಸುವಂತಾಗಿದೆ.

ಮನೆಯಲ್ಲಿ ಎಲ್ಲರೂ ನಿದ್ರೆಗೆ ಜಾರಿದಾಗ ಅತ್ಯಾಚಾರ ಎಸಗುತ್ತಿದ್ದ. ಈಗ ಬಾಲಕಿಯ ಅಜ್ಜಿಯ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದಾನೆ.

ಕಳೆದ ಒಂದು ವರ್ಷದಿಂದ ಮಗಳ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸುತ್ತಿದ್ದ, ಈ ವಿಚಾರ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಇದರಿಂದ ಭಯದಿಂದ ಮಗಳು ಜೀವಕ್ಕೆ ಹೆದರಿ ಮಾನಸಿಕವಾಗಿ ಯಾತನೆ ಅನುಭವಿಸುತ್ತಲೇ ಬಂದಿದ್ದಳು. ಭಾನುವಾರ ರಾತ್ರಿ ತಂದೆ ಎಲ್ಲರೂ ಮಲಗಿರುವ ವೇಳೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಅಜ್ಜಿಯ (ಅತ್ಯಾಚಾರಿಯ ತಾಯಿ) ಕಣ್ಣಿಗೆ ಬಿದ್ದಾಗ ಈ ಪ್ರಕರಣ ಬೆಳಕಿಗ ಬಂದಿದೆ ಎನ್ನಲಾಗುತ್ತಿದೆ.

ಈ ಕುರಿತು ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬೀದರ್ ನಲ್ಲಿ ಮೂವರು ಶ್ರೀಗಂಧ ಕಳ್ಳರ ಸೆರೆ

ಬೀದರ್‌ ಜಿಲ್ಲೆಯ ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ಹಾಗೂ ಅರಣ್ಯ ಇಲಾಖೆಯಲ್ಲಿ ದಾಖಲಾದ ಶ್ರೀಗಂಧ ಮರಗಳ ಕಳ್ಳತನ ಪ್ರಕಟಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿತರನ್ನು ಬಂಧಿಸಿ 8,75,000 ರೂ. ಮೌಲ್ಯದ ವಿವಿಧ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾಲ್ಕಿ ಅಂಬೆಸಾಂಗಾವಿ ಗ್ರಾಮದ ಸೂರಜಸಿಂಗ ಕನ್ನುಸಿಂಗ ರಾಜಪೂತ ಎನ್ನುವರ ಜಮೀನಿನಲ್ಲಿ ಶ್ರೀಗಂಧ ಮರಗಳ ಕಳ್ಳತನ ಸೇರಿ ಎರಡು ಪ್ರಕರಣ ಹಾಗೂ ಬೀದರ್ ಜಿಲ್ಲಾ ಅರಣ್ಯ ಇಲಾಖೆಯ ಕಚೇರಿ ಆವರಣದಲ್ಲಿ ಕಳ್ಳತನವಾದ ಮೂರು ಶ್ರೀಗಂಧ ಮರಗಳ ಕಳ್ಳತನ ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿದ್ದರು.

ಈ ಆರೋಪಿತರಿಂದ 5,00,000 ರೂ. ಮೌಲ್ಯದ ಒಂದು ಹೊಂಡಾಯಿ ಕ್ರೀಟಾ ಕಾರ್‌ ಇದರ, 45,000 ರೂ. ಬೆಲೆ ಬಾಳುವ ಒಂದು ಹೊಂಡಾ ಮೋಟಾರ ಸೈಕಲ್ , ಗರಗಸ ಹಾಗೂ ಮೂರು ಮೊಬೈಲ್ ಸೇರಿ ಒಟ್ಟು 8,75,000 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.

ಈ ಪ್ರಕರಣದಲ್ಲಿ ಒಟ್ಟು 9 ಜನ ಆರೋಪಿಗಳಿದ್ದು, 3 ಜನ ಆರೋಪಿಗಳನ್ನು ಬಂಧಿಸಲಾಗಿದೆ, 6 ಜನ ಆರೋಪಿಗಳು ತಪ್ಪಿಸಿಕೊಂಡಿದ್ದು ಇವರ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿತರು ಶ್ರೀಗಂಧದ ಮರಗಳನ್ನು ಕಡೆದು ನೆರೆಯ ತೆಲಂಗಾಣ ರಾಜ್ಯದ ವಿಕಾರಬಾದ ಜಿಲ್ಲೆಯ ಓರ್ವ ವ್ಯಕ್ತಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದ್ದು, ಆತನನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಲಾಗುವುದು ಎಂದರು.

ವಾಹನ ಕಳ್ಳರ ಸೆರೆ

ಬೀದರ್ ಮಾರ್ಕೆಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2022ನೇ ಆಗಸ್ಟ್ 6 ರಂದು ಬೀದರ್ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಿಲ್ಲಿಸಿದ ದ್ವಿಚಕ್ರವಾಹನ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೀದರ್ ಚೆಟ್ಟನಳ್ಳಿ ಗ್ರಾಮದ ವೀರಶೆಟ್ಟಿ ಶಾಮರಾವ ಮುದ್ದಪ್ಪಾ ಎನ್ನುವ ಆರೋಪಿಯನ್ನು ಬಂಧಿಸಿ 45000 ರೂ. ಮೌಲ್ಯದ ದ್ವಿಚಕ್ರವಾಹನ ಜಪ್ತಿ ಮಾಡಿಕೊಳ್ಳಲಾಗಿದೆ ಹಾಗೂ ನೂತನ ನಗರ ಠಾಣೆ ವ್ಯಾಪ್ತಿಯಲ್ಲಿ 2023ನೇ ಜುಲೈ 26 ರಂದು ಬೀದರ್ ನಗರದ ಗುರುನಾನಕ ಕಾಲೋನಿಯಲ್ಲಿ ಮನೆಯ ಮುಂದಿನ ಬ್ಯಾಟರಿ ಕಳ್ಳತನಕ್ಕೆ ಸಂಬಂಧಿಸಿದಂತೆ 3 ಆರೋಪಿತರನ್ನು

ವಿಚಾರಣೆಗೊಳಪಡಿಸಿದಾಗ ಕಳವು ಮಾಲು ಸ್ವೀಕರಿಸಿದ ಸ್ಕ್ಯಾಪ್‌ ಅಂಗಡಿ ಮಾಲೀಕರಿಂದ ಎಮರಾನ ಕಂಪನಿಯ ಬ್ಯಾಟರಿ ಹಾಗೂ ಕಳ್ಳತನಕ್ಕೆ ಉಪಯೋಗಿಸಿದ ಆಟೋ ರಿಕ್ಷಾ ಸೇರಿ ಒಟ್ಟು 1,72,000 ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಂದ ಶ್ರೀಗಂಧ ಕಳ್ಳತನ

ಬೀದರ್ ಜಿಲ್ಲಾ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂ.ಎಂ. ಮಾತನಾಡಿ, ಜಿಲ್ಲೆಯಲ್ಲಿ ಇತ್ತೀಚಿಗೆ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದು, ಆರೋಪಿತರ ಪತ್ತೆಗೆ ಸಾರ್ವಜನಿಕರು ಸಹಕರಿಸಬೇಕು ಹಾಗೂ ರೈತರು ತಮ್ಮ ಹೊಲದಲ್ಲಿ ಈ ರೀತಿಯ ಶ್ರೀಗಂಧ ಮರಗಳ ಕಳ್ಳತನ ನಡೆದರೆ ಪೊಲೀಸ್ ಇಲಾಖೆ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡಲು ಮನವಿ ಮಾಡಿದರು.

ಕಳೆದ ಶ್ರೀಗಂಧ ಮರಗಳ ಕಳ್ಳತನ ಪ್ರಕರಣದಲ್ಲಿ ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗುತ್ತಿರುವುದರಿಂದ ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು, ಯುವಕರು ಸಹ ಇಂತಹ ಪ್ರಕರಣಗಳಲ್ಲಿ ಭಾಗಿಯಾಗದೆ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಕಡೆ ಗಮನ ಹರಿಸಬೇಕು. ಒಂದು ವೇಳೆ ಇಂತಹ ಪ್ರಕರಣದಲ್ಲಿ ಭಾಗಿಯಾದರೆ ಮೊದಲ ಬಾರಿ ಪ್ರಕರಣದಲ್ಲಿ ಆರೋಪಿತರಿಗೆ 5 ವರ್ಷ, ಎರಡನೇ ಬಾರಿಯ ಪ್ರಕರಣಕ್ಕೆ 7 ರಿಂದ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಿಪಿಐ ಗುರುಪಾದ ಎಸ್.ಬಿರಾದಾರ, ಪಿ.ಎಸ್.ಐ.ಗಳಾದ ತಸ್ಲಿಂ ಸುಲ್ತಾನಾ, ಕಿರಣ, ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

(ವರದಿ: ಎಸ್.ಬಿ.ರೆಡ್ಡಿ, ಕಲಬುರಗಿ)

Whats_app_banner