Mangalore News: ಮಂಗಳೂರು ಸಿಸಿಬಿ ಕಾರ್ಯಾಚರಣೆ: ಅಕ್ರಮವಾಗಿ ಅಮೆರಿಕಾ ಪಿಸ್ತೂಲ್ ಹೊಂದಿದ್ದ ಕೇರಳದ ಇಬ್ಬರ ಸೆರೆ
Mangalore crime ಅಮೆರಿಕಾದಲ್ಲಿ ತಯಾರಿಸಿದ ಪಿಸ್ತೂಲ್ ಅನ್ನು ಅಕ್ರಮವಾಗಿ ಹೊಂದಿದ್ದ ಕೇರಳದ ಕಾಸರಗೋಡು ಜಿಲ್ಲೆ ಮಂಜೇಶ್ವರ ಮೂಲದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮೊಬೈಲ್, ಬೈಕ್ ಹಾಗೂ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು: ಅಮೆರಿಕಾ ಮೂಲದ ಪಿಸ್ತೂಲನ್ನು ಅಕ್ರಮವಾಗಿ ಇರಿಸಿಕೊಂಡು ಅಬಕಾರಿ ವಹಿವಾಟಿಗೆ ಬಳಸುತ್ತಿದ್ದ ಕೇರಳ ಮೂಲದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಪೈವಳಿಕೆಯ ಯಶವಂತ್ ಕುಮಾರ್ (45), ಮಂಜೇಶ್ವರದ ಮಿಯಾಪದವು, ಚಿಗುರುಪಾದೆಯ ಅಬ್ಬಾಸ್ ಯಾನೆ ಬೆಡಿ ಅಬ್ಬಾಸ್ (61) ಬಂಧಿತರು. ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡಿದ್ದ ಇವರಿಬ್ಬರೂ ಹಳೆಯ ಆರೋಪಿಗಳು.
ಈ ಇಬ್ಬರು ಆರೋಪಿಗಳು ಮಂಗಳೂರು ತಾಲೂಕು ಬಜಪೆ ಗ್ರಾಮದ ಒಡ್ಡಿದಕಲ ಎಂಬಲ್ಲಿ ಬೈಕ್ ವೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮಾರಕಾಯುಧವಾದ ಪಿಸ್ತೂಲ್ ನ್ನು ವಶದಲ್ಲಿರಿಸಿಕೊಂಡು ತಿರುಗಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ಅಕ್ರಮ ಪಿಸ್ತೂಲ್ ಹೊಂದಿದ ಇಬ್ಬರನ್ನು ಬಂಧಿಸಿ ಅವರಿಂದ 1 ಪಿಸ್ತೂಲ್, 2 ಮೊಬೈಲ್ ಫೋನುಗಳು, ಹಾಗೂ ಹೀರೋ ಹೊಂಡಾ ಫ್ಯಾಶನ್ ಪ್ಲಸ್ ಬೈಕ್ ನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 1,45,000 ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಅಪರಾಧ ಹಿನ್ನೆಲೆ
ಆರೋಪಿಯ ಪೈಕಿ ಅಬ್ಬಾಸ್ ಎಂಬಾತನ ವಿರುದ್ಧ ಈ ಹಿಂದೆ ಕೇರಳದ ಕಾಸರಗೋಡು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ಹಾಗೂ ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಇನ್ನೋರ್ವ ಆರೋಪಿ ಯಶವಂತ ಕುಮಾರ್ ಎಂಬಾತನ ವಿರುದ್ಧ ಈ ಹಿಂದೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕಾಸರಗೋಡು ಜಿಲ್ಲೆಯ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ, ಕುಂಬಳೆ ಪೊಲೀಸ್ ಠಾಣೆಯಲ್ಲಿ ಅಬಕಾರಿ ಕಾಯ್ದೆ ಪ್ರಕರಣ ಹಾಗೂ ಬದಿಯಡ್ಕ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣವೊಂದು ದಾಖಲಾಗಿರುತ್ತದೆ. ಸಿಸಿಬಿ ಘಟಕದ ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಯವರಾದ ರಾಜೇಂದ್ರ ಬಿ, ಸುದೀಪ್ ಎಂ ವಿ, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐ ಮೋಹನ್ ಕೆ ವಿ ಹಾಗೂ ಸಿಸಿಬಿ ಸಿಬ್ಬಂದಿಯವರು ಪಾಲ್ಗೊಂಡಿದ್ದರು.