ಒಂದೇ ವಾರದಲ್ಲಿ 3 ನೈತಿಕ ಪೊಲೀಸ್ ಗಿರಿ ಪ್ರಕರಣಗಳು; ಕರ್ನಾಟಕ ಕರಾವಳಿಯಲ್ಲೇ ಹೆಚ್ಚು ಕೃತ್ಯಗಳು ಯಾಕೆ
ಕರ್ನಾಟಕದಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಸರ್ಕಾರಕ್ಕೆ ಕೆಟ್ಟ ಹೆಸರು ತರುವಂತಾಗಿದೆ. ಕಾಂಗ್ರೆಸ್, ಬಿಜೆಪಿ ಯಾವುದೇ ಸರ್ಕಾರ ಇದ್ದರೂ ಇಂಥ ಕೃತ್ಯಗಳು ನಡೆಯುತ್ತಲೇ ಇವೆ.
ಕರ್ನಾಟಕದಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣಗಳು ಹೆಚ್ಚಾಗುತ್ತಿರುವುದು ರಾಜ್ಯ ಪೊಲೀಸ್ ಮತ್ತು ಸರ್ಕಾರವನ್ನು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ. ವಿಶೇಷವಾಗಿ ಕರಾವಳಿ ಭಾಗದ ದಕ್ಷಿಣ ಕನ್ನಡದಲ್ಲಿ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ. ಬಲಪಂಥೀಯ, ಹಿಂದುತ್ವದ ಸಂಘಟನೆಗಳು ಸದಸ್ಯರಿಂದಲೇ ಇಂತಹ ಕೃತ್ಯಗಳು ನಡೆಯುತ್ತಿರುವ ಆರೋಪಗಳಿವೆ.
ಕಳೆದೊಂದು ವಾರದ ಅಂತರದಲ್ಲಿ ಹಾವೇರಿ ಜಿಲ್ಲೆಯ ಹಾನಗಲ್, ಚಿಕ್ಕಮಗಳೂರು ಹಾಗೂ ಬೆಳಗಾವಿಯಲ್ಲಿ ಮೂರು ಪ್ರಕರಣಗಳ ರಾಜ್ಯದ ಹೆಸರಿನ ಕಪ್ಪು ಮಸಿ ಬಳಿಯುವ ಪ್ರಯತ್ನದಂತೆ ಕಾಣುತ್ತಿವೆ. ಕರಾವಳಿಯಲ್ಲಿ ಹೆಚ್ಚು ವರಿದಿಯಾಗುತ್ತಿದ್ದ ನೈತಿಕ ಪೊಲೀಸ್ ಗಿರಿ ಇದೀಗ ಉತ್ತರ ಕರ್ನಾಟಕ ಭಾಗಕ್ಕೂ ಹಬ್ಬಿದೆ.
2024ರ ಜನವರಿ 8 ರಂದು ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನವರಾದ ಹಿಂದೂ ವ್ಯಕ್ತಿ, ಅದೇ ತಾಲೂಕಿನ ವಿವಾಹಿತ ಮುಸ್ಲಿಂ ಮಹಿಳೆಯೊಂದಿಗೆ ನಾಲ್ಕರ್ ಹೋಟೆಲ್‌ಗೆ ಹೋಗಿದ್ದರು. ಆಟೋ ಚಾಲಕನೊಬ್ಬನಿಂದ ಮಾಹಿತಿ ಪಡೆದ 7 ಜನರ ಗುಂಪು ತಕ್ಷಣವೇ ಅಲ್ಲಿಗೆ ಬಂದು ಇಬ್ಬರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಪರಿಚಯಸ್ಥರು, ತೊಂದರೆ ಕೊಡಬೇಡಿ ಎಂದು ಬೇಡಿಕೊಂಡರೂ ಬಿಡದೆ ಹಲ್ಲೆ ಮಾಡಿದ್ದರು. ನಂತರ ಆರೋಪಿಗಳ ವಿರುದ್ಧ ಅತ್ಯಾಚಾರ ಆರೋಪವೂ ಕೇಳಿಬಂದಿದೆ.
ಈ ಘಟನೆ ನಡೆದ 2 ದಿನಗಳ ಅಂತರದಲ್ಲಿ ಅಂದರೆ ಜನವರಿ 10 ರಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ ಚಾಕಲೇಟ್ ಕೊಟ್ಟ ವಿಚಾರಕ್ಕೆ ಗುಂಪೊಂದು ಹುಡುಗರ ಮೇಲೆ ಹಲ್ಲೆ ಮಾಡಿಸಿರುವ ನೈತಿಕ ಪೊಲೀಸ್ ಗಿರಿ ವರದಿಯಾಗಿತ್ತು. ಇದಕ್ಕೂ ಮುನ್ನ ಅಂದರೆ ಜನವರಿ 6 ರಂದು ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿತ್ತು. ಕಾಂಗ್ರೆಸ್ ಯುವ ನಿಧಿಗೆ ಯೋಜನೆಯಡಿಯಲ್ಲಿ ಹೆಸರು ನೋಂದಾಯಿಸಿಕೊಳ್ಳ ಬಂದಿದ್ದ ಅನ್ಯ ಧರ್ಮದ ಇಬ್ಬರು ಸೋದರ ಸಂಬಂಧಿಗಳು ಒಟ್ಟಾಗಿ ಕುಳಿತಿದ್ದಕ್ಕೆ ಕಂಡ 17 ಮಂದಿ ದುಷ್ಕರ್ಮಿಗಳ ಗುಂಪು ಅವರ ಮೇಲೆ ಹಲ್ಲೆ ಮಾಡಿತ್ತು.
2023ರ ನವೆಂಬರ್‌ನಲ್ಲಿ ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನ ಯುವತಿ, ಮಂಗಳೂರಿನ ಯುವಕ ಇಬ್ಬರು ಬೇರೆ ಬೇರೆ ಧರ್ಮದವರು. ಇಬ್ಬರೂ ಮಂಗಳೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸ್ಕೂಟರ್‌ನಲ್ಲಿ ಒಟ್ಟಾಗಿ ಅಂಗಡಿಗೆ ಬರುವುದು, ಹೊರಗಡೆ ಸುತ್ತಾಟವನ್ನು ಗಮನಿಸಿದ ಕೆಲ ಯುವಕರು ಇವರನ್ನು ಹಿಂಬಾಲಿಸಿ ಹೋಗಿ ವಿಚಾರಣೆ ಮಾಡಿದ್ದರು. ಈ ವಿಚಾರ ತಿಳಿದು ಎರಡು ಕೋಮುಗಳ ಜನರು ಸೇರಿ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಇದನ್ನು ಮನಗಂಡ ಪೊಲೀಸರು ಸ್ಥಳಕ್ಕೆ ಬಂದಿದ್ದವರುನ್ನು ಚದುರಿಸಿದ್ದರು. ಸದ್ಯ ಘಟನೆ ಸಂಬಂಧ ವಿಚಾರಣೆ ನಡೆಯುತ್ತಿದೆ.
2022ರ ಜುಲೈ 25 ರ ರಾತ್ರಿ ಬಜರಂಗದಳ ಕಾರ್ಯಕರ್ತರು ಮಂಗಳೂರಿನ ರೀಸೈಕಲ್ ಪಬ್‌ಗೆ ನುಗ್ಗಿ ಮಹಿಳೆಯರು ಪಾರ್ಟಿ ಮಾಡುವುದನ್ನು ವಿರೋಧಿಸುವ ಮೂಲಕ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ್ರು. 2022ರ ಆಗಸ್ಟ್ 30 ರಂದು ಹಿಂದೂ ಧರ್ಮದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕಾಗಿ ಬಿಕಾಂ ವಿದ್ಯಾರ್ಥಿ, 19 ವರ್ಷದ ಅನ್ಯ ಕೋಮಿನ ಯುವಕನಿಗೆ ಸಹಪಾಠಿಗಳೇ ಹೊಡೆದು ಬೆದರಿಕೆ ಹಾಕಿದ್ದರು.
ಪದೇ ಪದೇ ಇಂಥ ನೈತಿಕ ಪೊಲೀಸ್ ಗಿರಿ ಘಟನೆ ನಡೆಯುವುದಕ್ಕೆ ಹಲವು ಕಾರಣಗಳಿವೆ. ರಾಷ್ಟದ ಸಂಸ್ಕೃತಿ ಮತ್ತು ಘಟನೆಯನ್ನು ರಕ್ಷಣೆಯ ನೆಪದಲ್ಲಿ ಕೆಲ ಹಿಂದೂ ಸಂಘಟನೆಗಳ ಸಮರ್ಥನೆ, ಆಯ್ದ ಗುರಿಗಳ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಾಚರಣೆ ವಿಧಾನಗಳು, ರಾಜಕೀಯ ನಾಯಕ ಬೆಂಬಲ ಹೀಗೆ ಪಟ್ಟಿ ಮಾಡಬಹುದು. ನೈತಿಕ ಪೊಲೀಸ್ ಗಿರಿ ಎಂಬುದು ನಮ್ಮ ಸಂಸ್ಕೃತಿ, ಸನಾತನ ಧರ್ಮ ಮತ್ತು ರಾಷ್ಟ್ರದ ಘನತೆಯನ್ನು ಕಾಪಾಡುವ ಮಾರ್ಗವಲ್ಲದೆ ಬೇರೇನೂ ಅಲ್ಲ ಎಂದು ವಿಶ್ವ ಹಿಂದೂ ಪರಿಷತ್ ನಾಯಕರೊಬ್ಬರು ಈ ಹಿಂದೆ ಹೇಳಿದ್ದರು.
ಇವರೇ ಮಾಹಿತಿ ದಾರರು
ಆಟೋ ಚಾಲಕರು, ತರಕಾರಿ ಹಣ್ಣು ಮಾರಾಟಗಾರರು, ಅಂಗಡಿಯವರು, ವಾಹನಗಳ ಚಾಲಕರು, ಬಸ್ ಕಂಡಕ್ಟರ್‌ಗಳು ಈ ಗ್ಯಾಂಗ್‌ಗಳಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಾರೆ. ಪೂರ್ವ ನಿಯೋಜಿತ ಜಾಲಗಳಿಂದ ಮಾಹಿತಿ ಪಡೆದು ಅಂತರ್ ಧರ್ಮೀಯ ದಂಪತಿ, ಸ್ನೇಹಿತರು, ಪ್ರೇಮಿಗಳಿಗೆ ಅಡ್ಡಿ ಮಾಡುತ್ತಾರೆ. ನೈತಿಕ ಪೊಲೀಸ್ ಗಿರಿ ಮಾಡುವವರು ವಿರುದ್ಧ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹೇಳುವ ಸರ್ಕಾರಗಳು ಈ ನಿಟ್ಟಿನಲ್ಲಿ ಅಗತ್ಯ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.
ವಿಭಾಗ