ಮದುವೆಯಾಗುವುದಾಗಿ ನಂಬಿಸಿ ವಿವಿಧ ರಾಜ್ಯಗಳ 250 ಮಹಿಳೆಯರನ್ನು ವಂಚಿಸಿದ್ದ ಆರೋಪಿ ಅರೆಸ್ಟ್; ಯುವತಿಗೆ ಬೆದರಿಸಿದ್ದ ನಾಲ್ವರು ಪೊಲೀಸರು ಅಮಾನತು
Crime News: ವಿವಿಧ ರಾಜ್ಯಗಳಲ್ಲಿ ಮಹಿಳೆಯರನ್ನು ನಂಬಿಸಿ ವಂಚಿಸುತ್ತಿದ್ದವನನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಯುವತಿಯೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದ ಮೇರೆಗೆ ಬೆಂಗಳೂರಿನ ಜೀವನ್‌ಬಿಮಾ ನಗರ ಸಂಚಾರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿ ಸಸ್ಪೆಂಡ್ ಆಗಿದ್ದಾರೆ.
ಬೆಂಗಳೂರು: ಒಬ್ಬ ಆರೋಪಿ ಮದುವೆಯಾಗುವುದಾಗಿ ಎಷ್ಟು ಮಹಿಳೆಯರನ್ನು ವಂಚಿಸಬಹುದು ? ಐದು ಮಂದಿ 10 ಅಥವಾ 20. ಆದರೆ ಇಲ್ಲೊಬ್ಬ ಖತರ್ ನಾಕ್ ಆರೋಪಿ ಬರೋಬ್ಬರಿ 250ಕ್ಕೂ ಹೆಚ್ಚು ಮಹಿಳೆಯರಿಗೆ ವಿವಿಧ ರೀತಿಯಲ್ಲಿ ವಂಚಿಸಿ ಕೊನೆಗೂ ಪೊಲೀಸರ ಅತಿಥಿಯಾಗಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಖಾತೆ ಸೃಷ್ಟಿಸಿ, ಪತಿ ಇಲ್ಲದ ಮತ್ತು ವಿಚ್ಛೇದಿತ ಮಹಿಳೆಯರನ್ನು ಗುರಿಯಾಗಿಸಿಕೊಂಡು ವಿವಾಹವಾಗುವುದಾಗಿ ನಂಬಿಸಿ ಸಾವಿರಾರು ರೂಪಾಯಿ ಪಡೆದು ವಂಚಿಸುತ್ತಿದ್ದ ಬಟ್ಟೆ ಅಂಗಡಿಯೊಂದರ ಕೆಲಸಗಾರನನ್ನು ಬೆಂಗಳೂರಿನ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಕಾಟನ್‌ಪೇಟೆ ನಿವಾಸಿ 47 ವರ್ಷದ ನರೇಶ್‌ಪುರಿ ಗೋಸ್ವಾಮಿ ಬಂಧಿತ ಆರೋಪಿ. ಈತ ಕಳೆದ 2 ವರ್ಷಗಳಿಂದ ಕರ್ನಾಟಕದ 17 ಮಹಿಳೆಯರೂ ಸೇರಿದಂತೆ ಬೇರೆ ಬೇರೆ ರಾಜ್ಯಗಳ 250ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಚಾಟಿಂಗ್ ನಡೆಸಿ ವಂಚನೆ ಮಾಡಿರುವುದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.
ಈತನ ವಂಚನೆಯ ಪ್ರಪಂಚ ಕಂಡು ಪೊಲೀಸರೇ ಬೆರಗಾಗಿದ್ದಾರೆ. ರಾಜಸ್ಥಾನದ 56, ಉತ್ತರಪ್ರದೇಶದ 32, ದೆಹಲಿಯ 32, ಮಧ್ಯಪ್ರದೇಶದ 16, ಮಹಾರಾಷ್ಟ್ರದ 13, ಗುಜರಾತ್‌ನ 11, ತಮಿಳುನಾಡಿನ 6, ಬಿಹಾರ ಮತ್ತು ಜಾರ್ಖಂಡ್‌ನ 5, ಆಂಧ್ರಪ್ರದೇಶದ ಇಬ್ಬರು ಮಹಿಳೆಯರನ್ನು ಮದುವೆ ಆಗುವುದಾಗಿ ವಂಚಿಸಿದ್ದಾನೆ ಎಂದು ರೈಲ್ವೆ ಪೊಲೀಸ್ ವಿಭಾಗದ ಡಿಐಜಿಪಿ ಎಸ್‌ಡಿ ಶರಣಪ್ಪ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಆರೋಪಿಯು ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಕೊಯಮತ್ತೂರಿನ ಮಹಿಳೆಯೊಬ್ಬರ ಪೋಷಕರನ್ನು ಕರೆಸಿಕೊಂಡು ಸುಳ್ಳು ಹೇಳಿ ದುಡ್ಡು ಪಡೆದು ವಂಚಿಸಿದ್ದ. ಅವರು ನೀಡಿದ ದೂರು ಆಧರಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿ ನರೇಶ್ ರಾಜಸ್ತಾನ ಮೂಲದವನು
ರಾಜಸ್ಥಾನ ಮೂಲದ ಆರೋಪಿ ನರೇಶ್‌ಪುರಿ 20 ವರ್ಷಗಳಿಂದ ಕಾಟನ್‌ಪೇಟೆಯ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಈತನ ಪತ್ನಿ ಮತ್ತು ಮಕ್ಕಳು ರಾಜಸ್ಥಾನದಲ್ಲೇ ನೆಲೆಸಿದ್ದಾರೆ. ವೆಬ್‌ಸೈಟ್‌ನಲ್ಲಿ ಅವಿವಾಹಿತ ಎಂದು ನಕಲಿ ಖಾತೆ ಸೃಷ್ಟಿಸಿಕೊಂಡಿದ್ದ. ಒಮ್ಮೊಮ್ಮೆ ಸಾಫ್ಟ್‌ವೇರ್ ಎಂಜಿನಿಯರ್ ಎಂದು ಹೇಳಿಕೊಳ್ಳುತ್ತಿದ್ದ. ಯಾರಾದರೂ ತನ್ನ ಬಗ್ಗೆ ವಿಚಾರಿಸಿದರೆ ತಾನು ಮಾಧ್ಯಮ ಪ್ರತಿನಿಧಿ ಮತ್ತು ಮಾಧ್ಯಮ ಸಂಸ್ಥೆಯೊಂದರ ಉಪಾಧ್ಯಕ್ಷ ಎಂದೂ ಹೇಳಿಕೊಂಡು ನಂಬಿಸುತ್ತಿದ್ದ.
ಈತ ಬೇರೆಯವರ ಹೆಸರಿನಲ್ಲಿ ಕಾಳಸಂತೆಯಲ್ಲಿ 2 ಸಿಮ್ ಕಾರ್ಡ್ ಮತ್ತು ಮೊಬೈಲ್ ಖರೀದಿಸಿದ್ದ. ಈ ಮೊಬೈಲ್ ನಂಬರ್ ಬಳಸಿಕೊಂಡು ಮ್ಯಾಟ್ರಿಮೋನಿಯಲ್‌ನಲ್ಲಿ ನಕಲಿ ಹೆಸರು, ಫೋಟೊ, ಹುದ್ದೆ ಉಲ್ಲೇಖಿಸಿ ಪ್ರೊಫೈಲ್ ಸೃಷ್ಟಿಸಿದ್ದ. ವಿಚ್ಛೇದಿತರನ್ನು ವಿವಾಹವಾಗಲು ಸಿದ್ದ ಎಂದು ಹೇಳಿಕೊಂಡಿದ್ದ. ಕೆಲವು ದಿನಗಳ ಹಿಂದೆಯಷ್ಟೇ ವಿಳಾಸ ಬದಲಾಯಿಸಿ, ಕಸ್ಟಂ ಅಧಿಕಾರಿ ಎಂದು ಹೇಳಿಕೊಂಡಿದ್ದ. ಅಗರ್‌ಸೇನ್ ವೈವಾಹಿಕ ಮಂಚ್ ಎಂಬ ವಾಟ್ಸ್ ಆ್ಯಪ್ ಗ್ರೂಪ್‌ಗೆ ಸೇರ್ಪಡೆಯಾಗಿ ಮಹಿಳೆಯರ ವಿವರಗಳನ್ನು ಸಂಗ್ರಹಿಸುತ್ತಿದ್ದ.
ಹಿಂದಿ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ವಧು ವರರು ಬೇಕಾಗಿದ್ದಾರೆ ಎಂಬ ಜಾಹೀರಾತುಗಳನ್ನು ಗಮನಿಸಿ, ಅಲ್ಲಿನ ಮಹಿಳೆಯರ ಮೊಬೈಲ್ ನಂಬರ್‌ಗೆ ಕರೆ ಮಾಡಿ ಮದುವೆ ಆಗುವುದಾಗಿ ನಂಬಿಸುತ್ತಿದ್ದ. ತದನಂತರ ರಾತ್ರಿ ಹೊತ್ತು ಕರೆ ಮಾಡಿ ಮಹಿಳೆಯರ ಜೊತೆಗೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಪೊಲೀಸರು ಈತನ ಲೀಲೆಗಳನ್ನು ವಿವರಿಸಿದ್ದಾರೆ.ರೈಲ್ವೆ ಎಸ್‌ಪಿ ಸೌಮ್ಯಲತಾ ನೇತೃತ್ವದಲ್ಲಿ ಡಿವೈಎಸ್‌ಪಿ ರವಿಕುಮಾರ್, ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂತೋಷ್ ಎಂ. ಪಾಟೀಲ್, ಬೆಂಗಳೂರು ಠಾಣೆ ಪಿಎಸ್‌ಐ ಶರಣ ಬಸವರಾಜ ಸಿ. ಬಿರಾದಾರ ಮತ್ತು ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿ ಬೆದರಿಸಿದ್ದ ನಾಲ್ವರು ಪೊಲೀಸರು ಅಮಾನತು
ಮದ್ಯ ಸೇವಿಸಿ ಕಾರು ಚಲಾಯಿಸುತ್ತಿದ್ದೀರಿ ಎಂದು ಯುವತಿಯೊಬ್ಬರನ್ನು ಬೆದರಿಸಿ ಹಣ ವಸೂಲಿ ಮಾಡಿದ್ದ ಆರೋಪದ ಮೇರೆಗೆ ಬೆಂಗಳೂರಿನ ಜೀವನ್‌ಬಿಮಾ ನಗರ ಸಂಚಾರ ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿಯನ್ನು ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಅಮಾನತು ಮಾಡಿದ್ದಾರೆ. ಸಂಚಾರಿ ವಿಭಾಗದ ಇನ್‌ಸ್ಪೆಕ್ಟರ್ ವೆಂಕಟಾಚಲಪತಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಗಿರೀಶ್, ಕಡೇಮನಿ ಹುಚ್ಚು ಸಾಬ್ ಹಾಗೂ ಕಾನ್‌ಸ್ಟೆಬಲ್ ಬಸಪ್ಪ ಅಮಾನತುಗೊಂಡಿದ್ದಾರೆ.
ಯುವತಿಯಿಂದ ಬೇರೊಬ್ಬರ ಮೊಬೈಲ್‌ಗೆ ಹಣವನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದು ತನಿಖೆಯಲ್ಲಿ ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ನಾಲ್ವರನ್ನು ಅಮಾನತು ಮಾಡಲಾಗಿದೆ ಎಂದು ಪೂರ್ವ ಸಂಚಾರ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
ಯುವತಿಯ ತಂದೆ ‘ಎಕ್ಸ್’ ಖಾತೆಯಲ್ಲಿ ಪ್ರಕರಣದ ವಿವರ ಬರೆದುಕೊಂಡು ಪೊಲೀಸ್ ಅಧಿಕಾರಿಗಳಿಗೆ ಟ್ಯಾಗ್ ಮಾಡಿದ್ದರು. ಈ ದೂರು ಆಧರಿಸಿ, ತನಿಖೆ ನಡೆಸಿ ನಾಲ್ವರನ್ನು ಅಮಾನತು ಮಾಡಲಾಗಿದೆ. ಆರಂಭದಲ್ಲಿ ಈ ಪೊಲೀಸರು 15 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಷ್ಟು ಹಣವಿಲ್ಲವೆಂದು ಮಗಳು ಹೇಳಿದ್ದಳು. ನಂತರ ಪೊಲೀಸರು, ಗೂಗಲ್ ಪೇ ಮೂಲಕ ಹಣ ಪಡೆದಿದ್ದರು. ತಪಾಸಣೆ ವೇಳೆ ಮಹಿಳಾ ಸಿಬ್ಬಂದಿ ಸ್ಥಳದಲ್ಲಿ ಇರಲಿಲ್ಲ ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.
ಪ್ರಕರಣ ನಡೆದ ದಿನ ಪೊಲೀಸರು ರಾತ್ರಿ ಕರ್ತವ್ಯದಲಿದ್ದರು. ಅದೇ ರಸ್ತೆಯಲ್ಲಿ ಯುವತಿ ಕಾರಿನಲ್ಲಿ ಬರುತ್ತಿದ್ದಾಗ ತಡೆದು ಆಲ್ಕೋಮೀಟರ್‌ನಿಂದ ಯುವತಿಯನ್ನು ಪರೀಕ್ಷಿಸಿ ನೀವು ಮದ್ಯ ಕುಡಿದಿದ್ದೀರಾ ಎಂದು ಬೆದರಿಸಿ 15 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದರೆ ಪ್ರಕರಣ ದಾಖಲಿಸಿ ಕಾರು ಜಪ್ತಿ ಮಾಡುವುದಾಗಿ ಹೆದರಿಸಿದ್ದರು. ಅಷ್ಟೊಂದು ಹಣವಿಲ್ಲವೆಂದು ಯುವತಿ ಹೇಳಿದ್ದರು. ಆಗ ಬೇರೊಬ್ಬರ ಮೊಬೈಲ್‌ನಿಂದ ಗೂಗಲ್ ಪೇ ಮಾಡಿಸಿಕೊಂಡಿದ್ದರು. ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ವರದಿ: ಮಾರುತಿ ಎಸ್., ಬೆಂಗಳೂರು