Ramanagar News: ಎಳೆಯರ ಪ್ರೇಮ ದುರಂತ ಅಂತ್ಯ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ನೆಲಮಂಗಲದ ಅಪ್ತಾಪ್ತ ಪ್ರೇಮಿಗಳು
ಕನ್ನಡ ಸುದ್ದಿ  /  ಕರ್ನಾಟಕ  /  Ramanagar News: ಎಳೆಯರ ಪ್ರೇಮ ದುರಂತ ಅಂತ್ಯ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ನೆಲಮಂಗಲದ ಅಪ್ತಾಪ್ತ ಪ್ರೇಮಿಗಳು

Ramanagar News: ಎಳೆಯರ ಪ್ರೇಮ ದುರಂತ ಅಂತ್ಯ; ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ನೆಲಮಂಗಲದ ಅಪ್ತಾಪ್ತ ಪ್ರೇಮಿಗಳು

Student lovers suicide ಅವರು ಇನ್ನೂ ಕಲಿಯುವ ಹಂತದಲ್ಲಿದ್ದರು. ಆದರೆ ಪ್ರೇಮದ ಪಾಶಕ್ಕೆ ಬಿದ್ದರು. ಮನೆಯವರಿಂದ ವಿರೋಧ ವ್ಯಕ್ತವಾಗಿದ್ದರಿಂದ ಬೇಸರಗೊಂಡು ಊರು ಬಿಟ್ಟು ಹೊರಟರು. ಆದರೆ ಅಲ್ಲಿಂದ ಬಂದವರು ಏಕಾಏಕಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದರು. ಸಿನಮೀಯ ರೀತಿಯಲ್ಲೇ ಇರುವ ಈ ಕಥೆ ನಡೆದಿದ್ದು ನೆಲಮಂಗಲ- ರಾಮನಗರದಲ್ಲಿ. ಏನಿದು ಘಟನೆ ಇಲ್ಲಿದೆ ವಿವರ.

ರಾಮನಗರ ಬಳಿ ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾತಿನಿಧಿಕ ಚಿತ್ರ
ರಾಮನಗರ ಬಳಿ ಪ್ರೇಮಿಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾತಿನಿಧಿಕ ಚಿತ್ರ

ರಾಮನಗರ: ಈ ದುರಂತ ನೈಜ ಘಟನೆಯನ್ನು ಓದುತ್ತಿದ್ದರೆ ಅಚ್ಚರಿ ಮತ್ತು ಖೇದ ಉಂಟಾಗದೆ ಇರದು. ಓದುವ ವಯಸ್ಸಿನಲ್ಲಿ ಓದಿ, ಜೀವನ ರೂಪಿಸಿಕೊಳ್ಳುವ ವಯಸ್ಸಿನಲ್ಲಿ ಪ್ರೇಮದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತ ಪ್ರೇಮಿಗಳ ಸ್ಟೋರಿ ಇದು.

ಸಹಪಾಠಿಗಳ ಲವ್‌ ಕಹಾನಿ

ರಾಮನಗರ ಜಿಲ್ಲೆಯ ಹೊರವಲಯದ ಕುಂಬಾಪುರ ಗೇಟ್ ಬಳಿ ಶನಿವಾರ ಸಂಜೆ ಇವರಿಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಬ್ಬರೂ ಯಂಟಗಾನಹಳ್ಳಿ ಶಾಲೆಯ ವಿದ್ಯಾರ್ಥಿಗಳು ಎಂದು ಗೊತ್ತಾಗಿದೆ. ಎಸ್ಎಸ್ಎಲ್ ಸಿ ಓದುತ್ತಿದ್ದ ಯಂಟಗಾನಹಳ್ಳಿ ಶಾಲೆಯ ವಿದ್ಯಾರ್ಥಿನಿ ನವ್ಯಶ್ರೀ (15) ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿ ಹರ್ಷವರ್ಧನ್ (17) ಆತ್ಮಹತ್ಯೆ ಮಾಡಿಕೊಂಡವರು.

‌ನವ್ಯಶ್ರೀ ಮತ್ತು ಹರ್ಷವರ್ಧನ್ ಇಬ್ಬರು ಒಂದೇ‌ ಶಾಲೆಯಲ್ಲಿ‌ ಓದಿದ ವಿದ್ಯಾರ್ಥಿಗಳು. ನೆಲಮಂಗಲ‌ ತಾಲೂಕಿನ ಯಂಟಗಾನಹಳ್ಳಿಯ‌ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಇಬ್ಬರು, ‌ ಅಕ್ಕಪಕ್ಕದ ಊರಿನ ನಿವಾಸಿಗಳು. ಇಬ್ಬರ ಮಧ್ಯೆ ಪ್ರೀತಿ‌ ಹುಟ್ಟಿರುವ ವಿಚಾರ ಪೋಷಕರಿಗೆ ತಿಳಿದು ಬಂದಿದೆ. ಎರಡೂ ಮನೆಯ ಪೋಷಕರು ಬುದ್ಧಿ ಹೇಳಿದ್ದಾರೆ. ಆದರೂ ಬುದ್ಧಿಮಾತು ಕಿವಿಗೆ ಹೋಗಿರಲೇ ಇಲ್ಲ.

ನಂಜನಗೂಡಿಗೆ ಬಂದರು

ಶುಕ್ರವಾರ ಬೆಳಿಗ್ಗೆ ಶಾಲೆಗೆ ಹೋಗುವುದಾಗಿ ಮನೆಯಿಂದ ನವ್ಯಶ್ರೀ ಹೊರಟಿದ್ದಾಳೆ. ನಂತರ ಆಕೆ ಮತ್ತು ಹರ್ಷವರ್ಧನ್ ಬೈಕಿನಲ್ಲಿ‌ ನೆಲಮಂಗಲ‌ ಮಾರ್ಗವಾಗಿ ಮೈಸೂರಿನ‌ ನಂಜನಗೂಡಿಗೆ ಹೋಗಿ ನಂತರ ಅಲ್ಲಿಂದ ಇಂದು ಬೆಳಿಗ್ಗೆ ರಾಮನಗರಕ್ಕೆ ಮರಳಿದ್ದಾರೆ.‌ ಬೆಳಗಿನ ಜಾವ 6 ಗಂಟೆಗೆ ರಾಮನಗರ ತಲುಪಿದ ಇವರು ರಾಮನಗರ ಹೊರವಲಯದ ಕುಂಬಾಪುರ‌ಗೇಟ್ ದಾಟಿ ಅಲ್ಲಿಯೇ ಬೈಕ್‌ ನಿಲ್ಲಿಸಿ‌ ಸರಿಯಾಗಿ 6:30 ಬಂದ‌ ತಾಳಗುಪ್ಪ ಎಕ್ಸ್‌ಪ್ರೆಸ್‌ ರೈಲಿಗೆ ತಲೆ‌ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರ ತಲೆಗಳು ತುಂಡಾಗಿ ದೇಹ ಬೇರೆ ತಲೆಗಳು ಬೇರೆ ಆಗಿವೆ.

ತಾಯಿ ಬುದ್ದಿವಾದಕ್ಕೂ ಬೆಲೆಕೊಡಲಿಲ್ಲ

ಶುಕ್ರವಾರ ರಾತ್ರಿ ನವ್ಯಶ್ರೀ ತನ್ನ ತಾಯಿ ಜೊತೆ ಮೊಬೈಲ್ ನಲ್ಲಿ ಮಾತನಾಡಿದ್ದಾಳೆ. ಆದರೆ ತಾಯಿಯ ಜೊತೆ ಸ್ಪಷ್ಟವಾಗಿ ಮಾತನಾಡಿಲ್ಲ. ಮನೆಗೆ ವಾಪಸ್ ಬಂದು ಬಿಡು, ನಾವು ಹೊಡೆಯುವುದಿಲ್ಲ, ಬಯ್ಯುವುದು ಇಲ್ಲ ಎಂದು ತಾಯಿ ಬೇಡಿ ಕೊಂಡು ಬುದ್ದಿ ಹೇಳಿದ್ದಾರೆ. ಆದರೆ ತಾಯಿ ಮಾತು ಕೇಳಿಲ್ಲ. ಇಡೀ ರಾತ್ರಿ ಮನೆಯಲ್ಲಿ ಇರದೆ ಹೊರಗೆ ದಿನ ಕಳೆದಿದ್ದೇವೆ. ಊರಿನ ಜನ, ಬಂಧು ಬಳಗದ ಮುಂದೆ ತಲೆ ತಗ್ಗಿಸಬೇಕು ಎಂಬ ಭಯ ಇಬ್ಬರಿಗೂ ಮೂಡಿರಬಹುದು. ಅಂತಿಮವಾಗಿ ಇಹ ಲೋಕವನ್ನೇ ತೊರೆಯುವ ಗಟ್ಟಿ ನಿರ್ಧಾರ ಕೈಗೊಂಡಿದ್ದಾರೆ. ಇಬ್ಬರೂ ಕೈ ಕೈ ಹಿಡಿದು ರೈಲು ಹಳಿಗೆ ತಲೆಕೊಟ್ಟು ಮಲಗಿ ಸಾವನ್ನಪ್ಪಿದ್ದಾರೆ.

ರಾಮನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

( ಎಚ್‌ ಮಾರುತಿ, ಬೆಂಗಳೂರು)

Whats_app_banner