ಡಿಜಿಟಲ್‌ ಜಾಗೃತಿ: ನಿಮ್ಮ ಖಾತೆಗೆ ತಪ್ಪಿ ಹಣ ಹಾಕಿದ್ದೇನೆ, ವಾಪಸ್‌ ನೀಡಿ ಪ್ಲೀಸ್‌; ಸೈಬರ್‌ ವಂಚಕರ ಮೊಸಳೆ ಕಣ್ಣೀರಿಗೆ ಕರಗದಿರಿ
ಕನ್ನಡ ಸುದ್ದಿ  /  ಕರ್ನಾಟಕ  /  ಡಿಜಿಟಲ್‌ ಜಾಗೃತಿ: ನಿಮ್ಮ ಖಾತೆಗೆ ತಪ್ಪಿ ಹಣ ಹಾಕಿದ್ದೇನೆ, ವಾಪಸ್‌ ನೀಡಿ ಪ್ಲೀಸ್‌; ಸೈಬರ್‌ ವಂಚಕರ ಮೊಸಳೆ ಕಣ್ಣೀರಿಗೆ ಕರಗದಿರಿ

ಡಿಜಿಟಲ್‌ ಜಾಗೃತಿ: ನಿಮ್ಮ ಖಾತೆಗೆ ತಪ್ಪಿ ಹಣ ಹಾಕಿದ್ದೇನೆ, ವಾಪಸ್‌ ನೀಡಿ ಪ್ಲೀಸ್‌; ಸೈಬರ್‌ ವಂಚಕರ ಮೊಸಳೆ ಕಣ್ಣೀರಿಗೆ ಕರಗದಿರಿ

Cyber Crime Awareness: ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಿಗಳು ಬೇರೆ-ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಹಣಕ್ಕಾಗಿ ವಂಚಕರು ಹೊಸ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಎಸ್ಎಂಎಸ್ ಸಂದೇಶವೂ ಒಂದು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

ಮೊಬೈಲ್‍ಗೆ ಸಂದೇಶ ಕಳುಹಿಸಿ ಈ ರೀತಿ ಹಣ ಯಾಮಾರಿಸ್ತಾರೆ ಸೈಬರ್ ವಂಚಕರು
ಮೊಬೈಲ್‍ಗೆ ಸಂದೇಶ ಕಳುಹಿಸಿ ಈ ರೀತಿ ಹಣ ಯಾಮಾರಿಸ್ತಾರೆ ಸೈಬರ್ ವಂಚಕರು (Canva)

ಇತ್ತೀಚಿನ ವರ್ಷಗಳಲ್ಲಿ ಸೈಬರ್ ಕ್ರೈಮ್ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು ತೀವ್ರ ಕಳವಳಕಾರಿಯಾಗಿದೆ. ತಂತ್ರಜ್ಞಾನ ಮುಂದುವರೆದಂತೆ ಸೈಬರ್ ಅಪರಾಧಿಗಳು ಬೇರೆ-ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಾ ಅಮಾಯಕರಿಗೆ ಮೋಸ ಮಾಡುತ್ತಿದ್ದಾರೆ. ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿನಂತೆ ಎಷ್ಟೇ ಜಾಗೃತಿ ವಹಿಸಿದ್ರೂ ಕೆಲವೊಮ್ಮೆ ಕಣ್ತಪ್ಪಿನಿಂದ ಹಲವಾರು ಮಂದಿ ಹಣ ಕಳೆದುಕೊಳ್ಳುತ್ತಿದ್ದಾರೆ. ಹಣಕ್ಕಾಗಿ ವಂಚಕರು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುತ್ತಿದ್ದಾರೆ. ಇವುಗಳಲ್ಲಿ ಎಸ್ಎಂಎಸ್ ಸಂದೇಶವೂ ಒಂದು.

ಕೆಲವರ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷ-ಲಕ್ಷ ಹಣ ಮಾಯವಾಗಿರುವ ಬಗ್ಗೆ ನೀವು ಕೇಳಿರಬಹುದು. ಮೊಬೈಲ್‍ಗೆ ಒಟಿಪಿ ಕಳುಹಿಸಿ ಅಥವಾ ಯಾವುದಾದರೊಂದು ಲಿಂಕ್ ಕಳುಹಿಸಿ ಬ್ಯಾಂಕ್ ಅಧಿಕಾರಿಯಂತೆ ಅಥವಾ ಪೊಲೀಸರಂತೆ ಮಾತನಾಡಿ ಯಾಮಾರಿಸುತ್ತಾರೆ. ಆದರೆ, ಇನ್ನೂ ಕೆಲವು ಪ್ರಕರಣಗಳಲ್ಲಿ ಸಾವಿರ ರೂಪಾಯಿ ವಂಚನೆಯೂ ನಡೆಯುತ್ತದೆ. ಪೊಲೀಸ್ ದೂರು ನೀಡುವುದಿಲ್ಲ ಎಂಬ ದೃಢ ನಂಬಿಕೆಯಿಂದ ಈ ರೀತಿಯ ವಂಚನೆಗಳು ಇಂದು ಹೆಚ್ಚಾಗುತ್ತಿವೆ.

ಎಸ್ಎಂಎಸ್ ಸಂದೇಶ

ಮೊಬೈಲ್ ಸಂಖ್ಯೆಗೆ ಬ್ಯಾಂಕ್ ಖಾತೆಯ ಹಣ ಜಮಾವಣೆಯಾಗಿದೆ ಎಂಬ ಸಂದೇಶವನ್ನು ಕಳುಹಿಸಿ, ತಕ್ಷಣ ಫೋನ್ ಮಾಡುತ್ತಾರೆ. ಕ್ಷಮಿಸಿ, ನಿಮ್ಮ ಖಾತೆಗೆ 2,000 ರೂಪಾಯಿ ಹಣ ಜಮಾ ಆಗಿದೆ, ಅಚಾತುರ್ಯದಿಂದ ಹಣ ಜಮಾವಣೆಯಾಗಿದ್ದು, ತಕ್ಷಣ ತನಗೆ ಕಳುಹಿಸಿ ಎಂದು ಅಳುವ ಧ್ವನಿಯಲ್ಲಿ ಮಾತನಾಡುತ್ತಾರೆ. ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಈ ರೀತಿಯ ಅನುಭವವಾಗಿದೆ. ಕೆಲಸದ ಒತ್ತಡದಲ್ಲಿದ್ದ ಆಕೆ, 2,000 ರೂಪಾಯಿ ಜಮೆ ಆಗಿರುವ ಸಂದೇಶ ಬಂದಿರುವುದನ್ನು ನೋಡಿ, ಕೂಡಲೇ ಆತನ ಖಾತೆಗೆ ಹಣ ಹಾಕಿದ್ದಾರೆ.

ಆದರೆ, ಸ್ವಲ್ಪ ಸಮಯದ ನಂತರ ಆಕೆಗೆ ಮನವರಿಕೆಯಾಗಿದೆ. ಕೂಡಲೇ ಸಂದೇಶವನ್ನು ನೋಡಿದಾಗ ಅದು ವಂಚಕನ ವೈಯಕ್ತಿಕ ಮೊಬೈಲ್ ಸಂಖ್ಯೆಯಿಂದ ಮಾಡಲಾಗಿದ್ದ ಸಂದೇಶವಾಗಿತ್ತು. ಮತ್ತೆ ಆತನಿಗೆ ಕರೆ ಮಾಡಿದರೆ, ಯಾರು ನೀವು ಎಂದು ಮಾತಾನಾಡಿದ್ದಾನೆ. ಸಿಟ್ಟಿಗೆದ್ದು ಬೈದರೆ ಫೋನ್ ಕರೆ ಸ್ವೀಕರಿಸುವುದಿಲ್ಲ. ಈ ಬಗ್ಗೆ ಸೈಬರ್ ಕ್ರೈಮ್‍ಗೆ ಆ ಮಹಿಳೆ ದೂರು ನೀಡಿದ್ದಾರೆ, ಇನ್ನೂ ಆತನ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆಯೇ ಎಂಬುದು ತಿಳಿದಿಲ್ಲ. 2,000 ರೂಪಾಯಿ ಒಂದು ಚಿಕ್ಕ ಮೊತ್ತವಾಗಿರಬಹುದು. ಆದರೆ, ಎಷ್ಟು ಜನರಿಗೆ ಆತ ಈ ರೀತಿ ಮೋಸ ಮಾಡುತ್ತಿರಬಹುದು?

ಒಟ್ಟಿನಲ್ಲಿ ಸೈಬರ್ ಕ್ರೈಮ್ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ವಂಚಕರು ಬೇರೆ-ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅಮಾಯಕರೇ ಇವರ ಗುರಿಯಾಗಿದ್ದು, ಕೊಂಚ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಮಾಯವಾಗಬಹುದು. ಹೀಗಾಗಿ ಬಹಳ ಎಚ್ಚರಿಕೆ ವಹಿಸುವುದು ಅಗತ್ಯ. ನಿಮ್ಮ ಮೊಬೈಲ್‍ಗೆ ಯಾವುದೇ ಅನಾಮಿಕ ಸಂಖ್ಯೆಯಿಂದ ಕರೆ ಅಥವಾ ಸಂದೇಶ ಬಂದರೆ ಕೂಡಲೇ ಸ್ಪಂದಿಸಬೇಡಿ. ಪರಿಶೀಲಿಸಿಯೇ ಮುಂದುವರೆಯುವುದು ಸೂಕ್ತ. ಅಯ್ಯೋ, ಪಾಪ ಎಂದುಕೊಂಡು ನೀವು ಹಣ ಹಾಕಿದ್ರೆ ತಲೆ ಮೇಲೆ ಕೈಹೊತ್ತು ಕೂರಬೇಕಾದ ಪರಿಸ್ಥಿತಿ ಬರುತ್ತದೆ. ಯಾವುದೇ ಲಿಂಕ್, ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಾಗೆಯೇ ಎಸ್ಎಂಎಸ್ ಸಂದೇಶ ಬ್ಯಾಂಕ್‍ನವರೇ ಕಳುಹಿಸಿದ್ದಾ ಎಂಬುದನ್ನು ಪರಾಮರ್ಶಿಸಿ.

ಇಂತಹ ವಂಚನೆಯ ಸೂಚನೆ ದೊರಕಿದ ತಕ್ಷಣ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ಅಥವಾ sancharsaathi.gov.in/sfc ವೆಬ್‌ಸೈಟ್‌ನಲ್ಲಿ ದೂರು ದಾಖಲಿಸಿ.

Whats_app_banner