Cyber Crime: ಅಧಿಕ ಹಣ ನೀಡುವ ಆಮಿಷದ ಟಾಸ್ಕ್ ಲಿಂಕ್ ಒತ್ತಿ ಸೈಬರ್ ವಂಚನೆಗೆ ಸಿಲುಕಿ ಮೈಸೂರಿನ ವೈದ್ಯರು 30 ಲಕ್ಷ ರೂ ಕಳೆದುಕೊಂಡರು!
Cyber Crime: ಮೈಸೂರು ಮೂಲದ ವೈದ್ಯರೊಬ್ಬರು ಅಧಿಕ ಹಣ ಸಿಗುವ ಆಸೆಯಿಂದ ಟಾಸ್ಕ್‌ಫ್ರಾಡ್‌ಗೆ ಸಿಲುಕಿ 30 ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾರೆ.

ಮೈಸೂರು: ಅವರಿಗೆ ಯೂಟ್ಯೂಬ್‌ನಲ್ಲಿ ಬರುವ ವಿವಿಧ ಕಾರ್ಯಕ್ರಮಗಳನ್ನು ನೋಡುವಾಸೆ. ನಿತ್ಯ ಒಂದಿಲ್ಲೊಂದು ಡಿಜಿಟಲ್ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದರು. ಯೂಟ್ಯೂಬ್‌ನಲ್ಲಿ ಕಾರ್ಯಕ್ರಮ ವೀಕ್ಷಿಸುವಾಗ ಟಾಸ್ಕ್ ಒಂದಕ್ಕೆ ಸಂಬಂಧಿಸಿದ ಲಿಂಕ್ ಒಂದು ಬಂದಿತ್ತು. ಅದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಾಗಿತ್ತು. ಕುತೂಹಲದಿಂದ ಲಿಂಕ್ ಅನ್ನು ಒತ್ತಿದರು. ಅಲ್ಲಿಂದ ಅವರಿಗೆ ಹಲವು ಸಂದೇಶಗಳು ಬರತೊಡಗಿದವು. ನೀವು ಈ ಆಟ ಆಡಿದರೆ ಲಕ್ಷಗಟ್ಟಲೆ ಗೆಲ್ಲಬಹುದು, ನಿಮಗೆ ಇಷ್ಟು ಬಹುಮಾನ ಸಿಗಲಿದೆ. ಯಾವುದೇ ಹಣ ವೆಚ್ಚ ಮಾಡದೆ ಹಣ ಗಳಿಸಿ ಎನ್ನುವ ಸಂದೇಶವನ್ನು ನೀಡಲಾಯಿತು. ಹಣ ಸಿಗುವ ಆಸೆಯಲ್ಲಿ ಅವರು ಇನ್ನಷ್ಟು ವಿವರಗಳನ್ನೂ ನೀಡಿ ಕೊನೆಗೆ ಸುಮಾರು 30 ಲಕ್ಷ ರೂ.ಗಳನ್ನು ತಾವೇ ಕಳೆದುಕೊಂಡರು.
ಮೈಸೂರಿನಲ್ಲಿ ವೈದ್ಯರಾಗಿರುವ ಡಾ.ಪಿ.ಎಸ್.ಮೂರ್ತಿ ಅವರು ಯೂಟ್ಯೂಬ್‌ನಲ್ಲಿ ಬಂದ ಮಾಹಿತಿ ಆಧರಿಸಿದ ಮೆಸೇಜ್ ಫಾಲೋ ಮಾಡಿ 29.71 ಲಕ್ಷ ಹಣ ಕಳೆದುಕೊಂಡವರು. ಈ ಕುರಿತು ಮೈಸೂರಿನ ಸೆನ್ ಠಾಣೆಯಲ್ಲಿ ಸೈಬರ್ ವಂಚನೆ ಪ್ರಕರಣ ದಾಖಲಾಗಿದೆ.
ಆಗಿದ್ದಾದರೂ ಏನು?
ಡಾ.ಮೂರ್ತಿ ಅವರಿಗೆ ಡಿಜಿಟಲ್‌ನಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಆಸಕ್ತಿ. ಅದರಲ್ಲೂ ಯೂಟ್ಯೂಬ್‌ನಲ್ಲಿ ಬರುವ ಕಾರ್ಯಕ್ರಮಗಳು, ಚಟುವಟಿಕೆಗಳನ್ನು ನೋಡುತ್ತಲೇ ಇರುತ್ತಾರೆ. ಅದರಲ್ಲೂ ತಮಗೆ ಆಸಕ್ತಿದಾಯಕ ಎನ್ನಿಸುವ ಡಿಜಿಟಲ್ ಚಟುವಟಿಕೆಯಲ್ಲಿ ಕೆಲ ವರ್ಷದಿಂದ ಅವರು ಭಾಗಿಯಾಗುತ್ತಾರೆ. ಕೆಲ ದಿನಗಳ ಹಿಂದೆ ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಮಾಹಿತಿಯೊಂದು ಬಂದಿದೆ. ಕುತೂಹಲಕಾರಿಯಾಗಿದ್ದ ಮಾಹಿತಿ ಆಧರಿಸಿ ಆನಂತರ ಬಂದ ಲಿಂಕ್ ಅನ್ನು ಅವರು ಒತ್ತಿದ್ದಾರೆ.
ಸಹಜವಾಗಿಯೇ ಇದನ್ನು ಓಪನ್ ಮಾಡಿದಾಗ ಇಂಟರ್‌ನ್ಯಾಷನಲ್ ಕಾಂಪಿಟೇಷನ್‌ನಲ್ಲಿ ಭಾಗವಹಿಸಲು ಇಚ್ಛೆ ಇದೆಯಾ ಎಂದು ಅತ್ತ ಕಡೆಯಿಂದ ಸಂದೇಶ ಬಂದಿದೆ. ಹಣ ಗಳಿಸಬಹುದು. ಇಷ್ಟು ಹಣ ನಿಮಗೆ ಸಿಗಲಿದೆ ಎನ್ನುವ ಮಾಹಿತಿಯನ್ನು ಸಂದೇಶ ರೂಪದಲ್ಲಿಯೇ ಅವರಿಗೆ ನೀಡಲಾಗಿದೆ.
ಇದಕ್ಕೆ ಡಾ.ಮೂರ್ತಿ ಒಪ್ಪಿಕೊಂಡು ಅವರು ಹೇಳಿದಂತೆ ಮಾಹಿತಿ ನೀಡಿದ್ದಾರೆ. ಇದಕ್ಕಾಗಿ ಕೆವೈಸಿ ಅಪಡೇಟ್ ಮಾಡಿಕೊಡಬೇಕು ಎಂದು ಕೇಳಿದಾಗ ಅದನ್ನೂ ಅವರು ಮಾಡಿಕೊಟ್ಟಿದ್ದಾರೆ. ಆನಂತರ ಆ್ಯಪ್ ಒಂದನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಇದರಿಂದ ಎಲ್ಲಾ ಚಟುವಟಿಕೆಗಳು ಸುಲಭವಾಗಲಿವೆ ಎನ್ನುವ ಸಂದೇಶ ರವಾನಿಸಿದ್ದು, ಅದರಂತೆ ಡೌನ್‌ಲೋಡ್ ಮಾಡಿಕೊಂಡು ಆಟವನ್ನೂ ಅವರು ಶುರು ಮಾಡಿದ್ದಾರೆ.
ಆ್ಯಪ್ ಡೌನ್‌ಲೋಡ್
ಈ ಆ್ಯಪ್ ಮೂಲಕ ಆಟವಾಡಲು ಸ್ವಲ್ಪ ಹಣವನ್ನು ನೀವು ಹೂಡಬೇಕಾಗುತ್ತದೆ. ಇದರಿಂದ ನಿಮಗೆ ಭಾರಿ ಮೊತ್ತ ಬರಲಿದೆ. ಇದಕ್ಕಾಗಿ ಐಪಿಒ ಅಕೌಂಟ್ ಮಾಡಿಕೊಳ್ಳಬೇಕು ಎಂದು ನಂಬಿಸಿದ್ದಾರೆ. ನಂತರ 26 ಲಕ್ಷ ಮೊತ್ತದ ಟಾಸ್ಕ್ ನೀಡಿ ಕಂಪ್ಲೀಟ್ ಮಾಡುವಂತೆ ತಿಳಿಸಿದ್ದಾರೆ. ಅದರಂತೆ ಡಾ.ಮೂರ್ತಿ ಅವರು ನಂಬಿ ಎಲ್ಲಾ ಮಾಹಿತಿ ಒದಗಿಸಿ ಟಾಸ್ಕ್ ಕೂಡ ಮುಗಿಸಿದ್ದಾರೆ.
ಆಗ ಹಣ ಹಾಕಲಾಗಿದೆ ನೋಡಿಕೊಳ್ಳಿ ಎಂದು ನಂಬಿಸಿದ್ದಾರೆ. ನನ್ನ ಖಾತೆಯಲ್ಲಿ ಹಣ ಇಲ್ಲ ಎಂದಾಗ ನಿಮ್ಮ ಖಾತೆಯಲ್ಲಿ 5 ಲಕ್ಷ ರೂ. ಇದೆ. ಅಲ್ಲದೇ ಸಪೋರ್ಟಿಂಗ್ ಫಂಡ್ ಎಂದು 10 ಲಕ್ಷ ರೂ.ಗಳನ್ನು ಕಂಪನಿಯಿಂದ ನೀಡಲಾಗುತ್ತದೆ ಎಂದು ನಂಬಿಸಿದ್ದಾರೆ. ಈ ವೇಳೆ ಖಾತೆಯಲ್ಲಿ ಲಾಭಾಂಶದ ಮೊತ್ತ ಬಂದಿದ್ದನ್ನು ಡಾ.ಮೂರ್ತಿ ಗಮನಿಸಿದ್ದಾರೆ.
ಕೂಡಿಟ್ಟ ಹಣ ಮಾಯ
ಹಣ ವಿತ್ ಡ್ರಾ ಮಾಡಲು ಮುಂದಾದಾಗ ಸಪೋರ್ಟಿಂಗ್ ಫಂಡ್ ಹಿಂದಿರುಗಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ 3.06 ಲಕ್ಷ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಿದ್ದಾರೆ. ಹೀಗೆ ವಂಚಕರ ಮಾತು ನಂಬಿ ಮೂರ್ತಿ ಅವರು ಹಂತ ಹಂತಗಳಲ್ಲಿ 29,71.442 ರೂಪಾಯಿಗಳನ್ನು ಅವರು ಸೂಚಿಸಿದ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಕೋಟಿಗಟ್ಟಲೆ ಹಣ ಬರಬಹುದು ಎಂದು ಕಾದು ಅವರೊಂದಿಗೆ ಸಂಪರ್ಕ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕೊನೆಗೆ ತಾವು ಮೋಸ ಹೋಗಿರುವುದಾಗಿ ಖಚಿತವಾಗಿದೆ. ಎಲ್ಲಾ ಮಾಹಿತಿ ಆಧರಿಸಿ ಈಗ ಮೈಸೂರಿನ ಸೆನ್ ಠಾಣೆಗೆ ದೂರನ್ನು ದಾಖಲಿಸಲಾಗಿದೆ.
ಡಾ.ಮೂರ್ತಿ ಅವರು ನೀಡಿರುವ ದೂರು ಆಧರಿಸಿ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಐಪಿಒ ವಿಳಾಸ ಮಾಹಿತಿ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಯಾವ ಬ್ಯಾಂಕ್ ಖಾತೆಗೆ ಹಣ ಹೋಗಿದೆ. ಎಲ್ಲಿಂದ ಅಪರಿಚಿತರು ವಹಿವಾಟು ನಡೆಸಿದ್ದಾರೆ. ಹಣ ವರ್ಗಾವಣೆಯಾಗಿರುವ ಮಾರ್ಗ ಆಧರಿಸಿ ತನಿಖೆ ಚುರುಕುಗೊಳಿಸಲಾಗಿದೆ.
ಇದನ್ನು ಟಾಸ್ಕ್ ಫ್ರಾಡ್ ಎಂದು ಕರೆಯಲಾಗುತ್ತದೆ. ಆಟವಾಡಿ ಹೆಚ್ಚಿನ ಹಣ ಗೆಲ್ಲಿ ಎಂದು ಆರಂಭಿಸಿ ಆನಂತರ ಮೋಸ ಮಾಡುವ ಮಾರ್ಗವಿದು. ಕೆವೈಸಿಯಂತಹ ಮಾಹಿತಿ ಕೊಡುವಾಗ ಎಚ್ಚರ ಅತ್ಯಗತ್ಯ ಎನ್ನುತ್ತಾರೆ ಸೈಬರ್ ಅಪರಾಧ ವಿಭಾಗದ ಪೊಲೀಸ್ ತಜ್ಞರು.
