ಸೈಬರ್ ಅಪರಾಧದ ಜಾಗೃತಿಗೆ ರೀಲ್ಸ್ ಮಾಡಿ, ಭಾರೀ ಬಹುಮಾನ ಗೆಲ್ಲಿರಿ: ಚಿತ್ರದುರ್ಗ ಸೆನ್ ಪೊಲೀಸರ ವಿನೂತನ ಯತ್ನ
Cyber Fraud Awareness reels: ಸೈಬರ್ ಅಪರಾಧಗಳ ಕುರಿತು ಜಾಗೃತಿ ಮೂಡಿಸುವ ಪ್ರಯತ್ನದ ಭಾಗವಾಗಿ ಚಿತ್ರದುರ್ಗ ಪೊಲೀಸರು ರೀಲ್ಸ್ ಮಾಡುವ ಸ್ಪರ್ಧೆ ಆಯೋಜಿಸಿದ್ದಾರೆ.

Cyber Fraud Awareness reels: ಈಗಂತೂ ಸೈಬರ್ ಅಪರಾಧದ ಪ್ರಕರಣ ಎಲ್ಲೆಡೆ ವರದಿಯಾಗುತ್ತಿದೆ. ಅದೂ ನಗರ ಪ್ರದೇಶದಿಂದ ಗ್ರಾಮಾಂತರ ಪ್ರದೇಶದವರೆಗೂ ಸೈಬರ್ ವಂಚನೆಗಳು ಬೆಳಕಿಗೆ ಬರುತ್ತಿದೆ. ಸೈಬರ್ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಿಂದಲೂ ನಿರಂತರ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಭಾಗವಾಗಿಯೇ ಕೋಟೆ ನಾಡು ಚಿತ್ರದುರ್ಗದ ಸೈಬರ್ ವಂಚನೆ, ಆರ್ಥಿಕ ಅಪರಾಧಗಳು ಹಾಗೂ ನಾರ್ಕೋಟಿಕ್ಸ್ ( ಸೆನ್) ಪೊಲೀಸ್ ಘಟಕದಿಂದ ವಿನೂತನ ಪ್ರಯತ್ನವೊಂದನ್ನು ಮಾಡಲಾಗಿದೆ. ಸೈಬರ್ ವಂಚನೆಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವಕರು ಸೇರಿದಂತೆ ಎಲ್ಲಾ ವಯೋಮಾನದವರು ರೀಲ್ಸ್‌ಗಳನ್ನು ಮಾಡಿ ಕಳುಹಿಸಬಹುದು. ವಿಜೇತರಿಗೆ ವಿವಿಧ ಬಹುಮಾನಗಳನ್ನು ನೀಡಲಾಗುತ್ತದೆ.
ಈಗ ಎಲ್ಲೆಡೆ ರೀಲ್ಸ್ ಅಭಿರುಚಿ ಬೆಳೆದಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ರೀಲ್ಸ್‌ನಿಂದಲೂ ಜಾಗೃತಿ ನೀಡುವ ಪ್ರಯತ್ನಗಳು ನಡೆದಿದೆ. ಈ ಕಾರಣದಿಂದ ಚಿತ್ರದುರ್ಗ ಪೊಲೀಸರು ಇಂತಹದೊಂದು ವಿಭಿನ್ನ ಪ್ರಯತ್ನ ನಡೆಸುತ್ತಿದ್ದಾರೆ.
ಡಿಜಿಟಲ್ ಅರೆಸ್ಟ್, ಹೂಡಿಕೆ ವಂಚನೆ, ಆನ್‍ಲೈನ್ ಉದ್ಯೋಗ ವಂಚನೆ, ಮೂಲ್ ಅಕೌಂಟ್ಸ್, ಡ್ರಗ್ ಜಾಗೃತಿ, ರಿವೇಜ್ ಪೋರ್ನ್, ಆನ್‍ಲೈನ್ ಸಾಲ ವಂಚನೆ ಸಹಿತ ಹಲವು ವಿಷಯಗಳ ಕುರಿತು 90 ಸೆಕೆಂಡ್‍ಗಳಿಗೆ ಮೀರದಂತೆ ರೀಲ್ಸ್ ಮಾಡಿ ಕಳುಹಿಸಬಹುದು.ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಆಸಕ್ತಿಯುಳ್ಳವರು ಇದರಲ್ಲಿ ಭಾಗವಹಿಸಲು ಅವಕಾಶವಿದೆ. ವಿಷಯಕ್ಕೆ ಪೂರಕವಾಗಿ, ಆಸಕ್ತಿದಾಯವಾದ ರೀಲ್ಸ್‌ಗಳಿಗೆ ಬಹುಮಾನವನ್ನು ನೀಡಲಾಗುತ್ತದೆ. ಅಲ್ಲದೇ ಅತ್ಯುತ್ತಮ ರಿಲ್ಸ್ ಗಳನ್ನು ಜಿಲ್ಲಾ ಪೊಲೀಸ್ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗುವುದು.
ರೀಲ್ಸ್ ಕನ್ನಡ ಭಾಷೆಯಲ್ಲಿ ಇರಬೇಕು. ಸಾಂದರ್ಭಿಕವಾಗಿ ಇಂಗ್ಲೀಷ್ ಭಾಷೆಯನ್ನು ಬಳಸಬಹುದು. ಆಸಕ್ತಿಯುಳ್ಳವರು, ರೀಲ್ಸ್ ನಿರ್ದೇಶಿಸಿ, ನಟಿಸಿ, ಪ್ರಕಟಿಸುವ ಹಕ್ಕಿನೊಂದಿಗೆ ಮೊಬೈಲ್ ಸಂಖ್ಯೆ 9480803173 ಕಳುಹಿಸಬೇಕು. ರೀಲ್ಸ್ ಕಳುಹಿಸಲು 2025 ರ ಜನವರಿ 25 ಕಡೆಯ ದಿನವಾಗಿದೆ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆ ಸೆನ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ವೆಂಕಟೇಶ್.
ಪ್ರಥಮ ಸ್ಥಾನ ಪಡೆದ ರೀಲ್ಸ್‌ಗೆ ರೂ.10,000/-, ದ್ವಿತೀಯ ಸ್ಥಾನ ಪಡೆದ ರೀಲ್ಸ್‌ಗೆ ರೂ.5,000/- ಹಾಗೂ ತೃತೀಯ ಸ್ಥಾನ ಪಡೆದ ರೀಲ್ಸ್‌ಗೆ ರೂ.2,000/- ನಗದು ಸೇರಿದಂತೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು. ಇದರೊಂದಿಗೆ 10 ಸಮಾಧಾನಕರ ಬಹುಮಾನ ನೀಡುವುದಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರೀಲ್ಸ್ ಮಾಡುವ ವಿಚಾರದಲ್ಲಿ ಅನುಮಾನಗಳು ಇಲ್ಲವೇ ಹೆಚ್ಚಿನ ಮಾಹಿತಿಗೆ 9480803173 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಲಾಗಿದೆ.
