ಬ್ಯಾಂಕ್‌ನಿಂದ ಶಿಕ್ಷಕರೊಬ್ಬರ ಹಣ ಕಡಿತವಾದರೂ ಕ್ರಮ ಕೈಗೊಳ್ಳದ ಕೆನರಾ ಬ್ಯಾಂಕ್‌ಗೆ ಗ್ರಾಹಕ ಪರಿಹಾರ ಆಯೋಗ ದಂಡ, ಕಳೆದುಕೊಂಡ ಹಣ ವಾಪಸಿಗೆ ಸೂಚನೆ
ಕೊಪ್ಪಳದಲ್ಲಿ ಬ್ಯಾಂಕ್ ಖಾತೆಯಿಂದ ಒಂದು ಲಕ್ಷ ಕಡಿತಗೊಂಡರೂ ಹಣ ವಾಪಾಸ್ ಕೊಡಿಸಲು ಕ್ರಮ ಕೈಗೊಳ್ಳದ ಕೆನರಾ ಬ್ಯಾಂಕ್‌ಗೆ ಗ್ರಾಹಕರ ಪರಿಹಾರ ಆಯೋಗ ದಂಡ ವಿಧಿಸಿ ಕಡಿತವಾದ ಹಣ ನೀಡುವಂತೆ ಆದೇಶಿಸಿದೆ.

ಕೊಪ್ಪಳ: ತಮ್ಮ ಬ್ಯಾಂಕ್‌ನಿಂದ ತಲಾ . 50,000 ರೂ ಗಳಂತೆ ಎರಡು ಬಾರಿ ಒಂದು ಲಕ್ಷ ರೂ. ಹಣ ಕಡಿತವಾದ ತಕ್ಷಣವೇ ಬ್ಯಾಂಕ್‌ಗೆ ಆಗಮಿಸಿ ದೂರು ನೀಡಿದ ಖಾತೆದಾರರ ಸುರಕ್ಷತೆ ಕಾಪಾಡುವಲ್ಲಿ ವಿಫಲವಾದ ಕೆನರಾ ಬ್ಯಾಂಕ್‌ಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. ಅಲ್ಲದೇ ಅವರು ಕಳೆದುಕೊಂಡು ಒಂದು ಲಕ್ಷ ರೂ. ಹಣವನ್ನು ಬ್ಯಾಂಕ್‌ನಿಂದಲೇ ಪಾವತಿಸಿಕೊಡುವಂತೆಯೂ ಆದೇಶ ನೀಡಿದೆ. ಒಂದೂವರೆ ತಿಂಗಳ ಒಳಗೆ ಹಣ ಕಳೆದುಕೊಂಡ ಗ್ರಾಹಕರಿಗೆ ಪೂರ್ತಿ ಹಣವನ್ನು ಪಾವತಿ ಮಾಡಬೇಕು. ಇಂತಹ ಪ್ರಕರಣಗಳಲ್ಲಿ ಬ್ಯಾಂಕ್‌ಗಳಿಂದ ಹಣ ಕಳೆದುಕೊಂಡವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡುವಂತೆಯೂ ಸೂಚಿಸಲಾಗಿದೆ.
ಕೊಪ್ಪಳ ಜಿಲ್ಲೆಯ ಅಳವಂಡಿ ಪಟ್ಟಣದ ನಿವಾಸಿಯಾಗಿರುವ ಶಿಕ್ಷಕ ವೀರಣ್ಣ ನಾಗಪ್ಪ ಮಟ್ಟಿ ಎನ್ನುವವರು ತಮ್ಮ ಕೊಪ್ಪಳ ಜಿಲ್ಲೆಯ ಬೆಟಗೇರಿ ಕೆನರಾ ಶಾಖೆಯಲ್ಲಿ ಖಾತೆ ಹೊಂದಿದ್ದಾರೆ. ಕೆಲ ದಿನಗಳ ಹಿಂದೆ ಅವರ ಖಾತೆಯಿಂದ 50,000 ರೂ. ಕಡಿತವಾಗಿತ್ತು. ಈ ಕುರಿತು ಮೊಬೈಲ್ ಸಂದೇಶವೂ ಅವರಿಗೆ ಬಂದಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ಮತ್ತೆ 50,000 ರೂ. ಅದೇ ಖಾತೆಯಿಂದ ಕಡಿತವಾಗಿತ್ತು. ಇದಕ್ಕೂ ಮೊಬೈಲ್ ಸಂದೇಶ ಬಂದಿತ್ತು. ಕಲವೇ ಕ್ಷಣದಲ್ಲಿ ಒಂದು ಲಕ್ಷ ರೂ. ಏಕಾಏಕಿ ಕಡಿತಗೊಂಡ ಹಿನ್ನೆಲೆಯಲ್ಲಿ ಆತಂಕಗೊಂಡ ವೀರಣ್ಣ ಅವರು ಬೆಟಗೇರಿ ಶಾಖೆಗೆ ಕೂಡಲೇ ಕರೆ ಮಾಡಿ ಹಣ ಕಡಿತವಾದ ಮಾಹಿತಿ ನೀಡಿದ್ದರು. ಅಲ್ಲದೇ ಶಾಖೆಗೆ ಭೇಟಿ ನೀಡಿ ಲಿಖಿತ ದೂರು ನೀಡಿದ್ದರು. ಆದರೂ ಶಾಖೆಯಿಂದ ಯಾವುದೇ ಕ್ರಮ ಆಗಿರಲಿಲ್ಲ. ಯಾವ ರೀತಿ ಹಣ ಕಡಿತವಾಗಿದೆ ಎನ್ನುವ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸುತ್ತೇವೆ ಎನ್ನುವ ಉತ್ತರವನ್ನು ನೀಡಿದ್ದರು. ಇದರೊಟ್ಟಿಗೆ ಅಳವಂಡಿ ಪೋಲಿಸ್ ಠಾಣೆ ಹಾಗೂ ಕೊಪ್ಪಳದ ಸೈಬರ್ ಅಪರಾಧ ತಡೆ ವಿಭಾಗದ ಠಾಣೆಯಲ್ಲೂ ದೂರು ನೀಡಿದ್ದರು. ಅಲ್ಲಿಯೂ ತನಿಖೆ ನಡೆದಿದೆ.
ಬ್ಯಾಂಕ್‌ನಿಂದ ಸೂಕ್ತ ರೀತಿಯಲ್ಲಿ ಉತ್ತರ ಬಾರದೇ ಇದ್ದಾಗ ಕೊನೆಗೆ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ವೀರಣ್ಣ ದೂರು ನೀಡಿದ್ದರು
ತಮ್ಮ ಖಾತೆಯಿಂದ ರೂ. 50,000 ರಂತೆ ಎರಡು ಬಾರಿ ಒಟ್ಟು ರೂ. 1,00,000 ಗಳನ್ನು ಯಾವುದೇ ತರಹದ ಮಾಹಿತಿ ಇಲ್ಲದೆ ತನ್ನ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿದೆ. ನನ್ನ ಮೊಬೈಲ್‌ಗೆ ಹಣ ಕಡಿತಗೊಂಡ ಬಗ್ಗೆ ಸಂದೇಶ ಬಂದಿದೆ. ಮೋಬೈಲನಲ್ಲಿ ಸಂದೇಶ ನೋಡಿದ ತಕ್ಷಣವೇ ಕೆನರಾ ಬ್ಯಾಂಕಿಗೆ ಹೋಗಿ ತನ್ನ ಎಸ್.ಬಿ. ಖಾತೆಯಿಂದ ಅನಧಿಕೃತವಾಗಿ ಹಣ ಕಡಿತಗೊಂಡಿರುವ ಬಗ್ಗೆ ಮಾಹಿತಿಯನ್ನು ನೀಡಿದ್ದೇನೆ. ತಕ್ಷಣವೇ ತನ್ನ ಖಾತೆಯಲ್ಲಿ ಅನಧಿಕೃತವಾಗಿ ಹಣ ಕಡಿತವಾಗುವುದನ್ನು ತಡೆಹಿಡಿಯುವಂತೆ ಕೋರಿದೆ. ಅಲ್ಲದೇ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ತನಗೆ ಹಿಂತಿರುಗಿಸುವಂತೆ ಲಿಖಿತ ರೂಪದಲ್ಲಿ ಕೋರಿದ್ದೆ. ಇದರ ಜೊತೆಗೆ ಅಳವಂಡಿ ಪೋಲಿಸ್ ಠಾಣೆಗೆ ದೂರನ್ನು ನೀಡಿದ್ದೆ. ಬ್ಯಾಂಕಿನವರ ಸೂಚನೆಯಂತೆ ಸೈಬರ್ ಪೋಲಿಸ್ ರವರಿಗೂ ಸಹ ದೂರನ್ನು ನೀಡಿದ್ದೇನೆ. ಬ್ಯಾಂಕಿನವರು ನನ್ನ ಮನವಿಗೆ ಸ್ಪಂದಿಸದೇಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡಿರುವ ಹಣ ರೂ. 1,00,000 ಗಳನ್ನು ಮರಳಿಸದೇ ಇದ್ದುದರಿಂದ ಮಾನಸಿಕವಾಗಿ ನೊಂದಿದ್ದೇನೆ. ಬ್ಯಾಂಕ್ ವಿರುದ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು ವೀರಣ್ಣ.
ದೂರನ್ನು ದಾಖಲಿಸಿಕೊಂಡ ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಜಿ.ಇ.ಸೌಭಾಗ್ಯಲಕ್ಷ್ಮೀ ಹಾಗೂ ಸದಸ್ಯ ರಾಜು ಎನ್ ಮೇತ್ರಿ ಅವರು ಉಭಯ ಪಕ್ಷಗಾರರ ವಾದ ಪ್ರತಿವಾದಗಳನ್ನು ಆಲಿಸಿದ್ದರು.
ವೀರಣ್ಣ ಅವರಿಗೆ ಉಂಟಾದ ಸೇವಾ ನ್ಯೂನತೆಗಾಗಿ ಕೆನರಾ ಬ್ಯಾಂಕ್ ಶಾಖೆಯ ಅಧಿಕಾರಿಗೆ, ಆರ್‌ಬಿಐ ಮಾರ್ಗಸೂಚಿಗಳನ್ವಯ ದೂರುದಾರರ ಹೊಣೆಗಾರಿಕೆ ಇದ್ದಂತೆ ಕಾಣುತ್ತಿಲ್ಲ, ಯಾವುದೇ ವಹಿವಾಟು ನಡೆಸದೇ ಇದ್ದರೂ ಅವರ ಹಣ ಕಡಿತವಾಗಿದೆ. ಇದರಲ್ಲಿ ಬ್ಯಾಂಕ್‌ನವರಿಗೆ ಗ್ರಾಹಕರ ಹಿತ ರಕ್ಷಿಸುವ ಹೊಣೆಗಾರಿಕೆ ಹೆಚ್ಚಾಗಿದೆ.ಗ್ರಾಹಕರ ಖಾತೆಯಲ್ಲಿರುವ ಹಣವನ್ನು ಭದ್ರತೆಯಿಂದ ಕಾಪಾಡುವ ಹೊಣೆಗಾರಿಕೆ ಬ್ಯಾಂಕಿನವರದ್ದಾಗಿದ್ದು, ಅದನ್ನು ನಿರ್ವಹಿಸುವಲ್ಲಿ ವಿಫಲರಾಗಿ ಸೇವಾ ನ್ಯೂನತೆ ಎಸಗಿದ್ದರುವುದು ಕಂಡು ಬಂದಿದೆ. ದೂರುದಾರರ ಖಾತೆಯಿಂದ ಅನಧಿಕೃತವಾಗಿ ಕಡಿತಗೊಂಡ ಮೊತ್ತ ರೂ. 1,00,000 ಗಳನ್ನು ಪರಿಹಾರವಾಗಿ ನೀಡುವಂತೆ ಆಯೋಗದ ಅಧ್ಯಕ್ಷರು ಆದೇಶಿಸಿದ್ದಾರೆ. ದೂರುದಾರರಿಗೆ ಉಂಟಾದ ಮಾನಸಿಕ ಯಾತನೆಗಾಗಿ ರೂ. 10,000 ಗಳನ್ನು ಹಾಗೂ ದೂರಿನ ಖರ್ಚು ರೂ. 5,000 ಗಳನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸುವಂತೆ ಆದೇಶವನ್ನು ನೀಡಿದ್ದಾರೆ ಎನ್ನುವುದು ಕೊಪ್ಪಳ ಜಿಲ್ಲಾ ಗ್ರಾಹಕರ ಆಯೋಗದ ಸಹಾಯಕ ರಿಜಿಸ್ಟ್ರಾರ್ ಹಾಗೂ ಸಹಾಯಕ ಆಡಳಿತಾಧಿಕಾರಿ ನೀಡುವ ವಿವರಣೆ.
ಬ್ಯಾಂಕ್‌ನಿಂದ ಹೀಗೆ ಅನಧಿಕೃತವಾಗಿ ಹಣ ಕಡಿತವಾಗಿ ಈವರೆಗೂ ವಾಪಸ್ ಬಾರದೇ ಇದ್ದವರು ಗ್ರಾಹಕರ ವೇದಿಕೆಗಳಿಗೆ ದೂರು ನೀಡಬಹುದು ಎನ್ನುವ ಸೂಚನೆಯನ್ನು ನೀಡಲಾಗಿದೆ.
