ಫೆಂಗಲ್ ಚಂಡಮಾರುತ; ಬೆಂಗಳೂರಲ್ಲಿ ಕುಸಿದ ತಾಪಮಾನ, ಹನಿ ಮಳೆ, ನಾಳೆ ಭಾರಿ ಮಳೆ ಸಾಧ್ಯತೆ ಅಧಿಕಾರಿಗಳ ರಜೆ ರದ್ದುಗೊಳಿಸಿದ ಬಿಬಿಎಂಪಿ
Cyclone Fengal Effect: ಫೆಂಗಲ್ ಚಂಡಮಾರುತದ ಪರಿಣಾಮ ಬೆಂಗಳೂರಲ್ಲಿ ತಾಪಮಾನ ಕುಸಿದಿದೆ. ಶನಿವಾರ ರಾತ್ರಿಯೇ ಮಳೆ ಸುರಿಯುತ್ತಿದ್ದು, ಭಾನುವಾರ ಬೆಳ್ಳಂಬೆಳಗ್ಗೆ ಹನಿ ಮಳೆ ಕಾಡಿದೆ. ನಾಳೆ ಕೂಡ ಭಾರಿ ಮಳೆ ಸಾಧ್ಯತೆ ಇರುವಾ ಕಾರಣ, ಅಧಿಕಾರಿಗಳ ಭಾನುವಾರದ ರಜೆಯನ್ನು ಬಿಬಿಎಂಪಿ ರದ್ದುಗೊಳಿಸಿದ್ದು, ಮುಂಜಾಗ್ರತಾ ಕ್ರಮ ಜರುಗಿಸುವಂತೆ ಸೂಚಿಸಿದೆ.
ಬೆಂಗಳೂರು: ಬಂಗಾಳಕೊಲ್ಲಿಯಿಂದ ಹೊರಟ ಫೆಂಗಲ್ ಚಂಡಮಾರುತದ ಪ್ರಭಾವ ಕರ್ನಾಟಕದ ರಾಜಧಾನಿ ಬೆಂಗಳೂರಿನ ಮೇಲೂ ಆಗಿದ್ದು, ಇಂದು (ಡಿಸೆಂಬರ್ 1) ಬೆಳ್ಳಂಬೆಳಗ್ಗೆ ತಾಪಮಾನ ಕುಸಿದಿದ್ದು 20 ಡಿಗ್ರಿ ಸೆಲ್ಶಿಯಸ್‌ಗೂ ಕೆಳಕ್ಕೆ ಕುಸಿಯುವ ಸಾಧ್ಯತೆ ಕಂಡುಬಂದಿದೆ. ಕೆಲವೆಡೆ ಮುಂಜಾನೆ ಮಂಜು ಮತ್ತು ಚಳಿ ಅನುಭವಕ್ಕೆ ಬಂದರೆ, ಬೆಂಗಳೂರು ನಗರದಲ್ಲಿ ಹನಿ ಮಳೆ ಸುರಿಯುತ್ತಿರುವಾಗಲೇ ಅನೇಕರು ಹೊಸ ಚಿಗುರು ಮ್ಯಾರಥಾನ್‌ನಲ್ಲಿ ಭಾಗವಹಿಸಿದವರು. ಈಗಾಗಲೇ ಹವಾಮಾನ ಇಲಾಖೆ ಕೊಟ್ಟಿರುವ ಹವಾಮಾನ ಮುನ್ಸೂಚನೆ ಪ್ರಕಾರ, ಮುಂದಿನ ಎರಡು ದಿನಗಳ ಅವಧಿಯಲ್ಲಿ ಕನಿಷ್ಠ ತಾಪಮಾನ 20 -21 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಶಿಯಸ್ ಆಸುಪಾಸಿನಲ್ಲಿರಲಿದೆ. ಚಾಮರಾಜನಗರ, ಮಂಡ್ಯ, ಮೈಸೂರಲ್ಲಿ ಇಂದು ಯೆಲ್ಲೋ ಅಲರ್ಟ್ ನೀಡಲಾಗಿದೆ. ನಾಳೆ ಬೆಂಗಳೂರಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ.
ಪೆಂಗಲ್ ಚಂಡಮಾರುತ ಪರಿಣಾಮ ಬೆಂಗಳೂರಲ್ಲಿ ಶನಿವಾರ ರಾತ್ರಿಯಿಂದಲೇ ಮಳೆ, ನಾಳೆ ಭಾರಿ ಮಳೆ ಸಾಧ್ಯತೆ
ಪೆಂಗಲ್ ಚಂಡಮಾರುತದ ಪರಿ ಣಾಮ ನಗರದಲ್ಲಿ ಶನಿವಾರ (ನವೆಂಬರ್ 30) ರಾತ್ರಿಯಿಂದಲೇ ಮಳೆ ಶುರುವಾಗಿದೆ. ಶನಿವಾರ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತಾದರೂ, ರಾತ್ರಿ ಸುರಿದ ಮಳೆಗೆ ವಾಹನ ಸವಾರರು ಪರದಾಡುಂತಾಯಿತು. ವಾರಾಂತ್ಯದ ಮೋಜು ಮಸ್ತಿಯ ಮೂಡ್‌ನಲ್ಲಿದ್ದ ಜನರು ಸ್ವಲ್ಪ ತೊಂದರೆ ಎದುರಿಸಿದರು. ಇಂದಿರಾನಗರ, ಹಲಸೂರು, ಎಂ.ಜಿ ರಸ್ತೆ, ರಿಚಂಡ್ ರಸ್ತೆ, ಶಾಂತಿನಗರ, ಲಾಲ್ ಬಾಗ್, ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಕಾರ್ಪೊರೇಷನ್ ಸುತ್ತಮುತ್ತ ಬಡಾವಣೆಗಳಲ್ಲಿ ಮಳೆ ಸುರಿದಿದೆ. ಭಾನುವಾರ (ಡಿಸೆಂಬರ್ 1) ಮಳೆ ಮುಂದುವರಿದಿದ್ದು, ತಾಪಮಾನ ಕುಸಿದಿದೆ. ಚಳಿ ಹೆಚ್ಚಳವಾಗಿದೆ. ನಾಳೆ (ಡಿಸೆಂಬರ್ 2) ಭಾರಿ ಮಳೆ ಬೀಳುವ ಸಾಧ್ಯತೆ ಇದ್ದು, ಬಿಬಿಎಂಪಿ ಅಧಿಕಾರಿಗಳ ರಜೆ ರದ್ದುಗೊಳಿಸಿರುವ ಆಡಳಿತ, ಮುಂಜಾಗ್ರತಾ ಕ್ರಮ ಅನುಸರಿಸುವಂತೆ ಸೂಚಿಸಿದೆ.
ಬಿಬಿಎಂಪಿ ಅಧಿಕಾರಿಗಳ ಭಾನುವಾರದ ರಜೆ ರದ್ದು, ಕೇಂದ್ರ ಸ್ಥಾನದಲ್ಲಿದ್ದು ಮುಂಜಾಗ್ರತಾ ಕ್ರಮಕ್ಕೆ ಸೂಚನೆ
ಬೆಂಗಳೂರಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಭಾನುವಾರ ನಗರದ ಕೇಂದ್ರ ಸ್ಥಾನದಲ್ಲಿದ್ದು, ಕಾರ್ಯನಿರ್ವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶಿಸಿದ್ದಾರೆ. ಹವಾಮಾನ ಇಲಾಖೆಯ ಮಳೆ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ತುಷಾರ್ ಗಿರಿನಾಥ್, ನಗರದಲ್ಲಿ ಇನ್ನು ಎರಡು ದಿನ ಮಳೆಯಾಗುವ ಸಾಧ್ಯತೆ ಕಾರಣ ರಜೆ ಇದ್ದರೂ ಭಾನುವಾರ ವಲಯ ಅಧಿಕಾರಿಗಳು, ಎಂಜಿನಿಯರ್‌ಗಳು ತಮ್ಮ ವ್ಯಾಪ್ತಿಯಲ್ಲಿ ಹಾಜರಿರಬೇಕು. ಸಾರ್ವಜನಿಕ ಅಹವಾಲುಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಗಾಳಿ ಮಳೆಯ ಸಾಧ್ಯತೆ ಕಾರಣ ಹಾಲಿ ಇರುವ 28 ಮರ ಕಟಾವು ತಂಡಗಳು ಸಿದ್ಧವಾಗಿರಬೇಕು. ಮರ ಹಾಗೂ ಮರದ ರೆಂಬೆ-ಕೊಂಬೆಗಳು ಬಿದ್ದ ದೂರುಗಳು ಬಂದ ಕೂಡಲೇ ತೆರವುಗೊಳಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಳೆ ನೀರು ನಿಲ್ಲುವ ಸ್ಥಳದಲ್ಲಿ ಯಂತ್ರೋಪಕರಣಗಳು, ಪಂಪ್‌ಗಳನ್ನು ಸಿದ್ಧವಾಗಿಟ್ಟುಕೊಂಡಿರಬೇಕು ಎಂದು ಸೂಚಿಸಿದರು.
ಚೆನ್ನೈನಿಂದ ಬೆಂಗಳೂರಿಗೆ ಬಂದ ವಿಮಾನಗಳು
ಫೆಂಗಲ್ ಚಂಡಮಾರುತದಿಂದ ಉಂಟಾದ ಬಲವಾದ ಗಾಳಿ ಮತ್ತು ಭಾರೀ ಮಳೆಯಿಂದಾಗಿ ಚೆನ್ನೈ ವಿಮಾನ ನಿಲ್ದಾಣವು 16 ಗಂಟೆಗಳ ಕಾಲ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಹೀಗಾಗಿ, ಐದು ಅಂತರಾಷ್ಟ್ರೀಯ ವಿಮಾನಗಳು ಸೇರಿ 16 ವಿಮಾನಗಳನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಕಳುಹಿಸಲಾಗಿದೆ. ರೈಲು ಸಂಚಾರದಲ್ಲೂ ವ್ಯತ್ಯಯವಾಗಿದೆ.