ಕನ್ನಡ ಸುದ್ದಿ  /  Karnataka  /  Dakshin Kannada News After Naxal Activity In Coastal Kodagu Area Before Lok Sabha Elections2024 Anf Teams Alert Hsm

Mangalore News: ಚುನಾವಣೆ ಘೋಷಣೆ ಬೆನ್ನಲ್ಲೇ ನಕ್ಸಲರು ಪ್ರತ್ಯಕ್ಷ; ಕರಾವಳಿ, ಕೊಡಗಲ್ಲಿ ಎ.ಎನ್.ಎಫ್. ಕಟ್ಟೆಚ್ಚರ

ಕರಾವಳಿ ಹಾಗೂ ಕೊಡಗು ಭಾಗದಲ್ಲಿ ನಕ್ಸಲರು ಸಕ್ರಿಯವಾಗಿದ್ದಾರೆ ಎನ್ನುವ ಮಾಹಿತಿ ಆಧರಿಸಿ ನಕ್ಸಲ್‌ ನಿಗ್ರಹ ದಳದ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದಾರೆ.(ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ನಕ್ಸಲ್‌ ಚಟುವಟಿಕೆಯ ಹಿನ್ನೆಲೆಯಲ್ಲಿ ಎಎನ್‌ಎಫ್‌ ತಂಡವು ಸಕ್ರಿಯವಾಗಿದೆ.
ನಕ್ಸಲ್‌ ಚಟುವಟಿಕೆಯ ಹಿನ್ನೆಲೆಯಲ್ಲಿ ಎಎನ್‌ಎಫ್‌ ತಂಡವು ಸಕ್ರಿಯವಾಗಿದೆ.

ಮಂಗಳೂರು: ಲೋಕಸಭೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ನಕ್ಸಲ್ ಚಟುವಟಿಕೆಗಳು ಮತ್ತೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿಭಾಗವಾದ ಪಶ್ಚಿಮ ಘಟ್ಟದ ತಪ್ಪಲಲ್ಲಿ ಕಾಣಿಸಿಕೊಂಡಿದೆ. ದಕ್ಷಿಣ ಕನ್ನಡ, ಮತ್ತು ಕೊಡಗು ಜಿಲ್ಲೆಯ ಮಧ್ಯೆ ಹಾಗೂ ಕೇರಳ ಗಡಿಭಾಗವೂ ಇರುವ ಜಾಗಗಳಲ್ಲಿ ದಟ್ಟ ಕಾನನವಿದ್ದು, ಇಲ್ಲಿ ಶಂಕಿತ ನಕ್ಸಲರು ಓಡಾಡುತ್ತಿರುವ ಅನುಮಾನಗಳು ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಕ್ಸಲ್‌ ನಿಗ್ರಹ ದಳವು ಮತ್ತಷ್ಟು ತನ್ನ ಚಟುವಟಿಕೆಯನ್ನು ಚುರುಕುಗೊಳಿಸಿದೆ. ನಕ್ಸಲರ ಜಾಡು ಇರುವ ಜಿಲ್ಲೆಗಳಲ್ಲಿ ಕೂಂಬಿಂಗ್‌ ಅನ್ನು ಹೆಚ್ಚಿಸಿದೆ.

ಮಡಿಕೇರಿ ತಾಲ್ಲೂಕಿನ ಕಡಮಕಲ್ಲು ಬಳಿಯ ಕೂಜಿಮಲೆ ಬಳಿಯ ರಬ್ಬರ್ ಎಸ್ಟೇಟ್‌ನಲ್ಲಿ 8 ಜನರಿದ್ದ ನಕ್ಸಲರ ತಂಡ ಕಾಣಿಸಿಕೊಂಡಿರುವುದರಿಂದ ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ಸುಬ್ರಹ್ಮಣ್ಯ ಸಮೀಪದ ಮಡಿಕೇರಿ ಠಾಣಾ ವ್ಯಾಪ್ತಿಯ ಕೂಜಿಮಲೆ ಭಾಗದಲ್ಲಿ ಶಂಕಿತ ನಕ್ಸಲರ ತಂಡ ಭೇಟಿ ನೀಡಿದ್ದಾರೆ ಎಂಬ ಮಾಹಿತಿಯಂತೆ ನಕ್ಸಲ್ ನಿಗ್ರಹ ದಳ (ಎಎನ್ಎಫ್) ತಂಡ ಕೂಂಬಿಂಗ್ ಆರಂಭಿಸಿದೆ‌. ಗುತ್ತಿಗಾರು, ಕೊಲ್ಲಮೊಗರು, ಕಲ್ಮಕಾರು ಪ್ರದೇಶದವರೆಗೂ ಕೂಜಿಮಲೆ ರಬ್ಬರ್ ಎಸ್ಟೇಟ್ ವ್ಯಾಪಿಸಿದೆ.

2012ರಲ್ಲಿ ಕಾಲೂರು ಗ್ರಾಮದಲ್ಲಿ ನಕ್ಸಲರು ಪ್ರತ್ಯಕ್ಷಗೊಂಡಿದ್ದರು. ನಂತರ, 2018ರ ಫೆಬ್ರವರಿ ತಿಂಗಳಲ್ಲಿ ಇದೇ ವ್ಯಾಪ್ತಿಯ ಸಂಪಾಜೆ ಗುಡ್ಡೆಗದ್ದೆಯಲ್ಲೂ ನಕ್ಸಲರು ಕಾಣಿಸಿಕೊಂಡಿದ್ದರು. ಚುನಾವಣೆಯ ಸಂದರ್ಭ ಇವರು ಗ್ರಾಮೀಣ ಪ್ರದೇಶದಲ್ಲಿರುವ, ಅರಣ್ಯ, ಬೆಟ್ಟಗುಡ್ಡ ಪ್ರದೇಶದಲ್ಲಿ ಹೊಂದಿಕೊಂಡಿರುವ ಮತದಾರರನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನೂ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಕಾರ್ಕಳದಿಂದ ಆಗಮಿಸಿದ ಎಎನ್ಎಫ್ ತಂಡ ಕೂಜಿಮಲೆ ಸಮೀಪದ ಬಾಳುಗೋಡಿನ ಉಪ್ಪುಕಳ, ಕೂಜಿಮಲೆ, ಕಡಮಕಲ್ಲು ಪ್ರದೇಶಕ್ಕೆ ತೆರಳಲು ಸಿದ್ಧತೆಯನ್ನು ಸೋಮವಾರ ನಡೆಸಿತು. ಕೂಜಿಮಲೆಯಿಂದ ಎಎನ್ಎಫ್ ತಂಡ ಕೂಂಬಿಂಗ್ ಆರಂಭಿಸಿದ್ದಾರೆ.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಎಎನ್‌ಎಫ್‌ ತಂಡಗಳಿಗೆ ಕಟ್ಟೆಚ್ಚರದಿಂದ ಕೆಲಸ ಮಾಡುವಂತೆ ಸೂಚಿಸಲಾಗಿದೆ. ಮಾಹಿತಿಯನ್ನು ಸಂಗ್ರಹಿಸುವ ಜತೆಗೆ ಅನುಮಾನಾಸ್ಪದ ವ್ಯಕ್ತಿಗಳಿದ್ದರೆ ವಿಚಾರಣೆ ನಡೆಸುವಂತೆಯೂ ಸೂಚನೆ ನೀಡಲಾಗಿದೆ ಎಂದು ಉನ್ನತ ಮೂಲಗಳು ಖಚಿತಪಡಿಸಿವೆ.

ಎಂಟು ಮಂದಿಯ ತಂಡ ಯಾರು?

ಶನಿವಾರ ಸಂಜೆ ಕೂಜಿಮಲೆಯ ಅಂಗಡಿಯೊಂದರಿಂದ ಎಂಟು ಮಂದಿಯ ತಂಡ ಭೇಟಿ ನೀಡಿ ನಗದು ನೀಡಿ ಸಾಮಗ್ರಿ ಪಡೆದುಕೊಂಡಿದ್ದು, ನಕ್ಸಲರೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಎಎನ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಂಕಿತ ತಂಡದಲ್ಲಿ ಆರು ಮಂದಿ ಪುರುಷರು ಹಾಗೂ ಇಬ್ಬರು ಮಹಿಳೆಯರು ಇದ್ದರು ಎನ್ನಲಾಗಿದ್ದು, ಸಶಸ್ತ್ರಧಾರಿಗಳಾಗಿದ್ದರು ಎಂದು ಮಾಹಿತಿ ಲಭ್ಯವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕೊಡಗು ಜಿಲ್ಲಾ ಗಡಿ ಭಾಗವಾದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿಯೂ ನಕ್ಸಲರು ಕಾಣಿಸಿಕೊಂಡಿದ್ದಾರೆ ಎಂಬ ಮಾಹಿತಿ ಸ್ಥಳೀಯವಾಗಿ ಹರಿದಾಡುತ್ತಿದೆ. ಸುಮಾರು 8 ಜನರಿರುವ ನಕ್ಸಲರ ತಂಡವೊಂದು ಶನಿವಾರ ಸಂಜೆ ಇಲ್ಲಿನ ಕೂಜಿಮಲೆ, ಕಲ್ಮುಕಾರು ಎಂಬಲ್ಲಿನ ಅಂಗಡಿಯೊಂದರಿಂದ ಸುಮಾರು 3,500 ಸಾವಿರ ರೂಪಾಯಿ ನಗದು ಪಾವತಿಸಿ ದಿನಸಿ ಖರೀದಿಸಿದ್ದಾರೆ ಎನ್ನಲಾಗಿದೆ. ನಕ್ಸಲರೆಂಬ ಶಂಕೆ ಹಿನ್ನೆಲೆಯಲ್ಲಿ ಪೊಲೀಸರು, ಎಎನ್ಎಫ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನಮಗೆ ನಕ್ಸಲರ ಚಲನವಲನ ಚುರುಕುಗೊಂಡಿರುವ ಕುರಿತು ಮಾಹಿತಿ ಬಂದಿದೆ. ಈಗಾಗಲೇ ಎಎನ್‌ಎಫ್‌ನ ಸಿಬ್ಬಂದಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಮೈಸೂರು, ಚಾಮರಾಜನಗರ ಜಿಲ್ಲೆಯ ಕೆಲವು ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗ ಚಟುವಟಿಕೆ ಚುರುಕುಗೊಂಡಿರುವುದರಿಂದ ನಮ್ಮ ತಂಡಗಳು ಇನ್ನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸಲಿವೆ ಎಂದು ಎಎನ್‌ಎಫ್‌ ಅಧಿಕಾರಿಗಳು ಖಚಿತಪಡಿಸಿದ್ದಾರೆ.

(ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

IPL_Entry_Point