ಕನ್ನಡ ಸುದ್ದಿ  /  ಕರ್ನಾಟಕ  /  Mangalore News: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ 2 ಪ್ರಕರಣ: ಮನೆಬಾಗಿಲಿಗೆ ಬಂದ ಪೊಲೀಸರು, ಕಾರ್ಯಕರ್ತರ ಜಮಾವಣೆ, ಹೈಡ್ರಾಮ

Mangalore News: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ 2 ಪ್ರಕರಣ: ಮನೆಬಾಗಿಲಿಗೆ ಬಂದ ಪೊಲೀಸರು, ಕಾರ್ಯಕರ್ತರ ಜಮಾವಣೆ, ಹೈಡ್ರಾಮ

ಬೆಳ್ತಂಗಡಿಯ ಬಿಜೆಪಿ ಶಾಸಕ ಹರೀಶ್‌ ಪೂಂಜಾ( MLA Harish Poonja) ವಿರುದ್ದ ಎರಡು ಪ್ರಕರಣ ದಾಖಲಾಗಿದ್ದು ಪೊಲೀಸರ ವಿರುದ್ದ ಬಿಜೆಪಿಯಿಂದ( bjp) ಆಕ್ರೋಶ ವ್ಯಕ್ತವಾಗಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ದ ಎರಡು ಪ್ರಕರಣ ದಾಖಲಾಗಿದ್ದು ಮನೆಯ ಬಳಿ ಸೇರಿರುವ ಬಿಜೆಪಿ ಕಾರ್ಯಕರ್ತರು.
ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ವಿರುದ್ದ ಎರಡು ಪ್ರಕರಣ ದಾಖಲಾಗಿದ್ದು ಮನೆಯ ಬಳಿ ಸೇರಿರುವ ಬಿಜೆಪಿ ಕಾರ್ಯಕರ್ತರು.

ಮಂಗಳೂರು: ಪೊಲೀಸರಿಗೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳ್ತಂಗಡಿ ಪೊಲೀಸರು ಶಾಸಕರ ಮನೆಗೆ ಬಂದ ಘಟನೆ ಬುಧವಾರ ನಡೆದಿದೆ. ಈ ಸಂದರ್ಭ ಹೊರಗೆಲ್ಲೂ ಪೂಂಜಾ ಕಾಣಿಸಲಿಲ್ಲ. ಆದರೆ ಕಾರ್ಯಕರ್ತರು ಜಮಾಯಿಸಿ ಯಾವ ಕಾರಣಕ್ಕೆ ಅವರನ್ನು ಬಂಧಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಬೆಳಗ್ಗಿನಿಂದ ಸಂಜೆವರೆಗೂ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಪೂಂಜಾ ಪರ ನ್ಯಾಯವಾದಿಗಳೊಂದಿಗೆ ಮನೆಯಲ್ಲಿ ಮಾತುಕತೆ ನಡೆಸಿದ್ದು, ಹೊರಗೆ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೆ ಜಮಾವಣೆಗೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವಿಚಾರಣೆಗೆ ಕರೆದುಕೊಂಡು ಹೋಗಲು ಬಂದೆವು

ನಾವು ವಿಚಾರಣೆಗೆ ಕರೆದುಕೊಂಡು ಹೋಗಲು ಬಂದಿದ್ದೇವೆಯೇ ಹೊರತು, ಬಂಧಿಸಲು ಅಲ್ಲ ಎಂದು ಪೊಲೀಸರು ಈ ಸಂದರ್ಭ ಹೇಳಿದ್ದಾರೆ. ಇದಕ್ಕೆ ನ್ಯಾಯವಾದಿ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉತ್ತರಿಸಿ, ವಿಚಾರಣೆಗೆಂದು ಕರೆದುಕೊಂಡು ಹೋಗಲು ಏನಾದರೂ ನೋಟಿಸ್ ಇದೆಯೇ ಎಂದು ಪ್ರಶ್ನಿಸಿದರು. ಬಂಧನ ಮಾಡುವುದಿದ್ದರೆ ಅದಕ್ಕೆ ಬೇಕಾದ ನಿಯಮಗಳನ್ನು ಪಾಲಿಸಬೇಕು ಎಂದು ವಕೀಲರಾದ ಶಂಭು ಶರ್ಮಾ ಹೇಳಿದ್ದಾರೆ.

ವಿಷಯವೇನು?

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಬೆಳ್ತಂಗಡಿ ತಹಸೀಲ್ದಾರ್ ಮತ್ತು ಪೊಲೀಸರು ದಾಳಿ ನಡೆಸಿ, ಇಬ್ಬರ ವಿರುದ್ಧ ದೂರು ದಾಖಲಿಸಿ, ಓರ್ವನನ್ನು ಬಂಧಿಸಿದ್ದರು. ಬಂಧಿತ ಆರೋಪಿ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಅಧ್ಯಕ್ಷ ಶಶಿರಾಜ ಶೆಟ್ಟಿ (35) ಪರ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಶಾಸಕ ಹರೀಶ್ ಪೂಂಜಾ ಮತ್ತು ಬೆಂಬಲಿಗರು ಆಗಮಿಸಿ, ಪೊಲೀಸರ ವಿರುದ್ಧ ಮಾತನಾಡುವ ಸಂದರ್ಭ, ಕರ್ತವ್ಯನಿರತ ಪೊಲೀಸರನ್ನು ನಿಂದಿಸಿದ್ದಾರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಮರುದಿನ ಬೆಳ್ತಂಗಡಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪೂಂಜಾ ಮತ್ತಷ್ಟು ಹರಿಹಾಯ್ದಿದ್ದರು.

ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೇನು?

ಬೆಳ್ತಂಗಡಿ ತಾಲೂಕು, ತಹಶೀಲ್ದಾರ್ ಪೃಥ್ವಿ ಸಾನಿಕಂ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಅದರಂತೆ ಮೇ.18ರಂದು ಬೆಳ್ತಂಗಡಿ ತಾಲೂಕು ಮೇಲಂತಬೆಟ್ಟು ಗ್ರಾಮದ ಮೂಡಲ ಎಂಬಲ್ಲಿ, ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಮೇರೆಗೆ, ತಹಸೀಲ್ದಾರ್, ಗ್ರಾಮ ಸಹಾಯಕ, ತಾಲೂಕು ಕಚೇರಿ ಸಿಬ್ಬಂದಿ, ಬೆಳ್ತಂಗಡಿ ಠಾಣಾ ಪೊಲೀಸ್‌ ಉಪ ನಿರೀಕ್ಷಕರೊಂದಿಗೆ ಸ್ಥಳಕ್ಕೆ ದಾಳಿ ನಡೆಸಿರುತ್ತಾರೆ. ಸ್ಥಳದಲ್ಲಿ ಅಕ್ರಮ ಗಾಣಿಗಾರಿಕೆಯಿಂದ ತೆಗೆದಿರುವ ಕಲ್ಲುಗಳ ರಾಶಿ, ಹಿಟಾಚಿ 1, ಟ್ರಾಕ್ಟರ್‌ 1, ಮದ್ದುಗುಂಡು ಜೀವಂತ 4 ಹಾಗೂ ಬಳಕೆಯಾಗಿರುವ 4 ಮದ್ದುಗುಂಡು ಪತ್ತೆಯಾಗಿರುತ್ತದೆ. ಸ್ಥಳದಲ್ಲಿದ್ದ ಕಾರ್ಮಿಕರನ್ನು ವಿಚಾರಣೆ ನಡೆಸಲಾಗಿ, ಅಕ್ರಮ ಗಣಿಗಾರಿಕೆಯನ್ನು, ಆರೋಪಿಗಳಾದ ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಎಂಬವರು ನಡೆಸುತ್ತಿರುವುದು ತಿಳಿದುಬಂದಿರುತ್ತದೆ. ಸ್ಥಳದಲ್ಲಿದ್ದ ಸ್ಪೋಟಕಗಳನ್ನು ಹಾಗು ಇತರೆ ಸೊತ್ತುಗಳನ್ನು ವಶಕ್ಕೆ ಪಡೆದು, ಆರೋಪಿಗಳಾದ ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಎಂಬವರುಗಳ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ, ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆರೋಪಿಗಳ ಪೈಕಿ ಶಶಿರಾಜ್‌ ಎಂಬಾತನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಆತನನ್ನು ವಶಕ್ಕೆ ಪಡೆಯಲಾಗಿರುತ್ತದೆ. ಮತ್ತೋರ್ವ ಆರೋಪಿ ಪರಾರಿಯಾಗಿರುತ್ತಾನೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಹರೀಶ್ ಪೂಂಜಾ ಅವರ ವಿರುದ್ಧ ಪ್ರಕರಣವೇನು? ಪ್ರಕರಣ 1

ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲಂತಬೆಟ್ಟು ಎಂಬಲ್ಲಿ ನಡೆಯುತ್ತಿದ್ದ, ಅಕ್ರಮ ಕಲ್ಲುಗಣಿಗಾರಿಕೆ ಹಾಗೂ ಗಣಿಗಾರಿಕೆಗಾಗಿ ಶೇಖರಿಸಲಾಗಿದ್ದ, ಅಪಾಯಕಾರಿ ಸ್ಪೋಟಕಗಳ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗಳಾದ ಪ್ರಮೋದ್‌ ಉಜಿರೆ ಹಾಗೂ ಶಶಿರಾಜ್‌ ಶೆಟ್ಟಿ (35) ಎಂಬವರುಗಳ ವಿರುದ್ಧ, ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪೈಕಿ ಶಶಿರಾಜ್‌ ಶೆಟ್ಟಿ ಎಂಬಾತನನ್ನು ವಶಕ್ಕೆ ಪಡೆಯಲಾಗಿರುತ್ತದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿತ ಪ್ರಮುಖ ಆರೋಪಿ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಆಗಿರುವ ಶಶಿರಾಜ್‌ ಪರವಾಗಿ, ಬೆಳ್ತಂಗಡಿ ವಿಧಾನಸಭಾ ಶಾಸಕರಾದ ಹರೀಶ್ ಪೂಂಜಾ, ಇತರ ಕೆಲವು ಜನರೊಂದಿಗೆ, ದಿನಾಂಕ ಮೇ 18ರಂದು ರಾತ್ರಿ, ಬೆಳ್ತಂಗಡಿ ಠಾಣೆಗೆ ಭೇಟಿ ನೀಡಿ, ಆರೋಪಿಯು ಶಾಸಕರ ಪಕ್ಷದ ಕಾರ್ಯಕರ್ತನಾಗಿದ್ದು, ಆತನನ್ನು ಕಾನೂನುಬಾಹಿರವಾಗಿ ಬಿಡುಗಡೆ ಮಾಡುವಂತೆ ಠಾಣಾಧಿಕಾರಿಗಳಿಗೆ ಒತ್ತಡ ಹಾಕಿ, ಅವಾಚ್ಯವಾಗಿ ಬೈದು ಬೆದರಿಸಿರುತ್ತಾರೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ, ಪೊಲೀಸ್ ಇಲಾಖೆಯ ಬಗ್ಗೆ ಮತ್ತು ಪೊಲೀಸ್ ಅಧಿಕಾರಿಗಳ ಬಗ್ಗೆ ಅಸಾಂವಿಧಾನಿಕ ಶಬ್ದಗಳಲ್ಲಿ ಮಾತನಾಡಿ, ದುರ್ವರ್ತನೆ ತೋರಿರುತ್ತಾರೆ. ಈ ಬಗ್ಗೆ ಶಾಸಕರಾದ ಹರೀಶ್ ಪೂಂಜಾ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಅ.ಕ್ರ. 57/2024 , ಕಲಂ:353, 504 IPC ರಂತೆ ಪ್ರಕರಣ ದಾಖಲಿಸಲಾಗಿದೆ.

ಪೂಂಜಾ ವಿರುದ್ಧ ಪ್ರಕರಣ 2

ಬೆಳ್ತಂಗಡಿ ಠಾಣೆಯಲ್ಲಿ ದಿನಾಂಕ 18.05.2024 ರಂದು ವರದಿಯಾಗಿರುವ ಅ.ಕ್ರ: 56/2024, ಕಲಂ: 9B(1)(b) Explosive act 1884 ಕಲಂ 5 The Explosives Substance Act-1908 ಪ್ರಕರಣ ಸಂಬಂಧಿಸಿದಂತೆ, ಆರೋಪಿತ ಹಾಗೂ ಬೆಳ್ತಂಗಡಿ ಠಾಣಾ ವ್ಯಾಪ್ತಿಯ ರೌಡಿ ಶೀಟರ್ ಆಗಿರುವ ಶಶಿರಾಜ್ ಶೆಟ್ಟಿ ಎಂಬಾತನ ಬಂಧನವನ್ನು ವಿರೋಧಿಸಿ, ದಿನಾಂಕ 20.05.2024 ರಂದು, ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೇ, ಕಾನೂನುಬಾಹಿರವಾಗಿ, ಬೆಳ್ತಂಗಡಿ ವಿಕಾಸ ಸೌದದ ಮುಂಭಾಗದಲ್ಲಿ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಮತ್ತು ಇತರರು, ಜನರನ್ನು ಗುಂಪು ಸೇರಿಸಿ, ಪ್ರತಿಭಟನಾ ಸಭೆ ನಡೆಸಿರುತ್ತಾರೆ. ಸದ್ರಿ ಪ್ರತಿಭಟನಾ ಸಭೆಯಲ್ಲಿ, ಹರೀಶ್ ಪೂಂಜರವರು, ಪ್ರಸ್ತುತ ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ, ಪೊಲೀಸರ ಕಾಲರ್ ಹಿಡಿಯಲು ಸಿದ್ದನೆಂದು ಹಾಗೂ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸುತ್ತೇನೆಂದು ಬೆದರಿಸಿ, ಸಾರ್ವಜನಿಕ ನೌಕರರಾದ, ಬೆಳ್ತಂಗಡಿ ಠಾಣಾ ಪೊಲೀಸ್ ನಿರೀಕ್ಷಕರಿಗೆ ಮತ್ತು ಇತರೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಅವಮಾನ ಮಾಡಿ, ಜೀವ ಬೆದರಿಕೆ ಒಡ್ಡಿರುತ್ತಾರೆ ಹಾಗೂ ತಾಲೂಕು ಕಚೇರಿಗೆ ತಮ್ಮ ಕೆಲಸ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗೆ ಹೋಗದಂತೆ ತಡೆಯೊಡ್ಡಿರುತ್ತಾರೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 58/2024 , ಕಲಂ:143, 147, 341, 504, 506 ಜೊತೆಗೆ 149 ಐ.ಪಿ.ಸಿ ರಂತೆ ಪ್ರಕರಣ ದಾಖಲಾಗಿರುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ

ಶಾಸಕ ಹರೀಶ್ ಪೂಂಜಾ ಬಂಧನ ಸಾಧ್ಯತೆ ವಿಚಾರವಾಗಿ ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಪದೇಪದೆ ಬಿಜೆಪಿಗರ ಮೇಲೆ ದಬ್ಬಾಳಿಕೆ ಸಹಿಸಲಾಗದು ಎಂದಿದ್ದು, ಮುಂದಾಗುವ ಪರಿಣಾಮಗಳಿಗೆ ಸರಕಾರವೇ ಜವಾಬ್ದಾರಿ ಎಂದಿದ್ದಾರೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024