Mangalore News: ಸಾರ್ವಜನಿಕರಿಂದ ಷೇರು ಸಂಗ್ರಹ, ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕ ಕಂಪನಿ 50 ಕೋಟಿ ರೂ. ಗುರಿ
ಮಂಗಳೂರಿನ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿ ರೈತರಿಗೆ ಷೇರು ಸಂಗ್ರಹಕ್ಕೆ ಮುಂದಾಗಿದ್ದು. ವಹಿವಾಟವನ್ನು ವಿಭಿನ್ನವಾಗಿ ವಿಸ್ತರಿಸುತ್ತಿದೆ.(ವಿಶೇಷ ವರದಿ: ಹರೀಶ್ ಮಾಂಬಾಡಿ. ಮಂಗಳೂರು)
ಮಂಗಳೂರು: ತೆಂಗು ಬೆಳೆಗಾರರೇ ಸ್ಥಾಪಿಸಿ, ಮುನ್ನಡೆಸುತ್ತಿರುವ ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಕಂಪೆನಿ ತನ್ನ ಕಾರ್ಯ ವ್ಯಾಪ್ತಿ ಹಾಗೂ ಮಾರುಕಟ್ಟೆ ವಿಸ್ತರಣೆ ಉದ್ದೇಶದಿಂದ ಸಾರ್ವಜನಿಕರಿಂದ ಷೇರು ಸಂಗ್ರಹಕ್ಕೆ ಮುಂದಾಗಿದೆ. 15 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ತೆಂಗು ಬೆಳೆಗಾರರ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಸಂಸ್ಥೆ 3೦೦ ಕೋಟಿ ರೂ. ಮೌಲ್ಯದ ವಿಸ್ತೃತ ಯೋಜನೆ ಕೈಗೆತ್ತಿಕೊಂಡಿದ್ದು, ಮೊದಲ ಹಂತದಲ್ಲಿ 5೦ ಕೋಟಿ ರೂ. ಮೌಲ್ಯದ ಷೇರು ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ.
ಪ್ರತಿ ಷೇರಿನ ಮೌಲ್ಯವು 1೦೦೦ ರೂ. ಇದ್ದು, ಕನಿಷ್ಠ ಎಂದರೆ ಐದು ಷೇರು ಹಾಗೂ ಗರಿಷ್ಠ ಎಂದರೆ 2೦೦ ಷೇರು ಖರೀದಿ ಮಾಡಿ ಹೂಡಿಕೆ ಮಾಡಬಹುದಾಗಿದೆ. ಐದು ಸಾವಿರದಿಂದ ಎರಡು ಲಕ್ಷ ರೂ. ಮೊತ್ತವನ್ನು ಷೇರು ಮೂಲಕ ಹೂಡಿಕೆ ಮಾಡಬಹುದಾಗಿದೆ ಎಂದು ಸಂಸ್ಥೆಯ ಆಡಳಿತ ನಿರ್ದೇಶಕ ಕುಸುಮಾಧರ ಎಸ್.ಕೆ. ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಆರಂಭಿಸಿದ ಕಲ್ಪ ಸಮೃದ್ಧಿ ಯೋಜನೆಯಡಿ ಸಾರ್ವಜನಿಕರಿಂದ ಠೇವಣಿ ಸಂಗ್ರಹ ಯೋಜನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು. ಸಂಗ್ರಹವಾದ ಠೇವಣಿಯ ಮೊತ್ತವನ್ನು ತೆಂಗು ಖರೀದಿ ಮತ್ತು ಕಾರ್ಯವಾಹಿ ಬಂಡವಾಳವಾಗಿ ವಿನಿಯೋಗಿಸಲಾಗಿದೆ. ಈ ಮೂಲಕ ಆರು ತಿಂಗಳಿನಲ್ಲಿ ಸಂಸ್ಥೆಯ ಒಟ್ಟು ವ್ಯವಹಾರವು ಹತ್ತು ಪಟ್ಟು ಹೆಚ್ಚಾಗಿದ್ದು, ಜನರ ವಿಶ್ವಾಸ ಗಳಿಸುತ್ತಿದೆ. ತೆಂಗಿನಕಾಯಿಯಿಂದ ತಯಾರಿಸಿದ ರಸಗೊಬ್ಬರ, ಸಾವಯವ ಗೊಬ್ಬರ ಮತ್ತು ಆಹಾರ ಉತ್ಪನ್ನಗಳ ಅನೇಕ ಪ್ರಯೋಗಗಳು ಮತ್ತು ಮಾರುಕಟ್ಟೆಯ ವಿಮರ್ಶೆಯನ್ನು ಪಡೆದಿದ್ದು ಆಶ್ಚರ್ಯಕರ ಬೇಡಿಕೆಯನ್ನು ಸೃಷ್ಟಿಸಿದೆ. ಈ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ಹೆಚ್ಚಿನ ಉತ್ಪನ್ನ ಪೂರೈಕೆಗಾಗಿ ಹೊಸ ವಿಸ್ತೃತ ಘಟಕ ಆರಂಭಿಸಲು ಬಂಡವಾಳವಾಗಿ ಷೇರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಪ್ರಥಮ ಹಂತದ ಯೋಜನೆ ಪೂರ್ಣಗೊಂಡ ವೇಳೆ 3೦೦ ಮಂದಿಗೆ ನೇರ ಹಾಗೂ 6೦೦ಕ್ಕೂಅಧಿಕ ಮಂದಿಗೆ ಪರೋಕ್ಷವಾಗಿ ಉದ್ಯೋಗ ದೊರೆಯಲಿದೆ.
ವಿಸ್ತರಣೆಯ ಉದ್ದೇಶ
ಸಂಸ್ಥೆಯ ವಿವಿಧ ತಯಾರಿಕಾ ಘಟಕಗಳು ಜಿಲ್ಲೆಯ ನಾನಾ ಭಾಗದಲ್ಲಿದ್ದು, ಎಲ್ಲ ಘಟಕವನ್ನು ಒಂದೇ ಸೂರಿನಡಿ ತರುವ ಗುರಿ ಇಟ್ಟುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ 2೦ ಎಕರೆ ಭೂಮಿ ಖರೀದಿಸಿ, ಆರಂಭಿಕ ನೆಲೆಯಲ್ಲಿ 5೦ ಕೋಟಿ ರೂ. ಮೊತ್ತವನ್ನು ಬಂಡವಾಳವಾಗಿ ಹೂಡಲಾಗುವುದು. 2೦ ಎಕರೆ ಪ್ರದೇಶದಲ್ಲಿ ಆಹಾರ ಉತ್ಪನ್ನ, ರಸಗೊಬ್ಬರ, ಕರಕುಶಲ ಉತ್ಪನ್ನ ಸೇರಿದಂತೆ ತೆಂಗಿನ ಮರದ ಎಲ್ಲ ಭಾಗದಿಂದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕಾ ಘಟಕ ಒಂದೇ ಸೂರಿನಡಿ ನಿರ್ಮಾಣವಾಗಲಿದೆ. ಇದರ ಸಂಪೂರ್ಣ ನೀಲನಕ್ಷೆ ತಯಾರಿಸಲಾಗಿದೆ. ಈ ಯೋಜನೆಯು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡ ವೇಳೆ ಇದು ದೇಶದ ಮೊದಲ ತೆಂಗು ರೈತರ ಶೂನ್ಯ ತ್ಯಾಜ್ಯ ಘಟಕ ಎಂಬ ಖ್ಯಾತಿಗೆ ಪಾತ್ರವಾಗಲಿದೆ ಎಂಬುದು ಕುಸುಮಾಧರ ಎಸ್.ಕೆ. ವಿವರಣೆ.
ಹೇಗೆ ಷೇರು ಖರೀದಿ ಮಾಡಬಹುದು?
ಆಸಕ್ತ ಹೂಡಿಕೆದಾರರು ಕರಾವಳಿಯ ನಾನಾ ಭಾಗದಲ್ಲಿರುವ ಶಾಖೆಗೆ ಭೇಟಿ ನೀಡಿ ಖುದ್ದಾಗಿ ಖರೀದಿ ಮಾಡಬಹುದು. ಒಂದು ವೇಳೆ ಶಾಖೆಗೆ ಭೇಟಿ ನೀಡಲು ಸಾಧ್ಯವಿಲ್ಲದ ಗ್ರಾಹಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಖರೀದಿ ಮಾಡಬಹುದಾಗಿದೆ. ಡಿಜಿಟಲ್‌ನಲ್ಲಿ ಖರೀದಿ ಮಾಡಲು ಸಾಧ್ಯವಾಗದ ಗ್ರಾಹಕರು ಸಂಸ್ಥೆಗೆ ದೂರವಾಣಿ ಕರೆ ಮಾಡಿ ನೋಂದಣಿ ಮಾಡಿ ಖರೀದಿ ಮಾಡಬಹುದಾಗಿದೆ. ಮೊದಲ ಹಂತದಲ್ಲಿ ಒಟ್ಟು 5೦ ಕೋಟಿ ರೂ. ಮೌಲ್ಯದ ಐದು ಲಕ್ಷ ಷೇರುಗಳನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ. ಈ ವರೆಗೆ ರೈತರೇ ಮಾಡಿರುವ ಹೂಡಿಕೆಯಲ್ಲಿ ಸಂಸ್ಥೆಯು ಉತ್ಪಾದಿಸಿರುವ ಆಹಾರ ಹಾಗೂ ಕೃಷಿ ಉತ್ಪನ್ನಗಳನ್ನು ತನ್ನ 11 ಶಾಖೆ ಹಾಗೂ ವಿವಿಧ ಮಳಿಗೆಗಳ ಮೂಲಕ ಗ್ರಾಹಕರಿಗೆ ನೇರವಾಗಿ ತಲುಪಿಸಲಾಗುತ್ತಿದೆ.
ಕಲ್ಪವೃಕ್ಷ ಹಾಗೂ ಕಲ್ಪವಿಕಾಸ ಯೋಜನೆಯಡಿ ಸಂಸ್ಥೆಯ ಉತ್ಪನ್ನಗಳಾದ ಐಸ್‌ಕ್ರೀಂ, ತೆಂಗಿನೆಣ್ಣೆ, ವರ್ಜಿನ್ ತೆಂಗಿನೆಣ್ಣೆ, ಕೋಕೊ ಫೈಬರ್, ಕೊಬ್ಬರಿ ಚಟ್ನಿ, ಕೊಬ್ಬರಿ, ಉಪ್ಪಿನಕಾಯಿ, ತೆಂಗಿನ ಮೊಳಕೆ, ತೆಂಗಿನ ನೀರಿನಿಂದ ತಯಾರಿಸುವ ಜೈವಿಕ ರಸಗೊಬ್ಬರ, ಗೆರಟೆಯಿಂದ ಅಲಂಕಾರಿಕ ಹಾಗೂ ಗೃಹ ಬಳಕೆಯ ಉತ್ಪನ್ನ, ಹೈನುಗಾರರಿಗೆ ತೆಂಗಿನ ಹಿಂಡಿ, ತೆಂಗಿನ ಮರದ ಪೀಠೋಪಕರಣ, ಇಪಿಎನ್ (ಬೇರು ಹುಳ ನಿರ್ಮೂಲನ ಜೈವಿಕ ಕೀಟನಾಶಕ), ಎರೆಹುಳ ಗೊಬ್ಬರ, ಇತರೆ ಸಾವಯವ ಗೊಬ್ಬರಗಳು.. ಹೀಗೆ ಹಲವಾರು ದೇಶೀಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಗ್ರಾಮೀಣ ಭಾಗದ ಮಹಿಳೆಯರ ಸ್ವಾವಲಂಬಿ ಬದುಕಿಗೆ `ಕ್ರಿಯೇಟಿವ್ ಹೌಸ್' ಮೂಲಕ ತೆಂಗಿನ ಗೆರಟೆಯ ಕಲಾಕೃತಿಗಳ ರಚನೆಗೆ ವಿಶೇಷ ತರಬೇತಿ ನೀಡಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಪುಷ್ಟಿ ನೀಡಿದೆ. ಈ ಯೋಜನೆಯಡಿ ತರಬೇತಿ ಪಡೆದ ಮಹಿಳೆಯರಿಗೆ ಸರಕಾರದಿಂದ ಮಹಿಳಾ ಸಬಲೀಕರಣ ಯೋಜನೆಯಡಿ ಯಂತ್ರೋಪಕರಣ ಖರೀದಿಗೆ ವಿಶೇಷ ಸಹಾಯಧನವನ್ನೂ ಸಂಸ್ಥೆಯ ಮೂಲಕ ಒದಗಿಸಲಾಗುತ್ತಿದೆ. ಪ್ರಸ್ತುತ ಕರಾವಳಿಯ 14೦ಕ್ಕೂ ಅಧಿಕ ಮಹಿಳೆಯರು ತರಬೇತಿ ಪಡೆದು, 12 ರಿಂದ 25 ಸಾವಿರ ರೂ.ವರೆಗೆ ಮಾಸಿಕ ಆದಾಯ ಗಳಿಸುತ್ತಿದ್ದಾರೆ.
ತಜ್ಞರ ಸಮಿತಿ
ಮುಂದಿನ ದಿನಗಳಲ್ಲಿ ನಾನಾ ಭಾಗದ ಒಂದು ಲಕ್ಷ ಮಹಿಳೆಯರಿಗೆ ತರಬೇತಿ ನೀಡಿ ಸ್ವ ಉದ್ಯೋಗ ಕಲ್ಪಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ಪೂರೈಸುವ ಉದ್ದೇಶದಿಂದ ಮೊಬೈಲ್ ಅಪ್ಲಿಕೇಷನ್ ಹಾಗೂ ವೆಬ್ ಆಧರಿತ ಇ-ಕಾಮರ್ಸ್ ಪ್ಲಾಟ್‌ಫಾರಂ ಅಭಿವೃದ್ಧಿಪಡಿಸಲಾಗಿದೆ. ಶೀಘ್ರದಲ್ಲೇ ಸಾರ್ವಜನಿಕರ ಪ್ರಯೋಜನಕ್ಕೆ ಸಿಗಲಿದೆ.
ಈ ಸಂಸ್ಥೆಯನ್ನು ಕೃಷಿಕರೇ ಸೇರಿ ಆರಂಭಿಸಿದರೂ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಕೃಷಿಕರು, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಹೆಸರಾಂತ ಆರ್ಥಿಕ ತಜ್ಞರು, ಯಶಸ್ವಿ ಉದ್ಯಮಿಗಳು, ಸಹಕಾರಿ ಧುರೀಣರು, ಅಂತಾರಾಷ್ಟ್ರೀಯ ಗೋಲ್ಡನ್ ಬುಕ್ ಆಫ್ ರೆಕಾರ್ಡ್ನ ಸಾಧಕರನ್ನು ಒಳಗೊಂಡ 16 ಜನರ ಸಮರ್ಥ ಆಡಳಿತ ಮಂಡಳಿ ಮತ್ತು ಸಲಹಾ ಸಮಿತಿಯನ್ನು ಸಂಸ್ಥೆಯು ಹೊಂದಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ವೆಬ್‌ಸೈಟ್ www.coconutfarmers.in ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಟೋಲ್‌ಫ್ರೀ ಸಂಖ್ಯೆ 18002030129ಕ್ಕೆ ಕರೆ ಮಾಡಬಹುದು ಅಥವಾ ದೂರವಾಣಿ ಸಂಖ್ಯೆ 8105487763 ಸಂಪರ್ಕಿಸಿ ಹೂಡಿಕೆಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ.
(ವಿಶೇಷ ವರದಿ: ಹರೀಶ್ ಮಾಂಬಾಡಿ. ಮಂಗಳೂರು)