Dakshin Kannada Accidents: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ; ಮಾಜಿ ಸೈನಿಕ ಸೇರಿ ಮೂವರು ಸಾವು
ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರದಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.ವರದಿ: ಹರೀಶ ಮಾಂಬಾಡಿ ಮಂಗಳೂರು
ಮಂಗಳೂರು: ಸೋಮವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇವರಲ್ಲಿ ಒಬ್ಬರು ಮಾಜಿ ಸೈನಿಕ. ಮಂಗಳೂರಿನ ಪಡೀಲ್ ನ ಫಸ್ಟ್ ನ್ಯೂರೊ ಆಸ್ಪತ್ರೆ ಮುಂಭಾಗದ ಹೆದ್ದಾರಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಕಲ್ಲಾಪು ನಿವಾಸಿ ಹರೀಶ್ (43) ಎಂಬವರಿಗೆ ಡಸ್ಟರ್ ಕಾರು ಡಿಕ್ಕಿಯಾಗಿ ಅವರು ಸಾವನ್ನಪ್ಪಿದ್ದಾರೆ. ಬಂಟ್ವಾಳ ಕಡೆಯಿಂದ ಬಂದ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿಯಾಗಿ ಹರೀಶ್ ಅವರು ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿಯಾಗಿದೆ. ಈ ವೇಳೆ ರಸ್ತೆಯಿಂದ ದೂರಕ್ಕೆ ಎಸೆಯಲ್ಪಟ್ಟ ಹರೀಶ್ ಅವರ ತಲೆ ಭಾಗಕ್ಕೆ ಗಾಯವಾಗಿದ್ದು, ಸಾವನ್ನಪ್ಪಿದರು. ಅವರು ಕೇಬಲ್ ಟೆಕ್ನಿಶಿಯನ್ ಆಗಿದ್ದರು.
ಹಿಟ್ ಅಂಡ್ ರನ್, ನಿವೃತ್ತ ಸೈನಿಕ ಸಾವು
ಬಂಟ್ವಾಳ ತಾಲೂಕಿನ ಮಂಚಿ ಎಂಬಲ್ಲಿ ನಡೆದ ಅಪಘಾತದಲ್ಲಿ ಪುತ್ತೂರಿನ ಮಾಜಿ ಸೈನಿಕ ಚಿದಾನಂದ ಕಾಮತ್ ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಕಾರೊಂದು ಸ್ಕೂಟರ್ ಗೆ ತಾಗಿ ಸವಾರ ರಸ್ತೆಗೆ ಬಿದ್ದು ಈ ಅಪಘಾತ ಸಂಭವಿಸಿದೆ. ಆಕ್ಟಿವಾದಲ್ಲಿ ಸಂಚರಿಸುತ್ತಿದ್ದ ಪುತ್ತೂರಿನ ನೆಹರೂನಗರದ ರಕ್ತೇಶ್ವರಿ ಗುಡಿ ಹಿಂಬದಿ ನಿವಾಸಿ ನಿವೃತ್ತ ಸೈನಿಕ ಚಿದಾನಂದ ಕಾಮತ್ (55) ಸಾವನ್ನಪ್ಪಿದವರು.
ಮುಡಿಪುವಿನಲ್ಲಿ ಸೆಕ್ಯೂರಿಟಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ತಾಯಿ ಜೊತೆ ಪುತ್ತೂರಿನಲ್ಲಿ ವಾಸವಾಗಿದ್ದರು. ಮಂಚಿ ಸಮೀಪದ ಮೋಂತಿಮಾರ್ ಕಾಯರಪಡ್ಪು ಎಂಬಲ್ಲಿ ಘಟನೆ ನಡೆದಿದ್ದು, ಸಾಲೆತ್ತೂರುವಿನಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಸ್ಕೂಟರ್ ಸವಾರ ಚಿದಾನಂದ ಕಾಮತ್ ಅವರಿಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾಗಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರನನ್ನು ಸ್ಥಳೀಯರು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಬಳಿಕ ಪೊಲೀಸರು ಕಾರು ಚಾಲಕನನ್ನು ಪತ್ತೆಹಚ್ಚಿದ್ದು, ಇದೀಗ ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸಲಾಗುತ್ತಿದೆ.
ಆಟೊಗೆ ಬೈಕ್ ಡಿಕ್ಕಿ, ಆಟೊ ಪ್ರಯಾಣಿಕ ಸಾವು
ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಪೇಟೆಯಲ್ಲಿ ಸೋಮವಾರ ಸಂಜೆ ನಡೆದ ಘಟನೆಯಲ್ಲಿ ಆಟೊ ಬೈಕಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಆಟೊ ಪ್ರಯಾಣಿಕ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಿದ್ದಾರೆ. ಸಜೀಪ ನಿವಾಸಿ ಅಲ್ತಾಫ್ (18) ಮೃತಪಟ್ಟವರು. ಇದರ ಸಿಸಿ ಟಿವಿ ದೃಶ್ಯಾವಳಿಗಳೀಗ ವೈರಲ್ ಆಗಿದೆ.
ಬಿಸಿರೋಡಿನಿಂದ ಬರುತ್ತಿದ್ದ ಆಟೊ ಹಾಗೂ ಪಾಣೆಮಂಗಳೂರು ಪೇಟೆಯಿಂದ ಬರುತ್ತಿದ್ದ ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಅಪಘಾತಕ್ಕೆ ಆಟೊ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪಲ್ಟಿಯಾಗುವ ಸಂದರ್ಭ ಆಟೊದಲ್ಲಿದ್ದ ಪ್ರಯಾಣಿಕ ರಸ್ತೆಗೆ ಎಸೆಯುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ. ರಸ್ತೆಗೆ ಎಸೆದ ರಭಸಕ್ಕೆ ಯುವಕನ ತಲೆಗೆ ಗಂಭೀರವಾದ ಗಾಯವಾಗಿತ್ತು. ಈತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಬಗ್ಗೆ ಪೋಲೀಸರು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಲಗಿದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ಕುಂದಾಪುರದ ವಿಡಿಯೋಗ್ರಾಫರ್
ಮುಂಬೈಗೆ ಸ್ನೇಹಿತರ ಮನೆಗೆ ತೆರಳಿದ್ದ ಕುಂದಾಪುರದ ವಿಡಿಯೋಗ್ರಾಫರ್ ಅಭಿನಂದನ್ (49) ಮಲಗಿದಲ್ಲೇ ಸಾವನ್ನಪ್ಪಿದ್ದಾರೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದುಶಂಕಿಸಲಾಗಿದೆ. ವಿಡಿಯೋಗ್ರಾಫರ್, ಡೆಕೋರೇಟರ್, ಪೇಂಟರ್ ಆಗಿ ಅವರು ಕೆಲಸ ಮಾಡುತ್ತಿದ್ದರು. ಕುಂದಾಪುರದ ಬಸಂತ್ ಸ್ಟುಡಿಯೋ ಮಾಲೀಕ ರಾಮಚಂದ್ರ ಅವರು ಪುತ್ರರಾಗಿರುವ ಅಭಿನಂದನ್, ಕೆಲ ದಿನಗಳ ಹಿಂದೆ ಕಾರ್ಯನಿಮಿತ್ತ ಮುಂಬೈಗೆ ತೆರಳಿದ್ದರು.
ವಿದ್ಯುತ್ ತಂತಿ ಸ್ಪರ್ಶಿಸಿ ವ್ಯಕ್ತಿ ಸಾವು
ಮನೆ ಗೇಟಿನ ಮುಂದೆ ತುಂಡಾಗಿ ಬಿದ್ದಿದ್ದ ತಂತಿ ತಗಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಶಿರೂರು ಗ್ರಾಮದಲ್ಲಿ ನಡೆದಿದೆ. ಹಡವಿನಕೋನೆ ಮುದ್ರಮಕ್ಕಿಯಲ್ಲಿ ಇರ್ಷಾದ್ (52) ಎಂಬವರು ಗಾಳಿಮಳೆಗೆ ತುಂಡಾಗಿ ಬಿದ್ದಿದ್ದ ತಂತಿ ಸ್ಪರ್ಶಿಸಿ ಸಾವನ್ನಪ್ಪಿದವರು.
(ವರದಿ: ಹರೀಶ ಮಾಂಬಾಡಿ. ಮಂಗಳೂರು)
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)