ಕೋವಿ ವಾಪಾಸ್‌ಗೆ ಕೋರ್ಟ್‌ ಆದೇಶಿಸಿದರೂ ಹಿಂದಿರುಗಿಸಿದ ದಕ ಪೊಲೀಸರು, ಹಿಂಪಡೆಯಲು ರೈತರು ಮಾಡಿದ ಐಡಿಯಾ ಏನು?
ಕನ್ನಡ ಸುದ್ದಿ  /  ಕರ್ನಾಟಕ  /  ಕೋವಿ ವಾಪಾಸ್‌ಗೆ ಕೋರ್ಟ್‌ ಆದೇಶಿಸಿದರೂ ಹಿಂದಿರುಗಿಸಿದ ದಕ ಪೊಲೀಸರು, ಹಿಂಪಡೆಯಲು ರೈತರು ಮಾಡಿದ ಐಡಿಯಾ ಏನು?

ಕೋವಿ ವಾಪಾಸ್‌ಗೆ ಕೋರ್ಟ್‌ ಆದೇಶಿಸಿದರೂ ಹಿಂದಿರುಗಿಸಿದ ದಕ ಪೊಲೀಸರು, ಹಿಂಪಡೆಯಲು ರೈತರು ಮಾಡಿದ ಐಡಿಯಾ ಏನು?

Lok Sabha Elections ಚುನಾವಣೆ ಕಾರಣಕ್ಕೆ ನೀಡಿದ್ದ ಗನ್‌ ಅನ್ನು ವಾಪಾಸ್‌ ನೀಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ದಕ್ಷಿಣ ಕನ್ನಡ ಪೊಲೀಸರು ಹಿಂದಿರುಗಿಸಿರಲಿಲ್ಲ. ಇದರಿಂದ ರೈತರು ಮಾಡಿದ ಐಡಿಯಾ ಚೆನ್ನಾಗಿತ್ತು.ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡ ರೈತರು ತಮ್ಮ ಗನ್‌ ವಾಪಾಸ್‌ ಪಡೆಯಲು ಮಾಡಿದ ಐಡಿಯಾ ಏನು
ದಕ್ಷಿಣ ಕನ್ನಡ ರೈತರು ತಮ್ಮ ಗನ್‌ ವಾಪಾಸ್‌ ಪಡೆಯಲು ಮಾಡಿದ ಐಡಿಯಾ ಏನು

ಮಂಗಳೂರು: ಚುನಾವಣೆ ಹಿನ್ನೆಲೆಯಲ್ಲಿ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಡುವ ವಿಚಾರಕ್ಕೆ ದಕ್ಷಿಣ ಕನ್ನಡ ಹಾಗೂ ಕಾಡುಪ್ರಾಣಿಗಳ ಉಪಟಳ ಇರುವ ಮಲೆನಾಡು ಪ್ರದೇಶದ ಸುಮಾರು ನಾಲ್ಕು ಸಾವಿರದಷ್ಟು ಕೃಷಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬೆಳೆ ರಕ್ಷಣೆಗಾಗಿ ಇದೀಗ ಕೋರ್ಟಿನ ಮೊರೆಯನ್ನೂ ಹೋಗಿದ್ದಾರೆ. ಇದೀಗ ವಿನಾಯತಿ ನೀಡುವಂತೆ ಮಾಡಿದ ಮನವಿಗೆ ಆಡಳಿತ ಪೂರಕವಾಗಿ ಸ್ಪಂದಿಸುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಕಾಡುಪ್ರಾಣಿಗಳು ತೋಟಕ್ಕೆ ಬಂದರೆ ಬೆಳೆ ರಕ್ಷಣೆಗಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪ ನಡೆದಿದೆ. ಇದೀಗ ಕರೆ ಮಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಏನು ಕರೆ ಮಾಡಿದ್ದಾರೆ

112ಗೆ ಕೃಷಿಕರೊಬ್ಬರು ಕರೆ ಮಾಡಿದ್ದಾರೆ. ಕೋತಿಗಳು ಬಂದಿವೆ. ನನ್ನ ಕೃಷಿ ಹಾಳಾಗುತ್ತಿದೆ. ಕೋವಿಯನ್ನು ಚುನಾವಣಾ ಸಮಯದಲ್ಲಿ ಠೇವಣಿ ಇರಿಸಲಾಗಿದೆ. ಕೋವಿ ವಾಪಸ್ ಮಾಡಲು ಸೂಚಿಸಿದರೂ ಮರಳಿಸಿಲ್ಲ. ಏನಾದರೂ ಹೆಚ್ಚುಕಮ್ಮಿಯಾದರೆ 112ಗೆ ಕರೆ ಮಾಡಿ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾನು 112ಗೆ ಕರೆ ಮಾಡಿದ್ದೇನೆ. ನನ್ನ ತೋಟದಲ್ಲಿ ಕೋತಿಗಳು ಬಂದಿವೆ. ಇದರಿಂದ ನನ್ನ ಬೆಳೆಎಲ್ಲಾ ಹಾಳಾಗುತ್ತಿದೆ. ಹೀಗಾಗಿ ಕೂಡಲೇ ಪೊಲೀಸರನ್ನು ಕಳಿಸಿ, ನನ್ನ ತೋಟವನ್ನು ರಕ್ಷಿಸಿ ಎಂದು ಕೃಷಿಕರು ಕರೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕರೆ ವೈರಲ್ ಆಗಿದೆ. ಸುಮಾರು ಸಂಜೆ 5 ಗಂಟೆಗೆ ಅವರು ಕರೆ ಮಾಡಿದ್ದು, 8 ಗಂಟೆ ವೇಳೆ ವಿಟ್ಲ ಪೊಲೀಸರು ಅವರ ಮನೆಗೆ ಭೇಟಿ ನೀಡಿದ್ದಾರೆ.

ಸಮಸ್ಯೆ ಏನು? ಏನಿದು ಠೇವಣಿ ಪ್ರಾಬ್ಲಂ?

ಕಾಡುಪ್ರಾಣಿಗಳಿಂದ ಬೆಳೆ, ಸ್ವರಕ್ಷಣೆಗಾಗಿ ಕೃಷಿಕರು ಕೋವಿಗಳನ್ನು ಹೊಂದಿರುವುದು ದಕ್ಷಿಣ ಕನ್ನಡ ಜಿಲ್ಲೆ, ಮಲೆನಾಡು ಪ್ರದೇಶಗಳಲ್ಲಿ ಮಾಮೂಲು. ಪ್ರತಿ ಸಲ ಚುನಾವಣೆ ಬಂದಾಗ ಕೋವಿಗಳನ್ನು ಪೊಲೀಸ್ ಠಾಣೆಯಲ್ಲಿ ಡೆಪಾಸಿಟ್ ಇಡುವಂತೆ ಸೂಚನೆ ಬರುತ್ತದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಕೃಷಿಕರು, ಈಗಾಗಲೇ ಅಭಿಯಾನ ಆರಂಭಿಸಿದ್ದಾರೆ. ತೋಟದಲ್ಲಿ ಈಗ ಕೋತಿ, ಹಂದಿ, ಮತ್ತಿತರ ಕಾಡುಪ್ರಾಣಿಗಳ ಉಪಟಳ ಮಿತಿಮೀರುತ್ತಿದೆ. ಹೀಗಾಗಿ ತುರ್ತುಸೇವೆಗೆ 112ಗೆ ಕರೆ ಮಾಡುವ ಚಳವಣಿಯನ್ನು ಪರವಾನಗಿ ಹೊಂದಿದ ಎಲ್ಲ ಕೃಷಿಕರು ಆರಂಭಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಹಸಿರುಸೇನೆಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕರೆ ನೀಡಿದೆ. ಚುನಾವಣೆ ಸಂದರ್ಭ ಮೂರು ತಿಂಗಳು ಎಲ್ಲರೂ ಕೋವಿಗಳನ್ನು ಪೊಲೀಸ್ ಠಾಣೆಗಳಲ್ಲಿ ಠೇವಣಿ ಇಟ್ಟರೆ, ಕಾಡುಪ್ರಾಣಿಗಳು ಬಂದರೆ ಏನು ಮಾಡುವುದು ಎಂಬುದು ರೈತರ ಪ್ರಶ್ನೆ.

ಕೋರ್ಟಿಗೆ ಹೋದ ಕೃಷಿಕರು

ಕೋವಿ ಠೇವಣಿಯಿಂದ ವಿನಾಯತಿ ಕೋರಿ ಏಪ್ರಿಲ್ 1ರಂದು ಕೃಷಿಕರೊಬ್ಬರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಏಪ್ರಿಲ್ 2ರಂದು ವಿನಾಯಿತಿ ನೀಡಿರುವ ಮಾಹಿತಿಯನ್ನು ದ.ಕ.ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಏಪ್ರಿಲ್ 3ರಂದು ಕೋವಿಯನ್ನು ತಕ್ಷಣ ಹಿಂದಿರುಗಿಸಬೇಕು ಎಂದು ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ಪೊಲೀಸರು ಕೋವಿಯನ್ನು ಹಿಂದಿರುಗಿಸಿಲ್ಲ. ಬಳಿಕ 112ಕ್ಕೆ ಕರೆ ಮಾಡಿ, ನ್ಯಾಯಾಲಯದ ಆದೇಶ, ಜಿಲ್ಲಾಧಿಕಾರಿ ಸೂಚನೆ ಇದ್ದರೂ ಕೋವಿ ಹಿಂದಿರುಗಿಸಿಲ್ಲ, ಹೀಗಾಗಿ ತೋಟಕ್ಕೆ ಬಂದಿರುವ ಕೋತಿಗಳನ್ನು ಪೊಲೀಸರೇ ಓಡಿಸಬೇಕು ಎಂದು ಹೇಳಿದ್ದರು. ಇಷ್ಟೆಲ್ಲ ನಡೆದ ಬಳಿಕ ಕೋವಿಯನ್ನು ಪೊಲೀಸರೇ ಕೃಷಿಕರ ಮನೆಗೆ ಪೊಲೀಸರು ತಲುಪಿಸಿದರು. ನ್ಯಾಯಾಲಯಕ್ಕೆ ಹೋಗಿ ತನಗೆ ಕೋವಿಯ ಅನಿವಾರ್ಯತೆ ಇದೆ ಎಂದು ಮನವರಿಕೆ ಮಾಡಿ, ಅನುಮತಿ ಪಡೆದ ವ್ಯಕ್ತಿಗೆ ಪೊಲೀಸರೇ ಕೋವಿಯನ್ನು ಒಪ್ಪಿಸಿದರು. ಕೋವಿಯನ್ನು ಸಾರ್ವಜನಿಕವಾಗಿ ಪ್ರದರ್ಶನ ಮಾಡಬಾರದು ಎಂಬ ಷರತ್ತನ್ನು ಕೋವಿ ಠೇವಣಿಯಿಂದ ಕೃಷಿಕರಿಗೆ ವಿನಾಯತಿ ನೀಡುವ ನಿಯಮದಲ್ಲಿ ನಮೂದಿಸಲಾಗಿದೆ. ಠಾಣೆಗೆ ಹೋಗಿ, ಕೋವಿ ಪಡೆದು ಮನೆಗೆ ಒಯ್ಯುವಾಗ ಅದನ್ನೇ ಸಾರ್ವಜನಿಕ ಪ್ರದರ್ಶನ ಎಂದು ನಿರ್ಣಯಿಸಿ, ಕೇಸು ದಾಖಲಿಸಿಕೊಂಡರೆ, ಏನು ಮಾಡೋದು ಎಂಬ ಪ್ರಶ್ನೆ ಅವರದ್ದಾಗಿತ್ತು. ಇದಕ್ಕಾಗಿ ಖುದ್ದು ಪೊಲೀಸರೇ ಕೋವಿಯನ್ನು ತಂದು ಒಪ್ಪಿಸಬೇಕು ಎಂದು ಅವರು ಹೇಳಿದ್ದು, ಅದರಂತೆ ಮನೆಗೆ ಹೋಗಿ ಪೊಲೀಸರು ಕೋವಿ ಒಪ್ಪಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಮಂದಿ ಕೃಷಿಕರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ಅವರಿಗೆ ವಿನಾಯತಿ ದೊರಕಿದೆ. ಅವರಲ್ಲಿ ಏಳು ಮಂದಿ ಕೃಷಿಕರು ಠಾಣೆಯಿಂದ ಕೋವಿ ವಾಪಸ್ ಕೊಂಡೊಯ್ದರೆ, ಓರ್ವರು ಠೇವಣಿ ಇಟ್ಟಿರಲಿಲ್ಲ. ಮತ್ತೋರ್ವ ಕೃಷಿಕರ ಮನೆಗೇ ಹೋಗಿ ಕೋವಿ ಒಪ್ಪಿಸಲಾಗಿದೆ.

ಚುನಾವಣಾ ಬಹಿಷ್ಕಾರಕ್ಕೆ ಮುಂದಾದ ರೈತಸಂಘ

ಚುನಾವಣೆಗಳಿಂದ ರೈತರಿಗೆ ಯಾವುದೇ ಪ್ರಯೋಜನ ಇಲ್ಲ. ರಾಜ್ಯ ಸರಕಾರ ಆಗಲಿ ಕೃಂದ್ರ ಸರಕಾರ ರೈತರ ನೋವುಗಳಿಗೆ ಸ್ಪಂದಿಸದ ಕಾರಣ ಮುಂಬರುವ ಲೋಕಸಭಾ ಚುನಾವಣೆ ಸಹಿತ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ರಾಜ್ಯ ರೈತಸಂಘ( ಹಸಿರು ಸೇನೆ) ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘಟನೆ ಎಚ್ಚರಿಸಿದೆ. ಕೋವಿ ಇಟ್ಟುಕೊಂಡಿರುವ ರೈತರನ್ನು ದರೋಡೆಕೋರರ ತರಹ, ರೌಡಿಗಳ ತರಹ, ಕ್ರಿಮಿನಲ್ ಗಳ ತರಹ ನೋಡುವುದು ಸರಿಯಲ್ಲ ಎಂದುಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘಟನೆ ಕಾರ್ಯದರ್ಶಿ ಎನ್. ಇದಿನಬ್ಬ ಸಜಿಪಮುನ್ನೂರು ಹೇಳಿದ್ದಾರೆ. ರೈತರಿಗೆ ನ್ಯಾಯ ಒದಗಿಸಲು ಹೋರಾಟ ನಡೆಸುವ ದೃಷ್ಟಿಯಿಂದ ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘಟನೆ ಎಂಬ ಜಿಲ್ಲಾಮಟ್ಟದ ಸಂಘಟನೆ ರಚಿಸಲಾಗಿದೆ. ಮುರುವ ಮಹಸಬಲ ಭಟ್ ಸಂಘಟನೆ ಅಧ್ಯಕ್ಷರಾಗಿದ್ದು, ಕಾರ್ಯದರ್ಶಿ ಯಾಗಿ ಸಜಿಪಮುನ್ನೂರಿನ ಎನ್. ಕೆ. ಇದಿನಬ್ಬ, ಸದಸ್ಯರಾಗಿ ಐತಪ್ಪ ರೈ ಅಜರಂಗಳ, ಪಿ. ಶಿವಚಂದ್ರ ಪಡುವನ್ನೂರು,ವಿನೋದ ಶೆಟ್ಟಿ ಪಡುವನ್ನೂರು , ಜಯಪ್ರಕಾಶ ರೈ ನೂಜಿಬೈಲು ಕಾರ್ಯ ನಿರ್ವಹಿಸುತ್ತಿದ್ದಾರೆ ಕೋವಿ ಠೇವಣಿ ಕಾರಣದಿಂದ ಹಳ್ಳಿಗಳಲ್ಲಿ ಗ್ರಾಮೀಣ ಭಾಗಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದೆ. ಕಾಡುಪ್ರಾಣಿಗಳ ಹಾವಳಿ, ನಕ್ಸಲ್ ಭೀತಿ ಹೆಚ್ಚಿದೆ. ಈ ಎಲ್ಲ ನಷ್ಟದ ಪರಿಹಾರವನ್ನು ಜಿಲ್ಲಾಡಳಿತದ ವೇತನದಿಂದ ಸಂದಾಯ ಮಾಡಬೇಕು ಎಂದು ರೈತಸಂಘ ಹಸಿರುಸೇನೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಒತ್ತಾಯಿಸಿದ್ದಾರೆ.

ವರದಿ: ಹರೀಶ ಮಾಂಬಾಡಿ, ಮಂಗಳೂರು

Whats_app_banner