Dakshin Kannada News: ಮುಚ್ಚುವ ಹಂತದಲ್ಲಿದ್ದ ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಶಾಲೆಗೆ ಈಗ ಜೀವಕಳೆ, ಹೇಗಾಯ್ತು ಬದಲಾವಣೆ?
ಕನ್ನಡ ಸುದ್ದಿ  /  ಕರ್ನಾಟಕ  /  Dakshin Kannada News: ಮುಚ್ಚುವ ಹಂತದಲ್ಲಿದ್ದ ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಶಾಲೆಗೆ ಈಗ ಜೀವಕಳೆ, ಹೇಗಾಯ್ತು ಬದಲಾವಣೆ?

Dakshin Kannada News: ಮುಚ್ಚುವ ಹಂತದಲ್ಲಿದ್ದ ಬೆಳ್ತಂಗಡಿ ತಾಲ್ಲೂಕು ಸರ್ಕಾರಿ ಶಾಲೆಗೆ ಈಗ ಜೀವಕಳೆ, ಹೇಗಾಯ್ತು ಬದಲಾವಣೆ?

ಸರ್ಕಾರಿ ಶಾಲೆಗಳು ಎಂದರೆ ಮೂಗು ಮುರಿಯುವ ಸನ್ನಿವೇಶ ಇರುವಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಚ್ಚು ಹಂತಕ್ಕೆ ಹೋಗಿದ್ದ ಸರ್ಕಾರಿ ಶಾಲೆ ಸಮುದಾಯದ ಬೆಂಬಲದಿಂದ ಬೆಳೆದು ನಿಂತಿದೆ. ಇಲ್ಲಿದೆ ಆ ಯಶೋಗಾಥೆ.ವಿಶೇಷ ವರದಿ: ಹರೀಶ್‌ ಮಾಂಬಾಡಿ. ಮಂಗಳೂರು

ಬೆಳ್ತಂಗಡಿ ತಾಲ್ಲೂಕಲ್ಲಿ ಬೆಳೆದು ನಿಂತಿರುವ ಸರ್ಕಾರಿ ಶಾಲೆ
ಬೆಳ್ತಂಗಡಿ ತಾಲ್ಲೂಕಲ್ಲಿ ಬೆಳೆದು ನಿಂತಿರುವ ಸರ್ಕಾರಿ ಶಾಲೆ

ಮಂಗಳೂರು: ಇನ್ನೇನು ಶಾಲೆ ನಡೆಸಲು ಆಗುವುದಿಲ್ಲ ಎಂದು ಬೀಗ ಜಡಿಯುವ ಹಂತದಲ್ಲಿದ್ದ ಈ ಶಾಲೆಯಲ್ಲೀಗ ಮಕ್ಕಳ ಕಲರವ. ಕೇವಲ 16 ಮಕ್ಕಳಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಕೂಕ್ರಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲೀಗ 180 ಮಕ್ಕಳು. ಹಳೆ ವಿದ್ಯಾರ್ಥಿಗಳ ಸಹಿತ ಊರವರಿಗೆ ಇಚ್ಛಾಶಕ್ತಿ ಇದ್ದರೆ ಇದೆಲ್ಲ ಸಾಧ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ. ಇದೀಗ 1 ಕೋಟಿಗೂ ಅಧಿಕ ವೆಚ್ಚದ ಶಾಲಾ ಕಟ್ಟಡವೂ ನಿರ್ಮಾಣಗೊಂಡು ಮತ್ತಷ್ಟು ಮೆರುಗು ನೀಡಿದೆ.

ಶಾಲೆಯ ಇತಿಹಾಸ ಹೀಗಿದೆ

ಕುಕ್ಕೇರಬೆಟ್ಟು ಮನೆಯಲ್ಲಿ 1959 ಆಗಸ್ಟ್‌ 1ರಂದು ಕಿರಿಯ ಪ್ರಾಥಮಿಕ ಶಾಲೆ ಆರಂಭಗೊಂಡಿತು. ಆರಂಭದಲ್ಲಿ 33 ಮಕ್ಕಳು ದಾಖಲಾತಿಗೊಂಡರು. ವರ್ಷದಿಂದ ವರ್ಷಕ್ಕೆ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರಿಂದ, ಊರ ಪ್ರಮುಖರ ಸಹಕಾರದಲ್ಲಿ ಕೂಕ್ರಬೆಟ್ಟು ಎಂಬಲ್ಲಿ ಶಾಲೆಗೆ ಸ್ವಂತ ಕಟ್ಟಡ ನಿರ್ಮಾಣಗೊಂಡಿತು. 1995- 96ರ ವೇಳೆಗೆ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಎಂಟು ನೂರಕ್ಕೂ ಅಧಿಕ ಮಂದಿ ಈ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಾರೆ.

65 ವರ್ಷಗಳ ಇತಿಹಾಸವನ್ನು ಹೊಂದಿರುವ ಕೂಕ್ರಬೆಟ್ಟು ಶಾಲೆ ನಾಲ್ಕು ವರ್ಷಗಳ ಹಿಂದೆ ಬಾಗಿಲು ಮುಚ್ಚುವ ಸ್ಥಿತಿಗೆ ತಲುಪಿತ್ತು. 1ರಿಂದ 7ನೇ ತರಗತಿ ಹೊಂದಿರುವ ಶಾಲೆಯಲ್ಲಿ ಕೆಲವು ತರಗತಿಗಳು ಮಕ್ಕಳಿಲ್ಲದೆ ಖಾಲಿಯಾಗಿತ್ತು. ಈ ಹಂತದಲ್ಲಿ ಹಳೆ ವಿದ್ಯಾರ್ಥಿಗಳು ಶಾಲೆಯಲ್ಲಿ ಸಭೆ ಸೇರಿ, ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯ ರಾಜ್ಯಾಧ್ಯಕ್ಷ ಪ್ರಕಾಶ್‌ ಅಂಚನ್‌ ಅವರನ್ನು ಸಂಪರ್ಕಿಸಿ ಶಾಲೆಗೆ ಆಹ್ವಾನಿಸಿದರು.

ದಡ್ಡಲಕಾಡು ಮಾದರಿಯಾಯಿತು

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಡ್ಡಲಕಾಡು ಸರಕಾರಿ ಶಾಲೆಯೂ ಅಷ್ಟೇ. ಬೆರಳೆಣಿಕೆಯಷ್ಟು ಮಕ್ಕಳು, ಶಾಶ್ವತವಾಗಿ ಬೀಗ ಹಾಕಿಬಿಡುವ ಸ್ಥಿತಿಯನ್ನು ಹೊಂದಿದ್ದ ಈ ಶಾಲೆಯನ್ನು ಅಲ್ಲಿಯವರೇ ಆಗಿರುವ ವಸ್ತ್ರೋದ್ಯಮಿ ಪ್ರಕಾಶ್ ಅಂಚನ್ ಮರುಜೀವ ನೀಡಿದ್ದರು. ತಮ್ಮ ಮಕ್ಕಳನ್ನೇ ಅಲ್ಲಿಗೆ ಸೇರಿಸಿ, ಊರವರ ಮಕ್ಕಳನ್ನೂ ಪ್ರೇರೇಪಿಸಿ ಶಾಲೆ ನೋಡನೋಡುತ್ತ ಬೆಳೆದೇಬಿಟ್ಟಿತ್ತು. ಕೇವಲ ಎಂಟು ವರ್ಷಗಳಲ್ಲಿ ಎರಡಂಕಿಯ ಸಂಖ್ಯೆ ಮಕ್ಕಳಿದ್ದುದು ಈಗ ಸಾವಿರ ದಾಟಿದೆ. ಸ್ವತಃ ರಾಜ್ಯದ ರಾಜ್ಯಪಾಲರೇ ಶಾಲೆಗೆ ಬಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಡ್ಡಲಕಾಡು ಸರಕಾರಿ ಶಾಲೆ ಈ ಪರಿ ಬೆಳೆದ ಬಳಿಕ ಪ್ರಕಾಶ್ ಅಂಚನ್ ಸರಕಾರಿ ಶಾಲೆ ಉಳಿಸುವ ಅಭಿಯಾನವನ್ನೇ ಕೈಗೊಂಡರು. ಅದರ ಫಲವೇ ಇಂದು ಕೋಟಿ ರೂ ಕಟ್ಟಡದಲ್ಲಿ ಬೆಳ್ತಂಗಡಿಯ ಹಳ್ಳಿ ಪ್ರದೇಶವಾದ ಮರೋಡಿಯ ಶಾಲೆಯೂ ಬೆಳಗುತ್ತಿದೆ.

ಹೇಗಾಯಿತು ಬದಲಾವಣೆ?

ಬಂಟ್ವಾಳ ತಾಲ್ಲೂಕಿನ ದಡ್ಡಲಕಾಡಿನಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಗೆ ಮರುಜೀವ ನೀಡಿದ್ದ ಶ್ರೀ ದುರ್ಗಾ ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷರೂ ಆಗಿರುವ ಪ್ರಕಾಶ್‌ ಅಂಚನ್‌ ಅವರು 2019 ಫೆಬ್ರುವರಿ 2ರಂದು ತಮ್ಮ ತಂಡದೊಂದಿಗೆ ಮರೋಡಿಗೆ ಧಾವಿಸಿದರು. ಗ್ರಾಮದ ಮನೆಮನೆಗೆ ಖುದ್ದಾಗಿ ಭೇಟಿ ನೀಡಿ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿದರು. ಮಾತ್ರವಲ್ಲ, ಅಂದು ಶಾಲೆಯಲ್ಲೇ ವಾಸ್ತವ್ಯ ಹೂಡಿ ಶಾಲೆಯು ಈ ಸ್ಥಿತಿಗೆ ತಲುಪಲು ಕಾರಣವಾದ ಅಂಶ ಮತ್ತು ಉಳಿಸಲು ಮಾಡಬೇಕಾದ ಯೋಜನೆಯನ್ನು ರೂಪಿಸಿದರು.

ಮರುದಿನ ಶಾಲೆಯಲ್ಲಿ ಗ್ರಾಮಸ್ಥರ ಸಭೆಯನ್ನು ಕರೆದು ಶಾಲೆಯನ್ನು ಉಳಿಸಬೇಕಾದ ಅನಿವಾರ್ಯತೆಯ ಬಗ್ಗೆ ಮನವರಿಕೆ ಮಾಡಿ, ಸ್ಥಳೀಯವಾಗಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿಯನ್ನು ರಚಿಸಲಾಯಿತು. ಇದೇ ಸಭೆಯಲ್ಲಿ 40ಕ್ಕೂ ಅಧಿಕ ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಯಿಂದ ಕೂಕ್ರಬೆಟ್ಟು ಶಾಲೆಗೆ ದಾಖಲಿಸುವ ಭರವಸೆ ನೀಡಿದರು. ಈ ಮೂಲಕ ಮುಚ್ಚಬೇಕಿದ್ದ ಶಾಲೆಗೆ ಶಾಲೆಗೆ ಮರುಜೀವ ದೊರಕಿತ್ತು.‌

ನಂತರದಲ್ಲಿ ಸರ್ಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಶಿಕ್ಷಣಾಭಿಮಾನಿಗಳು, ಜನಪ್ರತಿನಿಧಿಗಳು, ದಾನಿಗಳು ಮತ್ತು ಮಕ್ಕಳ ಪೋಷಕರ ಪ್ರಯತ್ನದಿಂದ ಹಂತಹಂತವಾಗಿ ಶಾಲೆಯು ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಈ ಹಿಂದೆ ಮರೋಡಿಯ ಒಂದು ಭಾಗಕ್ಕಷ್ಟೇ ಸೀಮಿತವಾಗಿದ್ದ ಈ ಶಾಲೆಯಲ್ಲಿ ಇಂದು ಮರೋಡಿ ಮಾತ್ರವಲ್ಲದೆ ಸುತ್ತಮುತ್ತಲಿನ ಪೆರಾಡಿ, ಕಾಶಿಪಟ್ಣ, ಕೊಕ್ರಾಡಿ, ಸಾವ್ಯ, ಕುತ್ಲೂರು, ನಾರಾವಿ, ಶಿರ್ತಾಡಿ ಮತ್ತಿತರ ಗ್ರಾಮಗಳ ಮಕ್ಕಳು ಕಲಿಯುತ್ತಿದ್ದಾರೆ.

ದತ್ತು ಪಡೆದ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್

ನಂತರದಲ್ಲಿ ಶಾಲೆಯನ್ನು ಶ್ರೀ ದುರ್ಗಾ ಚಾರಿಟೇಬಲ್‌ ಟ್ರಸ್ಟ್ ದತ್ತು ಪಡೆಯಿತು. ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲಾಯಿತು. ಕನ್ನಡದೊಂದಿಗೆ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಅನುಮತಿ ಪಡೆಯಲಾಯಿತು. ಶಾಲೆಗೆ ಬೇಕಾದ ಹೆಚ್ಚುವರಿ ಗೌರವ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಲಾಯಿತು. ಜತೆಗೆ ಶಾಲೆಯಲ್ಲಿ ಯೋಗ, ಕರಾಟೆ, ನೃತ್ಯ, ಯಕ್ಷಗಾನ ಮುಂತಾದ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸಲಾಯಿತು. ಶ್ರೀದುರ್ಗಾ ಚಾರಿಟಬಲ್ ಟ್ರಸ್ಟ್‌ ವತಿಯಿಂದ ಶಾಲಾ ಬಸ್ ವ್ಯವಸ್ಥೆಯನ್ನು ಮಾಡಲಾಯಿತು. ದಾನಿಗಳ ನೆರವಿನಿಂದ ಶಾಲೆಗೆ ಬೇಕಾದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಇದರ ಫಲವಾಗಿ ಶಾಲೆಯಲ್ಲಿ 2020ರ ವೇಳೆಗೆ ಮಕ್ಕಳ ಸಂಖ್ಯೆ 80ಕ್ಕೆ ಏರಿದರೆ, 2021ಕ್ಕೆ 120ಕ್ಕೆ ಹೆಚ್ಚಾಗಿದೆ. ಅಂತೆಯೇ 2022ರಲ್ಲಿ 140 ದಾಟಿದರೆ, 2023ರಲ್ಲಿ180 ಮಕ್ಕಳು ಶಾಲೆಯಲ್ಲಿ ಓದುತ್ತಿದ್ದಾರೆ. ಶಾಲೆಯಲ್ಲಿ ಪ್ರಸ್ತುತ ಮುಖ್ಯಶಿಕ್ಷಕಿ ಸೇರಿದಂತೆ ನಾಲ್ವರು ಖಾಯಂ ಶಿಕ್ಷಕಿಯರು, ಮೂರು ಅತಿಥಿ ಶಿಕ್ಷಕಿಯರು ಮತ್ತು ಮೂವರು ಗೌರವ ಶಿಕ್ಷಕಿಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇಲ್ಲೂ ಇದೆ ಡಿಜಿಟಲ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್

ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ ನಿಧಿ ಯೋಜನೆಯಡಿ ಐಇಇಇ ಅಡ್ವಾನ್ಸಿಂಗ್‌ ಟೆಕ್ನಾಲಜಿ ಫಾರ್‌ ಹ್ಯೂಮಾನಿಟಿ ಸಂಸ್ಥೆಯಿಂದ ಕೂಕ್ರಬೆಟ್ಟು ಶಾಲೆಗೆ ಸುಮಾರು 2.40 ಲಕ್ಷ ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ಕಲ್ಪಿಸಲಾಗಿದೆ. ಎಂಆರ್‌ಪಿಎಲ್‌ನ ಸಿಎಸ್‌ಆರ್‌ ನಿಧಿಯಲ್ಲಿ 10 ಲಕ್ಷ ರೂ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯವನ್ನು ನಿರ್ಮಿಸಲಾಗಿದೆ. ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ 2 ಲಕ್ಷ ಒದಗಿಸಲಾಗಿದೆ.

ಬದಲಾವಣೆಯಾದ ಶಾಲೆ

ಮುಚ್ಚುವ ಹಂತದಲ್ಲಿದ್ದ ಕೂಕ್ರಬೆಟ್ಟು ಶಾಲೆಗೆ ಪ್ರಕಾಶ್‌ ಅಂಚನ್‌ ನೇತೃತ್ವದಲ್ಲಿ ಎಲ್ಲರ ಸಹಕಾರದಿಂದ ಕಾಯಕಲ್ಪ ನೀಡಲಾಗಿದೆ. ನಾಲ್ಕು ವರ್ಷದಲ್ಲಿ ಮಕ್ಕಳ ಸಂಖ್ಯೆ 11 ಪಟ್ಟು ಹೆಚ್ಚಾಗಿದೆ. ಶಾಲೆಯ ಕಟ್ಟಡ ಹಳೆಯದಾಗಿದ್ದರಿಂದ ಕೆಲ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದರು. ಶಾಲೆಗೆ ಸುಸಜ್ಜಿತ ಕಟ್ಟಡ ಅಗತ್ಯ ಇದ್ದುದರಿಂದ ಶಾಸಕ ಹರೀಶ್‌ ಪೂಂಜ ಹಾಗೂ ಸಂಸದ ನಳಿನ್‌ಕುಮಾರ್‌ ಕಟೀಲ್‌ ಅವರ ಅನುದಾನದಲ್ಲಿ ಎಂಟು ಕೊಠಡಿಗಳ ಕಟ್ಟಡವನ್ನು (ಸುಮಾರು 5 ಸಾವಿರ ಚದರ ಅಡಿ) ನಿರ್ಮಿಸಲಾಗಿದೆ. ಸಂಘಸಂಸ್ಥೆಗಳ, ದಾನಿಗಳ ಸಹಕಾರದಿಂದ ಶಾಲೆಗೆ ಬೇಕಾದ ಮೂಲಸೌಕರ್ಯಗಳನ್ನು ಪಡೆಯಲಾಗುತ್ತಿದೆ. ನಮ್ಮ ಶಾಲೆಯನ್ನು ಮೇಲ್ದರ್ಜೆಗೆ ಏರಿಸಿ ರಾಜ್ಯಕ್ಕೆ ಮಾದರಿ ಮಾಡುವ ಸಂಕಲ್ಪ ನಮ್ಮದು. ಮುಂದಿನ ದಿನಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಜಾಸ್ತಿಯಾಗುವ ನಿರೀಕ್ಷೆಯಿದೆ ಎನ್ನುತ್ತಾರೆ ಶಾಲೆ ಉಳಿಸಿ ಬೆಳೆಸಿ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್‌.

ಫೆ.17ರಂದು ಕಟ್ಟಡ ಲೋಕಾರ್ಪಣೆ

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಮತ್ತು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಅನುದಾನದಿಂದ ಸುಮಾರು 1.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೂಕ್ರಬೆಟ್ಟು ಸರ್ಕಾರಿ ಶಾಲೆಯ ಕಟ್ಟಡದ ಲೋಕಾರ್ಪಣಾ ಸಮಾರಂಭ ಮತ್ತು ಶಾಲಾ ಮಕ್ಕಳ ಸಾಂಸ್ಕೃತಿಕ ವೈಭವ ಫೆ.17ರಂದು ಶನಿವಾರ ನಡೆಯಲಿದೆ.

ವಿಶೇಷ ವರದಿ: ಹರೀಶ ಮಾಂಬಾಡಿ, ಮಂಗಳೂರು