Mangalore News: ಅಪಘಾತ ಗಾಯಾಳುಗಳಿಗೆ ಸಹಾಯ ಮಾಡಲೆಂದು ಹೋದಾಗ ಬೈಕ್ ಮೇಲೆ ಹರಿದ ಲಾರಿ
ಮಂಗಳೂರು ಹೊರ ವಲಯದಲ್ಲಿ ಲಾರಿ ಹಿಕ್ಕಿ ಹೊಡೆದು ಬೈಕ್‌ಗಳು ಜಖಂಗೊಂಡಿವೆ.ವರದಿ: ಹರೀಶ್ ಮಾಂಬಾಡಿ, ಮಂಗಳೂರು

ಮಂಗಳೂರು: ವಾಹನವೊಂದು ಅಪಘಾತವಾಗಿದ್ದನ್ನು ಕಂಡು ತಾವು ಸಂಚರಿಸುತ್ತಿದ್ದ ಬೈಕುಗಳನ್ನು ನಿಲ್ಲಿಸಿ ಸಹಾಯ ಮಾಡಲೆಂದು ಇಳಿದಿದ್ದ ಸಂದರ್ಭ ಘನಗಾತ್ರದ ಲಾರಿಯೊಂದು ಅದರ ಮೇಲೆ ಹರಿದು ಬೈಕುಗಳು ಜಖಂಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಬೆಂಜನಪದವು ಸಮೀಪ ಶನಿವಾರ ತಡರಾತ್ರಿ ನಡೆದಿದೆ. ಬೆಂಜನಪದವು ಸಮೀಪದ ಕೊಡ್ಮಾನ್ ಕೋಡಿ ಎಂಬಲ್ಲಿ ಘಟನೆ ನಡೆದಿದ್ದು, ಬೈಕ್ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಈ ಕುರಿತು ಮಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದಾರೆ.
ಯಾವುದೋ ಉದ್ದೇಶದಿಂದ ಬೆಂಜನಪದವು ಗುಡ್ಡವೊಂದಕ್ಕೆ ಬಂದಿದ್ದ ಕಾರೊಂದು ಚಾಲಕನ ಎಡವಟ್ಟಿನಿಂದ ಗುಂಡಿಗೆ ಬಿದ್ದಿತ್ತು. ಗುಂಡಿಗೆ ಬಿದ್ದ ಕಾರನ್ನು ಎತ್ತಿ ಮೇಲೆಕ್ಕೆ ತರುವ ಉದ್ದೇಶದಿಂದ ಕಾರು ಮಾಲಕನಿಗೆ ಸಹಾಯ ಮಾಡುವ ಹಿನ್ನೆಲೆಯಲ್ಲಿ ಎರಡು ಬೈಕ್ ಗಳಲ್ಲಿ ಬಂದ ಯುವಕರು ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದರು. ಕಾರನ್ನು ಎತ್ತಲು ಹೋದ ವೇಳೆ ಬೆಂಜನಪದವು ಕಡೆಯಿಂದ ಮಾರಿಪಳ್ಳ ಕಡೆಗೆ ತೆರಳುತ್ತಿದ್ದ ಲಾರಿಯೊಂದು ಬೈಕಗಳ ಮೇಲೆ ಹರಿದಿದೆ. ಘನಗಾತ್ರದ ಲಾರಿ ಬೈಕುಗಳ ಮೇಲೆ ಹರಿದ ಪರಿಣಾಮವಾಗಿ ಬೈಕುಗಳು ಸಂಪೂರ್ಣ ಜಖಂಗೊಂಡಿವೆ. ಬೈಕ್ ತನ್ನ ಮೂಲ ಆಕಾರವನ್ನು ಕಳೆದುಕೊಂಡು ಮುದ್ದೆಯಾಗಿದೆ.
ಬೆಂಜನಪದವು ಕಡೆಯಿಂದ ಮಣ್ಣು ಸಾಗಾಟ ಮಾಡುವ ತಮಿಳುನಾಡು ಮೂಲದ ಬೃಹತ್ ಗಾತ್ರದ ಲಾರಿ ಇದು, ಮಣ್ಣು ತುಂಬಿಸಿಕೊಂಡು ಬೆಂಜನಪದವು ಕಡೆಯಿಂದ ಬಿಸಿರೋಡಿನ ಕೈಕಂಬ ರಸ್ತೆಗೆ ತೆರಳಬೇಕಿತ್ತು. ಚಾಲಕನಿಗೆ ರಸ್ತೆಯ ಅಂದಾಜು ಇಲ್ಲದೆ, ದಾರಿ ತಪ್ಪಿ ಮಾರಿಪಳ್ಳ ರಸ್ತೆಯಲ್ಲಿ ಸಾಗಿದ್ದಾನೆ. ಈ ವೇಳೆ ತಿರುವಿನಲ್ಲಿ ಅಧಿಕ ಲೋಡ್ ಹೊಂದಿದ ಕಾರಣ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಬೈಕ್ ಗಳೆರಡನ್ನು ಎಳೆದುಕೊಂಡು ಹೋಗಿ, ಪುಡಿಪುಡಿ ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಈ ಘಟನೆಯ ಹಿಂದೆ ಯಾವುದೇ ದುರುದ್ದೇಶ ಇದ್ದಂತೆ ಕಾಣುತ್ತಿಲ್ಲ. ಆದರೂ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ. ಸಹಾಯ ಮಾಡಲು ಹೋದವರಿಗೆ ಯಾವುದೇ ತೊಂದರೆಯಾಗಿಲ್ಲ. ವಾಹನಗಳು ಜಖಂ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರಳು ಕಳ್ಳಸಾಗಾಟ: ನಾಲ್ವರ ಬಂಧನ
ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರುನಗರ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಪತ್ತೆಹಚ್ಚಿದ್ದಾರೆ.
ವಳಚ್ಚಿಲ್ ನೇತ್ರಾವತಿ ನದಿ ದಡದಿಂದ ಯಾವುದೇ ಅನುಮತಿ ಇಲ್ಲದೇ ಅಕ್ರಮವಾಗಿ ಮರಳು ಕಳವು ಮಾಡಿ ಸಾಗಿಸುತ್ತಿರುವುದಾಗಿ ಚಾಲಕರು ತಿಳಿಸಿದಂತೆ ಪ್ರಕರಣ ದಾಖಲಾಗಿದ್ದು, ಅಬ್ದುಲ್ ರಹಿಮಾನ್ (21), ಮಹಮ್ಮದ್ ಸಾದಿಕ್, ಗೌತಮ್ (21) ಮತ್ತು ಗುಡ್ಡಪ್ಪ ಗೌಡ, ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಲಾರಿಗಳನ್ನು ಮರಳಿನ ಸಮೇತವಾಗಿ ವಶಕ್ಕೆ ಪಡೆಯಲಾಗಿದೆ.
ಅಡಿಕೆ ಕಳವು ಪ್ರಕರಣ, ಆರೋಪಿ ಬಂಧನ
ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕುಳ್ಳಂಪ್ಪಾಡಿ ಹಿರಿಯಣ್ಣ ಎಂಬವರ, ಕೊಟ್ಟಿಗೆಯಲ್ಲಿ ಸುಲಿದು ದಾಸ್ತಾನು ಇರಿಸಿದ್ದ 5 ಗೋಣಿ ಚೀಲ ಅಡಿಕೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸಂದರ್ಭ, ಆರೋಪಿ ಮಂಡೆಕೋಲು ಗ್ರಾಮ ನಿವಾಸಿ ಸುಪೀತ್ ಕೆ (20) ಎಂಬಾತನನ್ನು ವಶಕ್ಕೆ ಪಡೆದು, 83,000 ರೂ ಮೌಲ್ಯದ 209 ಕೆ ಜಿ ಸುಲಿದ ಅಡಿಕೆ ಹಾಗೂ ಕೃತ್ಯಕ್ಕೆ ಬಳಸಿದ ರೂ 1,00,000 ಮೌಲ್ಯದ ಆಟೋ ರಿಕ್ಷಾ ವನ್ನು ಸ್ವಾಧೀನಪಡಿಸಲಾಗಿದೆ. ಈ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ವರದಿ: ಹರೀಶ್ ಮಾಂಬಾಡಿ. ಮಂಗಳೂರು)
