Dakshin Kannada News: ಬಂಟ್ವಾಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಚೂರಿ ಇರಿತ, ಕಾರಣ ಏನು?
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತನಿಗೆ ಚೂರಿ ಇರಿಯಲಾಗಿದೆ. ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಂಗಳೂರು: ಹಣಕಾಸಿನ ತಗಾದೆ ವಿಚಾರಕ್ಕೆ ಸಂಬಂಧಿಸಿದಂತೆ ಬಂಟ್ವಾಳದ ಜಕ್ರಿಬೆಟ್ಟು ಎಂಬಲ್ಲಿ ಹಿಂದು ಯುವಸೇನೆ ಕಾರ್ಯಕರ್ತ ಪುಷ್ಪರಾಜ್ ಎಂಬವರಿಗೆ ರವಿ ನಾವೂರು ಎಂಬಾತ ಚೂರಿಯಲ್ಲಿ ಇರಿದ ಕುರಿತು ಪ್ರಕರಣ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುವಿನ ಯೋಗಕ್ಷೇಮ ವಿಚಾರಿಸಿದರು. ಬಂಟ್ವಾಳ ತಾಲೂಕು ಬಂಟ್ವಾಳ ಕಸಬಾ ಗ್ರಾಮದ ಬಡ್ಡಕಟ್ಟೆ ಎಂಬಲ್ಲಿ ರವಿ ನಾವೂರು ಹಾಗೂ ಪುಷ್ಪರಾಜ್ ಎಂಬವರ ನಡುವೆ ಗಲಾಟೆ ನಡೆದು, ಆರೋಪಿ ರವಿ ನಾವೂರು ಪುಷ್ಪರಾಜ್ ರವರಿಗೆ ಚೂರಿಯಿಂದ ಹಲ್ಲೆ ನಡೆಸಿ ಪರಾರಿಯಾಗಿರುವುದಾಗಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಹಲ್ಲೆಯಿಂದ ಗಾಯಗೊಂಡ ಪುಷ್ಪರಾಜ್ ಅವರನ್ನು, ಬಂಟ್ವಾಳ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ, ಮಂಗಳೂರು ಖಾಸಗಿ ದಾಖಲಿಸಲಾಯಿತು. ಹಣಕಾಸಿನ ವಿಚಾರದಲ್ಲಿ ಆರೋಪಿ ಹಲ್ಲೆ ನಡೆಸಿರುವುದಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಚೂರಿ ಇರಿತದಿಂದ ಗಾಯಗೊಳಗಾದ ಬಂಟ್ವಾಳದ ಪುಷ್ಪರಾಜ್ ಅವರ ಯೋಗಕ್ಷೇಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಚಾರಿಸಿದರು. ಈ ಸಂದರ್ಭ ಪಕ್ಷದ ಮುಖಂಡರು ಹಾಜರಿದ್ದರು.
ಘಟನೆ ಕುರಿತು ಈಗಾಗಲೇ ದೂರು ದಾಖಲಿಸಿಕೊಂಡಿದ್ದೇವೆ. ಹಣಕಾಸಿನ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದರೂ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ. ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಬಂಟ್ವಾಳ ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರು ಡಿಕ್ಕಿ ವೇಳೆ ಮಾತಿನ ಚಕಮಕಿ: ದಂಪತಿಗೆ ಹಲ್ಲೆ
ಕಾರು ಅಪಘಾತ ಘಟನೆ ವೇಳೆ ಮಾತಿನ ಚಕಮಕಿ ಏರ್ಪಟ್ಟು, ಕಾರಿನಲ್ಲಿದ್ದ ದಂಪತಿ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಕಲ್ಲಡ್ಕ ಸಮೀಪ ಸೋಮವಾರ ನಡೆದಿದೆ. ಮಂಜುನಾಥ್ ಅವರು ಮಂಗಳೂರಿನಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಇವರ ಕಾರಿಗೆ ಹರಿಯಾಣ ಮೂಲದ ಕಾರೊಂದ ಓವರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿಯಾಗಿದೆ. ಈ ಸಂದರ್ಭ ಕೈ ಸನ್ನೆಯ ಮೂಲಕ ಪ್ರಶ್ನಿಸಿದಕ್ಕೆ ಅಪಘಾತ ಎಸಗಿದ ಕಾರು ಮುಂದೆ ಹೋಗಿ ಕರಿಂಗಾಣ ಕ್ರಾಸ್ ಎಂಬಲ್ಲಿ ಅಡ್ಡವಾಗಿ ಇರಿಸಿ ಅಲ್ಲಿದ್ದ ನಾಲ್ವರು ಮಂಜುನಾಥ್ ಹಾಗೂ ಅವರ ಪತ್ನಿ ಪೂರ್ಣಿಮಾ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಪೂರ್ಣಿಮಾ ಅವರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಲ್ಲೆಯಿಂದ ಮಂಜುನಾಥ್ ಅವರ ಕಣ್ಣಿನ ಮೇಲೆ ಪೆಟ್ಟು ಬಿದ್ದಿದ್ದು ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
1.42 ಲಕ್ಷ ಲೀಟರ್ ಮದ್ಯ ವಶಕ್ಕೆ
2024ರ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ದಿನದಿಂದ ಏಪ್ರಿಲ್ 15ರವರೆಗೆ ಜಿಲ್ಲೆಯಲ್ಲಿ 5,65,02,304 ರೂಪಾಯಿ ಮೌಲ್ಯದ 1,42,254 ಲೀಟರ್ ಮದ್ಯವನ್ನು ಜಪ್ತಿ ಮಾಡಲಾಗಿದೆ ಹಾಗೂ 8,69,950 ರೂ. ಮೌಲ್ಯದ 15.5 ಕೆಜಿ ಡ್ರಗ್ಸ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಅಬಕಾರಿ ನಿಯಮ ಉಲ್ಲಂಘನೆ ಹಾಗೂ ಇತರೆ ಸೇರಿದಂತೆ ಒಟ್ಟು 846 ಎಫ್.ಐ.ಆರ್ ಪ್ರಕರಣ ದಾಖಲಾಗಿದೆ. ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
(ವರದಿ: ಹರೀಶ ಮಾಂಬಾಡಿ, ಮಂಗಳೂರು)