ಕನ್ನಡ ಸುದ್ದಿ  /  Karnataka  /  Dakshin Kannada News Hindu Temple Committee Organizes Iftar Party To Muslim Families At Kedila In Bantwal Taluk Hsm

Dakshin Kannada: ದಕ್ಷಿಣ ಕನ್ನಡ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾಯ್ತು ದೈವಸ್ಥಾನ ಆಡಳಿತ ಸಮಿತಿ ಇಫ್ತಾರ್ ಕೂಟ

ಸಾಮರಸ್ಯದ ಇಫ್ತಾರ್‌ ಕೂಟವನ್ನು ದಕ್ಷಿಣ ಕನ್ನಡ ಜಿಲ್ಲೆಯ ಕೆದಿಲದಲ್ಲಿ ಆಯೋಜಿಸಲಾಗಿತ್ತು.ವರದಿ:ಹರೀಶ್‌ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡದಲ್ಲಿ ಗಮನ ಸೆಳೆದ ಸಾಮರಸ್ಯದ ಇಫ್ತಾರ್‌ ಕೂಟ.
ದಕ್ಷಿಣ ಕನ್ನಡದಲ್ಲಿ ಗಮನ ಸೆಳೆದ ಸಾಮರಸ್ಯದ ಇಫ್ತಾರ್‌ ಕೂಟ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಅಥವಾ ಕರಾವಳಿ ಎಂದೊಡನೆ ಕೋಮುದ್ವೇಷ ಹರಡಿಸುವವರೇ ಹೆಚ್ಚಿರುವ ಘಟನೆಗಳು ನಡೆಯುತ್ತವೆ ಎಂದು ಮೂಗುಮುರಿಯುವವರಿಗೆ ಉತ್ತರ ನೀಡಲೋ ಎಂಬಂತೆ ಕೋಮು ಸಾಮರಸ್ಯಕ್ಕೆ ಸಾಕ್ಷಿಯಾದ ಇಫ್ತಾರ್ ಕೂಟವೊಂದು ಗಮನ ಸೆಳೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದುಗಳು ಹಾಗೂ ಮುಸ್ಲಿಮರು ಸಹೋದರತ್ವದೊಂದಿಗೆ ವಾಸಿಸುತ್ತಿದ್ದಾರೆ ಎಂಬುದಕ್ಕೆ ಹಲವಾರು ನಿದರ್ಶನಗಳು ದೊರಕುತ್ತವೆ. ಅಂಥ ಒಂದು ಉದಾಹರಣೆ ಪುತ್ತೂರು ಸಮೀಪ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲ ಎಂಬಲ್ಲಿ ನಡೆಯಿತು. ಸಾಮರಸ್ಯ ಸೌಹಾರ್ದ ಪರಂಪರೆಗೆ ಸಾಕ್ಷಿಯಾಗಬಲ್ಲ ವಿನೂತನ ಕಾರ್ಯಕ್ರಮವಿದು.

ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಪಾಟ್ರಕೋಡಿ ಜುಮಾ ಮಸೀದಿ ವಠಾರದಲ್ಲಿ ನಡೆದ ಇಫ್ತಾರ್ ಕೂಟವನ್ನು ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ಆಯೋಜಿಸಿತ್ತು.

ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಿಂದು - ಮುಸ್ಲಿಂ - ಕ್ರೈಸ್ತ ಧರ್ಮದ ನೂರಾರು ಮಂದಿ ಕೂಡುವಿಕಯ ಸೌಹಾರ್ದ ಇಫ್ತಾರ್ ಸಂಗಮ ಇಲ್ಲಿನ ಶಾಂತಿ ಸೌಹಾರ್ದಕ್ಕೆ ಸಾಕ್ಷಿಯಾಯಿತು. ಮತೀಯ ಸಂಘರ್ಷ ಸೃಷ್ಠಿಸಿ ಸಮಾಜ ಒಡೆಯುವ ಶಕ್ತಿಗಳ ನಡುವೆ ಇಂತಹ ಕಾರ್ಯಕ್ರಮಗಳು ಹೆಚ್ಚಾಗಲಿ ಎಂದು ಆಗಮಿಸಿದವರು ಆಶಿಸಿದರು.

ಬ್ರಹ್ಮಕಲಶೋತ್ಸವದಲ್ಲೂ ಸಾಮರಸ್ಯ

ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು. ಅಲ್ಲದೆ ಮುಸ್ಲಿಂ ಮುಖಂಡರು ಅಲ್ಲಲ್ಲಿ ಬ್ರಹ್ಮಕಲಶೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಿದ್ದರು. ಈ ಸೌಹಾರ್ದದ ವಾತಾವರಣ, ಮಾನವೀಯತೆ, ಬಂಧುತ್ವವನ್ನು ಕಂಡ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು.

ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯ ವಾತಾವರಣ ಸೃಷ್ಠಿಯಾಗಿತ್ತು. ಇಂಥ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು ಶಾಶ್ವತವಾಗಿರಿಸಬೇಕು ಎಂಬ ದೃಷ್ಠಿಯಿಂದ ದೈವಸ್ಥಾನದ ಆಡಳಿತ ಸಮಿತಿ ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದ್ದಾರೆ. ದೈವಸ್ಥಾನ ಮತ್ತು ಮಸೀದಿಯ ಈ ಕಾರ್ಯ ಇತರೆಡೆಗಳಿಗೆ ಮಾದರಿಯಾಗಿದೆ.

ಹಿಂದು, ಮುಸ್ಲಿಂ ಕ್ರೈಸ್ತರ ಸಂಗಮ

ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಸೀದಿ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅಧ್ಯಕ್ಷ ಜೆ. ಕೃಷ್ಣ ಭಟ್ ಮೀರಾವನ, ಉಪಾಧ್ಯಕ್ಷ ಪರಮೇಶ್ವರ ನಾವಡಬಾಯಬೆ, ಕೋಶಾಧಿಕಾರಿ ಚೆನ್ನಪ್ಪ ಗೌಡ‌ ಕುದುಮಾನ್, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಕಾರ್ಯದರ್ಶಿ ಚರಣ್ ಕುಲಾಲ್ ಮಿತ್ತಪಡ್ಪು, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಜಿ ಆದಂ ಕುಂಞಿ, ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಉಮೇಶ್ ಮುರುವ, ಮಾಜಿ ಸದಸ್ಯ ರಾಬರ್ಟ್ ಲಸ್ರಾದೋ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಮಸೀದಿ ಕೋಶಾಧಿಕಾರಿ ಹಮೀದ್ ಹಾಜಿ ಕೋಡಿ, ಪೂರ್ವಾದ್ಯಕ್ಷರುಗಳಾದ ಮುಹಮ್ಮದ್ ಮಾಸ್ಟರ್, ಕೆ.ಎಸ್. ಯೂಸುಫ್, ಉಮ್ಮರ್ ಹಾಜಿ ಕರಿಮಜಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಗೌಡ, ಚೆನ್ನಪ್ಪ ಕಂಪ, ಮಸೀದಿ ಆಡಳಿತ ಸಮಿತಿ ಸದಸ್ಯರು, ಗೌಸಿಯಾ ಯಂಗ್ ಮೆನ್ಸ್ ನಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಮಸೀದಿ ವತಿಯಿಂದ ದೈವಸ್ಥಾನದ ಅಧ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು. ದೈವಸ್ಥಾನದ ವತಿಯಿಂದ ಮಸೀದಿ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ. ಪಕ್ರಬ್ಬ ಹಾಜಿ ಅವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆಯನ್ನು ನೀಡಿದ ರಿಕ್ಷಾ ಚಾಲಕ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.

(ವರದಿ: ಹರೀಶ್‌ ಮಾಂಬಾಡಿ. ಮಂಗಳೂರು)

IPL_Entry_Point