Mango Season: ಬಾಯಲ್ಲಿ ನೀರೂರಿಸುವ ಮಲೆನಾಡಿನ ಉಪ್ಪಿನಕಾಯಿ ಕಾಟು ಮಾವಿನಮಿಡಿಗೆ ದಕ್ಷಿಣ ಕನ್ನಡದಲ್ಲಿ ದರ ಎಷ್ಟಿದೆ?
ಕನ್ನಡ ಸುದ್ದಿ  /  ಕರ್ನಾಟಕ  /  Mango Season: ಬಾಯಲ್ಲಿ ನೀರೂರಿಸುವ ಮಲೆನಾಡಿನ ಉಪ್ಪಿನಕಾಯಿ ಕಾಟು ಮಾವಿನಮಿಡಿಗೆ ದಕ್ಷಿಣ ಕನ್ನಡದಲ್ಲಿ ದರ ಎಷ್ಟಿದೆ?

Mango Season: ಬಾಯಲ್ಲಿ ನೀರೂರಿಸುವ ಮಲೆನಾಡಿನ ಉಪ್ಪಿನಕಾಯಿ ಕಾಟು ಮಾವಿನಮಿಡಿಗೆ ದಕ್ಷಿಣ ಕನ್ನಡದಲ್ಲಿ ದರ ಎಷ್ಟಿದೆ?

ಮಲೆನಾಡ ಭಾಗದಲ್ಲಿ ಹೆಚ್ಚು ಬೆಳೆಯುವ ಕಾಟು ಮಾವಿನ ಮಿಡಿಗೆ ದಕ್ಷಿಣ ಕನ್ನಡದಲ್ಲಿ ಎಲ್ಲಿಲ್ಲದ ಬೇಡಿಕೆ. ಇಲ್ಲಿ ಕಡಿಮೆ ಬೆಳೆದರೂ ಹೊರಗಡೆಯಿಂದಲೇ ಹೆಚ್ಚು ಮಂಗಳೂರು ಭಾಗಕ್ಕೆ ಬರುತ್ತದೆವರದಿ: ಹರೀಶ ಮಾಂಬಾಡಿ. ಮಂಗಳೂರು

ದಕ್ಷಿಣ ಕನ್ನಡಕ್ಕೆ ಲಗ್ಗೆ ಇಟ್ಟ ಮಾವಿನ ಮಿಡಿ.
ದಕ್ಷಿಣ ಕನ್ನಡಕ್ಕೆ ಲಗ್ಗೆ ಇಟ್ಟ ಮಾವಿನ ಮಿಡಿ.

ಮಂಗಳೂರು: ನಾಡಮಾವು ಎಂದು ಹೇಳಲಾಗುವ ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಭಾಷೆಯಲ್ಲಿ ಕಾಟುಮಾವಿನಕಾಯಿಯ ಮಿಡಿ ಉಪ್ಪಿನಕಾಯಿಗೆ ಹೇಳಿ ಮಾಡಿಸಿದಂತಿರುತ್ತದೆ. ಸುಡುಬೇಸಗೆ ಮಾವಿನಕಾಯಿ ಸೀಸನ್ನೂ ಹೌದು. ಆದರೆ ಕಳೆದ ತಿಂಗಳು (ಮಾರ್ಚ್) ಮಾವಿನಕಾಯಿ ಎಲ್ಲಿದೆ ಎಂದು ಹುಡುಕುವ ಪರಿಸ್ಥಿತಿ ಇತ್ತು. ಹೀಗಾಗಿ ಧಾರಣೆ ಗಗನಕ್ಕೇರಿತ್ತು. ಇದೀಗ ಧಾರಣೆ ಇಳಿಮುಖವಾಗುತ್ತಿದೆ. ಒಂದು ಕೆ.ಜಿ. ಕಾಟುಮಾವಿನಕಾಯಿ ಮಿಡಿಗೆ 300 ರೂವರೆಗೆ ಧಾರಣೆ ಇದೆ. ಉಪ್ಪಿನಕಾಯಿ ಹಾಕುವವರು ಮಾವಿನಮಿಡಿ ಎಲ್ಲಿದೆ ಎಂದು ಹುಡುಕಿ ಹುಡುಕಿ ಕೊಂಡೊಯ್ಯುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ವ್ಯಾಪಾರಿ ಸಂತೆಗಳಾದ ಪುತ್ತೂರು ಸಂತೆಯಲ್ಲೂ ಮಾವಿನ ಮಿಡಿಗಳು ಮಾರಾಟಕ್ಕೆ ಕಾಣಿಸಿಕೊಳ್ಳತೊಡಗಿದ್ದು, ಸ್ಪರ್ಧಾತ್ಮಕ ದರದಲ್ಲಿ ಮಾರಾಟವಾಗುತ್ತಿದೆ.

ಹೊರಜಿಲ್ಲೆಗಳಿಂದ ಸರಬರಾಜಿಗೆ ಕಾರಣವೇನ

ಈ ಸಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಟು ಮಾವಿನಕಾಯಿ ಇಳುವರಿ ಕಡಿಮೆ. ಹವಾಮಾನ ವೈಪರೀತ್ಯ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಪೂರೈಕೆ ಕುಸಿತವಾದರೆ ಸಹಜವಾಗಿಯೇ ಬೆಲೆ ಏರುತ್ತದೆ. ಅದೇ ರೀತಿ ಮಾವಿನ ಮಿಡಿ ಧಾರಣೆ ಗಗನ ಮುಖಿಯಾಗಿತ್ತು. ಇದೀಗ ಹೊರ ಜಿಲ್ಲೆಗಳಿಂದ ಮಾವಿನ ಮಿಡಿ ಸರಬರಾಜು ಆರಂಭಗೊಂಡ ಕಾರಣ ಬೆಲೆ ಇಳಿಮುಖವಾಗುತ್ತಿದೆ.

ಮಾರ್ಚ್ ತಿಂಗಳು ಕಾಲಿಡುತ್ತಿದ್ದಂತೆ ಜಿಲ್ಲೆಯ ಹಲವೆಡೆ ಕಾಟು ಮಾವಿನ ಮಿಡಿಗಳ ಮಾರಾಟ ಆರಂಭಗೊಳ್ಳುತ್ತದೆ. ಸ್ವಲ್ಪ ದಿನಗಳಲ್ಲೇ ಇದು ತೇಜಿಯಾಗುತ್ತದೆ. ಪುತ್ತೂರು, ಕಡಬ, ಸುಳ್ಯ, ವಿಟ್ಲ, ಉಪ್ಪಿನಂಗಡಿ ಭಾಗಗಳಲ್ಲಿ ಕಿಲೊ ಒಂದಕ್ಕೆ 300 ರೂ.ಗೆ ಮರಾಟವಾಗುತ್ತಿದ್ದ ಮಾವಿನ ಮಿಡಿ ಕಳೆದ ವಾರ ಹಠಾತ್‌ ಏರಿಕೆ ಕಂಡಿತ್ತು. ಒಂದು ಕೆಜಿ ಕಾಟು ಮಾವಿನ ಕಾಯಿಗೆ (ಮಿಡಿ) 350 ರೂ ಆಗಿತ್ತು. ಇದೊಂದು ಸಾರ್ವಕಾಲಿಕ ಏರಿಕೆ ದರ ಎಂದು ವ್ಯಾಪಾರಿಗಳು ಬಣ್ಣಿಸುತ್ತಾರೆ. ಚಿಕ್ಕಮಗಳೂರು ಜಿಲ್ಲೆ ಸಹಿತ ಕಾಟು ಮಾವು ಬೆಳೆಯುವ ಪ್ರದೇಶಗಳಿಂದ ಮಿಡಿಗಳು ಜಿಲ್ಲೆಗೆ ಬರತೊಡಗಿದ ಬಳಿಕ ಪೂರೈಕೆ ಸಮಸ್ಯೆ ನಿವಾರಣೆಯಾಯಿತು.

ಮಲೆನಾಡ ಮಾವು

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್‌ಆರ್‌ ಪುರ ಮುಂತಾದ ಭಾಗಗಳ ಗ್ರಾಮೀಣ ಪ್ರದೇಶಗಳಲ್ಲಿ ಸಮೃದ್ಧವಾಗಿ ಕಾಟು ಮಾವಿನ ಫಸಲು ಬಂದಿದೆ. ಅಲ್ಲಿಂದ ಸಗಟು ರೂಪದಲ್ಲಿ ಖರೀದಿಸಿ ತಂದು ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಕಡೆ ಮಾರಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮಾವಿನ ಮಿಡಿ ರುಚಿಕರವಾಗಿದೆ. ನಮ್ಮಲ್ಲಿನ ಮಾವಿನ ಮಿಡಿಗಳಲ್ಲಿ ದೊಡ್ಡ ಗಾತ್ರದ ಗೊರಟು ಇದ್ದರೆ, ಅಲ್ಲಿನ ಕಾಯಿಗಳ ಗೊರಟು ತೀರಾ ಸಣ್ಣದಿರುವುದು ಗ್ರಾಹಕರಿಗೆ ಪ್ರಿಯವಾಗಿದೆ. ಪುತ್ತೂರು ತಾಲೂಕಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ಕಾಟು ಮಾವಿನ ಮರಗಳಿಂದ ಮಿಡಿಗಳನ್ನು ಕೊಯ್ಯುವ ಪ್ರಕ್ರಿಯೆ ರದ್ದುಪಡಿಸಿದ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ ಕಾಟು ಮಾವು ಲಭ್ಯತೆ ಕುಂಠಿತಗೊಂಡಿತ್ತು. ಹೊರ ತಾಲೂಕುಗಳ ಮಿಡಿಗಳನ್ನೇ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಕಾಟು ಮಾವಿನ ಹಣ್ಣಗಳು ಪ್ರಾಣಿ, ಪಕ್ಷಿಗಳಿಗೆ ಆಹಾರವಾಗಿ ಸಿಗಬೇಕೆಂಬ ಕಾರಣಕ್ಕೆ ಶಾಸಕ ಅಶೋಕ್‌ ರೈ ಸೂಚನೆ ಮೇರೆಗೆ ತಾಲೂಕಿನಲ್ಲಿ ಕಾಟು ಮಾವಿನ ಮಿಡಿ ಏಲಂ ರದ್ದುಪಡಿಸಲಾಗಿತ್ತು. ಮಾವಿನ ಮಿಡಿ ಕೊಯ್ದವರು ನೇರವಾಗಿ ಮಾರುಟ್ಟೆಯಲ್ಲಿ ತಂದು ಮಾರುವುದು ಕಡಿಮೆ. ಕ್ವಿಂಟಾಲ್‌ಗಟ್ಟಲೆ ಮಿಡಿ ಕೊಯ್ದು ತರುವವರು ಬಿಡಿ ವರ್ತಕರಿಗೆ ಅದನ್ನು ಹಂಚುತ್ತಾರೆ. ಬಿಡಿ ವ್ಯಾಪಾರಸ್ಥರು ರಸ್ತೆ ಬದಿ ಕುಳಿತು ಮಾರುತ್ತಾರೆ.

ಚಿಕ್ಕಮಗಳೂರು ಜಿಲ್ಲೆಯ ಕೆಲ ಪ್ರದೇಶಗಳಿಂದ ಮಾವಿನ ಮಿಡಿ ಕೊಯ್ಯಲು ಕಾರ್ಮಿಕರನ್ನು ಕರೆದುಕೊಂಡು ಹೋಗುವವರಿದ್ದಾರೆ. ಅನೇಕ ಪ್ರದೇಶಗಳ ಮಾವಿನ ಮಿಡಿ ಕೊಯ್ಯುವ ಏಲಂ ಪಡೆದುಕೊಳ್ಳುತ್ತಾರೆ. ಅಥವಾ ನಿರ್ದಿಷ್ಟ ಮೊತ್ತಕ್ಕೆ ಪಡೆದುಕೊಂಡು ದೊಡ್ಡ ಪ್ರಮಾಣದಲ್ಲಿ ಕೊಯ್ದು ದಕ್ಷಿಣ ಕನ್ನಡ ಜಿಲ್ಲೆಯ ಮಾರುಕಟ್ಟೆಗೆ ತರುವವರಿದ್ದಾರೆ.

ಕಾಟು ಮಾವು ಉಳಿಸಲು ತೋಟ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಟು ಮಾವು ಉಳಿಸಲು ಕೆಲ ಪ್ರಗತಿಪರ ಕೃಷಿಕರು ಪಣತೊಟ್ಟಿದ್ದಾರೆ. ಪಶುವೈದ್ಯರೂ, ಪರಿಸರಪ್ರೇಮಿಗಳೂ ಆಗಿರುವ ಡಾ.ಮನೋಹರ ಉಪಾಧ್ಯ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕಿಲ ಎಂಬಲ್ಲಿ ಎಕರೆಯಷ್ಟು ಜಾಗವನ್ನು ಕಾಟು ಮಾವಿನ ಗಿಡ ಬೆಳೆಸಲೆಂದೇ ಖರೀದಿಸಿ, ಅಲ್ಲಿ ಸಸಿಗಳನ್ನು ನೆಟ್ಟಿದ್ದಾರೆ. ಸಾಮಾನ್ಯವಾಗಿ ಗುಡ್ಡಗಳಲ್ಲಿ ನಾಡಮಾವು ಬೆಳೆಯುತ್ತದೆ. ಆದರೆ ಬದಲಾದ ತೋಟಗಾರಿಕೆ, ಕೃಷಿಯಿಂದಾಗಿ ಮಾವಿನ ಮರಗಳಿಗೆ ಕೊಡಲಿಯೇಟು ಕೊಟ್ಟು ಅಲ್ಲಿ ಆರ್ಥಿಕ ಲಾಭದಾಯಕ ಕೃಷಿಯನ್ನು ಮಾಡಲಾಗುತ್ತಿದೆ. ಹೀಗಾಗಿ ಮಾವಿನ ಕುರಿತು ಆಸ್ಥೆ ಇರುವ ಕೃಷಿಸಮೂಹ ನಾಡಮಾವನ್ನು ಉಳಿಸುವ ಕಾರ್ಯಕ್ಕೂ ಮುಂದಾಗಬೇಕಾಗಿದೆ. ಅಲ್ಲದೆ, ನಾಡಮಾವು ಕೇವಲ ಉಪ್ಪಿನಕಾಯಿಗಾಗಿ ಬಳಕೆಯಾಗುವುದಲ್ಲ. ಮರದಲ್ಲಿರುವ ಮಾವಿನಹಣ್ಣುಗಳು ಹಕ್ಕಿ, ಪ್ರಾಣಿಗಳಿಗೂ ಇಷ್ಟ. ಪ್ರಾಕೃತಿಕ ಸಮತೋಲನ ಉಳಿಯಲೂ ನಾಡಮಾವು ಬೇಕು ಎನ್ನುವುದು ಇದನ್ನು ಬಳಸುವವರ ಮಾತು.

(ವರದಿ:ಹರೀಶ ಮಾಂಬಾಡಿ, ಮಂಗಳೂರು)

Whats_app_banner