ಕನ್ನಡ ಸುದ್ದಿ  /  Karnataka  /  Dakshin Kannada News Love Failure Is Motto Behind Kerala Students Acid Attack In Kadaba Police Suspect Hsm

Dakshin Kannada News:ಸಮವಸ್ತ್ರದಲ್ಲೇ ಬಂದು ಕೇರಳದ ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ, ಪ್ರೇಮ ವೈಫಲ್ಯಕ್ಕೆ ಕೃತ್ಯದ ಶಂಕೆ

Kerala Students ಪ್ರೇಮ ನಿವೇದನೆಗೆ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ದಕ್ಷಿಣ ಕನ್ನಡದಲ್ಲಿ ಓದುತ್ತಿರುವ ಕೇರಳದ ಮೂಲದ ವಿದ್ಯಾರ್ಥಿನಿಯರ ಮೇಲೆ ಆಸಿಡ್‌ ದಾಳಿ ಮಾಡಿರುವ ಪ್ರಕರಣವಿದು. ಪೊಲೀಸರು ತನಿಖೆ ಕೈಗೊಂಡಿದ್ದಾರೆ.ವರದಿ: ಹರೀಶ್‌ ಮಾಂಬಾಡಿ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆಸಿಡ್‌ ದಾಳಿ ತನಿಖೆ ಚುರುಕುಗೊಂಡಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆಸಿಡ್‌ ದಾಳಿ ತನಿಖೆ ಚುರುಕುಗೊಂಡಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿರುವ ಸರಕಾರಿ ಕಾಲೇಜಿನ ಮೂವರು ವಿದ್ಯಾರ್ಥಿನಿಯರ ಮೇಲೆ ಯುವಕನೋರ್ವ ಆಸಿಡ್ ಎರಚಿದ ಘಟನೆ ನಡೆದಿದ್ದು, ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಈ ಘಟನೆಯ ತರುವಾಯ ಆರೋಪಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ತೀವ್ರ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಈ ಸಂದರ್ಭ ಪ್ರೇಮಿಸಿದ ಹುಡುಗಿ ತನಗೆ ಸಿಗಲಿಲ್ಲ ಎಂಬ ಕಾರಣಕ್ಕೆ ತಾನು ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿದ್ದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೇರಳ ಮಲ್ಲಪ್ಪುರಂ ಜಿಲ್ಲೆಯ ನೆಲಂಬೂರು ನಿವಾಸಿ ಅಬೀನ್ (23) ಕೃತ್ಯ ನಡೆಸಲು ಇದೇ ಕಾಲೇಜಿನ ಸಮವಸ್ತ್ರದಲ್ಲಿ ಬಂದಿದ್ದ ಎಂಬ ಅಂಶ ಬಯಲಾಗಿದೆ.

ಸಮವಸ್ತ್ರದಲ್ಲಿ ಬಂದ ಆಸಿಡ್ ಹಾಕಿದ

ತಾನು ಏಕಮುಖವಾಗಿ ಪ್ರೀತಿಸಿದ ಹುಡುಗಿ ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಒಂದೇ ಒಂದು ಕಾರಣಕ್ಕೆ ಸಮವಸ್ತ್ರದಲ್ಲಿ ಬಂದು ಕಾದು ಕುಳಿತು ಆಸಿಡ್ ದಾಳಿ ಯನ್ನು ಅಬಿನ್ ನಡೆಸಿದ್ದಾನೆ. ಸೋಮವಾರ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಸಜ್ಜಾಗುತ್ತಿದ್ದ ವೇಳೆ ಕಡಬ ಕಾಲೇಜಿನ ಬಿಳಿ ಅಂಗಿ ಮತ್ತು ನೀಲಿ ಪ್ಯಾಂಟ್ ಹೋಲುವ ಸಮವಸ್ತ್ರವನ್ನು ಧರಿಸಿ ಬಂದಿದ್ದ ಅಬೀನ್, ಇತರ ವಿದ್ಯಾರ್ಥಿಗಳೊಂದಿಗೆ ಜಗಲಿಯಲ್ಲಿ ಕುಳಿತಿದ್ದ. ಇದೇ ಪರಿಸರದ ಇತರ ಕಾಲೇಜುಗಳಿಂದಲೂ ಈ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಬಂದ ಕಾರಣ, ಈತನ ಬಗ್ಗೆ ಯಾರೂ ಅನುಮಾನಗೊಂಡಿರಲಿಲ್ಲ. ಇಷ್ಟೇ ಅಲ್ಲದೆ, ಈತ ಮುಂಚಿನ ದಿನ ರಾತ್ರಿಯೇ ಇಲ್ಲಿ ಠಳಾಯಿಸಿದ್ದು, ಸಿಸಿ ಕ್ಯಾಮರಾವನ್ನೂ ತಿರುಗಿಸಿಟ್ಟಿದ್ದಾನೆ ಎನ್ನಲಾಗಿದ್ದರೂ ಇನ್ನೂ ಖಚಿತ ಮಾಹಿತಿ ದೊರಕಿಲ್ಲ.

ಪ್ರಶ್ನೆಪತ್ರಿಕೆ ಬಂಡಲ್ ತೆರೆಯುತ್ತಿದ್ದ ವೇಳೆ ಘಟನೆ

ಕಾಲೇಜು ಸ್ಟಾಫ್ ರೂಮ್ ನಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲನ್ನು ತೆರೆಯುತ್ತಿದ್ದ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ವಿದ್ಯಾರ್ಥಿಗಳ ಚೀರಾಟ ಕೇಳಿದೆ. ಈ ಸಂದರ್ಭ ಧಾವಿಸಿ ಬಂದಾಗ ಅಬಿನ್ ಆಸಿಡ್ ದಾಳಿ ಮಾಡಿದ್ದ. ಕೃತ್ಯ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಯನ್ನು ವಿದ್ಯಾರ್ಥಿಗಳು ಬೆನ್ನಟ್ಟಿ ಹಿಡಿದಿದ್ದಾರೆ. ಬಳಿಕ ಕಡಬ ಪೊಲೀಸರಿಗೆ ಒಪ್ಪಿಸಲಾಗಿದೆ. ಮಾಸ್ಕ್ ಮತ್ತು ಹ್ಯಾಟ್ ಧರಿಸಿ, ಸಮವಸ್ತ್ರದಲ್ಲಿದ್ದ ಈತ ಆಸಿಡ್ ದಾಳಿ ನಡೆಸಿ ಪರಾರಿಯಾಗುವ ಪಕ್ಕಾ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದ.

ಯುವಕನ ದೂರದ ಸಂಬಂಧಿಯೂ ಆಗಿರುವ ಆಲಿನಾ ಎಂಬಾಕೆಯನ್ನು ಈತ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಆಕೆ ಈತನ ಪ್ರೀತಿಯನ್ನು ನಿರಾಕರಿಸುತ್ತಿದ್ದಳು. ತನ್ನದೇ ದೂರದ ಸಂಬಂಧಿಯೂ ಆಗಿರುವ ಹುಡುಗಿಗೆ ಈತ ಪ್ರೇಮ ನಿವೇದನೆಯನ್ನೂ ಮಾಡಿದ್ದ. ಆದರೆ ಶಿಕ್ಷಣದ ಕುರಿತು ಮಾತ್ರ ಗಮನ ಹರಿಸಿದ್ದ ಹುಡುಗಿ, ಆತನ ಪ್ರೇಮವನ್ನು ತಿರಸ್ಕರಿಸಿದ್ದಳು. ಇದರಿಂದ ಸಿಟ್ಟಿಗೆದ್ದ ಆರೋಪಿ, ನೀನು ನನಗೆ ಸಿಗದೇ ಇದ್ದರೆ, ಬೇರೆ ಯಾರಿಗೂ ಸಿಗಬಾರದು ಎಂಬ ಭಾವನೆಯಿಂದ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ ಎಂದು ತಿಳಿದುಬಂದಿದೆ.

ಆದರೆ ಈತ ಟಾರ್ಗೆಟ್ ಮಾಡಿದ್ದು ಆಲಿನಾಳನ್ನಾದರೂ ಆಕೆಯ ಗೆಳತಿಯರಿಗೂ ಆಸಿಡ್ ಬಿದ್ದಿದೆ. ಕಡಬ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದು, ಉನ್ನತ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದಾರೆ.

ತನಿಖೆ ನಡೆಯುತ್ತಿದೆ: ಎಸ್ಪಿ ರಿಷ್ಯಂತ್

ಈ ಕುರಿತು ಎಸ್ಪಿ ರಿಷ್ಯಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಇವತ್ತು ಸುಮಾರು 9.55ಕ್ಕೆ ಸರಕಾರಿ ಪದವಿಪೂರ್ವ ಕಾಲೇಜು ಕಡಬದಲ್ಲಿ ಅಬಿನ್ ಆಸಿಡ್ ಹಾಕಿದ್ದಾಗಿ ಗೊತ್ತಾಗಿದೆ. ಹುಡುಗಿಯೊಬ್ಬಳನ್ನು ಟಾರ್ಗೆಟ್ ಮಾಡಿದ್ದರೂ ಪಕ್ಕದಲ್ಲಿರುವ ಇಬ್ಬರಿಗೂ ತಾಗಿದೆ. ಉಳಿದಿಬ್ಬರಿಗೆ ದೊಡ್ಡ ಗಾಯಗಳಾಗಿಲ್ಲ. ಕೇರಳದವನಾಗಿರುವ ಈತನ ವಿಚಾರಣೆ ನಡೆಯುತ್ತಿದೆ. ಯಾವ ರೀತಿ ಈತ ಬಂದ ಎಂಬಿತ್ಯಾದಿ ತನಿಖೆ ನಡೆಸಲಾಗುತ್ತಿದೆ. ಹುಡುಗ ಕೇರಳದ ಮಲಪ್ಪುರಂ ಜಿಲ್ಲೆಯವನು, ಈತನ ಮನೆ ಹತ್ತಿರ ಹುಡುಗಿ ತಾಯಿ ಮನೆ ಇದೆ. ಮೇಲ್ನೋಟಕ್ಕೆ ಪ್ರೇಮ ನಿರಾಕರಣೆ ಕಾರಣ ಎನ್ನಲಾಗಿದೆ. ಪ್ರಸ್ತುತ ಈತ ಯೂನಿಫಾರ್ಮ್ ಹಾಕಿಕೊಂಡು ಬಂದಿದ್ದಾನೆ ಎನ್ನಲಾಗಿದ್ದು, ಅದನ್ನು ಯಾರು ಕೊಟ್ಟರು ಎಂಬ ತನಿಖೆ ನಡೆಸಲಾಗುತ್ತಿದೆ ಎಂದರು.

(ವರದಿ: ಹರೀಶ್‌ ಮಾಂಬಾಡಿ)

IPL_Entry_Point

ವಿಭಾಗ