Netravati Floods: ನೇತ್ರಾವತಿ ನದಿ ಪ್ರವಾಹದ ನೆನಪು, 5 ದಶಕದ ಹಿಂದೆ ನೇತ್ರಾವತಿ ಉಕ್ಕಿ ಹರಿದಾಗ ದ್ವೀಪದಂತಾಗಿತ್ತು ಬಂಟ್ವಾಳ
ಕನ್ನಡ ಸುದ್ದಿ  /  ಕರ್ನಾಟಕ  /  Netravati Floods: ನೇತ್ರಾವತಿ ನದಿ ಪ್ರವಾಹದ ನೆನಪು, 5 ದಶಕದ ಹಿಂದೆ ನೇತ್ರಾವತಿ ಉಕ್ಕಿ ಹರಿದಾಗ ದ್ವೀಪದಂತಾಗಿತ್ತು ಬಂಟ್ವಾಳ

Netravati Floods: ನೇತ್ರಾವತಿ ನದಿ ಪ್ರವಾಹದ ನೆನಪು, 5 ದಶಕದ ಹಿಂದೆ ನೇತ್ರಾವತಿ ಉಕ್ಕಿ ಹರಿದಾಗ ದ್ವೀಪದಂತಾಗಿತ್ತು ಬಂಟ್ವಾಳ

ಪ್ರವಾಹಗಳು ನೆನಪುಗಳಾಗಿ ಉಳಿದು ಬಿಡುತ್ತವೆ. ಭಾರತದಲ್ಲಿ ಅಂತಹ ಹಲವು ಪ್ರವಾಹಗಳಲ್ಲಿ ದಕ್ಷಿಣ ಕನ್ನಡದ ಬಂಟ್ವಾಳ ಪಟ್ಟಣ ಎದುರಿಸಿದ್ದ ನೇತ್ರಾವತಿ ನದಿ ಪ್ರವಾಹವೂ ಒಂದು. ಇದನ್ನು ಪ್ರೊ.ರಾಜಮಣಿ ರಾಮಕುಂಜ ನೆನಪಿಸಿಕೊಟ್ಟಿದ್ದಾರೆ.ಸಂಗ್ರಹ: ಹರೀಶ ಮಾಂಬಾಡಿ. ಮಂಗಳೂರು

ಐದು ದಶಕದ ಹಿಂದಿನ ಬಂಟ್ವಾಳ ಪ್ರವಾಹ ಹೀಗಿತ್ತು.
ಐದು ದಶಕದ ಹಿಂದಿನ ಬಂಟ್ವಾಳ ಪ್ರವಾಹ ಹೀಗಿತ್ತು.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖ ಪಟ್ಟಣ ಎಂದೇ ಹೇಳಲಾಗುವ ನೇತ್ರಾವತಿ ನದಿಯ ದಂಡೆಯ ಬಂಟ್ವಾಳ ಪೇಟೆಯಲ್ಲಿ 1923ರಲ್ಲಿ, 1974ರಲ್ಲಿ ಪ್ರವಾಹ ಬಂದಿತ್ತು. 1974ರಲ್ಲಿ ನೇತ್ರಾವತಿ ನದಿ ಉಕ್ಕಿ ಹರಿದ ವಿದ್ಯಮಾನವನ್ನು ನೋಡಿದವರು ಈಗಲೂ ಆ ಘಟನೆ ಕುರಿತು ನೆನಪಿಸುತ್ತಾರೆ. ಬಂಟ್ವಾಳ ಎಸ್.ವಿ.ಎಸ್. ಕಾಲೇಜಿನ ನಿವೃತ್ತ ಪ್ರೊಫೆಸರ್ ರಾಜಮಣಿ ರಾಮಕುಂಜ ಅವರು ಇಡೀ ಘಟನೆಯ ಕುರಿತು ಹಿರಿಯರನ್ನು ಮಾತನಾಡಿಸಿ, ತಮ್ಮ ಅಧ್ಯಯನವನ್ನು ಬರೆದುಕೊಂಡಿದ್ದಾರೆ. ಅಂದು ನೇತ್ರಾವತಿ ನದಿ ಬಂಟ್ವಾಳ ಪೇಟೆಯನ್ನು ಮುಳುಗಿಸಿದ್ದಾಗ, ಪ್ರಯಾಸಪಟ್ಟು ಫೊಟೋ ತೆಗೆದವರು ದಿವಂಗತ ಡಾ. ನರೇಂದ್ರ ಆಚಾರ್ಯ. ಆ ಫೊಟೋಗಳು ಈಗ ಅಮೂಲ್ಯ ದಾಖಲೆಗಳಾಗಿವೆ.

ಪ್ರೊ.ರಾಜಮಣಿ ರಾಮಕುಂಜ ಬರೆಹ ಹೀಗಿದೆ.

ಅದು 1974 ರ ಜುಲಾಯಿ 26ರ ಶುಕ್ರವಾರದ ಘಳಿಗೆ. ಮೇಘರಾಜ ಘರ್ಜಿಸುತ್ತಿದ್ದಾನೆ! ಒಡಲು ತುಂಬಿದೆ....ಕ್ಷಣ ಮಾತ್ರದಲ್ಲಿ ಸ್ಫೋಟಗೊಳ್ಳಬಹುದು, ಈ ಸ್ಫೋಟಕ್ಕೆ ನೇತ್ರಾವತಿ ಕಣ್ಣು ಮಿಟುಕಿಸಿ ಉಕ್ಕಿ ಹರಿದಾಳು, ಮಿಕ್ಕಿ ಕುಣಿದಾಳು, ರುದ್ರ ನರ್ತನ ಗೈದಾಳು!!! ಹೀಗೆ ಬಂಟವಾಳದ ಮಹಾ ಜನತೆಯನ್ನು ಮೇಘ ರಾಜ ಎಚ್ಚರಿಸುತ್ತಲೇ ಇದ್ದ.

ಮೈ ಛಳಿ ಬಿಟ್ಟ ಜನತೆ 23ಕ್ಕೆ ತಿರುಗಿ ನೋಡಿತು, ಅದು ಹದಿಹರೆಯದ ಕಾಲೇಜಿನ ನರ್ತನ, ಆ ನೆನಪು ಮರೆತಿಲ್ಲ, ಇದು ಎಪ್ಪತ್ತನಾಲ್ಕರ ಮಾಗಿದ ನರ್ತನ ಆದರೆ ದಿಗ್ಬಂಧನ.

ಇನ್ನೇನು! ಎಲ್ಲೆಲ್ಲೂ ನೀರವ ಮೌನ, ವರುಣನ ಅಬ್ಬರಕ್ಕೆ ಗಿಡಮರಬಳ್ಳಿಹುಲ್ಲುಪೊದರುಗಳು ಬಾಗಿದವು ನೆಲ ಚುಂಬಿಸಿದವು ಆಧಾರ ತಪ್ಪಿದುವು, ಹಕ್ಕಿಗಳು ಮರ ಬಿಟ್ಟವು, ಚಿರ ಪರಿಚಿತ ಜಲಚರಗಳು ತೇಲಿಹೋದವು ಮುಂದಕೆ. ಇನ್ನೇನಿನ್ನೇನು ಅನ್ನುವಾಗಲೇ ಬೆರಳು ಮುಳುಗಿಸಿದಳು ನೇತ್ರಾವತಿ, ಪಾದ ಮುಳುಗಿಸಿದಳು ನೇತ್ರಾವತಿ, ಮೊಣಕಾಲಿಗೆ ಬಂದಳು ನೇತ್ರಾವತಿ, ಸೊಂಟಕ್ಕೆ ಏರಿಯಾಳು ನೇತ್ರವತಿ, ಎಲ್ಲವ ಹೊತ್ತು ಮುಳುಗಿಸಿಯಾಳು ನೇತ್ರಾವತಿ. ಕೇಕೆ ಹಾಕುವ ಕೋಳಿಗಳು ಕೀರಲಿಡುವ ನಾಯಿಗಳು ಸದ್ದಡಗಿಸಿದ ಬೆಕ್ಕುಗಳು, ರೋದಿಸುತ ಅಂಬಾ ಅನುವ ಜಾನುವಾರುಗಳು, ಮಕ್ಕಳು ಮರಿಮಕ್ಕಳು ಸ್ತ್ರೀ ಪುರುಷರೆನ್ನದೆ ಟೊಂಕ ಬಾಗಿ ರಕ್ಷಣೆಗೆ ಕೈಯೊಡ್ಡುವ ದೃಶ್ಯ ಅಂದು ಎಲ್ಲೆಲ್ಲೂ ಬಂಟ್ವಾಳದಲ್ಲಿ ಕಂಡುಬರುತ್ತಿತ್ತು ಅದು ಶಬ್ದ ಭಂಡಾರಕೆ ನಿಲುಕದ ದುಸ್ಥಿತಿಗಳು.

ಪ್ರಾತಃಕಾಲದ ನಾಲ್ಕು ಗಂಟೆಯ ಸಮಯ, ನೆರೆನೀರು ನಿಧಾನ ಗತಿಯಲ್ಲಿ ಸ್ವಲ್ಪಸ್ವಲ್ಪವೇ ಏರುತ್ತಾ ಪೇಟೆಯನ್ನು ಸುತ್ತುವರಿಯುತ್ತಾ ಅಮುಕುತ್ತಾ ಬರುತ್ತಿದೆ. ದೂರದಿಂದ ಕಾಣುವವರಿಗೆ ಬಂಟ್ವಾಳ ಒಂದು ದ್ವೀಪದಂತೆ ಕಾಣುತ್ತಿತ್ತು. ತಗ್ಗು ಪ್ರದೇಶಗಳಲ್ಲಿದ್ದ ಮಣ್ಣಿನ ಗೋಡೆಗಳಿಂದ ರಚಿತವಾದ ಎಷ್ಟೋ ಮನೆಗಳು ಒಂದೊಂದಾಗಿ ಕುಸಿಯುತ್ತಾ ನೇತ್ರಾವತಿಯ ಒಡಲನ್ನು ಸೇರುತ್ತಾ ಇತ್ತು. ಕೆಲವೊಂದು ಮನೆಗಳು ಕರುಳೇ ಕಿತ್ತು ಹೋದಂತೆ ಬುಡದಿಂದಲೇ ಮೆಲ್ಲನೆ ಮೆಲ್ಲನೇ ವಾಲಿ ತಮ್ಮ ಕಣ್ಣೆದುರಲ್ಲೇ ಧರೆಯನ್ನು ಚುಂಬಿಸಿದಾಗ ಅದರೊಳಗಿನ ಕನಸುಗಳೆಲ್ಲಾ ನೀರಲ್ಲಿ ನೀರಾಗಿ ತೇಲಿ ಹೋದವು. ಭೌತಿಕ ವಸ್ತುಗಳೆಲ್ಲಾ ನೆಲೆಯಿಲ್ಲದೆ ನೆರೆಯಲ್ಲಿ ಹೊರಟಾಗ ಕೆಲವೊಂದು ಯಾರ್ಯಾರದೋ ಕೈ ಸೇರಿದವು ಇನ್ನು ಕೆಲವು ಊರನ್ನು ಬಿಟ್ಟು ಇನ್ನಿರದೆ ಬಿಟ್ಟೋಡಿದವು. ಪರಸ್ಪರ ಒಡ ಹುಟ್ಟಿದವರೇ ಸಂಪರ್ಕವಿಲ್ಲದೆ ಬೇರೆಬೇರಾದರು. ದೂರವಾಣಿ, ವಿದ್ಯುತ್ ಶಕ್ತಿ ಕಡಿತಗೊಂಡವು. ಕೆಲವರು ತಮ್ಮ ದನಕರುಗಳು ಸಾಮಾನು ಸರಂಜಾಮುಗಳೊಂದಿಗೆ ವೆಂಕಟರಮಣ ಹಾಗೂ ಇನ್ನು ಕೆಲವರು ಮಹಾಲಿಂಗೇಶ್ವರ ದೇವಳದಲ್ಲಿ ಆಶ್ರಯ ಪಡೆದರು. ಅದೇ ಕಾಲದಲ್ಲಿ ಹೆಚ್ಚಿನ ನಿರಾಶ್ರಿತರಿಗೆ ಪ್ರವಾಸಿ ಮಂದಿರ ಹಾಗೂ ಬೋರ್ಡ್ ಶಾಲೆಗಳನ್ನು ಕೂಡಾ ಆಶ್ರಯ ತಾಣವಾಗಿಸಿ ಗಂಜಿ ಕೇಂದ್ರವನ್ನು ತೆರೆಯಲಾಯಿತು.

ಮಂಜೇಶ್ವರ ಗಣೇಶ ಮಲ್ಯರು ತಮ್ಮ ಗೋದಾಮಿನಲ್ಲಿದ್ದ ಅವಲಕ್ಕಿ ಮೂಟೆಗಳು ನೆರೆ ನೀರಿನಿಂದ ನಷ್ಟವಾಗದಂತೆ ಎಚ್ಚರ ವಹಿಸಿ ತಕ್ಷಣವೇ ನಿರಾಶ್ರಿತರಿಗೆ ಅವೆಲ್ಲವನ್ನೂ ಹಂಚಿ ಅವರ ಹಸಿವನ್ನು ಇಂಗಿಸಿ ತಾವು ಕೃತಾರ್ಥರಾದರು. ಯುವಕರ ತಂಡವೊಂದು ವೃದ್ಧರು, ಅಶಕ್ತರು, ಮಕ್ಕಳು, ಗರ್ಭಿಣಿ ಸ್ತ್ರೀಯರಿಗೆ ರಕ್ಷಣೆಯನ್ನು ಒದಗಿಸುವಲ್ಲಿ ಶ್ರಮಿಸುತ್ತಿತ್ತು. ಬಂಡಸಾಲೆಯಲ್ಲಿ ಒಂದರ ಮೇಲೊಂದರಂತೆ ಪೇರಿಸಿಟ್ಟಿದ್ದ ನರಸಿಂಹ ಚರಡಪ್ಪ ಶ್ಯಾಭೋಗರ ಸಕ್ಕರೆಯ ಚೀಲ ಒಂದೊಂದೇ ಕರಗುತ್ತಾ ಕರಗುತ್ತಾ ಕೊನೆಯಲ್ಲಿ ಬರೆಯ ಚೀಲ ಮಾತ್ರ ಉಳಿಯಿತು. ಭಾಮಿ, ಮಾಣೂರು ಮೊದಲಾದವರ ಅಕ್ಕಿ ಮುಡಿಗಳು ನೀರಿಗೆ ಬಾತುಹೋಗಿ ದವಸಧಾನ್ಯಗಳೊಂದಿಗೆ ಸೇರಿ ದುರ್ವಾಸನೆ ಬೀರುತ್ತಿತ್ತು ಎಂದು ಬಂಟ್ವಾಳದ ತಂಬಾಕು ವ್ಯಾಪಾರಿ 85ರ ಹರೆಯದ ಲಕ್ಷ್ಮಣ ಅಚ್ಯುತ ಬಾಳಿಗರ ಹೇಳುತ್ತಾರೆ.

ಜಲಮಟ್ಟದಲ್ಲಿ 1923ರ ನೆರೆಗಿಂತ 74ರ ಜಲಮಟ್ಟ ಐದು ಅಡಿ ಕಡಿಮೆಯಿದ್ದರೂ ಅಂದಿಗಿಂತ ಇಂದಿನ ನೀರಿನ ರಭಸ ಅಧಿಕವಾಗಿಯೇ ಇತ್ತು. ಭಾಮಿ ಜಂಕ್ಷನಿನ ಮೂರೂ ದಿಕ್ಕಿನಿಂದ ಬಂದು ಸೇರುತ್ತಿದ್ದ ನೀರು ಪರಸ್ಪರ ಮುಖಾಮುಖಿಯಾಗಿ ಸೇರುವಾಗಿನ ಸದ್ದು ಪೇಟೆಯೆಲ್ಲವನ್ನೂ ನಿಬ್ಬೆರಗಾಗಿಸುತ್ತಿತ್ತು.

ಗೊರೂರು ಹೇಳಿದ್ದು ಕಡಲತಡಿಯ ನೆನಪಿನ ಅಲೆಗಳು ಕೃತಿಯಲ್ಲಿ ಉಲ್ಲೇಖ

ಈ ನೆರೆಯು ಉಂಟುಮಾಡಿದ ಅನಾಹುತದ ಕುರಿತು ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹೇಳಿದ್ದು ' ವಾಮನ ರಾವ್ ಅವರ 'ಕಡಲ ತಡಿಯ ನೆನಪಿನ ಅಲೆಗಳು' ಕೃತಿಯಲ್ಲಿ ಉಲ್ಲೇಖವಾಗಿದೆ.

"ಹೃದಯ ಕಲಕುವ ದೃಶ್ಯ ಕಂಡೆ. ಇವರ ನೆರವಿಗೆ ವಿಳಂಬ ಖಂಡಿತ ಸಲ್ಲದು. ಯುದ್ಧದಿಂದ ಜರ್ಝರಿತ ನಾಡಿನಂತಾಗಿದೆ ಬಂಟ್ವಾಳ, ಉಪ್ಪಿನಂಗಡಿ, ಪಾಣೆಮಂಗಳೂರು. ತ್ವರಿತ ಗತಿಯ ಸಹಾಯ ಅಗತ್ಯ" ಎನ್ನುತ್ತಾರೆ. ಈ ನೆರೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಕೆ.ಅರೋರ, ಪೊಲೀಸ್ ಅಧಿಕಾರಿ ಆರ್.ಎಸ್ ಛೋಪ್ರಾ ತಾವು ಅಪಾಯದ ಅಂಚಿನಲ್ಲಿದ್ದೇವೆ ಎಂಬುದನ್ನೂ ಮರೆತು ಕೈಯಲ್ಲಿ ಹುಟ್ಟು ಹಾಕುವ ಸಾಮಾನ್ಯ ಸಣ್ಣ ದೋಣಿಯಲ್ಲಿ ಏರ್ಯ ಲಕ್ಷ್ಮೀನಾರಾಯಣ ಆಳ್ವರೊಂದಿಗೆ ಪಂಚಾಯತ್ ಕಛೇರಿಯ ಮೇಲಿನಿಂದ ದೋಣಿಯಲ್ಲಿ ಪ್ರವಾಸಿ ಮಂದಿರದತ್ತ ಧಾವಸಿದರು ಹಾಗೂ ಕೂಡಲೇ ಗಂಜಿ ಕೇಂದ್ರದ ವ್ಯವಸ್ಥೆಯನ್ನು ಮಾಡಲಾಯಿತು. ಈ ನೆರೆಯಲ್ಲಿ ಸು. ೫೦ ಲಕ್ಷ ನಷ್ಟ, ಹತ್ತು ಸಾವಿರ ಮನೆಗಳು ಧರಾಶಾಯಿ 50 ಸಾವಿರ ಮಂದಿ ಅನಾಥರಾದರು.

2024 ಜು. 26ಕ್ಕೆ 1974ರ ನೆರೆಗೆ 50 ವರ್ಷ ತುಂಬಿ ಬರುತ್ತದೆ. 50 ವರ್ಷಕ್ಕೊಂದು ಸಲ ನೇತ್ರಾವತಿಯಲ್ಲಿ ನೆರೆ ಬರುತ್ತದೆ ಅನ್ನುವ ಚಾಲ್ತಿಯ ಮಾತಿಗೆ ಸಾಕ್ಷಿ ಎನ್ನುವಂತೆ ಎರಡು ವಾರ ಮೊದಲೇ ಭರದಿಂದ ಮಳೆ ಬೀಳುತ್ತಿದೆ. ಆಶ್ಚರ್ಯವೆಂದರೆ, 8ರಿಂದ 8.5ಮೀಟರ್ ಮಳೆ ಬಂದರೆ ಬಂಟ್ವಾಳ ಮುಳುಗಿತೆಂದೇ ಭಾವಿಸಿದ್ದ ಜನರಿಗೆ, 9 ಮೀ. ಮಳೆ ಸುರಿದರೂ ಬಂಟ್ವಾಳಕ್ಕೆ ನೇತ್ರಾವತಿ ನಾಲಿಗೆ ಚಾಚಿದ್ದೇ ಹೊರತು ಆಪೋಶನಕ್ಕೆ ಅವಸರಿಸಲಿಲ್ಲ, ಆಕೆಗೆ ತಲೆ ಬಾಗೋಣ; ಇದಕ್ಕೆ ಕಾರಣವೂ ಇದೆ, ಮರಳು ದಂಧೆಯಿಂದಾಗಿ ನದೀ ಪಾತ್ರೆ ಹಿರಿದಾಗಿದೆ ಹೌದು ಇದರ ಜತೆಯಲ್ಲೇ ಈ ಹಿಂದೆಲ್ಲಾ ನೀರಿಗೊಂದು ದಾರಿಯಿರುತ್ತಿತ್ತು, ಅದು ಪೇಟೆ ಮಧ್ಯದಿಂದಲೋ ಹೊರಗಿನಿಂದಲೋ ತನ್ನ ಗಮ್ಯ ಸ್ಥಾನವನ್ನು ಸೇರುತ್ತಿತ್ತು, ಆದರೆ ಈಗ ನೀರಿನ ಸ್ವಾಭಾವಿಕ ದಾರಿಯೆಲ್ಲವನ್ನೂ ಮುಚ್ಚಿರುವುದರಿಂದ ಎಲ್ಲೆಲ್ಲೂ ನೀರು ಸೇರಿಕೊಂಡು ದಿಗ್ಬಂಧನ ಮಾಡುತ್ತಿದೆ. ಬಂಟ್ವಾಳ ರವಿದಾಸ್ ಪೈ ಅವರ ಬಂಡಸಾಲೆಯ ಗೋಡೆಯಲ್ಲಿ 1974 ರ ನೆರೆಯ ಮಟ್ಟವನ್ನು ಗುರುತಿಸಿರುವುದನ್ನು ಕಾಣಬಹುದಾಗಿದೆ.

ಕಾಕತಾಳೀಯ ಎನ್ನುವಂತೆ, 1974 ರ ಜು.26 ಶುಕ್ರವಾರ ಆಗಿದ್ದು ಈ ಸಲವೂ ಜು.26 ಶುಕ್ರವಾರವೇ ಆಗಿದೆ ಅನ್ನುವುದು ಬಲು ಸೋಜಿಗದ ವಿಚಾರ. ಪ್ರಕೃತಿ ಮಹಾತ್ಮೆಯ ಬಲ್ಲವರಾರು? ಅದೊಂದು ಚಿದಂಬರ ರಹಸ್ಯ.

(ಸಂಗ್ರಹ: ಹರೀಶ ಮಾಂಬಾಡಿ. ಮಂಗಳೂರು)

Whats_app_banner