Dakshin Kannada News: ಬಂಟ್ವಾಳದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ಮಹಿಳೆ ಸೇರಿ ಕಾಸರಗೋಡಿನ ಇಬ್ಬರ ಬಂಧನ
ಕನ್ನಡ ಸುದ್ದಿ  /  ಕರ್ನಾಟಕ  /  Dakshin Kannada News: ಬಂಟ್ವಾಳದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ಮಹಿಳೆ ಸೇರಿ ಕಾಸರಗೋಡಿನ ಇಬ್ಬರ ಬಂಧನ

Dakshin Kannada News: ಬಂಟ್ವಾಳದಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ ಮಹಿಳೆ ಸೇರಿ ಕಾಸರಗೋಡಿನ ಇಬ್ಬರ ಬಂಧನ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಕಲಿ ನೋಟು ವಹಿವಾಟಿಗೆ ಯತ್ನಿಸಿದ ಕೇರಳದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ದಕ್ಷಿಣ ಕನ್ನಡ ಭಾಗದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಿದೆ.
ದಕ್ಷಿಣ ಕನ್ನಡ ಭಾಗದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೆರೆಯ ಕೇರಳ ರಾಜ್ಯದಿಂದ ಖೋಟಾ ನೋಟು ತಂದು ಚಲಾವಣೆ ಮಾಡುತ್ತಿರುವ ಜಾಲವೊಂದನ್ನು ಪತ್ತೆಹಚ್ಚಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿ.ಸಿ.ರೋಡ್ ಎಂಬಲ್ಲಿ ಕಾಸರಗೋಡು ಮೂಲದ ಮಹಿಳೆ ಸೇರಿ ಇಬ್ಬರನ್ನು ಬಂಧಿಸಲಾಗಿದೆ. ಓರ್ವ ಪರಾರಿಯಾಗಿದ್ದಾನೆ. ಇವರ ವಿಚಾರಣೆ ನಡೆಯುತ್ತಿದ್ದು, ಕಾಸರಗೋಡು ಜಿಲ್ಲೆಯಲ್ಲಿ ಕೆಲವು ದಿನಗಳ ಹಿಂದೆ ಪತ್ತೆಯಾದ ಬೃಹತ್ ಜಾಲಕ್ಕೂ ಇವರಿಗೂ ಏನಾದರೂ ಲಿಂಕ್ ಇದೆಯೇ ಎಂಬುದರ ಕುರಿತು ವಿಚಾರಣೆ ನಡೆಯುತ್ತಿದೆ.ಇದೀಗ ಕಾಸರಗೋಡಿನ ಮೊಹಮ್ಮದ್ ಸಿ.ಎ (61) ಮತ್ತು ಕಮರುನ್ನೀಸಾ (41) ಎಂಬಿಬ್ಬರು ಆರೋಪಿಗಳನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಶೆರೀಫ್ ಗೆ ಹುಡುಕಾಟ ನಡೆಯುತ್ತಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ಪೊಲೀಸರು ತಿಳಿಸಿದ್ದಾರೆ.

ಇವರಿಂದ 500 ರೂ ಮುಖಬೆಲೆಯ 46 ಖೋಟಾ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದನ್ನು ಎಲ್ಲಿಂದ ತರಲಾಗಿತ್ತು. ಕೊಟ್ಟವರು ಯಾರು, ಎಲ್ಲೆಲ್ಲಿ ವಹಿವಾಟು ನಡೆಸಿದ್ದಾರೆ. ಎಷ್ಟು ದಿನದ ಹಿಂದೆ ಇದೆ ನಡೆದಿದೆ. ಇದರ ಹಿಂದೆ ಯಾರಾದರೂ ಇದ್ದಾರೆಯೇ ಎನ್ನುವುದು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ಹೆಚ್ಚಿನ ವಿಚಾರಣೆ ಸಾಗಿದೆ.

ಸಿಕ್ಕಿದ್ದು ಹೇಗೆ?

ಬಿ.ಸಿ.ರೋಡ್ ನ ಖಾಸಗಿ ಆಸ್ಪತ್ರೆಯೊಂದರ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವಾಹನವೊಂದನ್ನು ತಪಾಸಣೆ ಮಾಡಿದಾಗ ಅಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದು, ಅವರ ಪೈಕಿ ಓರ್ವ ಪರಾರಿಯಾಗಲು ಯಶಸ್ವಿಯಾಗಿದ್ದಾನೆ.

ಇದೀಗ ಇಬ್ಬರ ವಿಚಾರಣೆ ನಡೆಯುತ್ತಿದೆ. ಸೆರೆ ಸಿಕ್ಕವರನ್ನು ವಿಚಾರಿಸಲಾಗಿ ಆತನು ಕಾಸರಗೋಡಿನ ಕೂಡ್ಲು ಗ್ರಾಮದ ಮೊಹಮ್ಮದ್ ಸಿ.ಎ. (61), ಕಾರಿನಲ್ಲಿದ್ದ ಮಹಿಳೆ‌ ಕಾಸರಗೋಡು ಕೂಡ್ಲು ಗ್ರಾಮದ ಕಮರುನ್ನೀಸಾ (41) ಎಂದು ತಿಳಿದುಬಂದಿದೆ. ಓಡಿ ಪರಾರಿಯಾದ ವ್ಯಕ್ತಿ ಶೆರೀಫ್ ಎಂಬುದಾಗಿ ತಿಳಿದುಬಂದಿರುತ್ತದೆ.

ವಿಚಾರಣೆಯ ವೇಳೆ ಆರೋಪಿಗಳು ಖೋಟಾ ನೋಟುಗಳನ್ನು ವಿನಿಮಯ ಮಾಡಲು ಬಂದಿರುವುದಾಗಿ ತಿಳಿಸಿದ್ದು, ತಮ್ಮ ಸ್ವಾಧೀನದಲ್ಲಿದ್ದ 500 ರೂಪಾಯಿ ಮುಖ ಬೆಲೆಯ 46 ಖೋಟಾ ನೋಟುಗಳನ್ನು ಪೊಲೀಸರ ಮುಂದೆ ಹಾಜರುಪಡಿಸಿರುತ್ತಾರೆ. ಸದ್ಯ ನೋಟುಗಳನ್ನು ವಶಕ್ಕೆ ಪಡೆದಿದ್ದು, ಬಳಿಕ ಆರೋಪಿಗಳನ್ನು ಹಾಗೂ ಅವರ ಬಳಿಯಿದ್ದ ರೂ 5,300 ನಗದು ಹಣ ಮತ್ತು 3 ಮೊಬೈಲ್ ಗಳನ್ನು ಸ್ವಾಧೀನಪಡಿಸಲಾಗಿದೆ. ಕೆಲವು ದಿನಗಳಿಂದ ಇದನ್ನು ನಡೆಸುತ್ತಿರುವ ಕುರಿತು ಬಂಧಿತ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎನ್ನುತ್ತವೆ ಪೊಲೀಸ್‌ ಮೂಲಗಳು.

ಕಾಸರಗೋಡಿನಲ್ಲೂ ಪತ್ತೆಯಾಗಿತ್ತು ಬೃಹತ್ ಜಾಲ

ಇದೇ ರೀತಿ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಸಮೀಪ ಅಂಬಲತ್ತರ ಪಾರಪಳ್ಳಿ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ಸುಮಾರು 7.25 ಕೋಟಿ ರೂ ಖೋಟಾ ನೋಟುಗಳು ಪತ್ತೆಯಾಗಿದ್ದವು. ಒಂದು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ತನಿಖೆ ನಡೆಸಿದಾಗ ಸುಳ್ಯದ ಸುಲೈಮಾನ್ ಮತ್ತು ಪೆರಿಯಾ ನಿವಾಸಿ ಅಬ್ದುಲ್ ರಝಾಕ್ ಎಂಬಿಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು.

ಅಬ್ದುಲ್ ರಝಾಕ್ ಈ ಮನೆಯನ್ನು ಬಾಡಿಗೆಗೆ ಪಡೆದು ವಾಸಿಸುತ್ತಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದ. ಅನುಮಾನಗೊಂಡು ಕೆಲವರು ಪೊಲೀಸರಿಗೆ ಮಾಹಿತಿ ನೀಡಿದ ಮೇರತೆ ಪೊಲೀಸರು ಶೋಧ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿತ್ತು. ಅದಾಗಲೇ ಹಲವು ಖೋಟಾ ನೋಟುಗಳು ಚಲಾವಣೆಯಾಗಿತ್ತು ಎನ್ನಲಾಗಿದೆ.

ಈ ಪ್ರಕರಣದಲ್ಲೂ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಲಿಂಕ್ ಇದ್ದು, ಬಂಟ್ವಾಳದಲ್ಲಿ ಪತ್ತೆಯಾದ ಆರೋಪಿಗಳೂ ಈ ಜಾಲಕ್ಕೆ ಸೇರಿದವರೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ ಎನ್ನುವುದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ನೀಡುವ ವಿವರಣೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

Whats_app_banner