ಕನ್ನಡ ಸುದ್ದಿ  /  Karnataka  /  Dakshin Kannada News Temple Town Subramanya Origin Ajitesh Permukha Joined As Is Lieutenant In Indian Army Hsm

Dakshin Kannada News: ದಕ್ಷಿಣ ಕನ್ನಡ ಸುಬ್ರಹ್ಮಣ್ಯದ ಅಜಿತೇಶ್ ಪೆರ್ಮುಖ ಈಗ ಭೂಸೇನೆಯ ಲೆಫ್ಟಿನೆಂಟ್, ಹೆಮ್ಮೆಯ ಕುಟುಂಬದ ಹಿನ್ನೆಲೆ ಏನು

ಸೇನೆಗೆ ಸೇರಬೇಕು. ದೇಶಸೇವೆ ಮಾಡಬೇಕು ಎಂಬುದು ಪ್ರತಿಯೊಬ್ಬರ ಕನಸು. ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯದ ಅಜಿತೇಶ್‌ ಪೆರ್ಮುಖ ಈಗ ಲೆಫ್ಟಿನೆಂಟ್‌ ಆಗಿ ಭೂಸೇನೆ ಸೇರಿದ್ದಾರೆ.(ವರದಿ: ಹರೀಶ್‌ ಮಾಂಬಾಡಿ. ಮಂಗಳೂರು)

ಕುಟುಂದವರೊಂದಿಗೆ ಅಜಿತೇಶ್‌ ಪೆರ್ಮುಖ.
ಕುಟುಂದವರೊಂದಿಗೆ ಅಜಿತೇಶ್‌ ಪೆರ್ಮುಖ.

ಮಂಗಳೂರು: ಕೊಡಗು ಎಂದರೆ ಅದು ಸೇನಾನಿಗಳ ತವರು. ಅದೇ ರೀತಿ ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಹಲವರು ಸೇನೆ ಸೇರಿ ದೇಶ ಸೇವೆ ಮಾಡುತ್ತಿದ್ದಾರೆ. ಈಗ ಅವರ ಸಾಲಿಗೆ ಸೇರ್ಪಡೆಯಾದವರು ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಗ್ರಾಮದ ನೂಚಿಲ ನಿವಾಸಿ ಅಜಿತೇಶ್ ಪೆರ್ಮುಖ. ಅವರೀಗ ಈಗ ಭೂಸೇನೆಯ ಲೆಫ್ಟಿನೆಂಟ್. ಇಡೀ ಕುಟುಂಬಕ್ಕೆ ಇನ್ನಿಲ್ಲದ ಸಂತಸ. ಮಗ ದೇಶ ಸೇವೆ ಮಾಡಲು ಆಯ್ಕೆಯಾಗಿರುವುದು ಮನೆಯವರಿಗೆಲ್ಲಾ ಸಂತಸದ ವಿಚಾರ. ಊರವರೂ ಕೂಡ ಅಜಿತೇಶ್‌ ಪೆರ್ಮುಖ ಅವರ ದೇಶ ಸೇವೆ ಆಯ್ಕೆಗೆ ಅಭಿಮಾನದ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ.

25 ವರ್ಷದ ಅಜಿತೇಶ್ ನೇರವಾಗಿ ಲೆಫ್ಟಿನೆಂಟ್ ಹುದ್ದೆಗೇರಿದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದಲ್ಲಿ ವಾಸಿಸುತ್ತಿರುವ ಹೆತ್ತವರಾದ ಶಿಕ್ಷಕ ದಂಪತಿಗೆ ಸಂಭ್ರಮ. ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕಿ ವಿದ್ಯಾರತ್ನ ಮತ್ತು ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕ ಶ್ರೀಕೃಷ್ಣ ಶರ್ಮ ಪಿ. ಅವರ ಪುತ್ರರಾಗಿರುವ ಅಜಿತೇಶ್, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದಲ್ಲಿ ನಡೆಸಿದರು.

ಪದವಿಪೂರ್ವ ಶಿಕ್ಷಣವನ್ನು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದ ಬಳಿಕ ಫಾರೆಸ್ಟರಿಯಲ್ಲಿ ಬಿ.ಎಸ್.ಸಿ. ಪದವಿಯನ್ನು ಮಡಿಕೇರಿಯ ಪೊನ್ನಂಪೇಟೆ ಕಾಲೇಜಿನಲ್ಲಿ ಪಡೆದರು. ಬಳಿಕ ಡೆಹ್ರಾಡೂನ್ ಫಾರೆಸ್ಟ್ ರಿಸರ್ಚ್ ಇನ್ಸ್ ಸ್ಟಿಟ್ಯೂಟ್ ನಲ್ಲಿ ಎಂ.ಎಸ್.ಸಿ. ಪದವಿ ದ್ವಿತೀಯ ವರ್ಷದ ವ್ಯಾಸಂಗ ಮಾಡಿದ್ದಾರೆ. ಕಳೆದ ವರ್ಷ ನಡೆದ ಭೂಸೇನಾ ನೇಮಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಅಜಿತೇಶ್, ಒಂದು ವರ್ಷ ಚೆನ್ನೈನ ಭಾರತೀಯ ಸೇನಾ ಅಧಿಕಾರಿಗಳ ತರಬೇತಿ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಲೆಫ್ಟಿನೆಂಟ್ ಭಾರತೀಯ ಸೇನೆಯ ಉನ್ನತ ಮಟ್ಟದ ಹುದ್ದೆಯಾಗಿದ್ದು, ಭಾರತದ ಅತ್ಯಂತ ಕಠಿಣ ಪರೀಕ್ಷೆಯಾದ UPSC ಯಲ್ಲಿ ಉತ್ತೀರ್ಣರಾಗಿ ಅಧಿಕಾರಿಗಳ ತರಬೇತಿ ಅಕಾಡೆಮಿ(OTA) ಯಲ್ಲಿ ಒಂದು ವರ್ಷಗಳ ಕಾಲ ತರಬೇತಿ ಪಡೆದಿದ್ದಾರೆ.

ಇವರು ಕುಕ್ಕೆ ಸುಬ್ರಹ್ಮಣ್ಯದ ನೂಚಿಲದ ಶ್ರೀಕೃಷ್ಣಶರ್ಮ ಹಾಗೂ ವಿದ್ಯಾರತ್ನ ರವರ ಪುತ್ರ. ಚಿಕ್ಕ ವಯಸ್ಸಿನಲ್ಲೇ ಸೇನೆಗೆ ಸೇರುವ ಆಸೆಯಿಟ್ಟುಕೊಂಡಿದ್ದ ಅಜಿತೇಶ್ ರವರ ಕನಸು ಇಂದು ನನಸಾಗಿದೆ.

ಈ ಕುರಿತು ಎಚ್.ಟಿ. ಕನ್ನಡ ಪ್ರತಿನಿಧಿ ಜೊತೆ ಮಾತನಾಡಿದ ಅಜಿತೇಶ್ ತಂದೆ, ಶ್ರೀಕೃಷ್ಣ ಶರ್ಮ ಪೆರ್ಮುಖ, ಹೈಸ್ಕೂಲ್ ನಲ್ಲಿ ಅಜಿತೇಶ್ ಮಿಲಿಟರಿ ಸೇರುವ ಇಚ್ಛೆ ವ್ಯಕ್ತಪಡಿಸಿದ್ದ. ಆದರೆ ಅದಕ್ಕೆಂದು ಪೂರ್ವತಯಾರಿಯನ್ನೇನೂ ಮಾಡಿರಲಿಲ್ಲ. ಸುಬ್ರಹ್ಮಣ್ಯ ಪರಿಸರವೆಂದರೆ ದಟ್ಟ ಕಾನನ. ಇಲ್ಲಿನ ಪ್ರಾಣಿ, ಪಕ್ಷಿಗಳು, ಹಸಿರಿನ ವಾತಾವರಣದ ಹಿನ್ನೆಲೆಯಲ್ಲಿ ಬೆಳೆದಿದ್ದ ಅಜಿತೇಶ್, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ಬಳಿಕ ಅರಣ್ಯಶಾಸ್ತ್ರದ ಬಿ.ಎಸ್.ಸಿ. ಸೇರುವ ಆಸೆ ವ್ಯಕ್ತಪಡಿಸಿದ. ಹೀಗಾಗಿ ಆತನನ್ನು ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕಾಲೇಜಿಗೆ ಸೇರಿಸಿದ್ದೆವು. ಅಲ್ಲಿ ಮೂರು ವರ್ಷಗಳ ಅರಣ್ಯಶಾಸ್ತ್ರ ಬಿಎಸ್.ಸಿ ಮುಗಿಸಿದ ಬಳಿಕ ಎಂ.ಎಸ್.ಸಿ. ಪದವಿಗೆ ಡೆಹ್ರಾಡೂನ್ ಫಾರೆಸ್ಟ್ ರಿಸರ್ಚ್ ಇನ್ಸ್ ಸ್ಟಿಟ್ಯೂಸ್ ಸೇರಿದ ಎಂದರು.

ಈ ಸಂದರ್ಭ ಮಿಲಿಟರಿ ಪರೀಕ್ಷೆ ಬರೆಯುವ ಪ್ರಯತ್ನವನ್ನು ನಡೆಸಿದ್ದು, ಯುಪಿಎಸ್ ಸಿ ಕಂಬೈ ನ್ಡ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪರೀಕ್ಷೆಯನ್ನು ಬರೆದಿದ್ದ. ಆ ಪರೀಕ್ಷೆಯಲ್ಲಿ ತೇರ್ಗಡೆಯನ್ನು ಉತ್ತಮ ಅಂಕಗಳಲ್ಲಿ ಹೊಂದಿದ್ದು, ಅಲ್ಲಿನ ಇಂಟರ್ ವ್ಯೂ ಸಹಿತ ಒಡ್ಡಿದ ಪರೀಕ್ಷೆಗಳಲ್ಲೆಲ್ಲಾ ಪಾಸ್ ಆದ. ಚೆನ್ನೈನಲ್ಲಿ ಒಂದು ವರ್ಷದ ಕಠಿಣ ತರಬೇತಿಯ ಬಳಿಕ ಅಜಿತೇಶ್ ಗೆ ಲೆಫ್ಟಿನೆಂಟ್ ಹುದ್ದೆಯೀಗ ಅಧಿಕೃತವಾಗಿ ದೊರಕಿದೆ. ಮಗ ಸೈನ್ಯ ಸೇರುವುದು ನಮಗೆಲ್ಲಾ ಹೆಮ್ಮೆಯ ವಿಷಯವೂ ಹೌದು ಎಂದು ತಂದೆ ಶ್ರೀಕೃಷ್ಣ ಶರ್ಮಹೇಳಿದರು.

ಇದೀಗ ಪೋಸ್ಟಿಂಗ್ ಎಲ್ಲಿ ಹಾಕುತ್ತಾರೆ ಎಂಬುದು ಗೊತ್ತಿಲ್ಲ. ಆದರೆ ದೇಶಸೇವೆಯನ್ನು ಮಾಡುವ ಹಾಗೂ ಕಷ್ಟಗಳನ್ನು ಎದುರಿಸುವ ಸ್ಥೈರ್ಯ, ಛಲ ಆತನಿಗಿದೆ ಎಂಬ ಅಚಲವಾದ ವಿಶ್ವಾಸ ತಂದೆ, ತಾಯಿಗಿದೆ. ಶ್ರೀಕೃಷ್ಣಶರ್ಮ ದಂಪತಿಗೆ ಇಬ್ಬರು ಮಕ್ಕಳು. ದೊಡ್ಡ ಮಗ ಅವಿನಾಶ್ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಸಣ್ಣ ಮಗ ಅಜಿತೇಶ್ ಈಗ ಲೆಫ್ಟಿನೆಂಟ್. ಮನೆಯವರಿಗೆ ಹೆಮ್ಮೆಯ ವಿಚಾರ.

(ವರದಿ: ಹರೀಶ್‌ ಮಾಂಬಾಡಿ. ಮಂಗಳೂರು)