ಕನ್ನಡ ಸುದ್ದಿ  /  ಕರ್ನಾಟಕ  /  Dakshin Kannada News: ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಗಜಪೃಷ್ಠಾಕಾರದ ವಿನ್ಯಾಸ, ಪಾಂಡವರ ಕಾಲದ್ದೆಂಬ ಹಿರಿಮೆ

Dakshin Kannada News: ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಗಜಪೃಷ್ಠಾಕಾರದ ವಿನ್ಯಾಸ, ಪಾಂಡವರ ಕಾಲದ್ದೆಂಬ ಹಿರಿಮೆ

Vitla Tepmle ದಕ್ಷಿಣ ಕನ್ನಡದ ವಿಟ್ಲದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವು ಅದರ ವಿಶಿಷ್ಟ ವಿನ್ಯಾಸದಿಂದ ಗಮನ ಸೆಳೆಯುತ್ತದೆ. ( ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

 ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಶಿಷ್ಟಾಕಾರದಿಂದ ಗಮನ ಸೆಳಯುತ್ತಿದೆ.
ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಶಿಷ್ಟಾಕಾರದಿಂದ ಗಮನ ಸೆಳಯುತ್ತಿದೆ.

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ದೇವಸ್ಥಾನಗಳಲ್ಲಿ ಗಮನಾರ್ಹವಾದದ್ದು ಬಂಟ್ವಾಳ ತಾಲೂಕಿನ ವಿಟ್ಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದೊಡ್ಡ ದೇಗುಲಗಳಲ್ಲಿ ಇದೂ ಒಂದು. ಮೂರು ಅಂತಸ್ತಿನ ಗಜಪೃಷ್ಠಾಕರದ ವಿನ್ಯಾಸದಿಂದಲೇ ಜನರ ಗಮನ ಸೆಳೆಯುತ್ತಿದೆ.ವಿಟ್ಲ ಸೀಮೆಯ ದೇವಸ್ಥಾನಗಳಲ್ಲೆಲ್ಲ ಇದೇ ಪ್ರಮುಖ ದೇವಾಲಯ ಮತ್ತು ಗಾತ್ರದ ದೃಷ್ಟಿಯಿಂದಲೂ ಇದನ್ನು ಮೀರಿಸುವ ದೇಗುಲಗಳಿಲ್ಲ ಎಂದು ಹೇಳಲಾಗುತ್ತದೆ. ಇದು ಸುಮಾರು ಒಂದು ಸಾವಿರ ವರ್ಷಗಳಿಗೂ ಮಿಕ್ಕಿದ ಪ್ರಾಚೀನ ದೇವಸ್ಥಾನವೆಂದು ನಂಬಲಾಗಿದೆ. ವಿಟ್ಲ ಅರಮನೆ ಆಡಳಿತಕ್ಕೊಳಪಟ್ಟ ವಿಟ್ಲ ಮತ್ತು ಬಾಯಾರು ಶ್ರೀ ಪಂಚಲಿಂಗೇಶ್ವರ ದೇಗುಲಗಳು ಪಶ್ಚಿಮಾಭಿಮುಖವಾಗಿರುವುದು ವಿಶೇಷ. ಮುಖಮಂಟಪವು ಗರ್ಭಗೃಹಕ್ಕೆ ಸೇರಿದಂತೆ ರಚಿತವಾಗಿರುವುದನ್ನು ಗಜಪೃಷ್ಠಾಕೃತಿಯೆಂದು ತಜ್ಞರು ಗುರುತಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಬಂಟ್ವಾಳ ತಾಲೂಕಿನ ಪ್ರಮುಖ ನಗರ ವಿಟ್ಲ ತುಳುನಾಡ ಪರಂಪರೆಯ ರಾಜಮನೆತನದ ಆಳ್ವಿಕೆಯ ಸಾಕ್ಷಿಯಾಗಿರುವ ಎರಡು ಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ 17 ಗ್ರಾಮಗಳನ್ನೊಳಗೊಂಡಿದ್ದ ಭೂಭಾಗ. ಪ್ರಸ್ತುತ ಇದರಲ್ಲಿ ಸ್ವಲ್ಪ ಭಾಗ ಕೇರಳಕ್ಕೆ ಸೇರಿಕೊಂಡಿದೆ. ವಿಟ್ಲ ಅರಸುವಂಶಜರು 5 ವೈಷ್ಣವ ದೇಗುಲ ಮತ್ತು 6 ಶಿವನ ದೇಗುಲಗಳನ್ನು ಸಂಪ್ರದಾಯನಿಷ್ಠರಾಗಿ ನಡೆಸಿಕೊಂಡು ಬಂದವರು. ಇವರ ಆಳ್ವಿಕೆಯಲ್ಲೇ ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನವೂ ಅನೂಚಾನವಾಗಿ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರಲಾಗಿದೆ. ಇದು ವಿಟ್ಲ ಸೀಮೆಯ ದೇವಸ್ಥಾನವೆಂದು ಪ್ರಸಿದ್ಧಿ.

ಪೌರಾಣಿಕ ಹಿನ್ನೆಲೆ

ಐತಿಹ್ಯದ ಪ್ರಕಾರ ಪುರಾತನ ಕಾಲದ ಏಕಚಕ್ರ ವರ್ಗಗಳ ಸಮೀಪದ ಕಳಂಜಿ ಮಲೆ ಕಾಡಿನಲ್ಲಿಯೇ ಬಕಾಸುರನ ಗುಹೆಯಿತ್ತು. ಭೀಮ ಅವನನ್ನು ಅಲ್ಲಿಯೇ ಕೊಲ್ಲಲಾಯಿತು ಎಂದು ಈಗಲೂ ನಂಬಲಾಗುತ್ತದೆ. ಅವನನ್ನು ಕೊಂದಾಗ ಹರಿದ ರಕ್ತವು ಬಂದು ತುಂಬಿಕೊಂಡುದರಿಂದ ನೆತ್ತರುಕೆರೆ ಉಂಟಾಯಿತು ಎಂಬ ನಂಬಿಕೆ ಇದೆ. ಪಾಂಡವರ ಕಾಲದಲ್ಲಿ ಕುಂತಿಯ ಮಾರ್ಗದರ್ಶನದಲ್ಲಿ ದೇವಸ್ಥಾನ ಕಟ್ಟಲಾಯಿತು ಎಂಬ ಪೌರಾಣಿಕ ಹಿನ್ನೆಲೆಯೂ ದೇವಸ್ಥಾನಕ್ಕಿದೆ. ಐದು ಪ್ರಾಕೃತಿಕ ಶಿಲಾಖಂಡಗಳನ್ನು ಏಕಪಾಣಿಪೀಠದ ಮೇಲೆ ಲಿಂಗಗಳಾಗಿ ಸ್ಥಾಪಿಸಿರುವುದರಿಂದ ಪಂಚಲಿಂಗೇಶ್ವರ ದೇವಾಲಯವೆನಿಸಿದೆ. ಶಿವನ ಸ್ವರೂಪಗಳಾದ ಸದ್ಯೋಜಾತ, ವಾಮದೇವ,ಅಘೋರ, ತತ್ಪುರುಷ, ಈಶಾನ, ಸದ್ಯೋಜಾತ ಮೂಲಾಧಾರನಾಗಿ( ಭೂಮಿ ವಾಸುದೇವನಾಗಿ ಸ್ವಾದಿಷ್ಟಾನ ( ಜಲ,) ಅಘೋರನಾಗಿ ಮಣಿಪು( ಬೆಂಕಿ)ತತ್ಪುರುಷನಾಗಿ ಅನಾಹತ( ವಾಯು ),ಈಶಾನನಾಗಿ ವಿಶುದ್ಧ( ಆಕಾರ ಈ ತತ್ತ್ವ ಗಳನ್ನು ಪ್ರತಿನಿಧಿಸುತ್ತವೆ.

ಗರ್ಭಗುಡಿಯು ಪಶ್ಚಿಮಾಭಿಮುಖವಾಗಿದ್ದು, ಗಜಪೃಷ್ಠಾಕೃತಿಯಲ್ಲಿದೆ. ಪಂಚಲಿಂಗಗಳ ಎದುರಿಗೆ ಒಳಾಂಗಣದಲ್ಲಿ ನಂದಿ ವಿಗ್ರಹ, ನವರಂಗ ಮಂಟಪ, ವಸಂತ ಮಂಟಪವಿದೆ. ಧ್ವಜ ಸ್ತಂಭವಿದೆ. ಒಳಾಂಗಣದ ವಾಯುವ್ಯ ದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಕುಂತೀಶ್ವರ ಗುಡಿಯಿದೆ. (ಎದುರಿಗೆ ಪುಟ್ಟ ನಂದಿ ವಿಗ್ರಹ). ಈಶಾನ್ಯದಲ್ಲಿ ಧೌಮ್ಯೇಶ್ವರ, ಆಗ್ನೇಯದಲ್ಲಿ ಭೈರವೇಶ್ವರ ಗುಡಿಯಿದೆ. ದಕ್ಷಿಣದಿಕ್ಕಿನಲ್ಲಿ ಪೂರ್ವಾಭಿಮುಖವಾಗಿ ಗಣಪತಿ ಗುಡಿಯಿದೆ. ನೈಋತ್ಯ ದಿಕ್ಕಿನಲ್ಲಿ ಪಶ್ಚಿಮಾಭಿಮುಖವಾಗಿ ಅಮ್ಮನವರ ಗುಡಿಯಿದೆ. ಒಳಾಂಗಣದ ಈ ಎಲ್ಲಾ ಸ್ಥಾಪನೆಗಳಿಗೂ ಪೂಜೆ ನಡೆಯುತ್ತದೆ. ಉತ್ತರದಿಕ್ಕಿನಲ್ಲಿ ಬಾವಿ ಹಾಗೂ ಸಣ್ಣ ಕೊಳವಿದೆ.

ಸುತ್ತುಪೌಳಿಯ ಸುತ್ತಲೂ ಮರದ ದರಿಯನ್ನು ನಿರ್ಮಿಸಲಾಗಿದೆ. ಜಾತ್ರೆಯ ಸಮಯದಲ್ಲಿ ಇಲ್ಲಿ ದೀಪಗಳನ್ನು ಉರಿಸಲಾಗುತ್ತದೆ. ಒಳಪ್ರಾಕಾರದಲ್ಲಿ ಉಳ್ಳಾಲ್ತಿ ಭಂಡಾರವನ್ನಿಡುವ ವ್ಯವಸ್ಥೆ ಇದೆ. ಹೊರಾಂಗಣದ ನೈಋತ್ಯ ದಿಕ್ಕಿನಲ್ಲಿ ದಕ್ಷಿಣಕ್ಕೆ ತೆರೆದಂತೆ ದೇವಾಲಯದ ಆವರಣದ ಪ್ರವೇಶದ್ವಾರವಿದೆ ನೈಋತ್ಯದಿಕ್ಕಿನ ಮೂಲೆಯಲ್ಲಿ ಓಕುಳಿಕುಂಡ, ದೀಪಸ್ತಂಭ ಮತ್ತು ಕಟ್ಟೆಯಿದೆ. ಜಾತ್ರೆಯ ಸಮಯದಲ್ಲಿ ವಿಟ್ಲದ ಅರಸರು ಈ ಕಟ್ಟೆಯಲ್ಲಿ ಕುಳಿತುಕೊಳ್ಳುವ ಪಧ್ಧತಿಯಿದೆ. ನಾಗ, ರಕ್ತೇಶ್ವರಿ, ಗುಳಿಗ, ಬ್ರಹ್ಮರಾಕ್ಷಸ ಕಟ್ಟೆಗಳಿವೆ. ಉತ್ತರಭಾಗದಲ್ಲಿ ವಿಸ್ತಾರವಾದ ಪಂಚಲಿಂಗ ಪುಷ್ಕರಣಿಯಿದೆ.

ಒಂಬತ್ತು ದಿನಗಳ ಜಾತ್ರೆ

ಶತಮಾನದ ಐತಿಹಾಸಿಕ ಹಿನ್ನೆಲೆ ‌ಉಳ್ಳ ಈ ದೇವಸ್ಥಾನದಲ್ಲಿ ಡೊಂಬಯ್ಯ ಹೆಗ್ಡೆ ಆಳ್ವಿಕೆಯ ಅವಧಿಯಿಂದಲೇ ಒಂಬತ್ತು ದಿನಗಳ ಕಾಲಾವಧಿ ಜಾತ್ರೆ ನಡೆಯುತ್ತಲೇ ಬಂದಿದೆ. ಮಕರ ಸಂಕ್ರಮಣದಂದು ಪೂರ್ವಾಹ್ನ ಧ್ವಜಾರೋಹಣದೊಂದಿಗೆ ಜಾತ್ರೆಗೆ ಚಾಲನೆ ದೊರೆಯುತ್ತದೆ. ಸಂಜೆ ಅರಸು ಮುಂಡಾಲತ್ರಾಯ ದೈವದ ಭಂಡಾರ ಆಗಮಿಸುತ್ತದೆ.

ರಾತ್ರಿ ಲಕ್ಷದೀಪೋತ್ಸವ, ಉತ್ಸವ ಬಲಿ ನಡೆಯುತ್ತದೆ. ಅನಂತರದ ಮೂರು ದಿನ ನಿತ್ಯೋತ್ಸವ ಬಲಿ ಜರಗುತ್ತದೆ. ಐದನೇ ದಿನ ಬಯ್ಯದಬಲಿ. ಉತ್ಸವ ಕಳೆಗಟ್ಟುವುದೇ ಬಯ್ಯದಬಲಿಯಿಂದ. ಅಂದು ವಿಟ್ಲ ಅರಮನೆ ಆಡಳಿತಕ್ಕೊಳಪಟ್ಟ ಕೇಪು ಉಳ್ಳಾಲ್ತಿ ದೈವಸ್ಥಾನದಿಂದ ಮಲರಾಯ ದೈವದ ಭಂಡಾರ ಬರುತ್ತದೆ. ಅರಮನೆ ಹತ್ತಿರ ಭಂಡಾರ ಬಂದ ಬಳಿಕ ಅರಸರನ್ನು ಮೇನೆಯಲ್ಲಿ ಹೊತ್ತುಕೊಂಡು ಬರುವ ಕ್ರಮ ಇತ್ತಾದರೂ ಎರಡೂವರೆ ದಶಕಗಳಿಂದೀಚೆ ಅದು ನಿಂತಿದೆ.

ಭಂಡಾರ ಬಂದ ಬಳಿಕ ಬಯ್ಯದ ಬಲಿ‌ಉತ್ಸವ ಜರಗುತ್ತದೆ. ಮರುದಿನ ನಡುತೇರು ಉತ್ಸವ ಏಳನೇ ದಿನ ಹೂವಿನ ತೇರು ಎಂಟನೇ ದಿನ ಮಹಾರಥೋತ್ಸವ ನಡೆಯಲಿದೆ. ರಥೋತ್ಸವಕ್ಕೆ ಮೊದಲು ಕಡಂಬುವಿನಿಂದ ಕೊಡಮಣಿತ್ತಾಯ ದೈವದ ಭಂಡಾರ ಬರಲಿದೆ ಹಾಗೂ ಒಂಬತ್ತನೇ ದಿನ ಆರಾಟ ಓಕುಳಿ ಜತೆ ಜಾತ್ರೆ ಸಂಪನ್ನಗೊಳ್ಳುತ್ತದೆ.

(ವರದಿ: ಹರೀಶ್‌ ಮಾಂಬಾಡಿ, ಮಂಗಳೂರು)

ಟಿ20 ವರ್ಲ್ಡ್‌ಕಪ್ 2024