ಇದು ಸೈಕಲ್‌ ಸ್ಕೂಟರ್‌; ಮಾಮೂಲಿ ಸೈಕಲ್ ಅನ್ನು ವಿದ್ಯುಚ್ಚಾಲಿತ ಮಾಡಿ ಗಮನ ಸೆಳೆದ ದಕ್ಷಿಣ ಕನ್ನಡದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ
ಕನ್ನಡ ಸುದ್ದಿ  /  ಕರ್ನಾಟಕ  /  ಇದು ಸೈಕಲ್‌ ಸ್ಕೂಟರ್‌; ಮಾಮೂಲಿ ಸೈಕಲ್ ಅನ್ನು ವಿದ್ಯುಚ್ಚಾಲಿತ ಮಾಡಿ ಗಮನ ಸೆಳೆದ ದಕ್ಷಿಣ ಕನ್ನಡದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ

ಇದು ಸೈಕಲ್‌ ಸ್ಕೂಟರ್‌; ಮಾಮೂಲಿ ಸೈಕಲ್ ಅನ್ನು ವಿದ್ಯುಚ್ಚಾಲಿತ ಮಾಡಿ ಗಮನ ಸೆಳೆದ ದಕ್ಷಿಣ ಕನ್ನಡದ ಸರ್ಕಾರಿ ಹೈಸ್ಕೂಲ್ ವಿದ್ಯಾರ್ಥಿ

ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸರಿಯಾಗಿ ಬಳಸಿದರೆ ಹೊಸ ಪ್ರಯೋಗ ಮಾಡಬಹುದು ಎನ್ನುವುದಕ್ಕೆ ದಕ್ಷಿಣ ಕನ್ನಡದ ಹೈಸ್ಕೂಲ್‌ ವಿದ್ಯಾರ್ಥಿಯ ಈ ಯಶಸ್ವಿ ಪ್ರಯೋಗವೇ ಉದಾಹರಣೆ.ವರದಿ: ಹರೀಶ ಮಾಂಬಾಡಿ,ಮಂಗಳೂರು

ದಕ್ಷಿಣ ಕನ್ನಡದ ಮೋಕ್ಷಿತ್ ನಾಯ್ಕ್ ಸೈಕಲ್‌ ಪ್ರಯೋಗ ಹೀಗಿದೆ
ದಕ್ಷಿಣ ಕನ್ನಡದ ಮೋಕ್ಷಿತ್ ನಾಯ್ಕ್ ಸೈಕಲ್‌ ಪ್ರಯೋಗ ಹೀಗಿದೆ

ಮಂಗಳೂರು: ಪ್ರಸ್ತುತ ವರ್ಷಗಳಲ್ಲಿ ಮಕ್ಕಳು ಶಾಲಾ-ಕಾಲೇಜುಗಳಿಗೆ ಹೋಗಬೇಕಾದರೆ ನಡೆದುಕೊಂಡು ಹೋಗುವುದು ಬಹಳ ವಿರಳವಾಗಿದ್ದು, ವಾಹನಗಳನ್ನೇ ಬಳಸಿ ನಿತ್ಯ ಶಾಲೆಗೆ ಹೋಗುವವರ ಸಂಖ್ಯೆ ಹೆಚ್ಚಿದೆ. ಕಡೇಶ್ವಾಲ್ಯದ ಸರಕಾರಿ ಶಾಲೆಯ ವಿದ್ಯಾರ್ಥಿಯೋರ್ವ 3 ವರ್ಷಗಳ ಹಿಂದೆ ಖರೀದಿಸಿದ ಸೈಕಲ್‌ನ್ನು ತಾನೇ ಎಲೆಕ್ಟಿçಕ್ ಸೈಕಲಾಗಿ ಪರಿವರ್ತಿಸಿ ಕಳೆದ ಎರಡು ವಾರಗಳಿಂದ ಅದರಲ್ಲೇ ಶಾಲೆಗೆ ಬರುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಗುಡ್ಡಕೋಡಿ ನಿವಾಸಿ ಲಿಂಗಪ್ಪ ನಾಯ್ಕ್ ಆಶಾ ದಂಪತಿಯ ಪುತ್ರ, ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಮೋಕ್ಷಿತ್ ನಾಯ್ಕ್ ಈ ಸಾಧನೆ ಮಾಡಿರುವ ವಿದ್ಯಾರ್ಥಿ,

ಈತ ಪ್ರತಿನಿತ್ಯ ಸುಮಾರು 2 ಕಿ.ಮೀ.ದೂರದ ತನ್ನ ಮನೆಯಿಂದ ಸೈಕಲ್ ಮೂಲಕ ಶಾಲೆಗೆ ಆಗಮಿಸುತ್ತಿದ್ದನು. ಆದರೆ ಸೈಕಲ್ ತುಳಿಯುವುದು ಕಷ್ಟವಾಗುತ್ತಿದ್ದು, ಅದಕ್ಕಾಗಿ ಏನಾದರೂ ಮಾಡಬೇಕು ಎಂಬ ಯೋಚನೆಯಿಂದ ಇದೀಗ ಕೇವಲ ಎಕ್ಸಲೇಟರ್ ತಿರುಗಿಸಿದರೆ ಸಾಕು ಸೈಕಲ್ ತುಳಿಯದೆಯೂ ಸಂಚರಿಸುವಂತಾಗಿದೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಆಸಕ್ತ

ಬಾಲ್ಯದಿಂದಲೇ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಈತನಿಗೆ ಆಸಕ್ತಿ ಇದ್ದು, ವಾಹನಗಳನ್ನೂ ಚಲಾಯಿಸಲು ಗೊತ್ತು. ಆದರೆ ವಯಸ್ಸಾಗಿಲ್ಲ ಎನ್ನುವ ಕಾರಣಕ್ಕೆ ಆತನಿಗೆ ಮನೆಯಲ್ಲಿ ಪೋಷಕರು ವಾಹನ ಚಲಾಯಿಸಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಶಾಲೆಗೆ ಹೋಗುವುದಕ್ಕೆ ಸೈಕಲ್ ತೆಗೆದುಕೊಟ್ಟಿದ್ದರು. ಯಾವುದೇ ಎಲೆಕ್ಟ್ರಾನಿಕ್ ವಸ್ತು ಇದ್ದರೂ ಅದನ್ನು ನೋಡಿದಾಕ್ಷಣ ಅದು ಹೇಗೆ ಕಾರ್ಯಾಚರಿಸುತ್ತದೆ ಮತ್ತು ಕೆಟ್ಟು ಹೋದರೆ ಏನು ಮಾಡಬಹುದು ಎಂಬುದನ್ನು ತಿಳಿದುಕೊಳ್ಳುವ ಚಾಕಚಕ್ಯತೆ ಮೋಕ್ಷಿತ್‌ನಲ್ಲಿದೆ. ಇದುವೇ ಎಲೆಕ್ಟ್ರಿಕ್ ಸೈಕಲ್ ರಚನೆಗೆ ಕಾರಣವಾಯಿತು.

ತಂದೆ ಸ್ಕೂಟರ್ ರಿಪೇರಿ ಮಾಡುವುದೂ ಈತನೇ

ತಂದೆಯಲ್ಲಿರುವ ಸ್ಕೂಟರ್, ಆಟೋ ರಿಕ್ಷಾ, ಪಿಕಾಪ್ ವಾಹನದ ವ್ಯವಸ್ಥೆ ಕೆಟ್ಟು ಹೋದರೆ ಅದನ್ನು ಮೋಕ್ಷಿತ್ ದುರಸ್ತಿ ಮಾಡಿಕೊಡುತ್ತಾನೆ. ಇದನ್ನು ಆತನಿಗೆ ಯಾರೂ ಕೂಡ ಹೇಳಿಕೊಟ್ಟಿಲ್ಲ. ಆತನೇ ತನ್ನ ಅರಿವಿನ ಮೂಲಕ ತಿಳಿದುಕೊಂಡು ದುರಸ್ತಿ ಮಾಡುತ್ತಿದ್ದು, ಅದರ ಕುರಿತು ವಿಶೇಷ ಆಸಕ್ತಿಯನ್ನು ಹೊಂದಿದ್ದಾನೆ.

ವಿದ್ಯಾರ್ಥಿ ಮೋಕ್ಷಿತ್ ತನ್ನ ಸೈಕಲನ್ನು ಎಲೆಕ್ಟ್ರಿಕ್ ಸೈಕಲಾಗಿ ಪರಿವರ್ತಿಸಲು ಯೂಟ್ಯುಬ್ ನೋಡಿ ಕಲಿತಿದ್ದಾನೆ. ಅದಾದ ಬಳಿಕ ಆನ್‌ಲೈನ್ ಮೂಲಕ ಅದಕ್ಕೆ ಬೇಕಾದ ಎಕ್ಸಲೇಟರ್, ಬ್ರೇಕ್, ಬ್ಯಾಟರಿ, ಮೋಟಾರ್, ಪವರ್‌ಬ್ಯಾಂಕ್‌ನ್ನು ಖರೀದಿಸಿ ಒಂದಕ್ಕೊಂದು ಜೋಡಿಸಿದ್ದು, ಇದಕ್ಕೆ ಒಟ್ಟು 9 ಸಾವಿರ ರೂಪಾಯಿ ವೆಚ್ಚವಾಗಿದೆ ಕೇವಲ ಎರಡು ದಿನಗಳಲ್ಲಿ ಸೈಕಲ್‌ನ ಎಲೆಕ್ಟ್ರಿಕ್ ಕೆಲಸ ಪೂರ್ತಿ ಗೊಳಿಸಿದ್ದು, ಕಳೆದ 3 ವಾರಗಳಿಂದ ಅದರ ಮೂಲಕವೇ ಶಾಲೆಗೆ ಆಗಮಿಸುತ್ತಿದ್ದಾನೆ.

ಈತನಕ ಯಾವುದೇ ರೀತಿಯ ತಾಂತ್ರಿಕ ತೊಂದರೆ ಕಂಡುಬಾರದೇ ಇದ್ದು, ಈತ ಸೈಕಲ್ ತುಳಿಯದೆ ಶಾಲೆಗೆ ಬರುವುದನ್ನು ಕಂಡು ಸಾಕಷ್ಟು ಮಂದಿ ಅಚ್ಚರಿಪಟ್ಟಿದ್ದು, ಈತನ ಸಾಧನೆಯನ್ನು ನೋಡಿ ಶಹಬಾಸ್ ಎಂದು ಬೆನ್ನುತಟ್ಟಿದ್ದಾರೆ. ಕೇವಲ ಒಂದೆರಡು ಗಂಟೆ ಚಾರ್ಜ್ಗೆ ಇಟ್ಟರೆ ಇಡೀ ದಿನ ಓಡಾಡಿದರೂ ಬ್ಯಾಟರಿ ಚಾರ್ಜ್ ಸಾಲುತ್ತದೆ ಎಂದು ಮೋಕ್ಷಿತ್ ವಿವರಿಸುತ್ತಾನೆ.

ಮೋಕ್ಷಿತ್‌ಗೆ ಬಾಲ್ಯದಿಂದಲೇ ಎಲೆಕ್ಟ್ರಾನಿಕ್ಸ್ ಕುರಿತು ವಿಶೇಷ ಆಸಕ್ತಿಯಿದ್ದರೂ ನಾವು ಕರೆಂಟ್‌ನ ವಿಚಾರದಲ್ಲಿ ಹೆಚ್ಚು ಮುಂದೆ ಹೋಗಲು ಬಿಡುತ್ತಿರಲಿಲ್ಲ. ಆದರೆ ನನ್ನ ವಾಹನ ಎಲೆಕ್ಟ್ರಿಕ್‌ನ ಯಾವುದೇ ವಸ್ತು ಕೆಟ್ಟು ಹೋದರೂ ಆತನೇ ದುರಸ್ತಿ ಮಾಡುತ್ತಾನೆ. ಪ್ರಸ್ತುತ ಆತನ ಜ್ಞಾನದಿಂದಲೇ ಎಲೆಕ್ಟ್ರಿಕ್‌ ಸೈಕಲ್ ಸಿದ್ಧಪಡಿಸಿ ಅದರ ಮೂಲಕವೇ ಶಾಲೆಗೆ ತೆರಳುತ್ತಿದ್ದಾನೆ ಎನ್ನುತ್ತಾರೆ ಮೋಕ್ಷಿತ್ ತಂದೆ ಲಿಂಗಪ್ಪ ನಾಯ್ಕ್ ಗುಡ್ಡಕೋಡಿ

ನಮ್ಮ ವಿದ್ಯಾರ್ಥಿ ಮೋಕ್ಷಿತ್‌ನ ಸಾಧನೆಯ ಕುರಿತು ನಮಗೆ ಮೆಚ್ಚುಗೆ ಇದ್ದು, ಆತನಿಗೆ ಕ್ಷೇತ್ರದಲ್ಲಿ ಇರುವ ಆಸಕ್ತಿ ನಮಗೆ ತಡವಾಗಿ ತಿಳಿದುಬಂದಿದೆ. ಇಲ್ಲದೇ ಇದ್ದರೆ ವಿಜ್ಞಾನ ಮಾದರಿ ಸ್ಪರ್ಧೆಗೆ ಆತನನ್ನು ಸಿದ್ಧಪಡಿಸುವ ಕಾರ್ಯ ಮಾಡುತ್ತಿದ್ದೆವು. ಮುಂದೆ ಆತನಿಗೆ ವಿಶೇಷ ಪ್ರೋತ್ಸಾಹ ನೀಡಿ ಗುಂಪು ಅಥವಾ ವೈಯಕ್ತಿಕ ವಿಭಾಗದಲ್ಲಿ ಯಾವುದಾದರೊಂದು ಮಾದರಿಯನ್ನು ಸಿದ್ಧಪಡಿಸಿ ಸ್ಪರ್ಧೆಗೆ ಅಣಿಗೊಳಿಸುವ ಕಾರ್ಯ ಮಾಡುತ್ತೇವೆ ಎಂದು ಗಣಿತ ಶಿಕ್ಷಕಿ ಗೀತಾಕುಮಾರಿ ತಿಳಿಸಿದರು.

ವರದಿ: ಹರೀಶ ಮಾಂಬಾಡಿ,ಮಂಗಳೂರು

Whats_app_banner