Mangalore: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಕನ್ನಡ ಸುದ್ದಿ  /  ಕರ್ನಾಟಕ  /  Mangalore: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

Mangalore: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ

ಮಂಗಳೂರು ವಿಮಾನ ನಿಲ್ದಾಣ ಸೇರಿ ದೇಶದ ಹಲವು ಏರ್‌ಪೋರ್ಟ್‌ಗಳಿಗೆ ಬಾಂಬ್ ಬೆದರಿಕೆಯ ಸಂದೇಶ ಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರು ಹೊರವಲಯದ ಬಜಪೆಯಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡಿ.26ರಂದು ಬಾಂಬ್ ಬೆದರಿಕೆ (Bomb Threat) ಇ-ಮೇಲ್ ಬಂದಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಭದ್ರತೆ ಒದಗಿಸಲಾಗಿದೆ.

ಮಂಗಳೂರು ಸಹಿತ ದೇಶದ ಹಲವು ವಿಮಾನ ನಿಲ್ದಾಣಗಳಿಗೂ ಇದೇ ರೀತಿ ಇ-ಮೇಲ್ ಸಂದೇಶ ರವಾನೆಯಾಗಿದೆ ಎಂದು ತಿಳಿದುಬಂದಿದೆ. xonocikonoci10@beeble.com ಎಂಬ ಈ ಮೇಲ್‌ ನಿಂದ ಡಿ.26ರ ಸಮಯ 23:59:53ರ ಹೊತ್ತಿಗೆ ಸಂದೇಶ ಬಂದಿದೆ.

ನಿಲ್ದಾಣದಲ್ಲಿರುವ ವಿಮಾನವೊಂದರಲ್ಲಿ ಸ್ಫೋಟಕ ಇದೆ. ಆದರೆ ವಿಮಾನ ನಿಲ್ದಾಣದಲ್ಲೂ ಕೂಡ ಸ್ಫೋಟಕವಿದೆ. ಸ್ಫೋಟಕಗಳನ್ನು ಚೆನ್ನಾಗಿ ಮರೆಮಾಚಲಾಗಿದೆ. ಅವು ಕೆಲವೇ ಗಂಟೆಗಳಲ್ಲಿ ಸ್ಫೋಟಗೊಳ್ಳುತ್ತವೆ. ನಿಮ್ಮೆಲ್ಲ ಕೊಲ್ಲುತ್ತೇವೆ. ನಮ್ಮದು ಭಯೋತ್ಪಾದಕ ಗುಂಪು ಎಂದು ಅಪರಿಚಿತರು ಇಮೇಲ್ ಸಂದೇಶದಲ್ಲಿ ಹೇಳಿದ್ದಾರೆ.

ಡಿ.27ರಂದು ಈ ಸಂದೇಶವನ್ನು ವಿಮಾನ ನಿಲ್ದಾಣದವರು ಗಮನಿಸಿದ್ದಾರೆ. ಕೂಡಲೇ ಬಜಪೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಹೇಳಿರುವ ವಿಮಾನ ನಿಲ್ದಾಣದ ಅಧಿಕಾರಿಗಳು, ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದಿಂದ ತಪಾಸಣೆಯನ್ನೂ ನಡೆಸಲಾಗಿದೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿಲ್ಲ. ನಿಲ್ದಾಣದ ಅಧಿಕಾರಿಗಳೊಂದಿಗೆ ಪೊಲೀಸರು ಈ ಕುರಿತು ಸಭೆಯನ್ನು ನಡೆಸಿದ್ದಾರೆ.

Whats_app_banner