Mangaluru News: ಜೈಲಿನಿಂದ ಬಿಡುಗಡೆಯಾದ ಹಂತಕನಿಂದ ರಕ್ಷಣೆಗೆ ಕುಟುಂಬಸ್ಥರ ಮೊರೆ; ದಕ್ಷಿಣ ಕನ್ನಡ ಅಪರಾಧ ಸುದ್ದಿಗಳು
Dakshina Kannada: ನಾಲ್ವರುನ್ನು ಕೊಲೆ ಮಾಡಿ ಜೈಲಿನಿಂದ ಬಿಡುಗಡೆಯಾದ ಹಂತಕನಿಂದ ರಕ್ಷಣೆಗೆ ಕುಟುಂಬಸ್ಥರ ಮೊರೆ ಹೋಗಿರುವ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ. ಇದೇ ವೇಳೆ ಸುಡುಮದ್ದು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಸಾಯನಿಕ ಸರಬರಾಜು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಅಪರಾಧ ಸುದ್ದಿಗಳು ಇಲ್ಲಿವೆ.

ಮಂಗಳೂರು: 1994ನೇ ಇಸವಿಯಲ್ಲಿ ನಾಲ್ವರು ಸಂಬಂಧಿಕರನ್ನೇ ಹತ್ಯೆ ಮಾಡಿ ಶಿಕ್ಷೆ ಅನುಭವಿಸಿ ಜೈಲಿನಿಂದ ಬಿಡುಗಡೆ ಹೊಂದಿರುವ ಪ್ರವೀಣ್ ಕುಮಾರ್ (60) ಎಂಬವರಿಂದ ಜೀವ ಬೆದರಿಕೆ ಇರುವ ಕಾರಣ ನಮಗೆ ರಕ್ಷಣೆ ಒದಗಿಸಬೇಕು ಎಂದು ಆತನ ಕುಟುಂಬಸ್ಥರೇ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ. ಹೀಗಾಗಿ ಕುಟುಂಬವೇ ಪೊಲೀಸರ ಮೊರೆ ಹೋಗಿದೆ.
ಕಳೆದ ವರ್ಷ ಮೇ ತಿಂಗಳಲ್ಲಿ ಪ್ರವೀಣ್‌ನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ 7ಕ್ಕೆ ಆತ ತಮ್ಮನಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಇದೀಗ ಆತನಿಂದ ನಮಗೂ ಜೀವಬೆದರಿಕೆ ಇದ್ದು, ಆತನ ಚಲನವಲನಗಳನ್ನು ಪೊಲೀಸರು ಗಮನಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಗೆ ಆತ ಬಾರದಂತೆ ಕ್ರಮ ಕೈಗೊಳ್ಳಬೇಕು. ಆತ ಯಾವುದೇ ಕೃತ್ಯ ಮಾಡಲು ಹಿಂಜರಿಯುವವನಲ್ಲ ಎಂದು ಮನೆಯವರು ದೂರಿದ್ದಾರೆ.
ಇದನ್ನೂ ಓದಿ | Mangalore News: ಹರಿಕೆಯ ಕೋಲದಲ್ಲಿ ದೈವದ ಆಶೀರ್ವಾದ ಪಡೆದ ಸ್ಪೀಕರ್ ಖಾದರ್
ಮೂಲತಃ ಉಪ್ಪಿನಂಗಡಿಯವನಾದ ಪ್ರವೀಣ್, ವಾಮಂಜೂರಿನಲ್ಲಿದ್ದ. 1994ರ ಫೆಬ್ರುವರಿ 23ರಂದು ಈತ ತನ್ನ ಅತ್ತೆ ಮನೆಗೆ ಬಂದಿದ್ದ. ಆಗ ಕಳ್ಳರ ಹಾವಳಿ ಹೆಚ್ಚಾಗಿತ್ತು. ಮನೆಯಲ್ಲಿದ್ದ ಆತ ತಮ್ಮ ರಕ್ಷಣೆಗೆ ಇದ್ದಾನೆಂದು ಭಾವಿಸಿದ್ದರು. ಆದರೆ, ಕುಡಿತ ಹಾಗೂ ಜೂಜಿನ ಚಟ ಹೊಂದಿದ್ದ ಪ್ರವೀಣ್, ಮನೆಯಲ್ಲಿದ್ದ ನಾಲ್ವರನ್ನು ಕತ್ತಿಯಿಂದ ಹೊಡೆದು ಕೊಲೆ ಮಾಡಿ ಚಿನ್ನ, ಹಣ ದೋಚಿ ಪರಾರಿಯಾಗಿದ್ದ. ಬಳಿಕ ಆತನನ್ನು ಬಂಧಿಸಲಾಗಿತ್ತು. ಶಿಕ್ಷೆ ಅನುಭವಿಸುತ್ತಿದ್ದಾತನನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗಿತ್ತು.
42 ಸಿಮ್ ಕಾರ್ಡ್ ಪತ್ತೆ ಪ್ರಕರಣ: ಆಂತರಿಕ ಭದ್ರತೆ ವಿಭಾಗ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ
ಧರ್ಮಸ್ಥಳ ಬಸ್ ನಿಲ್ದಾಣದಲ್ಲಿ ಐವರನ್ನು ಬಂಧಿಸಿ ಅವರಿಂದ 42 ಸಿಮ್ ಕಾರ್ಡ್ ವಶಕ್ಕೆ ಪಡೆದ ಪ್ರಕರಣದಲ್ಲಿ ಎಲ್ಲ ಆರೋಪಿಗಳಿಗೆ ಜಾಮೀನು ಲಭಿಸಿದ್ದರೂ, ಪ್ರಕರಣ ಗಂಭೀರವಾಗಿರುವ ಕಾರಣ ಆಂತರಿಕ ಭದ್ರತಾ ವಿಭಾಗ ತನಿಖೆ ಆರಂಭಿಸಿದೆ. ಈಗಾಗಲೇ ಈ ವಿಚಾರದ ಕುರಿತು ಮಾಹಿತಿ ಸಂಗ್ರಹಣಾ ಕಾರ್ಯವನ್ನು ನಡೆಸುತ್ತಿದೆ. ಈ ವಿಚಾರದ ಬಗ್ಗೆ ಇಡಿಯೂ ಮಧ್ಯಪ್ರವೇಶಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಆರೋಪಿಗಳ ದುಬೈ ನಂಟು ಸಹಿತ ಹಲವು ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ.
ಸುಡುಮದ್ದು ಸ್ಫೋಟ ಪ್ರಕರಣ, ರಾಸಾಯನಿಕ ಸರಬರಾಜು ಮಾಡುತ್ತಿದ್ದ ಆರೋಪಿ ಸೆರೆ
ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಸಮೀಪದ ಕಡ್ಯಾರು ಎಂಬಲ್ಲಿ ಸುಡುಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ ಸಂಬಂಧಿಸಿ ಮೂವರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಸುಡುಮದ್ದು ರಾಸಾಯನಿಕ ಸರಬರಾಜು ಮಾಡುತ್ತಿದ್ದ ಬೆಂಗಳೂರು ನಿವಾಸಿ ಅನಿಲ್ ಎಂ ಡೇವಿಡ್ (49) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈಗಾಗಲೇ ಬಂಧಿಸಲಾದ ಮಾಲೀಕ ವೇಣೂರು ನಿವಾಸಿ ಸೈಯದ್ ಬಸೀರ್ (47) ಮತ್ತು ಹಾಸನದ ಶರಣ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ರೈಲು ಡಿಕ್ಕಿ, ಕೂಲಿ ಕಾರ್ಮಿಕ ಸ್ಥಳದಲ್ಲೇ ಸಾವು
ರೈಲು ಡಿಕ್ಕಿಯಾಗಿ ಕೂಲಿ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟ ಘಟನೆ ಬಿಸಿ ರೋಡು ಸಮೀಪದ ಮಾರ್ನಬೈಲು ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ. ಮೂಲತಃ ಮಡಂತ್ಯಾರು ಪಣಕಜೆ ನಿವಾಸಿಯಾಗಿದ್ದು, ಪ್ರಸ್ತುತ ಸಜೀಪಮುನ್ನೂರು ಗ್ರಾ.ಪಂ. ವ್ಯಾಪ್ತಿಯ ಮಾರ್ನಬೈಲು ದಾಸರ ಗುಡ್ಡೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹರಿಶ್ಚಂದ್ರ (37) ಮೃತಪಟ್ಟ ವ್ಯಕ್ತಿ. ಕೂಲಿ ಕಾರ್ಮಿಕನಾಗಿರುವ ಹರಿಶ್ಚಂದ್ರ ಅವರು ಸೋಮವಾರ ಬೆಳಗ್ಗೆ ಮನೆಯಿಂದ ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ರೈಲ್ವೆ ಹಳಿ ದಾಟುವ ವೇಳೆ ವೇಳೆ ರೈಲು ಡಿಕ್ಕಿ ಹೊಡೆದಿರಬೇಕು ಎಂದು ಸ್ಥಳೀಯರು ತಿಳಿಸಿದ್ದಾರೆ. ರೈಲು ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡ ಹರಿಶ್ಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಡಿಕ್ಕಿಯಾದ ಕೂಡಲೇ ರೈಲ್ವೆ ಇಲಾಖೆಯ ಹಳಿಯ ಕಾಮಗಾರಿ ನೋಡಿಕೊಳ್ಳುವ ಸಿಬ್ಬಂದಿಗೆ ಮಾಹಿತಿ ಸಿಕ್ಕಿದ್ದು, ಅವರು ಮಂಗಳೂರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲ್ವೆ ಪೊಲೀಸ್ ಇಲಾಖೆಯ ಎಎಸ್ಐ ಜಾನ್ ಕೊರಿಯ ಕೋಸ್ ಸ್ಥಳಕ್ಕೆ ಆಗಮಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಟಯರ್ ಒಡೆದು ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಆಟೊಗೆ ಡಿಕ್ಕಿ, ನಾಲ್ವರಿಗೆ ಗಾಯ
ಟಯರ್ ಒಡೆದ ಪರಿಣಾಮ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ನಿಲ್ಲಿಸಿದ್ದ ರಿಕ್ಷಾಗೆ ಡಿಕ್ಕಿಯಾಗಿ ಬಳಿಕ ಚರಂಡಿಗೆ ಬಿದ್ದು ನಾಲ್ವರು ಪ್ರಯಾಣಿಕರು ಗಾಯಗೊಂಡ ಘಟನೆ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಎನ್‌ಸಿ ರೋಡ್ ಎಂಬಲ್ಲಿ ನಡೆದಿದೆ.
ಇದನ್ನೂ ಓದಿ | ಕರ್ನಾಟಕ ಹವಾಮಾನ ಫೆ 6: ಬೆಂಗಳೂರು, ಗ್ರಾಮಾಂತರಗಳಲ್ಲಿ ನಸುಕಿನ ಮಂಜು; ಉಳಿದಂತೆ ಒಣ ಹವೆ, ತಾಪಮಾನ ಹೆಚ್ಚಳ
ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ಧ ಕೆಎಸ್‌ಆರ್‌ಟಿಸಿ ಬಸ್‌ನ ಟಯರ್ ಕಾವಳಮೂಡೂರು ಎನ್‌ಸಿ ರೋಡ್ ತಲುಪುತ್ತಿದ್ಧಂತೆ ಬ್ಲಾಸ್ಟ್ ಆಗಿದೆ ಎಂದು ಬಸ್ ಚಾಲಕ ತಿಳಿಸಿದ್ದಾರೆ. ಟಯರ್ ಒಡೆದು ಹೋದ ಪರಿಣಾಮ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬದಿ ನಿಲ್ಲಿಸಲಾಗಿದ್ದ ರಿಕ್ಷಾಗೆ ಡಿಕ್ಕಿ ಹೊಡೆದು ರಿಕ್ಷಾ ಪಲ್ಟಿಯಾಗಿದೆ. ಅದೃಷ್ಟವಶಾತ್ ರಿಕ್ಷಾದಲ್ಲಿದ್ದ ಪ್ರಯಾಣಿಕರು ಅಂಗಡಿಗೆ ಹೋಗಿದ್ದರು. ಹೀಗಾಗಿ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಬಂದಿದ್ದ ಪ್ರಯಾಣಿಕರು ಪಾರಾಗಿದ್ದಾರೆ.
ವರದಿ : ಹರೀಶ ಮಾಂಬಾಡಿ, ಮಂಗಳೂರು
(This copy first appeared in Hindustan Times Kannada website. To read more like this please logon to kannada.hindustantimes.com)