ದಕ್ಷಿಣ ಕನ್ನಡ: ಇನ್‌ಸ್ಟಾಗ್ರಾಮ್ ಪೋಸ್ಟ್ ವಿಚಾರವಾಗಿ ವಿವಾಹ ನಿಶ್ಚಿತ ಯುವತಿಯೊಂದಿಗೆ ಕಲಹ; ದುಡುಕಿ ಸಾವಿಗೆ ಶರಣಾದ ಯುವಕ
ಕ್ಷುಲ್ಲಕ ವಿಚಾರವಾಗಿ ವಿವಾಹ ನಿಶ್ಚಿತ ಯುವತಿಯೊಂದಿಗೆ ಜಗಳ ಮಾಡಿರುವ ಯುವಕ, ನೇಣು ಬಿಗಿದು ಆತ್ಮಹತ್ಯೆ ಮಾಡಿರುವ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆಯಲ್ಲಿ ಬೆಳಕಿಗೆ ಬಂದಿದೆ. (ವರದಿ: ಹರೀಶ ಮಾಂಬಾಡಿ, ಮಂಗಳೂರು)

ಮಂಗಳೂರು: ವಿವಾಹ ನಿಶ್ಚಿತಾರ್ಥವಾದ ಹುಡುಗಿ ಜತೆ ಇನ್‌ಸ್ಟ್ರಾಗ್ರಾಮ್ ವಿಷಯವಾಗಿ ನಡೆದ ಮಾತುಕತೆ ಯುವಕನ ಆತ್ಮಹತ್ಯೆಯಲ್ಲಿ ಪರ್ಯಾವಸಾನವಾದ ಘಟನೆ ನಡೆದಿದೆ. ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಎಲ್ಪೇಲು ಮನೆ ನಿವಾಸಿ ಚೇತನ್(25) ಮೃತಪಟ್ಟವರು. ಚೇತನ್ ದೈವದ ಪಾತ್ರಿಯಾಗಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಇನ್‌ಸ್ಟ್ರಾಗ್ರಾಮ್‌ನಲ್ಲಿ ಪರಿಚಯವಾದ ಮಂಗಳೂರು ತಾಲೂಕಿನ ಹುಡುಗಿಯೊಂದಿಗೆ ಸುಮಾರು 8 ತಿಂಗಳ ಹಿಂದೆ ಮದುವೆ ನಿಶ್ಚಯವಾಗಿತ್ತು.
ಪೊಲೀಸರಿಗೆ ಮೃತ ಚೇತನ್ ತಾಯಿ ಪುಷ್ಪಾ ನೀಡಿದ ದೂರಿನಂತೆ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವರು ನೀಡಿದ ದೂರಿನ ವಿವರಗಳು ಹೀಗಿವೆ. ಜ.21ರಂದು ಬೆಳಗ್ಗೆ ಸುಮಾರು 11 ಗಂಟೆಗೆ ಚೇತನ್ ಮಾತ್ರ ಮನೆಯಲ್ಲಿದ್ದು, ತಾಯಿ ತನ್ನ ತವರು ಮನೆಯಲ್ಲಿದ್ದ ವೇಳೆ ವಿವಾಹ ನಿಶ್ಚಯವಾಗಿದ್ದ ಯುವತಿಯ ಮೊಬೈಲ್‌ನಿಂದ ಯುವಕನ ತಾಯಿಗೆ ಕರೆ ಬಂದಿದೆ. "ನಾನು ನಿಮ್ಮ ಮನೆಗೆ ಬಂದಿದ್ದೇನೆ, ಚೇತನ್ ಮನೆಯಲ್ಲಿ ಮಲಗಿದ್ದು ಎದ್ದೇಳುತ್ತಿಲ್ಲ ಕೂಡಲೇ ಮನೆಗೆ ಬನ್ನಿ" ಎಂದು ತಿಳಿಸಿದ್ದಾಗಿ ದೂರಿನಲ್ಲಿ ಹೇಳಲಾಗಿದೆ.
ಚೇತನ್ ತಾಯಿ ಪುಷ್ಪಾ ಅವರು ಸುಮಾರು 11.30ಕ್ಕೆ ಬಂದು ನೋಡಿದಾಗ ಮನೆಯ ಬಾತ್ ರೂಂ ಮತ್ತು ಮನೆಯ ಮಧ್ಯೆ ಇರುವ ಸ್ಥಳದಲ್ಲಿ ಚೇತನ್ ಮಲಗಿದ್ದ ಸ್ಥಿತಿಯಲ್ಲಿದ್ದು, ಎಬ್ಬಿಸಲು ಪ್ರಯತ್ನಿಸಿದರೂ ಎದ್ದಿಲ್ಲ. ಆಗ ಮನೆಯ ಚಾವಣಿ ಕಡೆ ನೋಡಿದಾಗ ಲುಂಗಿಯೊಂದು ನೇಣು ಹಾಕಿದ ರೀತಿಯಲ್ಲಿರುವುದು ಅವರಿಗೆ ಕಂಡುಬಂದಿದೆ. ಲುಂಗಿಯನ್ನು ನೋಡಿ, ಯುವತಿಯಲ್ಲಿ ಕೇಳಿದಾಗ ಆಕೆ ವಿಷಯ ತಿಳಿಸಿದ್ದಾಳೆ.
ಇನ್‌ಸ್ಟಾಗ್ರಾಮ್ ಲೈಕ್ ವಿಚಾರವಾಗಿ ಇಬ್ಬರ ನಡುವೆ ಜಗಳ
ಪುಷ್ಪಾ ನೀಡಿದ ದೂರಿನಂತೆ ಯುವತಿ ಹೇಳಿದ ವಿವರವಿಷ್ಟು. ಚೇತನ್ ಇನ್‌ಸ್ಟಾಗ್ರಾಮ್‌ನಲ್ಲಿ ಹುಡುಗಿಯೊಬ್ಬಳಿಗೆ ಲೈಕ್ ಮಾಡಿದ್ದು, ಇದನ್ನು ಪ್ರಶ್ನಿಸಲು ತಾನು ಮನೆಗೆ ಬಂದಿರುವುದಾಗಿ ನಿಶ್ಚಿತಾರ್ಥವಾಗಿದ್ದ ಯುವತಿ ತಿಳಿಸಿದ್ದಾಳೆ. ಈ ವಿಚಾರದ ಬಗ್ಗೆ ತಮ್ಮಿಬ್ಬರಿಗೆ ಗಲಾಟೆಯಾಗಿತ್ತು. ಇದರಿಂದ ಬೇಸರಗೊಂಡ ಚೇತನ್ ಮನೆಯೊಳಗೆ ಓಡಿ ಹೋಗಿ ಚಾವಣಿಯ ಅಡ್ಡಕ್ಕೆ ಲುಂಗಿಯಲ್ಲಿ ನೇಣು ಬಿಗಿದುಕೊಂಡಿದ್ದು, ತಾನು ಕೆಳಗಿಳಿಸಿ ಆರೈಕೆ ಮಾಡಿರುವುದಾಗಿ ಆಕೆ ಪುಷ್ಪಾಗೆ ತಿಳಿಸಿದ್ದಾಳೆ.
ಈ ಎಲ್ಲ ವಿಷಯದ ಕುರಿತು ದೂರಿನಲ್ಲಿ ತಿಳಿಸಲಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ.
ವರದಿ: ಹರೀಶ ಮಾಂಬಾಡಿ, ಮಂಗಳೂರು
