Crime News: ಮಂಗಳೂರು ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ರಸ್ತೆ ಉರುಳಿದ ಬೃಹತ್ ಮರ, ಬೈಕ್ ಸವಾರ ಪಾರು
ಕನ್ನಡ ಸುದ್ದಿ  /  ಕರ್ನಾಟಕ  /  Crime News: ಮಂಗಳೂರು ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ರಸ್ತೆ ಉರುಳಿದ ಬೃಹತ್ ಮರ, ಬೈಕ್ ಸವಾರ ಪಾರು

Crime News: ಮಂಗಳೂರು ಹೊರವಲಯದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ, ರಸ್ತೆ ಉರುಳಿದ ಬೃಹತ್ ಮರ, ಬೈಕ್ ಸವಾರ ಪಾರು

ಬೋಳಿಯಾರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಹರೀಶ್ ಮತ್ತು ನಂದನ್ ಎಂಬವರ ಮೇಲೆ ನಾಲ್ಕು ಜನರ ತಂಡ ಇರಿದು ಗಾಯಗೊಳಿಸಿದೆ.

ಅಪರಾಧ ಸುದ್ದಿ (ಪ್ರಾತಿನಿಧಿಕ ಚಿತ್ರ)
ಅಪರಾಧ ಸುದ್ದಿ (ಪ್ರಾತಿನಿಧಿಕ ಚಿತ್ರ)

ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಸಚಿವರ ಪದಗ್ರಹಣ ಸಮಾರಂಭದ ವಿಜಯೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಇಬ್ಬರು ಬಿಜೆಪಿ ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾದ ಘಟನೆ ಬೋಳಿಯಾರ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ. ಬೋಳಿಯಾರ್ ಧರ್ಮನಗರ ನಿವಾಸಿಗಳಾದ ಹರೀಶ್ (45) ಹಾಗೂ ನಂದನ್ (25) ಹಲ್ಲೆಗೊಳಗಾದವರು. ಗಾಯಾಳುಗಳನ್ನು ಎಂ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಅಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಪದಗ್ರಹಣ ಸಮಾರಂಭದ ಲೈವ್ ವೀಕ್ಷಣೆಗೆ ಬಿಜೆಪಿ ಮಂಗಳೂರು ಮಂಡಲವು ನಗರದ ಪ್ರತಿ ಜಂಕ್ಷನ್‌ನಲ್ಲಿ ವ್ಯವಸ್ಥೆ ಮಾಡಿತ್ತು. ಅದರಂತೆ ಬೋಳಿಯಾರ್‌ನಲ್ಲಿ ನಡೆದ ವಿಜಯೋತ್ಸವದಲ್ಲಿ ಭಾಗವಹಿಸಿ ಮನೆಗೆ ತೆರಳುತ್ತಿದ್ದ ಹರೀಶ್ ಮತ್ತು ನಂದನ್ ಎಂಬವರ ಮೇಲೆ ನಾಲ್ಕು ಜನರ ತಂಡ ಇರಿದು ಗಾಯಗೊಳಿಸಿದೆ. ಕಾರ್ಯಕರ್ತರು ತಕ್ಷಣ ದೇರಳಕಟ್ಟೆಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ದುಷ್ಕರ್ಮಿಗಳನ್ನು ತಕ್ಷಣ ಪತ್ತೆ ಹಚ್ಚಬೇಕು ಎಂದು ಮುಖಂಡರಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಆಗ್ರಹಿಸಿದ್ದಾರೆ.

ರಸ್ತೆಗೆ ಉರುಳಿದ ಮರ: ಸ್ವಲ್ಪದರದಲ್ಲಿ ಬೈಕ್ ಸವಾರ ಬಚಾವ್

ಬೆಳ್ತಂಗಡಿ ತಾಲೂಕಿನ ಕೊಯ್ಯೂರು ರಸ್ತೆಯ ಪಿಜಕಳ ಎಂಬಲ್ಲಿ ಮರವೊಂದು ರಸ್ತೆಗೆ ಉರುಳಿಬಿದ್ದು ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹೆಮ್ಮರವು ರಸ್ತೆಗೆ ಉರುಳುತ್ತಿರುವುದನ್ನು ಗಮನಿಸಿದ ಬೈಕ್ ಸವಾರ ಬೈಕ್ ನಿಲ್ಲಿಸಿದ ಕಾರಣ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಳಿಕ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸ್ಥಳೀಯರು ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವುಮಾಡಿದರು.

ಕೊಯ್ಯೂರು ರಸ್ತೆಯ ಬದಿಯಲ್ಲಿ ಯಾವುದೇ ಕ್ಷಣದಲ್ಲಿ ನೆಲಕ್ಕೆ ಉರುಳುವ ರೀತಿಯಲ್ಲಿ ನಿಂತಿದ್ದು ಈ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ. ಅನಾಹುತಗಳು ಸಂಭವಿಸುವ ಮೊದಲು ರಸ್ತೆಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವಂತೆ ಸ್ಥಳೀಯ ನಾಗರಿಕರು ಒತ್ತಾಯಿಸುತ್ತಿದ್ದಾರೆ.

Whats_app_banner