ಮಂಗಳೂರಿನಿಂದ ಬಂಟ್ವಾಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಠಾಣೆ ಸದ್ಯವೇ ಸ್ಥಳಾಂತರ; ಗ್ರಾಮೀಣ ಜನರಿಗೆ ಉಪಯೋಗ
Dakshina Kannada News: ದಕ್ಷಿಣ ಕನ್ನಡ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆ ಮಂಗಳೂರಿನಿಂದ ಬಂಟ್ವಾಳಕ್ಕೆ ಸದ್ಯದಲ್ಲೇ ಸ್ಥಳಾಂತರಗೊಳ್ಳಲಿದೆ.ವರದಿ: ಹರೀಶ ಮಾಂಬಾಡಿ.ಮಂಗಳೂರು
ಮಂಗಳೂರು: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಸೆನ್ (ಸೈಬರ್, ಎಕನಾಮಿಕ್ ಆಂಡ್ ನಾರ್ಕೊಟಿಕ್ಸ್) ಪೊಲೀಸ್ ಠಾಣೆ ಶೀಘ್ರ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದ್ದು, ಇದಕ್ಕಾಗಿ ಹಳೆಯ ಕಟ್ಟಡವೊಂದನ್ನು ನವೀಕರಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸೆನ್ ಎಂದು ಹೇಳಲಾಗುವ (ಎಸ್.ಇ.ಎನ್) ಸೈಬರ್, ಎಕನಾಮಿಕ್ ಆಂಡ್ ನಾರ್ಕೊಟಿಕ್ಸ್ ಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸುವ ಠಾಣೆ ಇದು. ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಈ ಪೊಲೀಸ್ ಠಾಣೆಯು ಶೀಘ್ರ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಈ ಠಾಣೆಗಾಗಿ ಬ್ರಿಟಿಷರ ಕಾಲದಲ್ಲಿ ಜೈಲಾಗಿದ್ದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹಳೆಯ ಕಟ್ಟಡವನ್ನು ಮಂಗಳೂರು ನಿರ್ಮಿತಿ ಕೇಂದ್ರದ ಮೂಲಕ ನವೀಕರಿಸುವ ಕಾರ್ಯ ವಾಗುತ್ತಿದೆ.
ಗ್ರಾಮೀಣ ಭಾಗಕ್ಕೆ ಲಾಭ
ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳು ನಡೆದರೂ, ಸಂತ್ರಸ್ತರು ದೂರು ನೀಡುವುದಕ್ಕೆ ಮಂಗಳೂರಿನ ಈ ಠಾಣೆಯನ್ನು ಸಂಪರ್ಕಿಸಬೇಕಿತ್ತು. ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕಿನ ಯಾವುದೇ ಭಾಗದ ನಾಗರಿಕರು ದೂರು ನೀಡಬೇಕಾದರೆ ಮಂಗಳೂರಿನ ಸೆನ್ ಠಾಣೆ ಸಂಪರ್ಕವಾಗಬೇಕು ಆದರೆ ಇದೀಗ ಈ ಭಾಗದ ಮಂದಿಗೆ ಠಾಣೆಯು ಬಿ.ಸಿ.ರೋಡಿಗೆ ವರ್ಗಾವಣೆಗೊಳ್ಳುವುದರಿಂದ ಒಂದಷ್ಟು ಅನುಕೂಲವಾಗಲಿದೆ. ದ.ಕ.ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಸೈಬರ್ ಕ್ರೈಮ್ ಸಂಬಂಧಿಸಿದ ಪ್ರಕರಣಗಳು ಇಲ್ಲೇ ದಾಖಲಾಗಲಿವೆ.
ಸೈಬರ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ದ.ಕ.ಜಿಲ್ಲೆಯ ಗ್ರಾಮೀಣ ತಾಲೂಕುಗಳ ಮಂದಿ ದೂರು ನೀಡಲು ಮಂಗಳೂರಿಗೆ ತೆರಳಬೇಕು ಎಂದು ಸಣ್ಣ ಪ್ರಕರಣಗಳಾದರೆ ದೂರು ನೀಡುವುದಕ್ಕೇ ಹೋಗುತ್ತಿರಲಿಲ್ಲ. ಆದರೆ ಇದೀಗ ಠಾಣೆಯು ಹತ್ತಿರಕ್ಕೆ ಬರುತ್ತಿದೆ ಎಂದು ಹೆಚ್ಚಿನ ಮಂದಿ ಇಂತಹ ಪ್ರಕರಣಗಳಿಗೆ ಸಂಬಂಧಿಸಿ ದೂರು ನೀಡುವ ಸಾಧ್ಯತೆ ಹೆಚ್ಚಿದೆ.
ಹಳೆ ಕಟ್ಟಡ ಉಳಿಸಿ ನವೀಕರಣ
ಪ್ರಸ್ತುತ ಮಂಗಳೂರಿನಲ್ಲಿ ಬಾಡಿಗೆ ಕಟ್ಟಡದಲ್ಲಿ ಸೆನ್ ಠಾಣೆಯು ಕಾರ್ಯಾಚರಿಸುತ್ತಿದ್ದು, ಜನರ ಅನುಕೂಲದ ಜತೆಗೆ ಸ್ವಂತ ಕಟ್ಟಡದಲ್ಲಿ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಬಿ.ಸಿ.ರೋಡಿನಲ್ಲಿರುವ ಕಟ್ಟಡಕ್ಕೆ ಸ್ಥಳಾಂತರಗೊಳಿಸಲು ಇಲಾಖೆ ಯೋಚಿಸಿದೆ. ಬಂಟ್ವಾಳ ನಗರ ಪೋಲಿಸ್ ಠಾಣೆಯ ಬಳಿ ಇರುವ ಹಳೆಯ ಜೈಲು ಪುರಾತನ ಶೈಲಿನ ನಿರ್ಮಾಣ ಹೊಂದಿದ್ದು, ಹಂಚಿನ ಮೇಲ್ಛಾವಣಿ ಹೊಂದಿದೆ. ಹೀಗಾಗಿ ಈ ಕಟ್ಟಡವನ್ನು ಉಳಿಸಿಕೊಂಡು ನವೀಕರಿಸಲು ಇಲಾಖೆಗೆ ತೀರ್ಮಾನಿಸಿದೆ.
ಪೊಲೀಸ್ ಇಲಾಖೆಯು ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ಹಳೆಯ ಕಟ್ಟಡದ ದುರಸ್ತಿಗೆ ತೀರ್ಮಾನಿಸಿ ಪ್ರಸ್ತುತ ಅದರ ಕಾಮಗಾರಿಯು ಭರದಿಂದ ಸಾಗಿದೆ. ಹಳೆಯ ಶೈಲಿನ ಕಟ್ಟಡವನ್ನು ಹಾಗೇ ಉಳಿಸುವ ದೃಷ್ಟಿಯಿಂದ ಮೇಲ್ಛಾವಣಿ ಹಾಗೂ ಇತರ ಭಾಗಗಳ ನವೀಕರಣ ನಡೆಯಲಿದೆ. ಜತೆಗೆ ಅದರ ಮುಂಭಾಗದಲ್ಲಿ ೮ ಪಿಲ್ಲರ್‌ಗಳ ಮೂಲಕ ವರಾಂಡ ನಿರ್ಮಾಣವಾಗಲಿದೆ. ಸುಮಾರು ಎರಡು ವರ್ಷಗಳ ಹಿಂದೆ ಸೆನ್ ಠಾಣೆಯ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಈ ವರ್ಷ ಅದಕ್ಕೆ ಅನುದಾನ ಬಿಡುಗಡೆಗೊಂಡಿದೆ.
ನವೀಕರಣ ಕಾರ್ಯದಲ್ಲಿ ಪ್ರತ್ಯೇಕ ಎರಡು ಜೈಲುಗಳು, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಪಿಎಸ್‌ಐ ಹಾಗೂ ಸಿಬಂದಿಗೆ ಪ್ರತ್ಯೇಕ ಕೊಠಡಿಗಳು, ಅಹವಾಲು ಸ್ವೀಕಾರದ ಕೊಠಡಿ, ಶೌಚಾಲಯಗಳು ನಿರ್ಮಾಣಗೊಳ್ಳಲಿದೆ ಎಂದು ಇಲಾಖೆ ಮೂಲಗಳು ತಿಳಿಸಿದೆ.
ಠಾಣೆಯಲ್ಲಿ 25 ಮಂದಿ ಸಿಬ್ಬಂದಿ
ದ.ಕ.ಜಿಲ್ಲಾ ಪೊಲೀಸ್ ವ್ಯಾಪ್ತಿಯ ಸೆನ್ ಪೊಲೀಸ್ ಠಾಣೆಯಲ್ಲಿ ಒಬ್ಬರು ಡಿವೈಎಸ್‌ಪಿ, ಒಬ್ಬರು ಇನ್ಸ್‌ಪೆಕ್ಟರ್, ಪಿಎಸ್‌ಐ ಸೇರಿ ೨೫ ಮಂದಿ ಸಿಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ಠಾಣೆಗೆ ಖಾಯಂ ಇನ್ಸ್‌ಪೆಕ್ಟರ್ ಇಲ್ಲದೇ ಇರುವುದರಿಂದ ಬಂಟ್ವಾಳ ನಗರ ಇನ್ಸ್‌ಪೆಕ್ಟರ್ ಅನಂತಪದ್ಮನಾಭ ಅವರಿಗೆ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ. ಠಾಣೆಯು ಬಂಟ್ವಾಳಕ್ಕೆ ವರ್ಗಾವಣೆಗೊಂಡರೆ ಹೆಚ್ಚುವರಿ ಜವಾಬ್ದಾರಿಯ ಇನ್ಸ್‌ಪೆಕ್ಟರ್‌ಗೂ ಅನುಕೂಲವಾಗಿದೆ.
ಏಳೆಂಟು ತಿಂಗಳ ಕಾಮಗಾರಿ
ದ.ಕ.ಜಿಲ್ಲಾ ಸೆನ್ ಪೊಲೀಸ್ ಠಾಣೆಗೆ ಬಂಟ್ವಾಳದಲ್ಲಿ ನವೀಕರಣಗೊಳ್ಳುತ್ತಿರುವ ಕಟ್ಟಡವನ್ನು ಈಗಾಗಲೇ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅವರು ಪರಿಶೀಲಿಸಿ ನಿರ್ಮಾಣಕ್ಕೆ ಸಂಬಂಧಿಸಿ ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದ್ದಾರೆ.
ಸೆನ್ ಪೊಲೀಸ್ ಠಾಣೆಗಾಗಿ ಹಳೆಯ ಕಟ್ಟಡದ ನವೀಕರಣ ಕಾರ್ಯ ನಿರ್ಮಿಸಿ ಕೇಂದ್ರದ ಮೂಲಕ ನಡೆಯುತ್ತಿದ್ದು, ಪೂರ್ಣಗೊಳ್ಳುವುದಕ್ಕೆ ಏಳೆಂಟು ತಿಂಗಳು ಬೇಕಾಗಬಹುದು. ಹಂಚಿನ ಮೇಲ್ಛಾವಣಿಯನ್ನು ತೆಗೆದು ಮತ್ತೆ ಜೋಡಿಸಬೇಕಿದ್ದು, ಇತರ ದುರಸ್ತಿ ಕಾರ್ಯವೂ ನಡೆಯಬೇಕಿದೆ ಎನ್ನುತ್ತಾರೆ ನಿರ್ಮಿತಿ ಕೇಂದ್ರದ ಎಂಜಿನಿಯರ್ ನವೀನ್‌ಚಂದ್ರ.
ವರದಿ: ಹರೀಶ ಮಾಂಬಾಡಿ.ಮಂಗಳೂರು