ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು: ಸಿಎಂ ಸಿದ್ದರಾಮಯ್ಯ ಆಶಯ
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು: ಸಿಎಂ ಸಿದ್ದರಾಮಯ್ಯ ಆಶಯ

ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು: ಸಿಎಂ ಸಿದ್ದರಾಮಯ್ಯ ಆಶಯ

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗಾಗ ನಡೆಯುತ್ತಿರುವ ಕೋಮುಗಲಭೆ, ಇದರಿಂದ ಸಮಾಜದ ಮೇಲೆ ಅಗುತ್ತಿರುವ ಪರಿಣಾಮಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಉಳ್ಳಾಲದಲ್ಲಿ ನಡೆದ ಉರುಸ್‌ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸಿದರು.

ಮಂಗಳೂರು ಹೊರ ವಲಯದ ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು.
ಮಂಗಳೂರು ಹೊರ ವಲಯದ ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಊರುಸ್ ಮಹೋತ್ಸವದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾದರು.

ಮಂಗಳೂರು: ನಾವು ಮೊದಲು ಮನುಷ್ಯರು, ನಂತರ ಭಾರತೀಯರು ಆಮೇಲೆ ಹಿಂದೂಗಳು, ಮುಸ್ಲೀಮರು ಮತ್ತು ಧರ್ಮೀಯರು. ದೇಶದಲ್ಲಿ ಅನೇಕ ಸೂಫಿ, ಸಾಧು, ಸಂತರು, ಸಾಮಾಜಿಕ ಹರಿಕಾರರು ಬಂದು ಹೋಗಿದ್ದಾರೆ. ಇವರೆಲ್ಲರೂ ಮನುಷ್ಯ ಧರ್ಮವನ್ನು ಪ್ರತಿಪಾದಿಸಿದವರು. ಆದ್ದರಿಂದ ನಾವು ಮಾನವೀಯ ನೆಲೆಯಲ್ಲಿ ಸಮಾಜವನ್ನು ಬೆಸೆಯಬೇಕು. ನಮ್ಮದು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟ ನಮ್ಮದು‌. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸೋಣ. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟೋಣ. ಇದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಮನವಿ.

ಮಂಗಳೂರು ಹೊರ ವಲಯದ ಉಳ್ಳಾಲದ ಶರೀಫುಲ್ ಮದನಿ ದರ್ಗಾದ 22ನೇ ಪಂಚವಾರ್ಷಿಕ ಉರುಸ್ ಮಹೋತ್ಸವದಲ್ಲಿ ಮಾತನಾಡಿದರು.

ಉಳ್ಳಾಲ ದರ್ಗಾಕ್ಕೆ ಜಾತಿ, ಧರ್ಮದ ಮಿತಿ ಇಲ್ಲ. ಎಲ್ಲಾ ಜಾತಿ, ಎಲ್ಲಾ ಧರ್ಮದ ಬಡವರ ದರ್ಗಾ. ನಮ್ಮ ಸರ್ಕಾರ ಸಂವಿಧಾನದ ಆಶಯದಂತೆ ಸರ್ವರನ್ನೂ ಸಮಾನವಾಗಿ ಕಾಣುತ್ತದೆ‌. ನಮ್ಮ ಸರ್ಕಾರದ ಕಾರ್ಯಕ್ರಮಗಳೂ ಸರ್ವ ಧರ್ಮ, ಸರ್ವ ಜಾತಿಯವರಿಗೆ ಸಲ್ಲುವಂಥವು ಎಂದರು.

ಮನುಷ್ಯರು ಪರಸ್ಪರ ಪ್ರೀತಿಸುವ ಸಮಾಜವನ್ನು ಗಟ್ಟಿಗೊಳಿಸೋಣ

ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ. ಮನುಷ್ಯರು ಮನುಷ್ಯರನ್ನು ಪ್ರೀತಿಸುವ ಸರ್ವ ಜನಾಂಗದ ಶಾಂತಿಯ ತೋಟವಾಗಿ ಕರ್ನಾಟಕ ಹಿಂದಿನಿದಲೂ ರೂಪುಗೊಂಡಿದೆ. ಈ ಸಮಾಜವನ್ನು ನಾವು ಇನ್ನಷ್ಟು ಗಟ್ಟಿಗೊಳಿಸಬೇಕೇ ಹೊರತು ವಿಘಟನೆ ಮಾಡಲು ಹೋಗಬಾರದು. ಜೊತೆಗೆ ಅಸಮಾನತೆಯ ಸಮಾಜವನ್ನು ಸುಧಾರಿಸಿ ಸಾಮಾಜಿಕ ನ್ಯಾಯದ ದಿಕ್ಕಿನಲ್ಲಿ ಸಮಾಜ ಕಟ್ಟುವ ಕೆಲಸವನ್ನು ಪ್ರತಿಯೊಬ್ಬರು ಮಾಡಬೇಕು. ಅತ್ಯಂತ ಪ್ರಜ್ಞಾವಂತರೇ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಗಳು ನಡೆಯಬಾರದು.ಇತ್ತೀಚಿನ ಕೆಲವು ಘಟನೆಗಳು ಬೇಸರದಾಯಕ ಎಂದು ಸಿದ್ದರಾಮಯ್ಯ ಹೇಳಿದರು.

ಪ್ರಜಾಸೌಧ ಉದ್ಘಾಟನೆ

ಇದಲ್ಲದೇ ಮಂಗಳೂರಿನಲ್ಲಿ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾಡಳಿತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂತನ ಪ್ರಜಾಸೌಧ ಕಟ್ಟಡವನ್ನು ಪ್ರಜಾರ್ಪಣೆಗೊಳಿಸಿ ಮಾತನಾಡಿದ ಸಿಎಂ, ನಾನೇ ಗುದ್ದಲಿಪೂಜೆ ಮಾಡಿದ ಪ್ರಜಾಸೌಧದ ಕಟ್ಟಡವನ್ನು ನಾನೇ ಉದ್ಘಾಟಿಸಿದ್ದೇನೆ. ಮಾಜಿ ಸಚಿವ ರಮಾನಾಥ ರೈ ಅವರ ಕಾಳಜಿಯಿಂದ ಪ್ರಜಾಸೌಧ ಕಟ್ಟಡಕ್ಕೆ ನಾನೇ ಗುದ್ದಲಿಪೂಜೆ ಮಾಡಿದ್ದೆ. ಈಗ ನಾನೇ ಉದ್ಘಾಟಿಸಿದ್ದೇನೆ ಎಂದು ನುಡಿದರು.

ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗುದ್ದಲಿ ಪೂಜೆ ನೆರವೇರಿಸಿ ಮೊದಲ ಹಂತದ ಕಾಮಗಾರಿಗೆ ಹಣ ಬಿಡುಗಡೆ ಮಾಡಿದ್ದೆವು. ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಪ್ರಜಾಸೌಧದ ಕೆಲಸ ನಿಂತು ಹೋಗಿತ್ತು. ಬಿಜೆಪಿ ಸರ್ಕಾರದಲ್ಲಿ ಕಾಮಗಾರಿ ಮುಂದುವರೆಯಲೇ ಇಲ್ಲ. ಇದನ್ನು ಪೂರ್ಣಗೊಳಿಸಲು ಮತ್ತೆ ನಾವೇ ಅಧಿಕಾರಕ್ಕೆ ಬರಬೇಕಾಯಿತು. ಬಿಜೆಪಿ ಅವಧಿಯಲ್ಲಿ ಉದ್ಘಾಟನೆ ಆಗಲಿಲ್ಲ ಏಕೆ ಎಂದು ವೇದಿಕೆಯಲ್ಲೇ ಇದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಕೇಂದ್ರ ಸರ್ಕಾರಕ್ಕೆ ರಾಜ್ಯದಿಂದ 4.5 ಲಕ್ಷ ಕೋಟಿ ತೆರಿಗೆ ಕೊಡ್ತೀವಿ. ಕೇಂದ್ರ ರಾಜ್ಯಕ್ಕೆ ವಾಪಾಸ್ ಕೊಡುವುದು, ಸ್ಮಾರ್ಟ್ ಸಿಟಿ ಯೋಜನೆ ಸೇರಿ ಕೇವಲ 65 ಸಾವಿರ ಕೋಟಿ. ಶೇ15-16 ರಷ್ಟು ಮಾತ್ರ ವಾಪಾಸ್ ಕೊಡುತ್ತಿದೆ. ಇದು ಕೇಂದ್ರ ನಮ್ಮ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು , ಪ್ರಧಾನಿ ಮೋದಿಯವರಿಗೆ ಹೇಳಿ ರಾಜ್ಯಕ್ಕೆ ಮಾಡುತ್ತಿರುವ ಅನ್ಯಾಯ ನಿಲ್ಲಿಸಿ ಎಂದು ಶಾಸಕ ಕಾಮತ್ ಅವರಿಗೆ ಕಿವಿ ಮಾತು ಹೇಳಿದರು.

ದಕ್ಷಿಣ ಕನ್ನಡ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ

ದಕ್ಷಿಣ ಕನ್ನಡ ಜಿಲ್ಲೆ ಸದ್ಯದಲ್ಲೇ ಪೋಡಿಮುಕ್ತ ಜಿಲ್ಲೆ ಆಗಲಿದೆ.‌ ಸಚಿವ ಕೃಷ್ಣಬೈರೇಗೌಡರು ವಿಶೇಷ ಕಾಳಜಿ, ಸಾಕಷ್ಟು ಶ್ರಮ ವಹಿಸಿ ಜಿಲ್ಲೆಯನ್ನು ಪೋಡಿಮುಕ್ತ ಮಾಡುವ ದಿಕ್ಕಿನಲ್ಲಿ ಕೆಲಸಗಳು ಆಗಿವೆ ಎಂದು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.‌

ನಾವು ನುಡಿದಂತೆ ನಡೆದಿದ್ದೇವೆ. ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಕೊಡುವ ಭರವಸೆ ನೀಡಿದ್ದೆವು. ಅದರಂತೆ ಪುತ್ತೂರಿಗೂ ಮೆಡಿಕಲ್ ಕಾಲೇಜು ಕೊಟ್ಟಿದ್ದೇವೆ. ಸದ್ಯ 250 ಬೆಡ್ ಗಳ ಆಸ್ಪತ್ರೆ ಮಾಡ್ತೀವಿ. ಆಮೇಲೆ ಮತ್ತೆ 250 ಬೆಡ್ ಗಳನ್ನು ವಿಸ್ತರಿಸುತ್ತೇವೆ ಎಂದರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.