ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು; ಲೀಲಾವತಿ ಬೈಪಡಿತ್ತಾಯ ವ್ಯಕ್ತಿ ಚಿತ್ರಣ
ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು ಎಂಬ ಹಿರಿಮೆಗೆ ಪಾತ್ರರಾದ ಲೀಲಾವತಿ ಬೈಪಡಿತ್ತಾಯ ಅವರು ಶನಿವಾರ ಇಹಲೋಕ ತ್ಯಜಿಸಿದರು. ಗಂಡುಕಲೆಯ ಹಿರಿಯ ಕಲಾವಿದೆಯ ವ್ಯಕ್ತಿ ಪರಿಚಯ ಇಲ್ಲಿದೆ. (ವರದಿ- ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ಯಕ್ಷಗಾನ ರಂಗದಲ್ಲಿ ಮಹಿಳೆಯರು ಈಗ ಮಿಂಚುತ್ತಿದ್ದಾರೆ. ಒಂದು ಕಾಲದಲ್ಲಿ ಪುರುಷರೇ ಜಾಸ್ತಿ ಇದ್ದಾರೆ ಎಂದು ಹೇಳಲಾಗುತ್ತಿರುವ ಹೊತ್ತಿನಲ್ಲಿ ವೃತ್ತಿ ಮೇಳದಲ್ಲಿ ತಿರುಗಾಟ ನಡೆಸಿದವರು ಲೀಲಾವತಿ ಬೈಪಡಿತ್ತಾಯ. ಹಿರಿಯ ಹಿಮ್ಮೇಳವಾದಕ ಹರಿನಾರಾಯಣ ಬೈಪಡಿತ್ತಾಯರ ಪತ್ನಿಯಾಗಿ ಯಕ್ಷಗಾನದಲ್ಲಿ ಹೆಸರು ಮಾಡಿದವರು. ಶನಿವಾರ (ಡಿಸೆಂಬರ್ 14) ನಿಧನರಾದ ಲೀಲಾವತಿ ಬೈಪಡಿತ್ತಾಯರು ಯಕ್ಷಗಾನ ರಂಗದ ಮೊದಲ ವೃತ್ತಿಪರ ಮಹಿಳಾ ಭಾಗವತರು ಎಂಬ ಹೆಸರು ಗಳಿಸಲು ಕಾರಣವಿದು.
ಯಕ್ಷಗಾನ ರಂಗದಲ್ಲಿ ಸುದೀರ್ಘ ತಿರುಗಾಟ ನಡೆಸಿದ ಮೊದಲ ಮಹಿಳಾ ವೃತ್ತಿಪರ ಭಾಗವತರು ಎಂಬ ಹಿರಿಮೆ ಲೀಲಾವತಿ ಬೈಪಡಿತ್ತಾಯ ಅವರದ್ದು. ಗಂಡು ಮೆಟ್ಟಿನ ಕಲೆ ಎಂದೇ ಹೇಳಲಾಗುವ ಯಕ್ಷಗಾನದಲ್ಲಿ ವೀರರಸ ಪ್ರಧಾನ ಸನ್ನಿವೇಶಗಳಲ್ಲಿ ಲೀಲಾವತಿ ಅವರು ಹಾಡುವ ಮೂಲಕ ಗಮನ ಸೆಳೆದರು. ಯಕ್ಷಗಾನ ಕಲೆಯತ್ತ ಮಹಿಳೆಯರೂ ಆಕರ್ಷಿತರಾಗುವಂತೆ ಮೇಲ್ಪಂಕ್ತಿ ಹಾಕಿಕೊಟ್ಟವರು ಅವರು. ಊರಿಂದೂರಿಗೆ ಮೇಳವು ಹೋದಲ್ಲೆಲ್ಲಾ ತಿರುಗಾಟ ಮಾಡಿದ್ದಷ್ಟೇ ಅಲ್ಲದೆ, ರಾತ್ರಿಯಿಡೀ ನಿದ್ದೆ ಬಿಟ್ಟು ಬೆಳಗ್ಗಿನವರೆಗಿನ ಇಡೀ ಪ್ರಸಂಗವನ್ನು ಆಡಿಸಿದ ಹಿರಿಮೆ ಹೊಂದಿದವರು. ಶಾಲೆಗೆ ಹೋಗದೆಯೂ ಭಾಗವತಿಕೆಯಲ್ಲಿ ವ್ಯಕ್ತವಾಗುವ ಸಾಹಿತ್ಯ ಶುದ್ಧಿ, ಭಾಷಾ ಶುದ್ಧಿ ಇವರ ಹೆಗ್ಗಳಿಕೆ. ಬಡಗುತಿಟ್ಟಿನಲ್ಲಿ ತಮ್ಮ ಛಾಪು ಬೀರಿದ್ದ ಅವರು, ಕಾಳಿಂಗ ನಾವಡರ ಜತೆಗೆ ಶೃಂಗೇರಿ ಹಾಗೂ ಮುಂಬಯಿಯಲ್ಲಿ ಕಾರ್ಯಕ್ರಮ ನೀಡಿ, ಅವರ ಮೆಚ್ಚುಗೆಗೂ ಪಾತ್ರರಾಗಿದ್ದರು. ಹೀಗಾಗಿ ತೆಂಕು, ಬಡಗು ಯಕ್ಷಗಾನದಲ್ಲಿ ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ.
ಬಾಲ್ಯದಲ್ಲೇ ಸಂಗೀತ ಕಲಿತರು
ಕೇರಳ ರಾಜ್ಯದ ಕಾಸರಗೋಡಿನ ಮಧೂರಿನಲ್ಲಿ 1947ನೇ ಮೇ 23ರಂದು ಜನಿಸಿದ ಲೀಲಾವತಿ, ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣ, ತಾಯಿ ತವರೂರು ಮಧೂರಿನ ಪಡುಕಕ್ಕೆಪ್ಪಾಡಿ ಎಂಬಲ್ಲಿ ಸೋದರಮಾವನ ಆಶ್ರಯದಲ್ಲಿ ಬೆಳೆದರು. ಸೋದರಮಾವ ರಾಮಕೃಷ್ಣ ಭಟ್, ಮಧೂರು ದೇವಾಲಯದಲ್ಲಿ ದೇವನೃತ್ಯ ಕಲಾವಿದರು. ಬಡತನದಿಂದಾಗಿ ವಿದ್ಯಾಭ್ಯಾಸ ಪಡೆಯಲು ಲೀಲಾ ಅವರಿಗೆ ಸಾಧ್ಯವಾಗಲಿಲ್ಲ. ಮಧುರವಾಗಿ ಹಾಡುತ್ತಿದ್ದ ಅವರು ಪಿಟೀಲು ವಾದಕ ಪದ್ಮನಾಭ ಸರಳಾಯರ ಬಳಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತರು. 23 ವರ್ಷವಾದಾಗ ತೆಂಕುತಿಟ್ಟಿನ ಚೆಂಡೆ-ಮದ್ದಳೆಯ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯರನ್ನು ವಿವಾಹವಾದರು. ಬಳಿಕ ಕಡಬದಲ್ಲಿ ಅವರು ವಾಸ್ತವ್ಯ ಹೂಡಿದರು.
ಬಾಲ್ಯದಲ್ಲೇ ಸಂಗೀತ ಕಲಿತದ್ದು ಅವರಿಗೆ ಯಕ್ಷಗಾನದ ಕುರಿತು ಆಸಕ್ತಿ ಮೂಡಲೂ ಕಾರಣವಾಯಿತು. ಇದರ ಅರಿವಿದ್ದ ಪತಿ ಹರಿನಾರಾಯಣ ಬೈಪಡಿತ್ತಾಯರು, ಯಕ್ಷಗಾನದ ಹಾಡುಗಳನ್ನು ಅಭ್ಯಸಿಸಲು ನೆರವಾದರು. ಸುತ್ತಮುತ್ತಲಿನ ಶಾಲಾ ವಾರ್ಷಿಕೋತ್ಸವ, ಶುಭ ಸಮಾರಂಭಗಳಲ್ಲಿ ಆಯೋಜಿಸುವ ತಾಳಮದ್ದಳೆ ಕೂಟಗಳಲ್ಲಿ ಲೀಲಾವತಿ ಬೈಪಡಿತ್ತಾಯರ ಯಕ್ಷಗಾಯನ ಸುತ್ತಲಿನವರ ಗಮನ ಸೆಳೆಯಿತು.
ಯಕ್ಷಗಾನ ಪ್ರವೇಶ
ಸುತ್ತಮುತ್ತಲಿನ ತಾಳಮದ್ದಳೆ ಕೂಟಗಳಲ್ಲಿ ಭಾಗವತಿಕೆ ಮಾಡುವ ಮೂಲಕ ಯಕ್ಷಗಾನ ರಂಗ ಪ್ರವೇಶಿಸಿದ ಲೀಲಾವತಿ ಬೈಪಡಿತ್ತಾಯರು, ಹಲವು ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಪರಕೆದ ಪಿಂಗಾರ, ದೇವಿಮಹಾತ್ಮೆ, ದಕ್ಷಯಜ್ಞ, ಕರ್ಣಪರ್ವ, ಸುಧನ್ವ ಮೋಕ್ಷ, ವಜ್ರಕೋಗಿಲೆ ಮುಂತಾದ ಪ್ರಸಂಗಗಳಲ್ಲಿ ಇವರು ಹಾಡಿದ ಪದ್ಯಗಳು ಪ್ರಸಿದ್ಧವಾಗಿವೆ.
ಅಂದಿನ ಸುಬ್ರಹ್ಮಣ್ಯ ಮೇಳ, ಪುತ್ತೂರು ಮೇಳ, ಕದ್ರಿ ಮೇಳ, ಕರ್ನಾಟಕ ಮೇಳ, ಅರುವ (ಅಳದಂಗಡಿ) ಮೇಳ, ಕುಂಬಳೆ ಮೇಳ, ಬಪ್ಪನಾಡು ಮೇಳ, ತಲಕಳ ಮೇಳ ಮೊದಲಾದ ಡೇರೆ-ಬಯಲಾಟ ಮೇಳಗಳಲ್ಲಿ ನಿರಂತರ ಇಪ್ಪತ್ತು ವರ್ಷಗಳ ಕಾಲ ವೃತ್ತಿ ಕಲಾವಿದರಾಗಿ ಕೆಲಸ ಮಾಡಿದ್ದ ಲೀಲಾವತಿ ಬೈಪಡಿತ್ತಾಯರು, 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದವರು.
ಕಲಾವಿದರೊಂದಿಗಿನ ಒಡನಾಟ
ಸಮಕಾಲೀನ ಕಲಾವಿದರಾಧ ಎಂಎಲ್ ಸಾಮಗ, ಪಾತಾಳ ವೆಂಕಟರಮಣ ಭಟ್, ಈಶ್ವರ ಭಟ್, ಶೇಣಿ ಗೋಪಾಲಕೃಷ್ಣ ಭಟ್, ರಾಮದಾಸ ಸಾಮಗ, ಬಣ್ಣದ ಮಾಲಿಂಗ, ಪ್ರಭಾಕರ ಜೋಷಿ, ಬಲಿಪ ನಾರಾಯಣ ಭಾಗವತರು, ಕಡತೋಕ ಭಾಗವತರು, ನೆಡ್ಲೆ ನರಸಿಂಹ ಭಟ್, ಕಾಳಿಂಗ ನಾವುಡ ಸಹಿತ ಮುಮ್ಮೇಳ ಮತ್ತು ಹಿಮ್ಮೇಳ ಕಲಾವಿದರ ಒಡನಾಟ ಲೀಲಾ ಅವರ ಕಲಾಸೇವೆಗೆ ಸಹಕಾರವಾಯಿತು.
ತಮ್ಮಂತೆ ಇತರ ಮಹಿಳೆಯರೂ ಯಕ್ಷಗಾನ ಕ್ಷೇತ್ರದಲ್ಲಿ ಮುಂದೆ ಬರಬೇಕೆಂದು ಪ್ರೋತ್ಸಾಹಿಸುತ್ತಾ, ಆಸಕ್ತಿಯಿಂದ ಬಂದವರಿಗೆ ಯಕ್ಷಗಾನದ ಪಾಠವನ್ನೂ, ಕರ್ನಾಟಕ ಶಾಸ್ತ್ರೀಯ ಸಂಗೀತದ ಪಾಠವನ್ನೂ ಮಾಡಿದ್ದಾರೆ. ಪತಿಯೊಂದಿಗೆ ಧರ್ಮಸ್ಥಳದ ಪ್ರಖ್ಯಾತ ಯಕ್ಷಗಾನ ತರಬೇತಿ ಕೇಂದ್ರದಲ್ಲಿ 10 ವರ್ಷ ಹಾಗೂ ಕಟೀಲು, ಮೂಡುಬಿದಿರೆ, ಬಜಪೆ ಮುಂತಾದೆಡೆ ಗುರುಗಳಾಗಿ ಸೇವೆ ಸಲ್ಲಿಸಿದ್ದಾರೆ.
ಅವರ ಕಲಾ ತಪಸ್ಸನ್ನು ರಾಜ್ಯ ಸರ್ಕಾರ ಗುರುತಿಸಿ 2010ನೇ ಕರ್ನಾಟಕದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. 2012ರಲ್ಲಿ ಕರ್ನಾಟಕ ಸರ್ಕಾರ ಕೊಡಮಾಡಿದ ಸಾಧಕ ಹಿರಿಯ ನಾಗರಿಕರ ಪ್ರಶಸ್ತಿಗೂ ಅವರು ಭಾಜನರಾಗಿದ್ದಾರೆ. 2023ರಲ್ಲಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
(ವರದಿ- ಹರೀಶ ಮಾಂಬಾಡಿ, ಮಂಗಳೂರು)