ದಕ್ಷಿಣ ಕನ್ನಡ: ಕುಕ್ಕೆ ಸುಬ್ರಹ್ಮಣ್ಯ ಚಂಪಾಷಷ್ಠಿ ವಾರ್ಷಿಕ ಮಹೋತ್ಸವ ಬಳಿಕ ನಡೆದ ದೈವಗಳ ಗೋಪುರ ನಡಾವಳಿ
Dakshina Kannada: ಕುಕ್ಕೆ ಸುಬ್ರಹ್ಮಣ್ಯದಲ್ಲಿ ನವೆಂಬರ್ 27 ರಂದು ಆರಂಭವಾಗಿದ್ದ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ ಡಿಸೆಂಬರ್ 12 ಗುರುವಾರ ಮುಕ್ತಾಯಗೊಂಡಿದೆ. ಗುರುವಾರ ರಾತ್ರಿ ದೈವಗಳ ನಡಾವಳಿ ಸೇವೆ ಕಾರ್ಯಕ್ರಮ ರಾತ್ರಿ ನೆರವೇರಿದೆ. (ವರದಿ: ಹರೀಶ್ ಮಾಂಬಾಡಿ, ಮಂಗಳೂರು)
ದಕ್ಷಿಣ ಕನ್ನಡ: ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಸುಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನವೆಂಬರ್ 27ರ ಬುಧವಾರದಿಂದ ಡಿಸೆಂಬರ್ 12 ಗುರುವಾರದವರಿಗೆ ಒಟ್ಟು 11 ದಿನಗಳ ಕಾಲ ಜಾತ್ರಾ ಮಹೋತ್ಸವ ನೆರವೇರಿದೆ. ಈ ಸಮಯದಲ್ಲಿ ಎಲ್ಲಾ ಸರ್ಪಗಳ ಅಧಿಪತಿಯಾದ ಕಾರ್ತಿಕೇಯನನ್ನು ಇಲ್ಲಿ ಸುಬ್ರಹ್ಮಣ್ಯ ರೂಪದಲ್ಲಿ ಪೂಜಿಸಲಾಗುತ್ತದೆ. ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಾಲಯದಲ್ಲಿ ಸರ್ಪ ಸಂಸ್ಕಾರ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.
ಗುರುವಾರ ಮುಕ್ತಾಯಗೊಂಡ ಚಂಪಾಷಷ್ಠಿ ವಾರ್ಷಿಕ ಜಾತ್ರಾ ಮಹೋತ್ಸವ
ಗುರುವಾರ ಕೂಡಾ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಚಂಪಾಷಷ್ಠಿ ಆಚರಣೆ ವೈಭವದಿಂದ ನಡೆಯಿತು. ಗುರುವಾರ ಕಾರ್ಯಕ್ರಮ ಮುಕ್ತಾಯವಾಗಿದ್ದು ಈ ಸಂದರ್ಭ ದೈವಗಳ ನಡಾವಳಿ ಸೇವೆ ಕಾರ್ಯಕ್ರಮ ರಾತ್ರಿ ನಡೆಯಿತು. ಮ ಮಾಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ನಡೆದ ದೈವಗಳ ನಡಾವಳಿಯಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು. ಬುಧವಾರ ರಾತ್ರಿ ದೀಪಾರಾಧನೆಯುಕ್ತ ಪಾಲಕಿ ಉತ್ಸವ ನಡೆದು, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯಿತು.
ಕ್ಷೇತ್ರದ ರಕ್ಷಣಾ ದೈವಗಳಿಗೆ ಕೊಡುವ ಕಟ್ಟುಕಟ್ಟಲೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿ ಜರುಗಿತು. ಮುಂಜಾನೆ ಪುರುಷರಾಯ ದೈವವು ಕುಮಾಧಾರ ನದಿಗೆ ತೆರಳಿ ಮತ್ಸ್ಯ ತೀರ್ಥದಲ್ಲಿ ಪವಿತ್ರ ಮೀನುಗಳಿಗೆ ಅಕ್ಕಿ ಹಾಕುವ ಮೂಲಕ ಆಹಾರವನ್ನು ನೀಡಿ ಹರಸಿತು. ಈ ಸಂದರ್ಭ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ,ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವಳದ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್,ರಾಜಲಕ್ಷ್ಮೀ ಪದ್ಮನಾಭ, ಹೆಬ್ಬಾರರಾದ ಪ್ರಸನ್ನ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು. ದೂರದ ಜಿಲ್ಲೆಗಳಿಂದ ಕೂಡಾ ಭಕ್ತರು ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದು ಪೂಜೆಯಲ್ಲಿ ಪಾಲ್ಗೊಂಡರು.
ಚಂಪಾಷಷ್ಟಿ ಮಹತ್ವವೇನು?
ಹಿಂದೂ ಪುರಾಣಗಳ ಪ್ರಕಾರ, ಶಿವನ ಯೋಧ ಅವತಾರವಾದ ಖಂಡೋಬಾನನ್ನು ಪೂಜಿಸಲಾಗುತ್ತದೆ. ಈ ಹಬ್ಬವು ದುಷ್ಟ ರಾಕ್ಷಸರಾದ ಮಲ್ಲ ಮತ್ತು ಮಾಲಿಯ ವಿರುದ್ಧ ಖಂಡೋಬಾನ ವಿಜಯವನ್ನು ಸೂಚಿಸುತ್ತದೆ. ಈ ವಿಶೇಷ ದಿನದಂದು ಭಕ್ತರು ತಮ್ಮನ್ನು ಎಲ್ಲಾ ದುಷ್ಟ ಶಕ್ತಿಗಳಿಂದ ರಕ್ಷಣೆ ಮಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಖಂಡೋಬನನ್ನು ರೈತರು, ಬೇಟೆಗಾರರು ಹಾಗೂ ಯೋಧರ ಅಧಿಪತಿಯಾಗಿ ನೋಡಲಾಗುತ್ತದೆ. ಅನಾದಿಕಾಲದಿಂದಲೂ ನಾಗ ಪೂಜೆಗೆ ಪ್ರಸಿದ್ಧವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುವ ಚಂಪಾಷಷ್ಠಿಗೆ ತುಂಬಾ ಮಹತ್ವವಿದೆ.
ವರದಿ: ಹರೀಶ್ ಮಾಂಬಾಡಿ, ಮಂಗಳೂರು