Dakshina Kannada News: ಚಿಕ್ಕಿ ಡಬ್ಬದಲ್ಲಿ 32 ತಳಿ ಭತ್ತ ಬೆಳೆದ ಮೂಡಂಬೈಲು ಪುಟಾಣಿಗಳು, ಸರ್ಕಾರಿ ಶಾಲೆ ಮಕ್ಕಳ ಕೃಷಿ ಪ್ರೀತಿಗೆ ಮೆಚ್ಚುಗೆ
Dakshina Kannada News: ದಕ್ಷಿಣ ಕನ್ನಡದ ಮೂಡಂಬೈಲು ಎನ್ನುವ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಭತ್ತ ಬೆಳೆಯುವ ಪ್ರಯೋಗದಲ್ಲಿ ಯಶಸ್ವಿಯಾಗಿದ್ದಾರೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರು: ಮಕ್ಕಳ ಮನಸು ಹೇಗಿರುತ್ತದೆ ಎಂದರೆ ಅದು ಮಣ್ಣಿನ ಮುದ್ದೆಯ ಹಾಗೆ. ಅದಕ್ಕೆ ಯಾವ ರೂಪ ಬೇಕಾದರೂ ಕೊಡಬಹುದು. ನೀವು ಹೇಳಿದ್ದನ್ನು ಚಾಚೂ ತಪ್ಪದೇ ಕೇಳುವ ಮಕ್ಕಳು ಪ್ರೀತಿಯಿಂದಲೇ ಮಾಡುತ್ತಾರೆ. ಮಕ್ಕಳು ಹೆಚ್ಚು ಮಾತು ಕೇಳುವುದು ಅಮ್ಮನಿಗೆ ಇಲ್ಲವೇ ಶಿಕ್ಷಕರಿಗೆ. ಮನೆಯಂತೆಯೇ ಹೆಚ್ಚು ಸಮಯ ಕಳೆಯುವ ಮಕ್ಕಳು ಶಾಲೆಯಲ್ಲಿ ಹೇಳಿದ್ದನ್ನೂ ಮಾಡಿ ಮುಗಿಸುತ್ತಾರೆ. ಇಂತಹ ಒಂದು ಪ್ರಯೋಗದಲ್ಲಿ ದಕ್ಷಿಣ ಕನ್ನಡದ ಮಕ್ಕಳು ಗಮನ ಸೆಳೆದೆದಿದ್ದಾರೆ. ಭತ್ತ ತಳಿ ಸಂರಕ್ಷಣಾ ಜವಾಬ್ದಾರಿಯನ್ನು ವಹಿಸಿದ್ದ ಶಿಕ್ಷಕಿ ಅವರ ಮಾತನ್ನು ಆಲಿಸಿದ ದಕ್ಷಿಣ ಕನ್ನಡದ ಗಡಿಭಾಗದ ಮೂಡಂಬೈಲು ಎಂಬಲ್ಲಿನ ಸರಕಾರಿ ಶಾಲೆ ವಿದ್ಯಾರ್ಥಿಗಳು ಮುಂದಾಗಿದ್ದು ಫಲಕ್ಕಾಗಿ ಕಾಯುತ್ತಿದಾರೆ. ಈ ಕುರಿತು ಶಾಲೆಯ ಶಿಕ್ಷಕಿ ಶ್ರುತಿ ಈ ರೀತಿ ಮಾಹಿತಿ ನೀಡಿದ್ದಾರೆ.
ಕಳೆದ ವರ್ಷ ಭತ್ತದ ತಳಿ ಸಂರಕ್ಷಕರಾದ ಕಾರ್ಕಳದ ಆಸ್ಮಾ ಮೇಡಮ್ ಮನೆಗೆ ಶಾಲಾ ಮಕ್ಕಳೊಂದಿಗೆ ಭೇಟಿ ನೀಡಿದಾಗ ಅವರು ಮಕ್ಕಳಿಗೆ 50 ಬಗೆಯ ಭತ್ತದ ಸಸಿಗಳನ್ನು ಕೊಟ್ಟು ನೀವು ಪ್ರಯತ್ನಿಸಿ ನೋಡಿ ಎಂದು ಹೇಳಿದ್ದರು. ಅದನ್ನು ಬಹಳ ಜಾಗೃತೆಯಲ್ಲಿ ಶಾಲೆಗೆ ತಂದೆವು. ನಮ್ಮ ಶಾಲೆಯ ಮಣ್ಣು ಭತ್ತ ಬೆಳೆಯಲು ಅಷ್ಟು ಚೆನ್ನಾಗಿಲ್ಲ ಏನು ಮಾಡುವುದು ಎಂದು ನಮ್ಮ ಶಾಲೆಯ ಪೋಷಕರೊಬ್ಬರಲ್ಲಿ ಆ ಬಗ್ಗೆ ಹೇಳಿಕೊಂಡಾಗ ಅವರು ಬಹಳ ಪ್ರೀತಿಯಿಂದ ಅವರ ಗದ್ದೆಯಿಂದ ಮಣ್ಣನ್ನು ಕೊಟ್ಟರು. ಅದನ್ನು ಶಾಲೆಗೆ ತಂದು ಯಾವುದರಲ್ಲಿ ಹಾಕಿ ಬೆಳೆಸುವುದು ಎಂದು ಯೋಚಿಸುತ್ತಿರುವಾಗ ನಮಗೆ ಕಂಡದ್ದು ಚಿಕ್ಕಿಯ ಡಬ್ಬಗಳು.
ಡಬ್ಬಿಗಳೆಂಬ ಪ್ರಯೋಗ ಶಾಲೆ
ನಮ್ಮ ಶಾಲೆಯಲ್ಲಿ ಇರುವುದು ಒಟ್ಟು 43 ಮಕ್ಕಳು. ಮೊದಲು ನಾವು ಪ್ರತಿ ಡಬ್ಬದ ಮೇಲೆ ಮಗುವಿನ ಹೆಸರನ್ನು ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬರೆದೆವು ನಂತರ ಪ್ರತಿ ಬಾಕ್ಸಿಗೆ ಮಣ್ಣನ್ನು ತುಂಬಿಸಲಾಯಿತು. ಸ್ವಲ್ಪ ನೀರು ಹಾಕಿ ಹದ ಮಾಡಿದೆವು. ಅವರು ಕೊಟ್ಟ ಸಸಿಯನ್ನ ಬಹಳ ಜಾಗರೂಕತೆಯಲ್ಲಿ ಒಂದು ಡಬ್ಬಿಗೆ ಒಂದು ಎರಡು ಸಸಿಯನ್ನ ಮಕ್ಕಳ ಹೆಸರಿಗೆ ಅನುಗುಣವಾಗಿ ಅವರ ಕೈಯಲ್ಲಿ ನೆಡೆಸಿದೆವು. ನಂತರ ಅದನ್ನು ಸಾಲಾಗಿ ಜೋಡಿಸಿಟ್ಟೆವು. ಪ್ರತಿದಿನ ಶಿಕ್ಷಕರು ಮಕ್ಕಳು ಅದನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೆವು. ಒಂದೊಂದು ತಳಿಯು ವಿಭಿನ್ನವಾಗಿತ್ತು. ಕೆಲವೊಂದು ತೀರಾ ಸಣ್ಣ ಭತ್ತ ಬಂದರೆ ಕೆಲವೊಂದು ಉದ್ದ ಭತ್ತ ಕೆಲವೊಂದು ದಪ್ಪ ಭತ್ತ. ಬಣ್ಣಗಳಲ್ಲಿಯೂ ಬಹಳ ವ್ಯತ್ಯಾಸಗಳಿದ್ದವು. ಕೆಲವು ಬಂಗಾರದ ಬಣ್ಣ, ಅದರ ಮೇಲೆ ಗೆರೆ ಎಳೆದಂತೆ, ಕಪ್ಪು, ಕಂದು ಭತ್ತದ ಮುಂದೆ ಮೀಸೆಯ ರೀತಿ ಹೀಗೆ ವಿಶಿಷ್ಟವಾಗಿದ್ದವು. ಕೆಲವೊಂದು ಬಹಳ ಬೇಗ ಬೆಳೆದರೆ ಕೆಲವು ಬಹಳ ನಿಧಾನವಾಗಿ ಬೆಳೆಯುತ್ತಿದ್ದವು. ಇದರ ಮಧ್ಯೆ ಸಂಜೆ ನೋಡಿ ಹೋದ ಕೆಲವು ಭತ್ತಗಳು ಬೆಳಗ್ಗೆ ಹೋಗಿ ನೋಡುವಾಗ ಕೀಟಗಳ, ಪಕ್ಷಿಗಳ ಪಾಲಾಗಿರುತ್ತಿದ್ದವು.
ಅನುಭವದ ಪಾಠ
ನಮ್ಮ ಈ ಸಣ್ಣ ಪ್ರಮಾಣಕ್ಕೆ ಹೀಗೆ ಇನ್ನೂ ರೈತರ ಕಷ್ಟ ಎಷ್ಟಿರಬಹುದು ಎಂಬ ಪ್ರಶ್ನೆ ನಮ್ಮೆಲ್ಲರನ್ನು ಕಾಡಿತು. ಆದರೂ ಪ್ರತಿದಿನದ ಗಮನಿಸುವಿಕೆ ಮುಂದುವರೆಯಿತು. ಮಕ್ಕಳು ಅವರ ಡಬ್ಬದಲ್ಲಿ ಭತ್ತ ಬೆಳೆದದ್ದು ಕಂಡಾಗ ತುಂಬಾ ಖುಷಿ ಪಡುತ್ತಿದ್ದರು. ಪಕ್ಷಿಗಳೋ ಕೀಟಗಳೋ ತಿಂದು ಹೋದಾಗ ಬೇಸರವೂ ಆಗುತ್ತಿತ್ತು. ಅವರವರಲ್ಲೇ ಚರ್ಚೆ ನಡೆಯುತ್ತಿತ್ತು ಇದು ಎಷ್ಟು ಉದ್ದ ಇದೆ ಇದು ಎಷ್ಟು ಗಿಡ್ಡ ಇದೆ. ಇದು ಯಾಕೆ ಇನ್ನೂ ಆಗಿಲ್ಲ? ಇದರ ಬಣ್ಣ ನೋಡು ಹೇಗೆ ಇದೆ? ಒಂದು ಕೀಟ ಇದೆ ಮತ್ತೆ ಆ ಕೀಟ ಹೇಗಿದೆ ಎಂಬುದರ ಬಗ್ಗೆ ವಿಶ್ಲೇಷಣೆ ಬಹಳ ಚೆನ್ನಾಗಿರುತ್ತಿತ್ತು. ಕೀಟ ಕಂಡ ಕೂಡಲೇ ನಮ್ಮ ಶಾಲೆಯ ಅರವಿಂದ ಸರ್ ಅವರನ್ನು ಕರೆದು ತೋರಿಸಿ ಅದರ ಗುಣಗಾನ ಶುರುಮಾಡುತ್ತಿದ್ದರು. ತರಗತಿಯ ಹೊರಗಿನ ಆ ಕಲಿಕೆ ಬಹಳ ಜೀವನಾನುಭವವನ್ನು ನೀಡಿತು. ಕೊನೆಗೆ ಉಳಿದಷ್ಟನ್ನು ಸಂಗ್ರಹಿಸಿ ಇಟ್ಟಿದ್ದೇವೆ. ಇಷ್ಟೆಲ್ಲಾ ಆಗಿ ನಮಗೆ ಕೊನೆಗೆ ಸಿಕ್ಕಿದ್ದು ಕೇವಲ 32 ತಳಿಗಳು ಮಾತ್ರ. ಅದರ ಹೆಸರನ್ನು ನಾವಿನ್ನು ಕೇಳಿ ತಿಳಿಯಬೇಕಿದೆ. ಮುಂದಿನ ವರ್ಷ ಇವುಗಳನ್ನೇ ಸಸಿ ಮಾಡಿ ನೆಡುವ ಎಂಬ ಉತ್ಸಾಹದಲ್ಲಿ ಮಕ್ಕಳಿದ್ದಾರೆ. ಕಾದು ನೋಡಬೇಕಿದೆ ಎಂದು ಶ್ರುತಿ ಅವರು ಹೇಳುತ್ತಾರೆ.
ವರದಿ: ಹರೀಶ ಮಾಂಬಾಡಿ. ಮಂಗಳೂರು
